Site icon Vistara News

ಹರ್ಷ ಹತ್ಯೆ ಪ್ರಕರಣ | ಹಿಂದು ಯುವಕರಿಗೆ ಬೆಲೆಯೇ ಇಲ್ಲವೆ?: ಸಾಹಿತಿಗಳಿಂದ ಸರ್ಕಾರಕ್ಕೆ ಪತ್ರ

ಹರ್ಷ ಹತ್ಯೆ ಪ್ರಕರಣ

ಶಿವಮೊಗ್ಗ: ಶಿವಮೊಗ್ಗದಲ್ಲಿ ಹತ್ಯೆಗೀಡಾದ ಹಿಂದು ಸಂಘಟನೆ ಕಾರ್ಯಕರ್ತ ಹರ್ಷನ ಆರೋಪಿಗಳಿಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರಾಜಾತಿಥ್ಯ ನೀಡುತ್ತಿರುವ ಕುರಿತು ಸಾಹಿತಿಗಳು ಮತ್ತು ಲೇಖಕರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಫೆಬ್ರವರಿ 20ರಂದು ಶಿವಮೊಗ್ಗದಲ್ಲಿ ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆಗೀಡಾಗಿದ್ದರು. ಈ ಹತ್ಯೆಯಿಂದ ಕೇವಲ ಮಲೆನಾಡು ಮಾತ್ರವಲ್ಲದೆ ರಾಜ್ಯಾದ್ಯಂತ ಬಿಗುವಿನ ವಾತಾವರಣ ನಿರ್ಮಾಣ ಆಗಿತ್ತು. ಅನೇಕ ಕಡೆಗಳಲ್ಲಿ ಪ್ರತಿಭಟನೆ ನಡೆದಿತ್ತು. ಆರೋಪಿಗಳನ್ನು ಬಂಧಿಸಿದ ಪೊಲೀಸರು, ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರಿಸಿದ್ದಾರೆ.

ಈ ಆರೋಪಿಗಳಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಸುದ್ದಿಯಿಂದಾಗಿ ಹರ್ಷ ಕುಟುಂಬದವರು ಹಾಗೂ ಹಿಂದು ಸಂಘಟನೆಗಳ ಪ್ರಮುಖರು ಬೇಸರಗೊಂಡಿದ್ದಾರೆ. ಹರ್ಷನ ತಂದೆ ನಾಗರಾಜ್‌, ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಅಸಮಾಧಾನ ಹೊರಹಾಕಿದ್ದರು. ಇದೀಗ ಅನೇಕ ಲೇಖಕರು ಸರ್ಕಾರಕ್ಕೆ ಈ ಕುರಿತು ಪತ್ರ ಬರೆದಿದ್ದಾರೆ.

ಲೇಖಕಿ ಹಾಗೂ ಮಾಜಿ ವಿಧಾನ ಪರಿಷತ್‌ ಸದಸ್ಯೆ ಡಾ. ಎಸ್. ಆರ್. ಲೀಲಾ, ಶತಾವಧಾನಿ ಡಾ. ಆರ್. ಗಣೇಶ್‌, ಲೇಖಕ ಸಂದೀಪ್ ಬಾಲಕೃಷ್ಣ, ವಿಮರ್ಶಕ ಡಾ. ಜಿ.ಬಿ. ಹರೀಶ್, ಪ್ರಕಾಶಕ ಕೆ .ಆರ್. ಹರ್ಷ, ವಾಸುಕಿ, ರಾಮಚಂದ್ರ, ಫಣಿರಾಜ್, ಜೀವನ್, ಪೂರ್ಣಿಮಾ ಮತ್ತಿತರರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಪತ್ರ ಬರೆದಿದ್ದಾರೆ.

