ಶಿವಮೊಗ್ಗ: 2022ರ ಫೆಬ್ರವರಿ 20 ರಂದು ರಾತ್ರಿ ಶಿವಮೊಗ್ಗದಲ್ಲಿ ನಡೆದಿದ್ದ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ (Harsha Murder Case) ೧೦ನೇ ಆರೋಪಿಗೆ ಎನ್‌ಐಎ ವಿಶೇಷ ನ್ಯಾಯಾಲಯದಿಂದ ಷರತ್ತು ಬದ್ಧ ಜಾಮೀನು ದೊರೆತಿದೆ.
ಹಿಂದು ಹರ್ಷ ಎಂದೇ ಕರೆಯಲ್ಪಡುತ್ತಿದ್ದ ಬಜರಂಗದಳದ ಕಾರ್ಯಕರ್ತನನ್ನು ಮತ್ತೊಂದು ಕೋಮಿನ ಯುವಕರ ಗುಂಪು ಕೊಲೆ ಮಾಡಿತ್ತು. ಈ ಪ್ರಕರಣದ ೧೦ನೇ ಆರೋಪಿಯಾಗಿರುವ ಜಾಫರ್ ಸಾದಿಕ್ (52) ಎಂಬಾತನಿಗೆ ಗುರುವಾರ ಜಾಮೀನು ಲಭಿಸಿದೆ.
ಷರತ್ತು ಬದ್ಧ ಜಾಮೀನು ನೀಡಿರುವ ಎನ್‌ಐಎ ವಿಶೇಷ ನ್ಯಾಯಾಲಯವು, 50 ಸಾವಿರ ರೂ. ವೈಯಕ್ತಿಕ ಬಾಂಡ್ ಮತ್ತು ಶ್ಯೂರಿಟಿ ನೀಡಬೇಕು, ನ್ಯಾಯಾಲಯ ವಿನಾಯಿತಿ ನೀಡದ ಹೊರತು ಪ್ರತಿ ಬಾರಿ ಪ್ರಕರಣದ ವಿಚಾರಣೆಗೆ ತಪ್ಪದೇ ಹಾಜರಾಗಬೇಕು, ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು, ಸಾಕ್ಷ್ಯ ನಾಶ ಮಾಡಬಾರದು, ಯಾವುದೇ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಬಾರದು ಎಂದು ಷರತ್ತು ವಿಧಿಸಿದೆ.
ಜಾಫರ್ ಮೇಲಿನ ಆರೋಪ ಏನು?
ಸೆಕೆಂಡ್ ಹ್ಯಾಂಡ್ ಕಾರುಗಳ ಡೀಲರ್ ಆಗಿರುವ ಜಾಫರ್ ಸಾದಿಕ್‌ನು ಹರ್ಷ ಕೊಲೆ ಪ್ರಕರಣದ ೬ನೇ ಆರೋಪಿ ಜಿಲಾನ್‌ನ ತಂದೆ. ಈತ ಫೆ. 24ರಂದು ಬಂಧನಕ್ಕೊಳಗಾಗಿದ್ದ. ಕೊಲೆ ಪ್ರಕರಣದಲ್ಲಿ ಪುತ್ರ ಭಾಗಿಯಾಗಿದ್ದಾನೆಂದು ತಿಳಿದ ಜಾಫರ್, ಪೊಲೀಸರಿಂದ ತಪ್ಪಿಸಿಕೊಳ್ಳಲು ಮಗ ಜಿಲಾನ್‌ಗೆ ಬೆಂಗಳೂರಿನ ಸ್ನೇಹಿತನ ಮನೆಯಲ್ಲಿ ಆಶ್ರಯ ಕೊಡಿಸಿದ್ದ. ಈ ವಿಚಾರವು ತನಿಖೆ ವೇಳೆ ತಿಳಿದು ಬಂದಿತ್ತು.
ಅಲ್ಲದೆ, ಸಾದಿಕ್ ಖರೀದಿಸಿದ್ದ ಕಾರುಗಳನ್ನು ಇತರ ಆರೋಪಿಗಳು ಅಪರಾಧ ಕೃತ್ಯ ಎಸಗಲು ಮತ್ತು ಕೃತ್ಯದ ಬಳಿಕ ಸ್ಥಳದಿಂದ ತಪ್ಪಿಸಿಕೊಳ್ಳಲು ಬಳಕೆ ಮಾಡಿದ್ದರು ಎಂಬುದೂ ತನಿಖೆ ವೇಳೆ ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಜಾಫರ್‌ನನ್ನು ಬಂಧಿಸಲಾಗಿತ್ತು. ಈಗ ತನಗೆ ಜಾಮೀನು ನೀಡಬೇಕೆಂದು ಕೋರಿ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಜಾಫರ್ ಅರ್ಜಿ ಸಲ್ಲಿಸಿದ್ದ. ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಾಲಯವು ಷರತ್ತುಬದ್ಧ ಜಾಮೀನು ನೀಡಿದೆ.
