Site icon Vistara News

Hasana JDS politics : ಹಾಸನದ ತ್ರಿಕೋನ ಸ್ಪರ್ಧೆಯಲ್ಲಿ ಗೆಲ್ಲೋರ‍್ಯಾರು? ನಾಳೆ ಎಚ್‌ಡಿಕೆ ಸಮ್ಮುಖದಲ್ಲಿ ಜೆಡಿಎಸ್‌ ಟಿಕೆಟ್ ಫೈನಲ್‌

Hasana

#image_title

ಹಾಸನ: ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ (Hasana JDS politics) ನಾನೇ ಎಂಬ ಅಚಲ ವಿಶ್ವಾಸದಲ್ಲಿ ಈಗಾಗಲೇ ಪ್ರಚಾರ ಕಾರ್ಯ ಶುರು ಮಾಡಿರುವ ಭವಾನಿ ರೇವಣ್ಣ, ಕುಮಾರಣ್ಣ ನನ್ನ ಕಡೆಗಿದ್ದಾರೆ, ಯಾರೇನೇ ಹೇಳಿದರೂ ಟಿಕೆಟ್‌ ನನ್ನದೇ ಎಂಬ ಆತ್ಮವಿಶ್ವಾದಲ್ಲಿರುವ ಸ್ವರೂಪ್‌ ಪ್ರಕಾಶ್‌, ಅದರ ನಡುವೆ ಕಪ್ಪು ಕುದುರೆ ನಾನೇ ಎನ್ನುತ್ತಿರುವ ಎಚ್‌.ಡಿ. ರೇವಣ್ಣ.. ಈ ತ್ರಿಕೋನ ಸ್ಫರ್ಧೆಯಲ್ಲಿ ಅಂತಿಮವಾಗಿ ಗೆಲ್ಲುವವರು ಯಾರು?

ಜೆಡಿಎಸ್‌ ಪಾಲಿಗೆ ನಿಜವಾದ ಸ್ಪರ್ಧೆಗಿಂತಲೂ ಕಠಿಣವಾಗಿರುವ ಈ ಸವಾಲಿನ ಕ್ಲೈಮಾಕ್ಸ್‌ ನಾಳೆ (ಫೆ. ೨೬) ಬೆಂಗಳೂರಿನಲ್ಲಿ ನಡೆಯಲಿದೆ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ನಡೆಯಲಿರುವ ಮಾತುಕತೆಯಲ್ಲಿ ಟಿಕೆಟ್‌ ಫೈನಲ್‌ ಆಗಲಿದೆ, ಕದನ ಕಲಿ ಯಾರೆಂದು ನಿರ್ಣಯ ಆಗಲಿದೆ ಎಂದು ಹೇಳಲಾಗುತ್ತಿದೆ.

ಹಾಸನ ಕ್ಷೇತ್ರದಲ್ಲಿ ನಮ್ಮ ಮನೆಯವರು ಸ್ಪರ್ಧೆ ಮಾಡಬೇಕಾದ ಅನಿವಾರ್ಯತೆಯೇನೂ ನಿರ್ಮಾಣವಾಗಿಲ್ಲ. ಅಲ್ಲಿ ಗೆಲ್ಲಬಲ್ಲ ಅಭ್ಯರ್ಥಿ ಇದ್ದಾರೆ, ಜತೆಗೆ ಗೆಲ್ಲಿಸುವ ತಾಕತ್ತಿನ ಕಾರ್ಯಕರ್ತರ ಪಡೆಯೂ ಇದೆ. ಹೀಗಾಗಿ ಅಲ್ಲಿ ಕುಟುಂಬದ ಹೊರತಾದವರು ಸ್ಪರ್ಧೆಗಿಳಿಯಲಿ ಎನ್ನುವುದು ಕುಮಾರಸ್ವಾಮಿ ಅವರ ಮನದ ಇಂಗಿತ. ಆದರೆ, ಮೊದಲ ಬಾರಿ ವಿಧಾನ ಸಭಾ ಚುನಾವಣಾ ಕಣ ಪ್ರವೇಶಿಸಲಿರುವ ಭವಾನಿ ರೇವಣ್ಣ ಅವರು ತಾನೇ ಅಭ್ಯರ್ಥಿ ಎಂದು ಬಿಂಬಿಸಿಕೊಂಡು ಬಹುದೂರ ಹೋಗಿದ್ದಾರೆ. ಇತ್ತ ರೇವಣ್ಣ ಅವರಿಗೆ ಹಾಲಿ ಬಿಜೆಪಿ ಶಾಸಕ ಪ್ರೀತಂ ಗೌಡ ಅವರು ಹಾಕಿರುವ ಸವಾಲು ಆಗಾಗ ಕಾಡುತ್ತಿದೆ ಅನಿಸುತ್ತದೆ. ಜತೆಗೆ ಭವಾನಿ ರೇವಣ್ಣ ಮತ್ತು ಸ್ವರೂಪ್‌ ಮಧ್ಯೆ ಜಗಳ ಬೇಡ, ನಾನೇ ನಿಲ್ತೀನಿ ಎನ್ನುವ ಹುಮ್ಮಸ್ಸು ಕಾಣಿಸುತ್ತಿದೆ.