ಕನ್ನಡದ ತಾಯಿಯೊಬ್ಬಳು ಮಗನನ್ನು ಕಾರಣವಿಲ್ಲದೆ ಕಳೆದುಕೊಂಡು ಹೃದಯ ಕರಗುವಂತಾಗಿದೆ. ಆಕೆಯ ವೇದನೆಯಂದ ಪ್ರೇರಿತವಾಗಿ ಬರೆಯುತ್ತಿರುವ ಪತ್ರ ಇದಾಗಿದೆ. ಹರ್ಷನ ಕೊಲೆಗಾರರಿಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಸಿಗುತ್ತಿದೆ ಎನ್ನುವ ಈ ವಿಚಾರ ಎಲ್ಲೆಡೆ ಪ್ರಕಟವಾಗುತ್ತಿದೆ. ಈ ವಿಷಯ ನೋಡಿ, ಕೇಳಿ ಬಹಳ ಬೇಸರವಾಗಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಹಿಂದೂ ಎಂದು ಅಭಿಮಾನದಿಂದ ಹೇಳಿಕೊಂಡ ಯುವಕನನ್ನು ವಿನಾಕಾರಣ ಕೋಮುದ್ವೇಷಕ್ಕೆ ನೂಕಿ ಪ್ರಾಣ ತೆಗೆದವರು ಎಷ್ಟು ನಿರಾಳವಾಗಿ, ಸಂತೋಷವಾಗಿ ಬದುಕುತ್ತಿದ್ದಾರೆ. ತಾವು ಏನು ಬೇಕಾದರೂ ಮಾಡಬಹುದು, ಪೊಲೀಸ್‌ ವ್ಯವಸ್ಥೆ ನಮ್ಮನ್ನೇನೂ ಮಾಡುವುದಿಲ್ಲ ಎಂಬ ವಿಶ್ವಾಸ ಈಗಾಗಲೇ ಅವರಿಗೆ ಬಂದಿದೆ. ಸರ್ಕಾರದ ಕಾರ್ಯಕ್ಷಮತೆಗೆ ಹಿಡಿದ ಕನ್ನಡಿ ಇದು. ದುಷ್ಟರಿಗೆ ರಕ್ಷಣೆ ಒದಗಿಸುತ್ತ, ನಿರಪರಾಧಿಗಳನ್ನು ಸರ್ಕಾರವೇ ಮತ್ತೆ ಕೊಲ್ಲುತ್ತಿದೆ ಎಂಬ ಜನಾಭಿಪ್ರಾಯ ರೂಪುಗೊಳ್ಳುತ್ತಿದೆ. ಗೃಹಮಂತ್ರಿಗಳೆ, ನಿಮ್ಮ ಈ ನಿರ್ಲಕ್ಷ್ಯ ಧೋರಣೆ ಮತ್ತು ಹಂತಕರ ಬಗೆಗಿನ ನಿರ್ಲಕ್ಷ್ಯ ಗಾಯಕ್ಕೆ ಉಪ್ಪು ಸವರಿದಂತಾಗಿದೆ ಎಂದು ಪತ್ರದಲ್ಲಿ ವಿಷಾದಿಸಲಾಗಿದೆ.

ಹಿಂದಿನ ಸರ್ಕಾರದಲ್ಲಿ ರುದ್ರೇಶ, ಪರೇಶ ಮುಂತಾದವರ ಕೊಲೆಯಾಗಿತ್ತು. ನಿಮ್ಮ ಸರ್ಕಾರ ಬಂದ ಮೇಲೆ ಕೊಲೆಗಾರರಿಗೆ ಶಿಕ್ಷೆ ಆಗಿದೆಯೆ ಹೇಳಿ? ಆತ್ಮಾಭಿಮಾನವುಳ್ಳ ಹಿಂದು ಯುವಕರಿಗೆ ಬೆಲೆಯೇ ಇಲ್ಲವೆ? ಅವರಿಗೆ ಸಾವೇ ಅಂತಿಮವೇ? ಮಂತ್ರಿಗಳೇ ತಾವು ಅಪರಾಧಿಗಳನ್ನು ಶಿಕ್ಷಿಸುವುದಿಲ್ಲ ಎಂದು ಮನಸ್ಸು ಮಾಡಿಕೊಂಡಿದ್ದರೆ, ಅಂಥ ಒಂದು ಸರ್ಕಾರಿ ಆಜ್ಞೆಯನ್ನು ಹೊರಡಿಸಿಬಿಡಿ. ಜನರೆಲ್ಲ ಬಾಯಿ ಮುಚ್ಚಿಕೊಂಡು, ಮಚ್ಚಿನೇಟು ತಿಂದುಕೊಂಡು ಬಿದ್ದಿರುತ್ತಾರೆ ಎಂದು ಲೇಖಕರು ಆಕ್ರೋಶಭರಿತರಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಹರ್ಷ ಹತ್ಯೆ ಪ್ರಕರಣ| ಶಿವಮೊಗ್ಗದಲ್ಲಿ ಎನ್‌ಐಎ ಸರ್ಚ್‌ ಆಪರೇಷನ್‌; ಹಲವು ದಾಖಲೆಗಳು ವಶಕ್ಕೆ

