Site icon Vistara News

ಹಾಸನ ಜಿಲ್ಲೆ ಕ್ಷೇತ್ರ ಸಮೀಕ್ಷೆ: ಏಳು ಸುತ್ತಿನ ಕೋಟೆ ಭೇದಿಸುವವರು ಯಾರು?

Hassan District Election Survey: Who Will Win In All 7 Constituencies

Hassan District Election Survey: Who Will Win In All 7 Constituencies

ಪ್ರತಾಪ್‌, ವಿಸ್ತಾರ ನ್ಯೂಸ್‌, ಹಾಸನ

ಜೆಡಿಎಸ್ ಭದ್ರಕೋಟೆ ಹಾಸನ ಜಿಲ್ಲೆಯಲ್ಲಿ ಈ ಬಾರಿ ಮೂರೂ ಪಕ್ಷಗಳು ಪ್ರಬಲ ಪೈಪೋಟಿ ನೀಡುತ್ತಿವೆ. ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಈ ಬಾರಿಯೂ ಜೆಡಿಎಸ್‌ಗೆ ಹೆಚ್ಚಿನ ಸ್ಥಾನಗಳು ಬರುವ ನಿರೀಕ್ಷೆಯಿದ್ದು, ಎರಡನೇ ಸ್ಥಾನಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಪೈಪೋಟಿ ನಡೆಯುತ್ತಿವೆ. ಅರಸೀಕೆರೆ ಹಾಗೂ ಅರಕಲಗೂಡು ಕ್ಷೇತ್ರದಲ್ಲಿ ಪ್ರಬಲ ನಾಯಕರು ಪಕ್ಷಾಂತರ ಮಾಡಿದ್ದು, ಈ ಕ್ಷೇತ್ರಗಳಲ್ಲಿಯೂ ಕದನ ಕುತೂಹಲ ಹೆಚ್ಚಿಸಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಆರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ, ಹಾಸನದಲ್ಲಿ ಬಿಜೆಪಿ ಜಯ ಗಳಿಸಿತ್ತು. ಕಾಂಗ್ರೆಸ್‌ ಸೊನ್ನೆ ಸುತ್ತಿತ್ತು. ಹಾಗಾದರೆ, ಈ ಬಾರಿ ತೀವ್ರ ಕುತೂಹಲ ಕೆರಳಿಸಿರುವ ಹಾಸನ ಜಿಲ್ಲೆಯಲ್ಲಿ ಯಾವ ಪಕ್ಷ ಪಾರುಪತ್ಯ ಸಾಧಿಸಲಿದೆ? ಜೆಡಿಎಸ್‌ ಕೋಟೆಯನ್ನು ಬಿಜೆಪಿ ಹಾಗೂ ಕಾಂಗ್ರೆಸ್‌ ಭೇದಿಸಲಿವೆಯಾ? ಕ್ಷೇತ್ರದಲ್ಲಿ ಜನರ ಒಲವು ಯಾರ ಪರ ಇದೆ? ಅಭ್ಯರ್ಥಿಗಳ ಆಯ್ಕೆಯಲ್ಲಿ ಪಕ್ಷಗಳ ತಂತ್ರ ಹೇಗಿದೆ ಎಂಬುದು ಸೇರಿ ಹಾಸನ ಚುನಾವಣೆ ಕಣದ ಸಂಪೂರ್ಣ ಮಾಹಿತಿ ಹೀಗಿದೆ.

1. ಯಾರಿಗೆ ಸಿಂ’ಹಾಸನ’?

