ಬೆಂಗಳೂರು: ಕನ್ನಡ, ತಮಿಳು, ತೆಲುಗು ಸೇರಿದಂತೆ ಭಾರತೀಯ ಭಾಷೆಗಳಿಗೆ ಆತಂಕ ಎದುರಾಗಿರುವುದು ಹಿಂದಿ ಭಾಷೆಯಿಂದಲ್ಲ. ಹಿಂದಿ ಸೇರಿದಂತೆ ಭಾರತೀಯ ಭಾಷೆಗಳಿಗೆ ಸಮಾನ ಸವಾಲು, ಸಂಕಷ್ಟ ಇರುವುದು ಇಂಗ್ಲಿಷ್‌ನಿಂದ ಎಂದು ಹಿರಿಯ ಪತ್ರಕರ್ತ, ವಿಸ್ತಾರ ಮೀಡಿಯಾ ಪ್ರೈ. ಲಿ. ಸಿಇಒ ಹರಿಪ್ರಕಾಶ್ ಕೋಣೆಮನೆ ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಅಖಿಲ ಕರ್ನಾಟಕ ಮಕ್ಕಳ ಕೂಟ ಜಂಟಿಯಾಗಿ ಏರ್ಪಡಿಸಿದ್ದ ಡಾ. ಎಚ್ ವಿಶ್ವನಾಥ ಮತ್ತು ಶ್ರೀಮತಿ ಎಂ ಎಸ್ ಇಂದಿರಾ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ “ಇಂಗ್ಲಿಷ್‌ಗೆ ಪರ್ಯಾಯವಾಗಿ ಕನ್ನಡವನ್ನು ಕಟ್ಟಬೇಕು, ಭಾರತೀಯ ಭಾಷೆಗಳನ್ನು ಕಟ್ಟಬೇಕು ಎಂದರೆ ನಮ್ಮ ಭಾಷೆಗಳನ್ನು ಅನ್ನದ ಇಲ್ಲವೇ ಬದುಕಿನ ಭಾಷೆಯನ್ನಾಗಿಸಬೇಕುʼʼ ಎಂದವರು ಹೇಳಿದರು.
“ಇಂದು ಕನ್ನಡ ಪರ ಎಂದರೆ ಅನೇಕರು ಗೊಂದಲಕ್ಕೊಳಗಾಗುವ ಸಂದರ್ಭ ಇದೆ. ಇದಕ್ಕೆ ಮುಖ್ಯ ಕಾರಣ ಕನ್ನಡಕ್ಕೆ ಯಾರಿಂದ ಆತಂಕವಿದೆ ಎಂಬುದು ಸ್ಪಷ್ಟವಿರದೇ ಇರುವುದು. ನಾವು ಕನ್ನಡಕ್ಕೆ ಆತಂಕವಿದೆ ಎಂದು ಕೊರಗುತ್ತಿದ್ದೇವೆ. ಅದೇ ರೀತಿ ಬೇರೆ ಬೇರೆ ಭಾಷಿಕರಿಗೂ ಕೊರಗು ಇದೆ. ಕೇರಳದಲ್ಲಿ ಮಲಯಾಳಿಗಳು, ಆಂಧ್ರದಲ್ಲಿ ತೆಲುಗರು, ತಮಿಳುನಾಡಿನ ಬಹಳ ಸ್ವಾಭಿಮಾನಿಗಳು ಎನ್ನಲಾಗುವ ತಮಿಳರು ಸಹ ನಮ್ಮದೇ ರೀತಿಯಲ್ಲಿ ಆತಂಕ ಎದುರಿಸುತ್ತಿದ್ದಾರೆʼʼ ಎಂದು ವಿವರಿಸಿದರು.
