ಚಿಕ್ಕಮಗಳೂರು: ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ರಾದ್ಧಾಂತ (Hasana politics) ಜೆಡಿಎಸ್‌ನಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸುವ ಎಲ್ಲ ಸಾಧ್ಯತೆಗಳು ನಿಚ್ಛಳವಾಗಿವೆ. ಎಚ್.ಪಿ. ಸ್ವರೂಪ್, ಭವಾನಿ ರೇವಣ್ಣ ಮತ್ತು ಸ್ವತಃ ಎಚ್.ಡಿ. ರೇವಣ್ಣ ಅವರೇ ಆಕಾಂಕ್ಷಿಗಳಾಗಿರುವ ಈ ಕ್ಷೇತ್ರದ ಟಿಕೆಟ್ ಫೈಟ್‌ಗೆ ಒಂದು ತೆರೆ ಎಳೆಯುವ ಉದ್ದೇಶದಿಂದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಭಾನುವಾರ ಆಯೋಜಿಸಿದ್ದ ಸಭೆಯನ್ನು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರು ತಾತ್ಕಾಲಿಕವಾಗಿ ರದ್ದು ಮಾಡಿದ್ದಾರೆ. ಇದು ಕುಮಾರಸ್ವಾಮಿ ಅವರನ್ನು ಕೆರಳಿಸಿದೆ.
ಕೊಪ್ಪದಲ್ಲಿ ಮಾತಾಡಿದ ಅವರು, ಸಭೆ ರದ್ದು ಮಾಡಿರುವುದು ನನಗೆ ಗೊತ್ತಿಲ್ಲ. ಯಾರೋ ವ್ಯವಸ್ಥಾಪಕರು ರದ್ದು ಮಾಡಿರುವುದು ಎಂದಿದೆ. ರಾಷ್ಟ್ರೀಯ ಅಧ್ಯಕ್ಷರೋ, ರಾಜ್ಯಾಧ್ಯಕ್ಷರೋ ರದ್ದು ಮಾಡಿರಬಹುದು. ಯಾರಿಂದ ಸಭೆ ಮುಂದೂಡಲಾಗಿದೆ, ಯಾಕೆ ಮುಂದೂಡಲಾಗಿದೆ ಎಂದು ತಿಳಿದು ಮಾತನಾಡುತ್ತೇನೆ ಎಂದು ಹೇಳಿದರು.
ಅದೇ ವೇಳೆಗೆ, ಒಂದು ವೇಳೆ ಸಭೆ ರದ್ದಾದರೂ, ಮುಂದೂಡಿದ್ದರೂ ನನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಹಾಸನದಲ್ಲಿ ಕುಟುಂಬದ ಸದಸ್ಯರು (ಭವಾನಿ ರೇವಣ್ಣ ಅಥವಾ ಎಚ್.ಡಿ. ರೇವಣ್ಣ) ಸ್ಪರ್ಧಿಸಬೇಕಾದ ಅನಿವಾರ್ಯತೆ ಇಲ್ಲ, ಯಾವುದೇ ಕಾರ್ಯಕರ್ತ (ಎಚ್.ಪಿ. ಸ್ವರೂಪ್?) ನಿಂತರೂ ಗೆಲ್ಲಿಸಿಕೊಂಡು ಬರುವ ಶಕ್ತಿ ಜೆಡಿಎಸ್ ಮತ್ತು ನಾಯಕರಿಗೆ ಇದೆ ಎಂದು ಅವರು ಮೊದಲೇ ಹೇಳಿದ್ದರು. ಆದರೂ ಭವಾನಿ ಮತ್ತು ರೇವಣ್ಣ ಅವರು ಇನ್ನೂ ಟಿಕೆಟ್ ಆಕಾಂಕ್ಷಿಗಳಾಗಿಯೇ ಓಡಾಡುತ್ತಿದ್ದಾರೆ, ತಾವೇ ಅಭ್ಯರ್ಥಿಗಳು ಎಂಬಂತೆ ಓಡಾಡುತ್ತಿದ್ದಾರೆ.
ಟಿಕೆಟ್ ಗೊಂದಲ ಬಗೆಹರಿಸಲು ಭಾನುವಾರ ಕುಮಾರಸ್ವಾಮಿ ಅವರ ಜೆ.ಪಿ ನಗರ ನಿವಾಸದಲ್ಲಿ ಹಾಸನದ ಸುಮಾರು ೨೦೦ ಮುಖಂಡರ ಸಭೆ ಕರೆದು ಅಭಿಪ್ರಾಯ ಸಂಗ್ರಹಕ್ಕೆ ಕುಮಾರಸ್ವಾಮಿ ನಿರ್ಧರಿಸಿದ್ದರು. ಈ ಸಭೆಯ ಬಗ್ಗೆ ತನಗೆ ಗೊತ್ತಿಲ್ಲ ಎಂದು ಎಚ್.ಡಿ. ರೇವಣ್ಣ ಹೇಳಿದ್ದರು.
