ಚಿಕ್ಕಮಗಳೂರು: ನನ್ನ ಹೆಂಡತಿಗೆ ನಂಬರ್ ಕೊಡ್ತೀಯಾ? ಕರೆ ಮಾಡು ಅಂತ ಪೀಡಿಸ್ತೀಯಾ (Harrassment case) ಎಂದು ಕೇಳಿ ಕೇಳಿ ಅಟ್ಟಾಡಿಸಿ ಹೊಡೆದಿದ್ದಾನೆ ಒಬ್ಬ ಗಂಡ. ಈ ಘಟನೆ ನಡೆದಿರುವುದು ಕೊಪ್ಪ ತಾಲೂಕಿನ ಜಯಪುರ ಸಮೀಪದ ಕಟ್ಟೆಮನೆಯಲ್ಲಿ.
ಕಟ್ಟೆಮನೆಯಲ್ಲಿ ಟಿವಿ ಡಿಶ್ ರಿಪೇರಿ (TV Dish repair) ಮತ್ತಿತರ ಕೆಲಸ ಮಾಡುವ ಬಶೀರ್ ಎಂಬಾತನೇ ಧರ್ಮದೇಟು (Physically thrashing) ತಿಂದವನು. ತನ್ನ ಪತ್ನಿಗೆ ಬಶೀರ್ ಪ್ರತಿ ದಿನ ಕಿರಿಕಿರಿ ಮಾಡುತ್ತಿರುವುದನ್ನು ಸಹಿಸದೆ ಅಟ್ಟಾಡಿಸಿ ಹೊಡೆದವನು ರಮೇಶ್.
ಕಟ್ಟೆಮನೆ ಗ್ರಾಮದ ರಮೇಶ್ ಎಂಬವರ ಮನೆಯಲ್ಲಿ ಇತ್ತೀಚೆಗೆ ಟೀವಿ ಚಾನೆಲ್‌ಗಳು ಸರಿಯಾಗಿ ಬರುತ್ತಿರಲಿಲ್ಲ. ಇದನ್ನು ರಿಪೇರಿ ಮಾಡಲೆಂದು ಮನೆಗೆ ಎಂಟ್ರಿ ಕೊಟ್ಟವನು ಅದೇ ಊರಿನ ಬಶೀರ್. ಹಾಗೆ ಬಂದವನು ಡಿಶ್ ರಿಪೇರಿಯ ಕೆಲಸಗಳನ್ನು ಮಾಡಿಕೊಟ್ಟಿದ್ದ. ಮನೆಗೆ ಬಂದವನು ರಮೇಶ್ ಅವರ ಪತ್ನಿಯ ಜತೆಗೆ ಉತ್ತಮವಾಗಿ ವ್ಯವಹರಿಸಿದ್ದ.
ಕೊನೆಗೆ ಕೆಲಸ ಮುಗಿಸಿ ಹೋಗುವಾಗ ಅವನು ರಮೇಶ್ ಅವರ ಪತ್ನಿಗೆ ತನ್ನ ಮೊಬೈಲ್ ನಂಬರ್ ನೀಡಿದ್ದ. ಏನೇ ಸಮಸ್ಯೆಯಾದರೂ ಕರೆ ಮಾಡಿ ಎಂದು ಹೇಳಿದ್ದ. ಇದೆಲ್ಲವೂ ಒಳ್ಳೆಯತನ, ವ್ಯವಹಾರ ಚತುರತೆ ಎಂದು ತಿಳಿದ ರಮೇಶ್ ಅವರ ಪತ್ನಿ ತಿಳಿದಿದ್ದರು.
ಈ ನಡುವೆ, ಬಶೀರ್ ಆಗಾಗ ಮಹಿಳೆಗೆ ಮೆಸೇಜ್ ಮಾಡಿ ಕರೆ ಮಾಡುವಂತೆ ಒತ್ತಾಯ ಮಾಡಲು ಆರಂಭಿಸಿದ. ಸಿಕ್ಕಿದಾಗ ಕರೆ ಮಾಡುವಂತೆ ಸನ್ನೆ ಮಾಡುತ್ತಿದ್ದ. ಇದು ಕೆಲವು ದಿನಗಳ ಬಳಿಕ ರಮೇಶ್ ಅವರಿಗೆ ತಿಳಿಯಿತು. ಇದರಿಂದ ಸಿಟ್ಟಿಗೆದ್ದ ರಮೇಶ್ ಬಶೀರ್‌ನನ್ನು ಹುಡುಕಿಕೊಂಡು ಹೋಗಿ ಅಟ್ಟಾಡಿಸಿ ಹೊಡೆದಿದ್ದಾನೆ. ಹೀಗೆ ಧರ್ಮದೇಟು ನೀಡುವ ವಿಡಿಯೊ ವೈರಲ್ ಆಗಿದೆ.
