Site icon Vistara News

Hassan Blast | ಹಾಸನ ಮಿಕ್ಸಿ ಸ್ಫೋಟಕ್ಕೂ, ಉಗ್ರ ಸಂಘಟನೆಗೂ ಸಂಬಂಧ ಇಲ್ಲ: ಎಸ್‌ಪಿ ಹರಿರಾಂ ಶಂಕರ್‌

hassan blast ಮಿಕ್ಸಿ ಬ್ಲಾಸ್ಟ್‌ ಉಗ್ರ ಕೃತ್ಯ

ಹಾಸನ: ಇಲ್ಲಿನ ಕೊರಿಯರ್ ಶಾಪ್‌ನಲ್ಲಿ ಮಿಕ್ಸಿ ಬ್ಲಾಸ್ಟ್ (Hassan Blast) ಪ್ರಕರಣವು ವೈಯಕ್ತಿಕ ಹಿನ್ನೆಲೆಯಲ್ಲಿ ನಡೆದಿದ್ದು, ಇದಕ್ಕೂ ಉಗ್ರ ಕೃತ್ಯಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಸುದ್ದಿಗೋಷ್ಠಿ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಿಕ್ಸಿ ಬ್ಲಾಸ್ಟ್ ಆಗಿ ಶಶಿಕುಮಾರ್ ಎಂಬುವರಿಗೆ ಗಾಯವಾಗಿದೆ. ಅವರೀಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆ ನಡೆದಾಗ ಗೊಂದಲ ಸೃಷ್ಟಿಯಾಗಿದೆ. ಇದು ಯಾವುದೇ ಉಗ್ರಗಾಮಿಗಳಿಗೆ ಸಂಬಂಧಿಸಿದ್ದಲ್ಲ. ಇದು ಡೆಲಿವರಿಗೆ ಕೊಟ್ಟ ವ್ಯಕ್ತಿಯನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಈ ಸ್ಫೋಟದ ಹಿಂದೆ ಯಾವುದೇ ರೀತಿಯಾದಂತಹ ಉಗ್ರ ಕೃತ್ಯ ಇಲ್ಲ. ಇದರಲ್ಲಿ ಉಗ್ರ ಕೃತ್ಯಕ್ಕೆ ನಡೆಸುವ ರೀತಿ ಯಾವುದೇ ತಂತ್ರಜ್ಞಾನವನ್ನು ಬಳಸಿಲ್ಲ. ಮೈಸೂರಿನ ಎಫ್ಎಸ್‌ಎಲ್‌ನವರು ಈಗಾಗಲೇ ಅವಶೇಷಗಳನ್ನು ಪಡೆದುಕೊಂಡಿದ್ದಾರೆ. ಇದು ವೈಯಕ್ತಿಕ‌ ದ್ವೇಷದಿಂದ ನಡೆದಿರುವ ಘಟನೆಯಾಗಿದೆ. ಇದರಲ್ಲಿ ಯಾವುದೇ ಉಗ್ರರ‌ ಪಾತ್ರ ಇಲ್ಲ‌ ಎಂದು ಸ್ಪಷ್ಟನೆ ನೀಡಿದರು. ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ತನಿಖೆ ನಡೆಯುತ್ತಿದ್ದು, ಶೀಘ್ರವೇ ಎಲ್ಲ ಮಾಹಿತಿ‌ ನೀಡಲಾಗುತ್ತದೆ ಎಂದು ಹೇಳಿದರು.

ಸಣ್ಣಮಟ್ಟದ ಸ್ಫೋಟಕ ಬಳಕೆ
ವೈಯಕ್ತಿಕವಾಗಿ ಟಾರ್ಗೆಟ್ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಉಗ್ರಗಾಮಿಗಳು ಬ್ಲಾಸ್ಟ್‌ಗೆ ಬಳಸುವ ಯಾವ ವಸ್ತುವನ್ನೂ ಬಳಸಿಲ್ಲ. ಎಲೆಕ್ಟ್ರಾನಿಕ್ ಶಾರ್ಟ್ ಸರ್ಕ್ಯೂಟ್‌ನಿಂದ ಇಷ್ಟು ಪ್ರಮಾಣದ ಬ್ಲಾಸ್ಟ್ ಆಗಲ್ಲ. ಸಣ್ಣಮಟ್ಟದ ಸ್ಫೋಟಕ ವಸ್ತು ಬಳಸಿದ್ದಾರೆ. ಇದು ವೈಯುಕ್ತಿಕ ಕಾರಣದಿಂದ ನಡೆದಿರುವ ಘಟನೆಯಾಗಿದೆ. ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ, ಊಹಾಪೋಹಗಳನ್ನು ನಂಬಬಾರದು. ಪ್ರಕರಣ ಸಂಬಂಧ ಕೊರಿಯರ್ ಪಡೆದು ವಾಪಸ್ ನೀಡಿದವರು ಹಾಗೂ ಕೊರಿಯರ್ ಮಾಡಿದವರನ್ನು ವಶಕ್ಕೆ ಪಡೆಯಲಾಗಿದೆ. ಪಾರ್ಸೆಲ್ ಡೀಟೆಲ್ಸ್ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ | Hassan Blast | ಮಿಕ್ಸಿ ಬ್ಲಾಸ್ಟ್‌ ಪ್ರಕರಣ; ಮಹಿಳೆ ಸೇರಿ ಇಬ್ಬರ ತೀವ್ರ ವಿಚಾರಣೆ

Exit mobile version