“ನಾವು ಕನ್ನಡಕ್ಕೆ ತಮಿಳರು ತೊಂದರೆ ಮಾಡಿದರು, ಹಿಂದಿ ಭಾಷಿಕರು ತೊಂದರೆ ಮಾಡುತ್ತಿದ್ದಾರೆ ಎಂದು ಕೊರಗುತ್ತಲೇ ಇದ್ದೇವೆ. ಈ ವಿಷಯದಲ್ಲಿ ನಾವು ವಸ್ತುನಿಷ್ಠವಾಗಿ ಯೋಚಿಸಬೇಕಾಗಿದೆ. ನಮಗೆ ನಿಜವಾಗಿಯೂ ಆತಂಕ ಎದುರಾಗಿದ್ದು ಎಲ್ಲಿ, ಯಾರಿಂದ ಎಂಬುದನ್ನು ಸರಿಯಾಗಿ ಗ್ರಹಿಸಬೇಕಾಗಿದೆ. ಅನೇಕರು ಇದನ್ನು ಒಪ್ಪಿಕೊಳ್ಳುವುದಿಲ್ಲ. ವಾಸ್ತವ ಏನೆಂದರೆ ಕನ್ನಡ, ಹಿಂದಿ ಸೇರಿದಂತೆ ಇಂದು ಎಲ್ಲ ಭಾರತೀಯ ಭಾಷೆಗಳಿಗೆ ಆತಂಕ ಎದುರಾಗಿರುವುದು ಭಾರತದ ಯಾವ ಭಾಷೆಯಿಂದಲೂ ಅಲ್ಲ, ಪರಕೀಯ ಇಂಗ್ಲಿಷ್‌ನಿಂದ. ಇದರ ಬಿಗಿ ಹಿಡಿತದಲ್ಲಿ ನಾವು ಸಿಕ್ಕಿಹಾಕಿಕೊಂಡಿದ್ದೇವೆʼʼ ಎಂದು ಕೋಣೆಮನೆ ಅವರು ಹೇಳಿದರು.
“ಇಂಗ್ಲಿಷ್ ಬಲ್ಲವರಿಗೆ ಉದ್ಯೋಗ ಖಾತ್ರಿ ಎಂಬ ಪರಿಸ್ಥಿತಿ ಇರುವುದರಿಂದ ಎಲ್ಲರೂ ಇಂಗ್ಲಿಷ್ ಸೆಳೆತಕ್ಕೆ ಒಳಗಾಗಿದ್ದಾರೆ. ಇದನ್ನು ತಪ್ಪಿಸಿ, ನಮ್ಮ ಭಾಷೆಯನ್ನು ಕಟ್ಟಬೇಕು ಎಂದರೆ ನಾವು ಕನ್ನಡವನ್ನು ಉದ್ಯೋಗ ಮಾರುಕಟ್ಟೆಯ ಭಾಷೆಯನ್ನಾಗಿಸಬೇಕು. ಕೇವಲ ಭಾವನಾತ್ಮಕತೆಯಿಂದಾಗಲಿ, ಹಿಂದಿಯನ್ನು ವಿರೋಧಿಸುವುದರಿಂದಾಗಲಿ ಇದು ಸಾಧ್ಯವಿಲ್ಲ. ನಮಗೆಲ್ಲ ಮಾದರಿ ಆಗಿರುವ ವಿಷಯ ಏನೆಂದರೆ ಚೀನಾ, ಜಪಾನ್ ದೇಶಗಳು ಇಂಗ್ಲಿಷ್ ಭಾಷೆಯನ್ನು ಆಶ್ರಯಿಸದೆ ಸ್ವಾವಲಂಬಿಯಾಗಿರುವುದುʼʼ ಎಂದವರು ನುಡಿದರು.
