Site icon Vistara News

Hariprakash Konemane: ಇಲ್ಲಿಯ ರಾಮ, ಅಲ್ಲಿಯ ರಾಮ ಎಂಬ ಭೇದವೇಕೆ? ಸಿಎಂಗೆ ಹರಿಪ್ರಕಾಶ್‌ ಕೋಣೆಮನೆ ಪ್ರಶ್ನೆ

Hariprakash Konemane at hindu samavesh

ಬೆಳಗಾವಿ: ಹಿಂದುಗಳಿಗಿರುವ ಒಂದೇ ಒಂದು ಪವಿತ್ರ ಸ್ಥಳವು ಭಾರತದಲ್ಲಿ ಮಾತ್ರ ಇದೆ. ಸ್ವಾತಂತ್ರ್ಯ ಬಂದ ಮೇಲೂ ನಾವು, ಆಕ್ರಮಣ ಮಾಡಿದ ಮುಸ್ಲಿಂ ರಾಜರ ಹೆಸರನ್ನು ರಸ್ತೆಗಳಿಗೆ, ಊರುಗಳಿಗೆ ಇಡುತ್ತೇವೆ. ಭಾರತ ವಿಶ್ವ ಗುರು ಆಗುವುದಕ್ಕೆ ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿರುವ (Ram Janmabhoomi) ರಾಮಮಂದಿರ (Ram Mandir) ಬುನಾದಿ. ಅಯೋಧ್ಯೆ ನಮಗೆ ಪ್ರೇರಣೆ ಆಗಬೇಕು. ಇಲ್ಲಿಯ ರಾಮ, ಅಲ್ಲಿಯ ರಾಮ ಎಂದು ಭೇದ ಮಾಡುವುದು ಯಾಕೆ? ಎಂದು ಬಿಜೆಪಿ ವಕ್ತಾರರಾದ ಹರಿಪ್ರಕಾಶ್‌ ಕೋಣೆಮನೆ (Hariprakash Konemane) ಕಟುವಾಗಿ ಪ್ರಶ್ನೆ ಮಾಡಿದ್ದಾರೆ.

ಬೆಳಗಾವಿ ತಾಲೂಕಿನ ಉಚಗಾಂವ ಗ್ರಾಮದಲ್ಲಿ ನಡೆದ ಹಿಂದು ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಹರಿಪ್ರಕಾಶ್‌ ಕೋಣೆಮನೆ ಅವರು ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಹೇಳಿಕೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಅಯೋಧ್ಯೆಯ ರಾಮಮಂದಿರಕ್ಕೆ ಯಾಕೆ ದೇಣಿಗೆ ಕೊಡಬೇಕು? ನಮ್ಮೂರಿನ ರಾಮಮಂದಿರಕ್ಕೆ ಹಣ ಕೊಡುತ್ತೇನೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಹರಿಪ್ರಕಾಶ್‌ ಕೋಣೆಮನೆ, ಮಕ್ಕಾ ಮದೀನಾಗೆ ಏಕೆ ಹೋಗುತ್ತಾರೆ? ಜೆರುಸಲೇಂ ಬೆಥ್‌ಲೆಹೆಮ್‌ಗೆ ಯಾಕೆ ಹೋಗುತ್ತಾರೆ ಎಂದು ನೀವು ಪ್ರಶ್ನೆ ಮಾಡುತ್ತೀರಾ ಎಂದು ಖಾರವಾಗಿ ಪ್ರಶ್ನೆ ಮಾಡಿದರು.

ಅಖಂಡ ಭಾರತವಾಗಿ ಉಳಿಸಿಕೊಳ್ಳುವ ಆತಂಕ ನಮ್ಮದಾಗಿದೆ

ಕಳೆದ 35 ವರ್ಷಗಳಿಂದ ಬೇರೆ ಬೇರೆ ಜವಾಬ್ದಾರಿ‌ಯನ್ನು ನಿಭಾಯಿಸಿದ್ದೇ‌ನೆ. ಪ್ರಬಲ ರಾಷ್ಟ್ರೀಯ ಪ್ರತಿಪಾದಕನಾಗಿ ಕೆಲಸ ಮಾಡಿದ್ದೇನೆ. ಅಖಂಡ ಭಾರತದ ಸಂಕಲ್ಪಕ್ಕಾಗಿ 27 ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ. ಖಂಡ ಭಾರತವನ್ನು ಅಖಂಡ ಭಾರತವಾಗಿ ಉಳಿಸಿಕೊಳ್ಳುವ ಆತಂಕ ನಮಗೆ ಎದುರಾಗಿದೆ. ತುಂಡಾದ ಇನ್ನೊಂದು ದೇಶಕ್ಕೆ ಇಸ್ಲಾಮಿಕ್ ಮತ್ತು ರಿಪಬ್ಲಿಕ್ ಆಫ್ ಪಾಕಿಸ್ತಾನ್ ಎಂದು ಹೆಸರು ಕೊಟ್ಟರು. ಈಗ ಸೆಕ್ಯುಲರ್ ಪದದ ಬಗ್ಗೆ ನಮಗೆ ಉಪದೇಶ ಮಾಡುತ್ತಾರೆ ಎಂದು ಅಸಮಾಧಾನ ಹೊರಹಾಕಿದರು.

ನೀವು ಹೇಳಿದವರು ಮಾತ್ರ ಅಲ್ಪಸಂಖ್ಯಾತರಾ?