ರಾಜ್ಯದ ಗಮನ ಸೆಳೆದಿರುವ ಹಾಸನ ವಿಧಾನಸಭಾ ಕ್ಷೇತ್ರವು ಸಾಕಷ್ಟು ಕುತೂಹಲ ಹಾಗೂ ಜಿದ್ದಾಜಿದ್ದಿಯ ಕ್ಷೇತ್ರವಾಗಿದೆ. ಈ ಕ್ಷೇತ್ರವನ್ನು ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ನಾಯಕರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಜೆಡಿಎಸ್‌ನಲ್ಲಿ ಟಿಕೆಟ್ ಗುದ್ದಾಟ ನಡೆದರೂ ಅಂತಿಮವಾಗಿ ಯಾವುದೇ ಗೊಂದಲಗಳಿಲ್ಲದೆ ಟಿಕೆಟ್ ಪಡೆದಿರುವ ಸ್ವರೂಪ್ ಪರವಾಗಿ ಎಚ್.ಡಿ.ರೇವಣ್ಣ ಕುಟುಂಬಸ್ಥರಿಂದ ಹಿಡಿದು ಇಡೀ ದೇವೇಗೌಡರ ಕುಟುಂಬವೇ ಒಗ್ಗಟ್ಟಾಗಿದೆ. ಭವಾನಿ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ವಿಧಾನಸಭಾ ಪರಿಷತ್ ಸದಸ್ಯ ಸೂರಜ್ ರೇವಣ್ಣ ಸೇರಿ ಹಲವರು ಸ್ವರೂಪ್ ಬೆನ್ನಿಗೆ ನಿಂತು ಹಾಲಿ ಶಾಸಕ ಪ್ರೀತಂಗೌಡಗೆ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಇತ್ತ ಶಾಸಕ ಪ್ರೀತಂಗೌಡ ಒಂಟಿಯಾಗಿ ಎಲ್ಲರನ್ನೂ ಎದುರಿಸುತ್ತಿದ್ದಾರೆ. ಹಳ್ಳಿಹಳ್ಳಿಗೂ ತೆರಳಿ ಭರದಿಂದ ಪ್ರಚಾರ ಮಾಡುತ್ತಿದ್ದಾರೆ. ಇತ್ತ ಕಾಂಗ್ರೆಸ್‌ನಿಂದ ಬನವಾಸೆ ರಂಗಸ್ವಾಮಿ ಸ್ಪರ್ಧೆಗಿಳಿದಿದ್ದು, ಎರಡೂ ಬಿಜೆಪಿ ಹಾಗೂ ಜೆಡಿಎಸ್‌ಗೆ ತೀವ್ರ ಸ್ಪರ್ಧೆಯೇನೂ ಒಡ್ಡುತ್ತಿಲ್ಲ.

ಅಭ್ಯರ್ಥಿಗಳು
ಜೆಡಿಎಸ್ – ಸ್ವರೂಪ್ ಪ್ರಕಾಶ್
ಬಿಜೆಪಿ – ಪ್ರೀತಂ ಗೌಡ
ಕಾಂಗ್ರೆಸ್ – ಬನವಾಸೆ ರಂಗಸ್ವಾಮಿ
ಆಪ್ – ಅಗಿಲೆ ಯೋಗೇಶ್

ಕಳೆದ ಚುನಾವಣೆ ಫಲಿತಾಂಶ
ಬಿಜೆಪಿ – ಪ್ರೀತಂ ಗೌಡ – 63,348
ಜೆಡಿಎಸ್ – ಎಚ್.ಎಸ್.ಪ್ರಕಾಶ್ – 50,342
ಕಾಂಗ್ರೆಸ್ – ಎಚ್.ಕೆ.ಮಹೇಶ್ – 38,101

2. ಹೊಳೆನರಸೀಪುರ: ರೇವಣ್ಣಗೆ ಕಾಂಗ್ರೆಸ್‌ ಸೆಡ್ಡು?