“ಜಗತ್ತಿನ ಬೇರೆ ಬೇರೆ ದೇಶಗಳು ಯಾವ ಭಾಷೆ ಬಳಸುತ್ತಿವೆ, ಇಂಗ್ಲಿಷ್‌ಗೆ ಎಷ್ಟು ಪ್ರಾಮುಖ್ಯತೆ ನೀಡಿವೆ ಎಂದು ನಾವು ತಿಳಿಯದೇ ಮಾತನಾಡುತ್ತಿದ್ದೇವೆ. ಯಾವ ಕಾರಣಕ್ಕೂನ ಸ್ಥಳೀಯ ಭಾಷೆಗಳಿಗೆ ಮಾರಕ ಆಗಿರುವುದು, ಮುಂದೆ ಆಗುವುದು ಭಾರತದ ಭಾಷೆಗಳಿಂದ ಅಲ್ಲ. ನಮ್ಮೆಲ್ಲ ಭಾಷೆಗಳ ಹಿಂದೆ ಸಂಸ್ಕೃತದ ಗಟ್ಟಿ ಬೇರಿದೆ. ಅವು ಒಂದಕ್ಕೊಂದು ಬೆಸೆದುಕೊಂಡಿವೆ. ಆದರೆ ಹೊರಗಿನಿಂದ ಬಂದ ಇಂಗ್ಲಿಷ್ ನಮಗೆ ನಿಜವಾದ ಸವಾಲೊಡ್ಡುತ್ತಿದೆ. ಎಲ್ಲ ಭಾಷೆಗಳಂತೆಯೇ ಇಂಗ್ಲಿಷ್ ಕೂಡ ಒಂದು ಎಂದುಕೊಂಡಾಗ ನಮ್ಮ ಮಾತೃ ಭಾಷೆಯ ಬಗೆಗಿನ ಕೀಳರಿಮೆ ದೂರವಾಗುತ್ತದೆʼʼ ಎಂದರು.
ದೂರದರ್ಶನವನ್ನು ಹತ್ತಿರವಾಗಿಸಿದರು!
“ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ್ ಜೋಶಿ ಎಲ್ಲಿ ಇರುತ್ತಾರೋ ಅಲ್ಲಿ ಹೊಸತನ ಇರುತ್ತದೆ, ಕ್ರಿಯಾಶೀಲತೆ ಇರುತ್ತದೆʼʼ ಎಂದು ಕಸಾಪದ ನೂತನ ಅಧ್ಯಕ್ಷರ ಕಾರ್ಯಶೈಲಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಹರಿಪ್ರಕಾಶ್ ಕೋಣೆಮನೆ, “ಜೋಶಿ ಅವರು ದೂರದರ್ಶನದಲ್ಲಿ ಇದ್ದಾಗ ಅದರ ಹೆಸರು ದೂರದರ್ಶನ ಅಂತ ಇದ್ದರೂ ಅದನ್ನು ಅವರು ಕನ್ನಡಿಗರಿಗೆ ಸಮೀಪದ ದರ್ಶನ ಮಾಡಿಸಿದರು. ಯಾವುದು ನಮ್ಮ ಕೈಗೆ ಸಿಗುವುದಿಲ್ಲ ಎಂದುಕೊಂಡಿದ್ದೇವೋ ಅದನ್ನು ಸಮೀಪಕ್ಕೆ ತಂದರುʼʼ ಎಂದು ನೆನಪಿಸಿಕೊಂಡರು.
ಕಣ್ಣು ದಾನ ಮಾಡೋಣ
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ “ಜಗತ್ತಿನ ಅತಿ ಹೆಚ್ಚು ದೃಷ್ಟಿ ವೈಕಲ್ಯ ಇರುವ ದೇಶ ಅಂದರೆ ಭಾರತ. ಪ್ರತಿ ಸಾವಿರ ಶಿಶುಗಳಲ್ಲಿ 9 ದೃಷ್ಟಿ ವೈಕಲ್ಯ ಹೊಂದಿರುತ್ತದೆ. ದೇಶದ ಶೇ.10ರಷ್ಟು ಜನರು ಮುಂದೆ ಬಂದು ಕಣ್ಣು ದಾನ ಮಾಡಿದರೆ ನಮ್ಮ ದೇಶದಲ್ಲಿ ಅಂಧತ್ವವೇ ಇರುವುದಿಲ್ಲʼʼ ಎಂದು ಹೇಳಿದರು.