ಇಂಗ್ಲೆಂಡ್, ಅಮೆರಿಕದಲ್ಲಿ ಸೆಕ್ಯುಲರ್ ಪದದ ಬಳಕೆ ಮಾಡಲ್ಲ. ಆದರೆ, ಇಲ್ಲಿ ನಮಗೆ ಸೆಕ್ಯುಲರ್ ಪದದ ಅರ್ಥ ಹೇಳೋಕೆ ಶುರು ಮಾಡಿದರು. ನಮ್ಮಲ್ಲಿ ಪ್ರತಿ 150 ಕಿ.ಮೀ.ಗೆ ಬಣ್ಣ, ಜಾತಿ, ಭಾಷೆ ಬದಲಾಗುತ್ತದೆ. ಇಲ್ಲಿ ಸೆಕ್ಯುಲರ್‌ ರಿಪಬ್ಲಿಕ್ ಆಫ್ ಇಂಡಿಯಾ ಎಂದು ನಾಮಕರಣ ಮಾಡಲಾಯಿತು. ನಾವು ಮುಸ್ಲಿಮರ ಜತೆಗೆ ಅನ್ಯೋನ್ಯವಾಗಿ ಬದುಕುತ್ತಿಲ್ಲವೇ? ಉಳಿದ ಎಲ್ಲರೊಂದಿಗೂ ಅನ್ಯೋನ್ಯವಾಗಿಲ್ಲವೇ? ನೀವು ಹೇಳಿದವರು ಮಾತ್ರ ಅಲ್ಪಸಂಖ್ಯಾತರಾ ಎಂದು ಎಂದು ಹರಿಪ್ರಕಾಶ್‌ ಕೋಣೆಮನೆ ಖಾರವಾಗಿ ಪ್ರಶ್ನೆ ಮಾಡಿದರು.

ಕಾಂಗ್ರೆಸ್‌ ನೀತಿಗೆ ಆಕ್ರೋಶ

ವಿಷ ಬೀಜದ ನಡುವೆಯೂ ನಾವು ನಿಂತಿದ್ದೇವೆ ಎಂದಾದರೆ ಅದಕ್ಕೆ ಕಾರಣ ಶಿವಾಜಿ ಮಹಾರಾಜರು. ಶೇಕಡಾ 15ರಷ್ಟು ಜನಸಂಖ್ಯೆ ಇರುವವರು ಮಾತ್ರ ಅಲ್ಪಸಂಖ್ಯಾತರು ಎಂದು ಸರ್ಕಾರದಲ್ಲಿ ರಿಜಿಸ್ಟರ್ ಆಗಿದೆ. ನಮಗೆ ಬೋಧನೆ ಮಾಡಿದ ಕಾಂಗ್ರೆಸ್ ಪಕ್ಷವು ನಮಗೆ ನ್ಯಾಯ ಕೊಟ್ಟಿದೆಯಾ ಎಂದು ನಾವು ಪ್ರಶ್ನೆ ಮಾಡಬೇಕಾಗಿದೆ. 70 ವರ್ಷಗಳ ನಂತರ ಶಿವಾಜಿ ಮಹಾರಾಜರ ಆಶಯಗಳನ್ನು ಈಡೇರಿಸಲು ನರೇಂದ್ರ ಮೋದಿ ಎಂಬ ಮಹಾಪುರುಷ ಬರಬೇಕಾಯಿತು. ಅಧಿಕಾರಕ್ಕಾಗಿ ಒಡೆದು ಆಳುವ ನೀತಿಯನ್ನು ಕಾಂಗ್ರೆಸ್ ಅನುಸರಿಸುತ್ತಾ ಬಂದಿದೆ ಎಂದು ಹರಿಪ್ರಕಾಶ್‌ ಕೋಣೆಮನೆ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: Karnataka Politics: ರಾಜ್ಯದಲ್ಲಿ ಅಘೋಷಿತ ಎಮರ್ಜನ್ಸಿ: ಬಸವರಾಜ ಬೊಮ್ಮಾಯಿ

ಜನರಿಗೆ ನೀವು ಕೃತಜ್ಞರಾಗಬೇಕು

ಶಿವಾಜಿ ಮಹಾರಾಜ್‌ ಹುಟ್ಟದೇ ಹೋಗಿದ್ದರೆ ಕಾಶಿ ಮಥುರಾ, ಅಯೋಧ್ಯೆ ಏನಾಗುತ್ತಿತ್ತು ಎಂದು ನಾವೆಲ್ಲರೂ ಇಂದು ವಿಚಾರ ಮಾಡಬೇಕು. ರಾಮ ಮಂದಿರ ಉದ್ಘಾಟನೆಗೆ ನಮ್ಮನ್ನು ಕರೆದಿಲ್ಲ ಎನ್ನುತ್ತಿರುವವರು ರಾಮಮಂದಿರಕ್ಕಾಗಿ ಏನು ಮಾಡಿದ್ದಾರೆ. ನರೇಂದ್ರ ಮೋದಿಯವರು ಬರುವವರೆಗೆ ಮಂದಿರ ನಿರ್ಮಾಣ ಕೆಲಸ ಯಾಕೆ ಬಾಕಿ ಇಟ್ಟಿರಿ? ನೀವು ಮಾಡಿದ ಅನ್ಯಾಯ ಸಹಿಸಿಕೊಂಡ ಜನರಿಗೆ ನೀವು ಕೃತಜ್ಞರಾಗಬೇಕು ಎಂದು ಹರಿಪ್ರಕಾಶ್‌ ಕೋಣೆಮನೆ ತೀಕ್ಷ್ಣವಾಗಿ ಹೇಳಿದರು.

Exit mobile version