ದಾವಣಗೆರೆ: ಪಾನಿಪೂರಿ ಸೇವಿಸಿ 19 ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಜಿಲ್ಲೆಯ ಹರಿಹರ ತಾಲೂಕಿನ (Harihara News) ಮಲೆಬೆನ್ನೂರಿನಲ್ಲಿ ನಡೆದಿದೆ. ರಂಜಾನ್ ಉಪವಾಸ ಮುಗಿಸಿ ಜಾಮಿಯಾ ಮಸೀದಿ ಬಳಿ ಪಾನಿಪೂರಿ ಸೇವಿಸಿದ್ದ ಮಕ್ಕಳು ವಾಂತಿ-ಭೇದಿ, ಹೊಟ್ಟೆ ನೋವಿನಿಂದ ಅಸ್ವಸ್ಥಗೊಂಡಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಸ್ವಸ್ಥರಾದ ಎಲ್ಲಾ ಮಕ್ಕಳು 15 ವರ್ಷದೊಳಗಿನವರಾಗಿದ್ದು, ಅವರಿಗೆ ದಾವಣಗೆರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ನಾಲ್ವರು ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ತಹಸೀಲ್ದಾರ್ ಗುರು ಬಸವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಕ್ಕಳು ಅಸ್ವಸ್ಥಗೊಂಡ ಸುದ್ದಿ ತಿಳಿಯುತ್ತಿದ್ದಂತೆ ಪಾನಿಪುರಿ ಮಾರಾಟಗಾರ ಅಂಗಡಿ ಬಿಟ್ಟು ಎಸ್ಕೇಪ್ ಆಗಿದ್ದಾನೆ. ಆರೋಗ್ಯಾಧಿಕಾರಿಗಳು ಪಾನಿಪೂರಿ ಮಾದರಿ ಸಂಗ್ರಹಕ್ಕೆ ಮುಂದಾಗಿದ್ದು, ಲ್ಯಾಬ್ ಟೆಸ್ಟ್ ಬಳಿಕ ಘಟನೆಗೆ ಕಾರಣವೇನು ಎಂಬುವುದು ತಿಳಿದುಬರಲಿದೆ.
ಇದನ್ನೂ ಓದಿ | Road Accident : ರಸ್ತೆ ದಾಟುತ್ತಿದ್ದ ಪಾದಚಾರಿಯ ಬಲಿ ಪಡೆದ ಕಿಲ್ಲರ್ ಬಿಎಂಟಿಸಿ ಬಸ್
ಜೂಜಿನ ಚಟಕ್ಕೆ ಬಿದ್ದು ಕಿಡ್ನ್ಯಾಪ್ ಆಟವಾಡಿದ ಯುವಕ
ಬೆಂಗಳೂರು: ಜೂಜಿಗೆ ದಾಸನಾದ ವ್ಯಕ್ತಿ ಏನ್ ಬೇಕಾದರೂ ಮಾಡುತ್ತಾನೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಆಕ್ಸ್‌ಫರ್ಡ್ ಕಾಲೇಜಿನಲ್ಲಿ ವಾರ್ಡನ್ ಆಗಿದ್ದ ಜೀವನ್ ಎಂಬಾತ ಜೂಜಿಗೆ ದಾಸನಾಗಿದ್ದ. ಜೂಜಿಗೆ ದುಡ್ಡು ಬೇಕೆಂದು ಗೆಳೆಯರ ಜತೆ ಸೇರಿ ಕಿಡ್ನ್ಯಾಪ್ ಆಗಿದ್ದೇನೆ ಎಂದು ನಾಟಕ ಮಾಡಿ (Kidnap Case) ಈಗ ಜೈಲುಪಾಲಾಗಿದ್ದಾನೆ.
