ಹಾಸನ: ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟದ ಬೆನ್ನಲ್ಲೇ ಹಾಸನದಲ್ಲಿ ಕೊರಿಯರ್ ಶಾಪ್‌ಗೆ ಪಾರ್ಸೆಲ್ ಬಂದಿದ್ದ ಮಿಕ್ಸಿ ಬ್ಲಾಸ್ಟ್ ಆಗಿದ್ದರಿಂದ ಮಾಲೀಕ ಗಂಭೀರವಾಗಿ ಗಾಯಗೊಂಡಿದ್ದಾರೆ. ನಗರದ ಕೆ.ಆರ್.ಪುರಂ ಸಬ್ ರಿಜಿಸ್ಟ್ರಾರ್ ಕಚೇರಿ ರಸ್ತೆಯಲ್ಲಿನ ಅಂಗಡಿಯಲ್ಲಿ ಸೋಮವಾರ ಸಂಜೆ ಮಿಕ್ಸಿ ಅನುಮಾನಾಸ್ಪದವಾಗಿ ಸ್ಫೋಟಗೊಂಡಿದ್ದರಿಂದ(Hassan Blast) ಅತಂಕದ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಗರದ ಕೆ.ಆರ್.ಪುರಂ ಬಡಾವಣೆಯ ಡಿಟಿಡಿಸಿ ಕೊರಿಯರ್ ಶಾಪ್‌ನಲ್ಲಿ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡ ಶಾಪ್ ಮಾಲೀಕ ಶಶಿ ಎಂಬುವವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡು ದಿನಗಳ ಹಿಂದೆ ಕೊರಿಯರ್ ಶಾಪ್‌ಗೆ ಮಿಕ್ಸಿ ಪಾರ್ಸಲ್ ಬಂದಿತ್ತು. ಅದನ್ನು ನಗರದ ವ್ಯಕ್ತಿಯೊಬ್ಬರಿಗೆ ಕೊರಿಯರ್ ಶಾಪ್ ಮಾಲೀಕ ಹೋಮ್ ಡೆಲಿವರಿ ಮಾಡಿದ್ದರು. ಆದರೆ ಮಿಕ್ಸಿ ಸೂಕ್ತ ವಿಳಾಸದಿಂದ ಬಂದಿಲ್ಲ ಎಂದು ಕೊರಿಯರ್ ಶಾಪ್‌ಗೆ ವ್ಯಕ್ತಿ ವಾಪಸ್ ನೀಡಿದ್ದಾನೆ. ವಾಪಸ್ ಪಡೆಯುವ ವೇಳೆ ಮಿಕ್ಸಿ ಆನ್ ಮಾಡಿ ಪರಿಶೀಲಿಸಿದಾಗ ಮಿಕ್ಸಿ ಬ್ಲಾಸ್ಟ್ ಆಗಿದೆ.
ಇದನ್ನೂ ಓದಿ | Coronavirus | ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಡಾ.ಕೆ.ಸುಧಾಕರ್, ಆರ್.ಅಶೋಕ್ ಭೇಟಿ; ಕೊರೊನಾ ಚಿಕಿತ್ಸಾ ಸೌಲಭ್ಯ ಪರಿಶೀಲನೆ
ಮಿಕ್ಸಿ ಸ್ಫೋಟದ ತೀವ್ರತೆಗೆ ಕೊರಿಯರ್ ಕಚೇರಿಯ ಕಿಟಕಿ ಬಾಗಿಲು ಗಾಜು ಪುಡಿಪುಡಿಯಾಗಿದ್ದು, ಗೋಡೆಗಳಿಗೂ ಹಾನಿಯಾಗಿದೆ. ಶಂಕಾಸ್ಪದ ಸ್ಫೋಟದಲ್ಲಿ ಶಾಪ್ ಮಾಲೀಕ ಶಶಿ ಬಲಗೈ, ಹೊಟ್ಟೆ, ತಲೆಯ ಭಾಗಕ್ಕೂ ಗಂಭೀರ ಗಾಯಗಳಾಗಿವೆ. ಆಸ್ಪತ್ರೆಗೆ ಎಸ್‌ಪಿ ಹರಿರಾಮ್ ಶಂಕರ್ ಭೇಟಿ ನೀಡಿ ಪ್ರಕರಣ ಸಂಬಂಧ ಮಾಹಿತಿ ಪಡೆದಿದ್ದಾರೆ.
ನಂತರ ಎಸ್‌ಪಿ ಹರಿರಾಮ್ ಶಂಕರ್ ಮಾತನಾಡಿ, ಕೊರಿಯರ್ ಶಾಪ್‌ನಲ್ಲಿ ಸಂಜೆ 7.30ಕ್ಕೆ ಮಿಕ್ಸಿ ಬ್ಲಾಸ್ಟ್ ಆಗಿದೆ. ಕೊರಿಯರ್ ಬಂದಿದ್ದ ಮಿಕ್ಸಿ ಬ್ಲಾಸ್ಟ್ ಆಗಿದೆ ಎನ್ನು ಮಾಹಿತಿ ಇದೆ. ಶಾಪ್‌ನಲ್ಲಿದ್ದ ವ್ಯಕ್ತಿ ದೇಹದ ನಾಲ್ಕು ಭಾಗದಲ್ಲಿ ಪೆಟ್ಟಾಗಿದ್ದು, ಪ್ರಾಣಾಪಾಯವಿಲ್ಲ. ಮಿಕ್ಸಿ ಯಾಕೆ ಮತ್ತು ಹೇಗೆ ಬ್ಲಾಸ್ಟ್ ಆಗಿದೆ ಎಂದು ಪರಿಶೀಲನೆ ನಡೆಯುತ್ತಿದೆ. ಕೊರಿಯರ್ ಎಲ್ಲಿಂದ ಬಂತು ಎಂಬ ಮಾಹಿತಿ ಇದ್ದು, ಎಲ್ಲವನ್ನೂ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಯಾರೂ ಊಹಾಪೋಹಗಳಿಗೆ ಒಳಗಾಗಿ ಗಾಬರಿಯಾಗುವುದು ಬೇಡ. ಶಾರ್ಟ್ ಸರ್ಕ್ಯೂಟ್‌ನಿಂದ ಅವಘಡ ಸಂಭವಿಸಿದೆಯೋ ಅಥವಾ ಬೇರೆ ಏನಾದರೂ ಕಾರಣವಿದೆಯೋ ಎಂಬುವುದನ್ನು ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಆಗಮಿಸಿ ಪರಿಶೀಲನೆ ನಡೆಸಲಿದ್ದಾರೆ. ನಂತರ ಪ್ರಕರಣ ಬಗ್ಗೆ ಸಂಪೂರ್ಣ ಮಾಹಿತಿ ಸಿಗಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Road Accident | ಕಾರು ಮತ್ತು ಬೈಕ್ ನಡುವೆ ಅಪಘಾತ: ಒಬ್ಬನ ಸಾವು, ಮತ್ತೊಬ್ಬನಿಗೆ ಗಂಭೀರ ಗಾಯ