ನಾನು ನನ್ನ ಕಣ್ಣುಗಳನ್ನ ದಾನ ಮಾಡುತ್ತೇನೆ ಎಂದು ಕಾರ್ಯಕ್ರಮದಲ್ಲಿ ಪ್ರಕಟಿಸಿದ ಡಾ. ಮಹೇಶ ಜೋಶಿ, ಹಾಗೆಯೇ ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲ ಸದಸ್ಯರೂ ಕಣ್ಣು ದಾನ ಮಾಡಬೇಕೆಂದು ಮನವಿ ಮಾಡುತ್ತೇನೆ ಎಂದರು. ಅಂಗಾಂಗ ದಾನದ ಕುರಿತು ತಾವು ದೂರದರ್ಶನದಲ್ಲಿ ಕೆಲಸ ಮಾಡುವಾಗ ವಿಶೇಷ ಅಭಿಯಾನ ನಡೆಸಿದ್ದನ್ನು ಸ್ಮರಿಸಿದ ಅವರು, ಎಲ್ಲರೂ ಅಮೂಲ್ಯವಾದ ಕಣ್ಣನ್ನು ದಾನ ಮಾಡಿ ತಮ್ಮ ಮರಣ ನಂತರವೂ ಅಂಧರ ಬಾಳಿಗೆ ಬೆಳಕಾಗಬೇಕೆಂದರು.
ಕನ್ನಡ ಸಾಹಿತ್ಯ ಪರಿಷತ್ತು ನೀಡುವ 2022ನೇ ಸಾಲಿನ ʻಡಾ.ಎಚ್.ವಿಶ್ವನಾಥ ಮತ್ತು ಶ್ರೀಮತಿ ಎಂ.ಎಸ್.ಇಂದಿರಾ ದತ್ತಿ ಪ್ರಶಸ್ತಿಯನ್ನು ಸಾಹಿತಿ ರಮೇಶ್ ಮುದಿಗೆರೆ ಅವರಿಗೆ ನೀಡಲಾಯಿತು. ಮುದಿಗೆರೆ ಅವರ ʻಬಟಾಬಯಲುʼ ಕವನ ಸಂಕಲನ ಡಾ. ಎಚ್. ವಿಶ್ವನಾಥ ಮತ್ತು ಶ್ರೀಮತಿ ಎಂ.ಎಸ್.ಇಂದಿರಾ ದತ್ತಿ ಪ್ರಶಸ್ತಿಗೆ (ದೃಷ್ಟಿದೋಷ ಇರುವ ಲೇಖಕರಿಗೆ ಈ ಪ್ರಶಸ್ತಿ ಮೀಸಲು) ಆಯ್ಕೆಯಾಗಿದ್ದು, ಪ್ರಶಸ್ತಿಯು 10,000 ರೂ. ನಗದು ಹಾಗೂ ಫಲಕ ಒಳಗೊಂಡಿದೆ.
ಕಾರ್ಯಕ್ರಮದಲ್ಲಿ ಡಾ. ಎಚ್.ವಿಶ್ವನಾಥ, ಅಖಿಲ ಕರ್ನಾಟಕ ಮಕ್ಕಳ ಕೂಟದ ಅಧ್ಯಕ್ಷ ಕೆ ಮೋಹನ್‌ದೇವ್ ಆಳ್ವ ಉಪಸ್ಥಿತರಿದ್ದರು.
ಇದನ್ನೂ ಓದಿ| Award | ಸಾಹಿತಿ ರಮೇಶ್ ಮುದಿಗೆರೆಗೆ ಕಸಾಪ ದತ್ತಿ ಪ್ರಶಸ್ತಿ: ಇಂದು ಪ್ರದಾನ