ಮಂಗಳೂರು: ಪೊಲೀಸರಿಗೆ ಧಮ್ಕಿ ಹಾಕಿದ ಪ್ರಕರಣದಲ್ಲಿ ಬುಧವಾರ ರಾತ್ರಿ ವಿಚಾರಣೆಗೆ ಹಾಜರಾದ ಬಳಿಕ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರು ಬೆಳ್ತಂಗಡಿ ಪೊಲೀಸ್ ಠಾಣೆಯಿಂದ ಹೊರಬಂದಿದ್ದಾರೆ. ಪೊಲೀಸರು ಬುಧವಾರ ಮಧ್ಯಾಹ್ನ ಶಾಸಕರ ನಿವಾಸಕ್ಕೆ ತೆರಳಿ ಬಂಧಿಸಲು ಮುಂದಾಗಿದ್ದರು. ಆದರೆ, ಬಿಜೆಪಿ ಕಾರ್ಯಕರ್ತರು, ಮುಖಂಡರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿ ಅಲ್ಲಿಂದ ತೆರಳಿದ್ದರು. ಹೀಗಾಗಿ ವಿಚಾರಣೆ ಮುಗಿಸಿ ಠಾಣೆಯಿಂದ ಶಾಸಕ ಹರೀಶ್ ಪೂಂಜಾ ವಾಪಸ್ ಆಗಿದ್ದಾರೆ.
ಪೂಂಜಾಗೆ ಶಾಸಕ ಸುನೀಲ್ ಕುಮಾರ್, ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟಾ ಮತ್ತಿತರರ ಬಿಜೆಪಿ ನಾಯಕರು ಸಾಥ್ ನೀಡಿದರು. ಈ ವೇಳೆ ಶಾಸಕ ಸುನೀಲ್‌ಕುಮಾರ್ ಮಾತನಾಡಿ, ಕಾನೂನುಬಧ್ದವಾಗಿ ಹರೀಶ್ ಪೂಂಜಾ ವಿಚಾರಣೆಗೆ ಹಾಜಾರಾಗಿದ್ದಾರೆ. ಇದೇ ರೀತಿ ಪೊಲೀಸರೂ ಬಂದು ನೋಟಿಸ್ ಕೊಡಬಹುದಿತ್ತು. ನೂರು ಇನ್ನೂರು ಪೊಲೀಸರ ಜತೆ ಬರುವ ಅಗತ್ಯ ಇರಲಿಲ್ಲ. ಈ ವಿಚಾರವನ್ನು ಇಲ್ಲಿಗೆ ಬಿಡುವ ಪ್ರಶ್ನೆಯೇ ಇಲ್ಲ. ಮುಂದೆ ಅಧಿವೇಶನದಲ್ಲಿ ಇದನ್ನು ಚರ್ಚೆ ಮಾಡುತ್ತೇವೆ. ಈ ವಿಚಾರವಾಗಿ ಅಧಿವೇಶವನ್ನು ಮಾಡಲು ಬಿಡವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ | Harish Poonja: ಪೊಲೀಸರಿಗೆ ಧಮ್ಕಿ ಕೇಸ್; ಶಾಸಕ ಹರೀಶ್ ಪೂಂಜಾರನ್ನು ಅರೆಸ್ಟ್ ಮಾಡದೇ ವಾಪಸ್ ಹೋದ ಪೊಲೀಸರು!
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರಿಂದ ಪ್ರೆಸ್ ನೋಟ್
ಮಂಗಳೂರು: ಪೊಲೀಸರಿಗೆ ಧಮ್ಕಿ ಹಾಕಿದ ಪ್ರಕರಣದ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರಿಂದ ಪ್ರೆಸ್ ನೋಟ್ ಬಿಡುಗಡೆ ಮಾಡಲಾಗಿದೆ. ಶಾಸಕ ಹರೀಶ್ ಪೂಂಜಾ ವಿಚಾರಣೆ ನಡೆಸಲಾಗಿದೆ. ಸಂಸದ ನಳೀನ್ ಕುಮಾರ್ ಕಟೀಲ್, ಶಾಸಕರನ್ನು ವಿಚಾರಣೆಗೆ ಕಳುಹಿಸಿಕೊಡುವುದಾಗಿ ವಿನಂತಿಸಿದ್ದರು. ಅದರಂತೆ ಸಂಸದರು ಪೊಲೀಸರ ಜೊತೆ ಆರೋಪಿಯನ್ನು ಠಾಣೆಗೆ ಕಳುಹಿಸಿಕೊಟ್ಟಿದ್ದಾರೆ. 2 ಪ್ರಕರಣದ ಆರೋಪಿ ಶಾಸಕ ಹರೀಶ್ ಪೂಂಜಾ ವಿಚಾರಣೆ ನಡೆಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಕೇಸ್?
ಬೆಳ್ತಂಗಡಿಯ ಮೆಲಂತಬೆಟ್ಟುವಿನ ಕಲ್ಲು ಕ್ವಾರಿ ಮೇಲೆ ತಹಸೀಲ್ದಾರ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಗುರುವಾಯನಕೆರೆಯ ಬಿಜೆಪಿಯ ಯುವ ಮೋರ್ಚಾದ ತಾಲೂಕು ಅಧ್ಯಕ್ಷ ಶಶಿರಾಜ್ ಶೆಟ್ಟಿ ಎಂಬುವವರನ್ನು ಬಂಧನ ಮಾಡಲಾಗಿತ್ತು. ಇದನ್ನು ಖಂಡಿಸಿ ರಾತ್ರೋರಾತ್ರಿ ಪೊಲೀಸ್ ಠಾಣೆ ಎದುರು ಶಾಸಕ ಹರೀಶ್ ಪೂಂಜಾ ಹಾಗೂ ಬಿಜೆಪಿ ಕಾರ್ಯಕರ್ತರು ಧರಣಿ ನಡೆಸಿ, ಆಕ್ರೋಶ ಹೊರಹಾಕಿದ್ದರು.
ಪ್ರತಿಭಟನೆ ವೇಳೆ ‘ಪೊಲೀಸ್ ಠಾಣೆ ನಿಮ್ಮ ಅಪ್ಪಂದಾʼ ಅಂತ ಬೆಳ್ತಂಗಡಿ ಪಿಎಸ್‌ಐ ಮುರುಳಿಧರ್ ನಾಯ್ಕ್‌ಗೆ ಶಾಸಕ ಹರೀಶ್ ಪೂಂಜಾ ಧಮ್ಕಿ ಹಾಕಿದ್ದರು. ಮನೆಯಲ್ಲಿದ್ದವರನ್ನು ಯಾವುದೇ ದಾಖಲೆಗಳಿಲ್ಲದೆ ಹೆಂಗಸರು, ಮಕ್ಕಳೆದುರು ಬಂಧನ ಮಾಡಿರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ. ಅಮಾಯಕನ ಬಂಧನವಾಗಿದ್ದು, ಕೂಡಲೇ ಆತನನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದ್ದರು. ಹೀಗಾಗಿ ಶಾಸಕರ ವಿರುದ್ಧ ಪ್ರಕರಣ ದಾಖಲಾಗಿತ್ತು.