ʻʻನಾನು ನನ್ನ ಕಾರ್ಯಕರ್ತರನ್ನು ಗೌರವಿಸುತ್ತೇನೆ. ಕಾರ್ಯಕರ್ತರನ್ನು ನಿಲ್ಲಿಸಿ ಗೆಲ್ಲುವ ವಿಶ್ವಾಸ ನನಗಿದೆ. ಬಿಜೆಪಿಯ ದುರಹಂಕಾರದ ಅಭ್ಯರ್ಥಿಯ ವಿರುದ್ಧ ನಮ್ಮ ಕಾರ್ಯಕರ್ತರನ್ನೇ ನಿಲ್ಲಿಸಿ ಗೆಲ್ಲಿಸುವೆ, ಸಾಮಾನ್ಯ ದುರಹಂಕಾರದ ಅಭ್ಯರ್ಥಿಯ ವಿರುದ್ಧ ಸಾಮಾನ್ಯ ಕಾರ್ಯಕರ್ತರ ನಿಲ್ಲಿಸಿ ಗೆಲ್ಲಿಸುವ ಸಾಮರ್ಥ್ಯವಿದೆʼʼ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಇಲ್ಲಿವರೆಗೆ ಹಾಸನ ರಾಜಕೀಯದಲ್ಲಿ ಮೂಗು ತೂರಿಸಿಲ್ಲ.. ಆದರೆ, ಈ ಬಾರಿ..
ʻʻಹಾಸನ ಟಿಕೆಟ್ ಹಂಚಿಕೆ ಬಗ್ಗೆ ಯಾರಿಗೂ ಆತಂಕ ಬೇಡ. ನನ್ನ ಹೋರಾಟದ ಬಗ್ಗೆ ಎಲ್ಲಿಯೂ ಲೋಪ ಬರಬಾರದು. ಇಲ್ಲಿಯವರೆಗೂ ಇಲ್ಲಿಯವರೆಗೂ ಹಾಸನದ ರಾಜಕಾರಣದ ಒಳಗೆ ಇಂಟರ್ಫಿಯರ್ ಆಗಿಲ್ಲ. ಆದರೂ ಕೂಡ ಇಂದು ಮೂಗು ತೂರಿಸುವ ಪರಿಸ್ಥಿತಿ ಎದುರಾಗಿದೆ. ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷ ಉಳಿಸಬೇಕಾಗಿದೆ. ದೇವೇಗೌಡರ ಹೆಸರು ಉಳಿಸಬೇಕಾಗಿದೆʼʼ ಎಂದಿದ್ದಾರೆ ಎಚ್.ಡಿ ಕುಮಾರಸ್ವಾಮಿ.
ಇನ್ನು ಭಾವನಾತ್ಮಕ ವಿಚಾರಗಳಿಗೆ ತಲೆಬಾಗುವುದಿಲ್ಲ
ʻʻಭಾವನಾತ್ಮಕ ಸಂಬಂಧಗಳಿಗಾಗಿ ಇಷ್ಟು ದಿನ ತಲೆಬಾಗಿದ್ದೇನೆ. ಈ ನನಗೆ ಭಾವನಾತ್ಮಕ ಸಂಬಂಧಗಳಿಗಿಂತ ಪಕ್ಷದ ಕಾರ್ಯಕರ್ತರು ಹಾಗೂ ಪಕ್ಷದ ಹಿತ ಮುಖ್ಯ ಎನ್ನುವುದು ಸ್ಪಷ್ಟವಾಗಿದೆ. ಭಾವನಾತ್ಮಕ ವಿಷಯಗಳಿಗಾಗಿ ನನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲʼʼ ಎಂದು ಸ್ಪಷ್ಟಪಡಿಸಿದರು.
ಪಕ್ಷದ ಒಳಗಿನವರೇ ಗೊಂದಲ ಮೂಡಿಸುತ್ತಿದ್ದಾರೆ
ʻʻಟಿಕೆಟ್ ವಿಷಯದಲ್ಲಿ ಗೊಂದಲ ಯಾರು ಮೂಡಿಸಿದ್ದಾರೆ ಅವರನ್ನೇ ಹೋಗಿ ಕೇಳಿ,ʼʼ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು. ಸಭೆ ಮುಂದೂಡಿಕೆ ಪತ್ರ ಬರೆದಿದ್ದು ಯಾರು ಎಂಬುದರ ಬಗ್ಗೆಯೂ ನಿಖರತೆ ಇಲ್ಲದಿರುವುದನ್ನು ಉಲ್ಲೇಖಿಸಿದರು. ಪಕ್ಷದೊಳಗಿನ ಯಾರೋ ಗೊಂದಲ ಮೂಡಿಸುತ್ತಿದ್ದಾರೆ ಎಂದು ಅವರು ಹೇಳಿದರು.
ʻಈ ಹಿಂದೆ ಭಾವನಾತ್ಮಕ ವಿಚಾರಗಳಲ್ಲಿ ನನಗೆ ಮನಸ್ಸಿಲ್ಲದಿದ್ದರೂ ಕೆಲವು ತೀರ್ಮಾನಗಳಾಗಿವೆ. ಈ ಬಾರಿ ಆ ತೀರ್ಮಾನ ಆಗೋದಕ್ಕೆ ಅವಕಾಶವಿಲ್ಲ. ಈ ಬಾರಿ ಅಂತಹ ತೀರ್ಮಾನಗಳಿಗೆ ಅವಕಾಶವೇ ಇಲ್ಲ. ಅವುಗಳನ್ನು ಧಿಕ್ಕರಿಸಿ ಕಾರ್ಯಕರ್ತರಿಗೆ ಹಾಗೂ ಈ ನಾಡಿನ ಜನತೆಗೆ ಈ ಸಂದೇಶ ಕೊಡುತ್ತೇನೆʼʼ ಎಂದು ಗುಡುಗಿದರು ಎಚ್.ಡಿ ಕುಮಾರಸ್ವಾಮಿ.