ಜೈಲಿನಲ್ಲಿ ಆರೋಪಿಗಳಿಗೆ ರಾಜಾತಿಥ್ಯದ ಸಿಗುತ್ತಿರುವ ಕುರಿತು ಇತ್ತೀಚೆಗೆ ಪ್ರತಿಕ್ರಿಯೆ ನೀಡಿದ್ದ ಹರ್ಷನ ತಂದೆ ನಾಗರಾಜ್‌ “”ನಮ್ಮಲ್ಲಿರುವ ವ್ಯವಸ್ಥೆಯ ಮುಖ ನೋಡುತ್ತಿದ್ದೇವೆ. ನಮಗೆ ನ್ಯಾಯ ಬೇಕು. ಎನ್‌ಐಎಯಿಂದ ನ್ಯಾಯ ಸಿಗುತ್ತದೆ ಎನ್ನುವ ನಂಬಿಕೆ ಇದೆ. ಆ ನಂಬಿಕೆಯಲ್ಲೇ ದಿನ ದೂಡುತ್ತಿದ್ದೇವೆ. ಅಧಿಕಾರಿಗಳು ಇಷ್ಟು ಕೆಳಮಟ್ಟಕ್ಕೆ ಹೋಗುತ್ತಾರೆ ಎನ್ನುವುದು ಗೊತ್ತಿರಲಿಲ್ಲ. ಅಧಿಕಾರಿಗಳದ್ದು ಹೀನ ಜನ್ಮ, ಅವರು ಮನುಷ್ಯರಾಗಿ ಹುಟ್ಟುವುದಕ್ಕೂ ಲಾಯಕ್ಕಲ್ಲ. ಸಂಬಳ ಪಡೆದೂ ನಿಯತ್ತಿಲ್ಲದವರು ಎಂಜಲು ಕಾಸಿಗೆ ಬಾಯೊಡ್ಡುವ ಬದಲು ಬೇರೆಯದನ್ನು ತಿನ್ನಲಿʼʼ ಎಂದು ಅಸಮಾಧಾನ ಹೊರಹಾಕಿದ್ದರು.

ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಪ್ರತಿಕ್ರಿಯಿಸಿ “”ಶಿವಮೊಗದಲ್ಲಿ ರಾಜ್ಯ ಹಾಗೂ ದೇಶಕ್ಕೆ ಆಘಾತಕಾರಿಯಾಗುವಂತೆ ಹರ್ಷ ಎಂಬ ಯುವಕನ ಕೊಲೆಯಾಗಿತ್ತು. ಹರ್ಷ ಕೊಲೆಯಾದ ಬಳಿಕ ರಾಜ್ಯಾದ್ಯಂತ ಪ್ರತಿಭಟನೆ ಸಹ ನಡೆದಿತ್ತು. ಕೂಡಲೇ ಎಲ್ಲ ಆರೋಪಿಗಳನ್ನೂ ಪೊಲೀಸರು ಬಂಧಿಸಿದ್ದರು. ಆ ಸಂದರ್ಭದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜಿ ಸಚಿವ ಈಶ್ವರಪ್ಪ ಸೇರಿದಂತೆ ಎಲ್ಲರೂ ಮಾತನಾಡಿದ್ದರು. ಕೊಲೆಗಡುಕರನ್ನು ಬಿಡುವುದಿಲ್ಲ, ಗಲ್ಲಿಗೇರಿಸುತ್ತೇವೆ ಎಂದಿದ್ದರು. ಆದರೆ ಇವರೆಲ್ಲ ಬೊಗಳೆ ಬಿಡುತ್ತಾರೆ, ಇವರಿಗೆ ಯಾವುದೇ ಬದ್ಧತೆ ಇಲ್ಲ. ಹಿಂದೂ ಕಾರ್ಯಕರ್ತನ ಹೆಣದ ಮೇಲೆ ಇವರು ರಾಜಕೀಯ ಮಾಡುತ್ತಿದ್ದಾರೆʼʼ ಎಂದು ಆರೋಪಿಸಿದ್ದರು.

ಇದನ್ನೂ ಓದಿ | ಹರ್ಷನ ಕೊಲೆಯ ಆರೋಪಿಗಳಿಂದ ಜೈಲಿನಲ್ಲಿ ಪುಂಡಾಟ

Exit mobile version