Site icon Vistara News

Harrassment Case : ಟಾಯ್ಲೆಟ್‌ ವಿಡಿಯೊ ಶೇರ್‌ ಆಗಿಲ್ಲ, ಸುಳ್ಳು ಸುದ್ದಿ ಹರಡಬೇಡಿ: ಉಡುಪಿ ಕಾಲೇಜು ಮನವಿ

Udupi College pressmeet

ಉಡುಪಿ: ಕಾಲೇಜಿನಲ್ಲಿ ನೂರಾರು ವಿದ್ಯಾರ್ಥಿನಿಯರ ವಿಡಿಯೊ (Girls videographed) ಮಾಡಲಾಗಿದೆ, ಅವುಗಳನ್ನು ಶೇರ್‌ ಮಾಡಲಾಗಿದೆ (Harrassment Case) ಎಂಬೆಲ್ಲ ಸುಳ್ಳು ಸುದ್ದಿಗಳನ್ನು ದಯವಿಟ್ಟು ಹರಡಬೇಡಿ ಎಂದು ವಿವಾದಕ್ಕೆ ಒಳಗಾಗಿರುವ ಉಡುಪಿಯ ನೇತ್ರಜ್ಯೋತಿ ಕಾಲೇಜಿನ (Udupi Netrajyothi College) ಆಡಳಿತ ಮಂಡಳಿ ಮನವಿ ಮಾಡಿದೆ.

ಈ ಕಾಲೇಜಿನಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು (three Muslim students) ಒಬ್ಬ ಹಿಂದು ವಿದ್ಯಾರ್ಥಿನಿಯ ಶೌಚಾಲಯದ ದೃಶ್ಯಗಳನ್ನು (Ladies Toilet video) ಸೆರೆಹಿಡಿದು ಶೇರ್‌ ಮಾಡಿದ್ದಾರೆ ಎಂಬ ಘಟನೆ ಈಗ ರಾಜ್ಯಮಟ್ಟದಲ್ಲಿ ಸದ್ದು ಮಾಡಿದೆ. ಕಾಲೇಜಿನ ಆಡಳಿತ ಮಂಡಳಿ ತಪ್ಪಿತಸ್ಥ ಮೂವರು ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಅಮಾನತು ಮಾಡಿದೆ. ಆದರೆ, ಯಾವುದೇ ರೀತಿಯ ಪೊಲೀಸ್‌ ದಾಖಲಾಗದೆ ಪ್ರಕರಣ ಮುಚ್ಚಿ ಹಾಕಲಾಗಿದೆ ಎನ್ನುವುದು ಆರೋಪ. ಇದನ್ನು ಪ್ರಶ್ನಿಸಿದ ರಶ್ಮೀ ಸಾಮಂತ್‌ ಎಂಬ ಉಡುಪಿ ಮೂಲದ ಹಿಂದೂ ಮಾನವ ಹಕ್ಕು ಹೋರಾಟಗಾರ್ತಿಯ ಮನೆಗೆ ಪೊಲೀಸರು ಲಗ್ಗೆ ಇಟ್ಟು ಬೆದರಿಕೆ ಹಾಕಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಇದರ ನಡುವೆ ಬಿಜೆಪಿ ಆರೋಪಿತ ವಿದ್ಯಾರ್ಥಿನಿಯರ ಬಂಧನ ಆಗ್ರಹಿಸಿ ಜುಲೈ 27ರಂದು ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡಿದೆ.

ಇದರ ನಡುವೆಯೇ ಮಂಗಳವಾರ ಕಾಲೇಜಿನ ಆಡಳಿತ ಮಂಡಳಿ ಪತ್ರಿಕಾಗೋಷ್ಠಿಯನ್ನು ನಡೆಸಿತು. ಕಾಲೇಜಿನ ನಿರ್ದೇಶಕಿ ಲಕ್ಷ್ಮೀ ಕೃಷ್ಣ ಪ್ರಸಾದ್‌, ಬಾಲಕೃಷ್ಣ, ಮತ್ತು ರಾಜೀವ್ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಉಡುಪಿಯ ವಿವಾದಿತ ನೇತ್ರಜ್ಯೋತಿ ಕಾಲೇಜು

ವಿಚಾರ ತಿಳಿಯದೆ ಯಾರೂ ತಪ್ಪು ಮಾಹಿತಿ ಹಾಕಬೇಡಿ

ನಮಗೆ ಈ ಪ್ರಕರಣ ತಿಳಿದ ಕೂಡಲೇ ವಿಚಾರಣೆ ಮಾಡಿದ್ದೇವೆ. ಮಕ್ಕಳು ತಪ್ಪೊಪ್ಪಿಕೊಂಡಿದ್ದಾರೆ. ಅಷ್ಟಾದ ನಂತರವೂ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಮೊಬೈಲನ್ನು ಪೊಲೀಸರಿಗೆ ಒಪ್ಪಿಸಿದ್ದೇವೆ ಎಂದು ಲಕ್ಷ್ಮೀ ಕೃಷ್ಣ ಪ್ರಸಾದ್‌ ತಿಳಿಸಿದರು.