ಇದನ್ನೂ ಓದಿ | ಹರ್ಷ ಕೊಲೆ ಆರೋಪಿಗಳು ಪರಪ್ಪನ ಅಗ್ರಹಾರದಿಂದ ವಿವಿಧ ಜೈಲುಗಳಿಗೆ ಶಿಫ್ಟ್
750 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದ NIA
ಹರ್ಷ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯು ಇತ್ತೀಚೆಗೆ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದು, ಹತ್ಯೆಗೆ 15 ದಿನದಿಂದಲೂ ಸಂಚು ನಡೆಸಲಾಗಿತ್ತು ಎಂದು ಉಲ್ಲೇಖಿಸಿತ್ತು. ಇದೂ ಸೇರಿದಂತೆ ಇನ್ನೂ ಅನೇಕ ಅಂಶಗಳನ್ನು 750ಕ್ಕೂ ಹೆಚ್ಚು ಪುಟಗಳ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ವಿಶೇಷ ನ್ಯಾಯಾಲಯಕ್ಕೆ ಹತ್ತು ಮಂದಿ ಆರೋಪಿಗಳ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಕೆ ಮಾಡಿದ್ದ ಎನ್‌ಐಎ, ಈ ದೋಷಾರೋಪಣೆ ಪಟ್ಟಿಯಲ್ಲಿ ಆರೋಪಿಗಳಿಗೆ ಹಿಂದು ಸಂಘಟನೆಯ ಕಾರ್ಯಕರ್ತನ ಹತ್ಯೆ ಮಾಡುವುದೇ ಮುಖ್ಯ ಉದ್ದೇಶ ಆಗಿತ್ತು. ಹಿಂದು ವ್ಯಕ್ತಿಯೊಬ್ಬನ ಹತ್ಯೆ ಮಾಡಿದರೆ ಭಯದ ವಾತಾವರಣ ನಿರ್ಮಾಣವಾಗತ್ತದೆ ಎಂದು ಪ್ಲ್ಯಾನ್ ಮಾಡಿಕೊಂಡು 15 ದಿನಗಳಿಂದ ಹರ್ಷನ ಹತ್ಯೆಗೆ ಕಾದು ಕುಳಿತಿದ್ದರು ಎಂಬ ಅಂಶವನ್ನು ಉಲ್ಲೇಖಿಸಲಾಗಿತ್ತು.
ಹರ್ಷ ಹಿಂದು ಸಂಘಟನೆಯಲ್ಲಿ ಸಕ್ರಿಯನಾಗಿದ್ದು, ಹಳೇ ದ್ವೇಷ ಇಟ್ಟುಕೊಂಡು ಹತ್ಯೆ ಮಾಡಲು ಪ್ರಕರಣದ ಮೊದಲ ಆರೋಪಿ ಸಂಚು ರೂಪಿಸಿದ್ದ. ಈ ಹತ್ಯೆ ಹಿಂದೆ ಯಾವುದೇ ಸಂಘಟನೆ ಕೈವಾಡ ಇರಲಿಲ್ಲ. ಹತ್ಯೆಗೆ ಮಾರಕಾಸ್ತ್ರ ಖರೀದಿ ಮಾಡಲೂ ಹಣವಿಲ್ಲದಿದ್ದರಿಂದ ಆರೋಪಿಗಳು ಕುಂಸಿ ಬಳಿ ಒಂದು ಮನೆಯನ್ನು ಕಳ್ಳತನ ಮಾಡಿದ್ದರು. ಅಲ್ಲಿ ಸಿಕ್ಕಿದ್ದ ಹಣದಲ್ಲೇ ಮಚ್ಚು, ಲಾಂಗು ಸೇರಿದಂತೆ ಮಾರಕಾಸ್ತ್ರಗಳನ್ನು ಖರೀದಿಸಿದ್ದರು. ಬಂಧಿತ ಆರೋಪಿಗಳಲ್ಲಿ ರೋಷನ್ ಭದ್ರಾವತಿಯಲ್ಲಿ ಮಾರಕಾಸ್ತ್ರಗಳನ್ನು ಖರೀದಿ ಮಾಡಿದ್ದ ಎನ್ನಲಾಗಿದ್ದು, ಬಂಧಿತ ಆರೋಪಿಗಳಲ್ಲಿ ಮೂವರನ್ನು ಹೊರತುಪಡಿಸಿ ಉಳಿದವರೆಲ್ಲ ಹಿಂದೆ ಹಲವಾರು ಕೇಸ್‌ಗಳಲ್ಲಿ ಭಾಗಿಯಾಗಿದ್ದ ಆರೋಪಿಗಳೇ ಆಗಿದ್ದಾರೆಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿತ್ತು.
ಇದನ್ನೂ ಓದಿ | ರೇಪ್ ಮಾಡ್ತೀನಿ, ಸಾಯಿಸ್ತೀನಿ ! ಖ್ಯಾತ ನಿರ್ಮಾಪಕನ ಮಗನಿಂದ ದುರ್ವರ್ತನೆ, ಕೊಲೆ ಬೆದರಿಕೆ