ಹೀಗಾಗಿ ಭಾರಿ ಗೊಂದಲದ ನಡುವೆ ಕುಮಾರಸ್ವಾಮಿ ಅವರು ಪಕ್ಷದ ನಾಯಕರು ಮತ್ತು ಪ್ರಮುಖ ಕಾರ್ಯಕರ್ತರ ಸಭೆಯನ್ನು ಕರೆದಿದ್ದಾರೆ. ಟಿಕೆಟ್ ಹಂಚಿಕೆ ಬಗ್ಗೆ ಅಭಿಪ್ರಾಯ ಕೇಳಲು ಬೆಂಗಳೂರಿನ ಜೆಪಿ ನಗರದಲ್ಲಿ ಫೆ. ೨೬ರಂದು ಸಂಜೆ 4 ಗಂಟೆ ವೇಳೆಗೆ ಸಭೆ ನಡೆಯಲಿದೆ.

ಪಕ್ಷದ ಹಾಸನ ನಗರ ಪ್ರಮುಖರಿಗೆ ತಮ್ಮ ಕಚೇರಿಯಿಂದ ಖುದ್ದು ಕರೆ ಮಾಡಿ ಆಹ್ವಾನ ನೀಡಿದ್ದಾರೆ ಕುಮಾರಸ್ವಾಮಿ. ಸ್ಚರೂಪ್ ಹಾಗು ಭವಾನಿ ಇಬ್ಬರ ಜೊತೆ ಗುರ್ತಿಸಿಕೊಂಡಿರುವ ಎಲ್ಲಾ ಕಾರ್ಯಕರ್ತರನ್ನು ಸಭೆಗೆ ಆಹ್ವಾನಿಸಲಾಗಿದೆ.

ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಟಿಕೆಟ್ ಜಟಾಪಟಿಗೆ ಅಂತ್ಯಹಾಡಿ ಒಮ್ಮತ ಮೂಡಿಸುವ ಮಾಸ್ಟರ್ ಪ್ಲಾನ್‌ನೊಂದಿಗೆ ಈ ಮೀಟಿಂಗ್‌ ನಡೆದಿದೆ. ಇದೇ ವೇಳೆ ಕುಮಾರಸ್ವಾಮಿ ಅವರು ಕಾರ್ಯಕರ್ತರ ಅಭಿಪ್ರಾಯ ಮತ್ತು ಕ್ಷೇತ್ರದಲ್ಲಿ ನಡೆಸಿದ ಗೌಪ್ಯ ಸರ್ವೆ ಆಧರಿಸಿ, ಎಲ್ಲರ ಅಭಿಪ್ರಾಯ ಕೇಳಿದ ಬಳಿಕ ಟಿಕೆಟ್‌ ಘೋಷಣೆ ಮಾಡಲು ಕುಮಾರಸ್ವಾಮಿ ಮುಂದಾಗಿದ್ದಾರೆ. ಹೀಗೆ ಮಾಡಿದರೆ ಎಲ್ಲರೂ ಒಪ್ಪುತ್ತಾರೆ ಎನ್ನುವುದು ಕುಮಾರಸ್ವಾಮಿ ಮನದಾಳ.

ಕೈ ಬಿಟ್ಟು ಹೋಗಿರುವ ಕ್ಷೇತ್ರವನ್ನು ಮರಳಿ ಪಡೆಯಲು ಯಾವ ತಂತ್ರ ಅನುಸರಿಸಿದರೆ ಅನುಕೂಲ ಎಂಬ ಬಗ್ಗೆ ಕಾರ್ಯಕರ್ತರಿಗೆ ಮನವರಿಕೆ ಮಾಡಲಿದ್ದಾರೆ ಕುಮಾರಸ್ವಾಮಿ. ಆದರೆ, ಈ ವಿಚಾರದಲ್ಲಿ ಕುಟುಂಬದ ಸದಸ್ಯರೇ ಪ್ರಮುಖ ಆಕಾಂಕ್ಷಿಗಳಾಗಿರುವುದರಿಂದ ಪ್ರತಿಯೊಂದು ಕೂಡಾ ಎಚ್ಚರಿಕೆಯ ನಡೆಯೇ ಆಗಿರಬೇಕಾಗುತ್ತದೆ. ಇದನ್ನು ಅರ್ಥ ಮಾಡಿಕೊಂಡಿರುವ ಕುಮಾರಸ್ವಾಮಿ ಗೊಂದಲ ಪರಿಹಾರಕ್ಕೆ ಮುಂದಾಗಿದ್ದಾರೆ. ಆದರೆ, ಇದು ಜಗಳ ಬಿಡಿಸುವ ಸಭೆಯಾಗುತ್ತದೋ, ಇನ್ನಷ್ಟು ಗೊಂದಲ ಮೂಡಿಸುತ್ತದೋ ಎಂಬ ಕುತೂಹಲವೂ ಇದೆ.

ಇದನ್ನೂ ಓದಿ : Karnataka Election 2023: ಹಾಸನದಲ್ಲಿ ಪತ್ನಿ ಭವಾನಿ ಜತೆ ರೇವಣ್ಣ ಕ್ಷೇತ್ರ ಸಂಚಾರ; ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ತಂತ್ರ

Exit mobile version