ಮಾ. 11ರ ರಾತ್ರಿ ತಲೆ ಮೇಲೆ ಟೊಮ್ಯಾಟೊ ಸಾಸ್ ಚೆಲ್ಲಿಕೊಂಡ ಜೀವನ್ ಅದೇ ಆಕ್ಸ್‌ಫಡ್ಸ್ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ತನ್ನ ಚಿಕ್ಕಮ್ಮ ಸುನಂದ ಅವರಿಗೆ ಫೋಟೊಸ್ ಕಳಿಸಿದ್ದ. ನಂತರ ಫೋನ್ ಮಾಡಿ ನನ್ನನ್ನು ಕಿಡ್ನ್ಯಾಪ್ ಮಾಡಿದ್ದಾರೆ. ಹಣಕ್ಕಾಗಿ ಹೊಡೆದು ಬಡಿದು ಮಾಡುತ್ತಿದ್ದಾರೆ ಎಂದಿದ್ದ. 20 ಸಾವಿರ ರೂ. ಹಣವನ್ನು ಅಕೌಂಟ್‌ಗೆ ಹಾಕಿಸಿಕೊಂಡಿದ್ದ.
ಮಗ ಕಿಡ್ನ್ಯಾಪ್ ಆಗಿದ್ದಾನೆ ಎಂದು ಆತಂಕಗೊಂಡ ಸುನಂದ, ಕೂಡಲೇ ಬೊಮ್ಮನಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ತಡಮಾಡದೇ ತನಿಖೆಗಿಳಿದ ಪೊಲೀಸರು ಜೀವನ್‌ನನ್ನು ಪತ್ತೆ ಮಾಡಿ ಕರೆ ತಂದಿದ್ದರು. ಯಾರು ಕಿಡ್ನ್ಯಾಪ್ ಮಾಡಿದ್ದು ಎಂದು ವಿಚಾರಣೆ ಮಾಡಿದಾಗ, ಹಣಕ್ಕಾಗಿ ಗೆಳೆಯರೊಂದಿಗೆ ಸೇರಿ ಜೀವನ್ ಕಿಡ್ನ್ಯಾಪ್ ನಾಟಕವಾಡಿದ್ದ ಎಂದು ಬೆಳಕಿಗೆ ಬಂದಿದೆ.
ಗೋಲ್ಡ್ 369 ಎಂಬ ಆನ್‌ಲೈನ್ ಆ್ಯಪ್‌ನಲ್ಲಿ ಜೂಜಾಡಿ ಜೀವನ್ ಹಣವನ್ನು ಕಳೆದುಕೊಂಡಿದ್ದ. ಮತ್ತೆ ಜೂಜಾಡಲು ಹಣವಿಲ್ಲದಿದ್ದಾಗ ಗೆಳೆಯರೊಂದಿಗೆ ಸೇರಿ ಕಿಡ್ನ್ಯಾಪ್ ಆಗಿದ್ದೇನೆಂದು ನಾಟಕವಾಡಿದ್ದ. ಆನೇಕಲ್‌ನ ಬಿಂಗಿಪುರ ಮನೆಯೊಂದರಲ್ಲಿ ಆನ್‌ಲೈನ್‌ನಲ್ಲಿ ಜೂಜಾಡುತ್ತಿದ್ದಾಗಲೇ ಪೊಲೀರು ದಾಳಿ ಮಾಡಿದ್ದಾರೆ.
ಆರೋಪಿ ಜೀವನ್ ಸೇರಿ ಸಹಕಾರ ಕೊಟ್ಟ ವಿನಯ್, ಪೂರ್ಣೇಶ್, ಪ್ರೀತಮ್ ಹಾಗೂ ರಾಜು ಎಂಬುವವರನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ ಎಂದು ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತ ಸಿ.ಕೆ.ಬಾಬಾ ತಿಳಿಸಿದ್ದಾರೆ.
ಇದನ್ನೂ ಓದಿ: Road Accident : ರಸ್ತೆ ದಾಟುತ್ತಿದ್ದ ಪಾದಚಾರಿಯ ಬಲಿ ಪಡೆದ ಕಿಲ್ಲರ್ ಬಿಎಂಟಿಸಿ ಬಸ್