ಕೃತ್ಯದಲ್ಲಿ ಭಾಗಿಯಾದ ಮೂವರು ಒಂದೇ ಕ್ಲಾಸಿನ ಸಹಪಾಠಿಗಳು, ಇನ್ನೊಬ್ಬಳು ಹುಡುಗಿ ಬೇರೆ ಕ್ಲಾಸ್‌ನವಳು. ನಾವು ವಿಚಾರಣೆ ಮಾಡಿದಾಗ ಮೊಬೈಲ್‌ನಲ್ಲಿ ಯಾವುದೇ ವಿಡಿಯೊ ಇರಲಿಲ್ಲ. ವಾಶ್‌ ರೂಮ್‌ಗೆ ಹೋದಾಗ ಮೊಬೈಲ್‌ ನೋಡಿದೆ. ತಕ್ಷಣ ಹೊರಗೆ ಬಂದೆ. ಮತ್ತು ಕೂಡಲೇ ವಿಡಿಯೊ ಡಿಲೀಟ್‌ ಮಾಡಿಸಿದ್ದೇನೆ ಎಂದು ಸಂತ್ರಸ್ತ ಯುವತಿ ಹೇಳಿದ್ದಾಳೆ. ಹೀಗಾಗಿ ವಿಡಿಯೊವನ್ನು ಹಂಚಲಾಗಿದೆ ಎಂಬ ಮಾಹಿತಿ ಸರಿಯಲ್ಲ ಎಂದು ಲಕ್ಷ್ಮೀ ಕೃಷ್ಣ ಪ್ರಸಾದ್‌ ಹೇಳಿದರು.

ಸಂತ್ರಸ್ತೆಯೇ ದೂರು ನೀಡುವುದು ಬೇಡ ಎಂದಿದ್ದಾಳೆ

ಸಂತ್ರಸ್ತೆ ಯಾವುದೇ ದೂರು ಕೊಟ್ಟಿಲ್ಲ, ಕಾಲೇಜ್ ಮೇಟ್ ಆಗಿರುವ ಕಾರಣ ದೂರು ಕೊಡಲ್ಲ ಎಂದಿದ್ದಾಳೆ. ಇದನ್ನು ತಮಾಷೆಗೆ ಮಾಡಿದ್ದು, ಯಾವುದೇ ದುರುದ್ದೇಶವಿಲ್ಲ ಎಂದು ಆ ಮೂವರು ಹೇಳಿದ್ದಾರೆ. ತಮಾಷೆಗೆ ಮಾಡಿರುವುದರಿಂದ ನನ್ನ ಭವಿಷ್ಯ, ಆ ಮೂವರ ಭವಿಷ್ಯ ಮುಖ್ಯ. ಹೀಗಾಗಿ ಕೇಸು ಬೇಡ ಎಂದು ಸಂತ್ರಸ್ತೆ ಬರೆದುಕೊಟ್ಟಿದ್ದಾಳೆ ಎಂದು ವಿವರಿಸಿದರು.

ಮೊಬೈಲ್‌ ಬಳಕೆಯಿಂದ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಕಾಲೇಜಿನಲ್ಲಿ ಮೊಬೈಲ್‌ ಬ್ಯಾನ್‌ ಮಾಡಿದ್ದೇವೆ. ಮೊಬೈಲ್ ತಂದದ್ದು, ಶೂಟ್ ಮಾಡಿದ್ದು ತಪ್ಪು ಹಾಗಾಗಿ ಸಸ್ಪೆಂಡ್ ಮಾಡಿದ್ದೇವೆ. ಇದನ್ನೇ ಬಳಸಿಕೊಂಡು ನೂರಾರು ವಿದ್ಯಾರ್ಥಿನಿಯರ ಚಿತ್ರೀಕರಣ ಮಾಡಲಾಗಿದೆ ಎಂದೆಲ್ಲ ಸುದ್ದಿ ಹರಡಿಸಲಾಗುತ್ತಿದೆ. ವಿಚಾರ ತಿಳಿಯದೆ ತಪ್ಪು ಮಾಹಿತಿ ಯಾರೂ ಹಾಕಬೇಡಿ. ಸುಳ್ಳು ವಿಚಾರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಡಬೇಡಿ. ಇದು ನನ್ನ ಮನವಿ ಎಂದು ಲಕ್ಷ್ಮೀ ಕೃಷ್ಣ ಪ್ರಸಾದ್‌ ಮನವಿ ಮಾಡಿದರು.

ʻʻಕಾಲೇಜಿನ ಮಕ್ಕಳಲ್ಲಿ ನಾವು ಧರ್ಮವನ್ನು ನೋಡುವುದಿಲ್ಲ. ಚಿತ್ರೀಕರಿಸಿದ ಧರ್ಮದವರೇ ಕಾಲೇಜಿನಲ್ಲಿ ಘಟನೆ ವಿರುದ್ಧ ಪ್ರತಿಭಟನೆ ಮಾಡಿದ್ದಾರೆʼʼ ಎಂದು ಲಕ್ಷ್ಮಿ ಹೇಳಿದರು.

ಇದನ್ನೂ ಓದಿ: Harrassment Case : ಟಾಯ್ಲೆಟ್‌ನಲ್ಲಿ ಚಿತ್ರೀಕರಣ;‌ ಮುಸ್ಲಿಂ ವಿದ್ಯಾರ್ಥಿನಿಯರ ಅರೆಸ್ಟ್ ಆಗ್ರಹಿಸಿ 27ರಂದು ಬಿಜೆಪಿ ಹೋರಾಟ

Exit mobile version