ಜಯಪುರದಲ್ಲಿ ಡಿಶ್ ರಿಪೇರಿ ಅಂಗಡಿ ಹೊಂದಿರುವ ಬಶೀರ್ ಇನ್ನೂ ಹಲವು ಮಹಿಳೆಯರಿಗೆ ನಂಬರ್ ಕೊಟ್ಟು ಕರೆ ಮಾಡುವಂತೆ ಪೀಡಿಸುತ್ತಿದ್ದ ಎಂದು ಹೇಳಲಾಗಿದೆ. ಈಗ ಹಲವರು ಈ ವಿಚಾರವನ್ನು ಬಾಯಿ ಬಿಡುತ್ತಿದ್ದಾರೆ.
ಆರಂಭದಲ್ಲಿ ಸಹಾಯಕ್ಕೆ ಬರುವವರಂತೆ ವರ್ತಿಸುವ ಕೆಲವು ಯುವಕರು ಬಳಿಕ ತಮ್ಮ ಚಾಳಿಯನ್ನು ಹೆಡೆ ಎತ್ತಿಸಿ ಮಹಿಳೆಯರಿಗೆ ಕಿರುಕುಳ ನೀಡುವ ವಿದ್ಯಮಾನಗಳು ನಡೆಯುತ್ತಿವೆ. ಹೆಣ್ಮಕ್ಕಳ, ಮಹಿಳೆಯರ ಮೊಬೈಲ್ ನಂಬರನ್ನು ಉಪಾಯವಾಗಿ ಪಡೆದುಕೊಂಡು ಅವರ ವಿಶ್ವಾಸ ಸಂಪಾದಿಸಿ ಬಳಿಕ ಕೆಟ್ಟ ದಾರಿಗೆ ಎಳೆಯುವ ಪ್ರಯತ್ನಗಳು ಕೂಡಾ ಅಲ್ಲಲ್ಲಿ ನಡೆಯುತ್ತವೆ. ಹೀಗೆ ಜಯಪುರದಲ್ಲಿ ನಡೆದ ಘಟನೆಯೂ ಒಂದು ಎಚ್ಚರಿಕೆ ಗಂಟೆ ಎಂದು ಹೇಳಲಾಗಿದೆ. ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸದಂತೆ, ಕೆಟ್ಟ ಚಾಳಿಗೆ ಕೈ ಹಾಕದಂತೆ ಎಚ್ಚರಿಕೆ ನೀಡುವ ಘಟನೆ ಇದೆನ್ನಲಾಗಿದೆ.
ಆದರೆ, ಈ ಪ್ರಕರಣದಲ್ಲಿ ಬಶೀರ್ ಮಾತ್ರ ತಾನು ತಪ್ಪಾಗಿ ಈ ರೀತಿ ಮಾಡಿದ್ದಾಗಿಯೂ, ಉದ್ದೇಶಪೂರ್ವಕ ಅಲ್ಲವೆಂದು ಹೇಳಿದ್ದಾನೆ. ಬೇರೆ ಯಾರಿಗೋ ಮಾಡಿದ ಕರೆ ತಪ್ಪಿ ಬಂದಿದೆ ಎನ್ನುವುದು ಅವನ ವಿವರಣೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರದ ಕಟ್ಟೆಮನೆಯಲ್ಲಿ ನಡೆದ ಈ ಘಟನೆಯ ಬಗ್ಗೆ ಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Physical abuse : 7 ವರ್ಷದ ಮಗಳ ಜತೆ ಅಶ್ಲೀಲವಾಗಿ ವರ್ತಿಸುವ ವಿಕೃತ ಅಪ್ಪ; ಸರಿಯಾಗಿ ತನಿಖೆ ನಡೆಸಲು ಹೈ ಆದೇಶ