ಕಳೆದ 25 ವರ್ಷಗಳಿಂದ ಹೊಳೆನರಸೀಪುರ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಪುತ್ರ ಎಚ್‌.ಡಿ.ರೇವಣ್ಣ ಅವರದ್ದೇ ಪಾರುಪತ್ಯವಿದೆ. ಈ ಬಾರಿಯೂ ಮಾಜಿ ಸಚಿವ ರೇವಣ್ಣ ಕಣಕ್ಕಿಳಿದಿದ್ದು, ಇವರಿಗೆ ಕಾಂಗ್ರೆಸ್‌ ಅಭ್ಯರ್ಥಿ ಶ್ರೇಯಸ್‌ ಪಟೇಲ್‌ ಸೆಡ್ಡು ಹೊಡೆಯುವರೇ ಎಂಬ ಪ್ರಶ್ನೆ ಇದೆ. ಕಳೆದ ಹಲವು ವರ್ಷಗಳ ಹೊಳೆನರಸೀಪುರ ಕ್ಷೇತ್ರದಲ್ಲಿ ದೇವೇಗೌಡರ ಕುಟುಂಬದ ಪರ ಹಾಗೂ ವಿರೋಧದ ಚುನಾವಣೆ ಇದೆ. ರೇವಣ್ಣ ಅವರ ವಿರುದ್ಧ ಕಾಂಗ್ರೆಸ್‌ನಿಂದ ಯಾರೇ ನಿಂತರೂ 50 ಸಾವಿರಕ್ಕೂ ಅಧಿಕ ಮತ ಪಡೆಯುವುದು ಖಚಿತವಾಗಿದೆ. ಈ ಬಾರಿ ಕಾಂಗ್ರೆಸ್‌ನಿಂದ ಶ್ರೇಯಸ್ ಪಟೇಲ್ ಅವರನ್ನು ಕಣಕ್ಕಿಳಿಸಲಾಗಿದೆ. ಶ್ರೇಯಸ್‌ ಪಟೇಲ್‌ ಭರ್ಜರಿ ಪ್ರಚಾರ ಮಾಡುತ್ತಿದ್ದು, ರೇವಣ್ಣ ಫ್ಯಾಮಿಲಿಗೆ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಬಿಜೆಪಿಯಿಂದ ದೇವರಾಜೇಗೌಡ ಸ್ಪರ್ಧಿಸಿದ್ದರೂ ಇಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಮಧ್ಯೆ ನೇರ ಪೈಪೋಟಿ ಇದೆ.

ಅಭ್ಯರ್ಥಿಗಳು
ಜೆಡಿಎಸ್ – ಎಚ್.ಡಿ.ರೇವಣ್ಣ
ಕಾಂಗ್ರೆಸ್ – ಶ್ರೇಯಸ್ ಪಟೇಲ್
ಬಿಜೆಪಿ – ದೇವರಾಜೇಗೌಡ

ಕಳೆದ ಚುನಾವಣೆ ಫಲಿತಾಂಶ
ಜೆಡಿಎಸ್ – ಎಚ್.ಡಿ.ರೇವಣ್ಣ – 1,08,541
ಕಾಂಗ್ರೆಸ್ – ಬಾಗೂರು ಮಂಜೇಗೌಡ – 64,709
ಬಿಜೆಪಿ – ಎಂ.ಎನ್.ರಾಜು – 3,667

3. ಶ್ರವಣಬೆಳಗೊಳ: ಬಾಲಕೃಷ್ಣ ಹ್ಯಾಟ್ರಿಕ್‌?

ಕಳೆದ 25 ವರ್ಷಗಳಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯೇ ಶ್ರವಣಬೆಳಗೊಳದಲ್ಲಿ ಗೆಲ್ಲುತ್ತಿದ್ದಾರೆ. ಸಿ.ಎಸ್‌.ಪುಟ್ಟೇಗೌಡರು ಜೆಡಿಎಸ್‌ನಿಂದ ಸ್ಪರ್ಧಿಸಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದರು. ಇದಾದ ನಂತರದ ಎರಡು ಬಾರಿ ಸಿ.ಎನ್‌.ಬಾಲಕೃಷ್ಣ ಗೆಲುವು ಸಾಧಿಸಿದ್ದು, ಈ ಬಾರಿ ಹ್ಯಾಟ್ರಿಕ್‌ ಗೆಲುವಿನ ಕನಸು ಕಾಣುತ್ತಿದ್ದಾರೆ. ಬಾಲಕೃಷ್ಣ ಅವರು ಗೆಲುವಿಗಾಗಿ ಕಾಲಿಗೆ ಚಕ್ರ‌ಕಟ್ಟಿಕೊಂಡಂತೆ ಕ್ಷೇತ್ರ ಸುತ್ತುತ್ತಿದ್ದಾರೆ. ಇತ್ತ ವಿಧಾನಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಲೆಕ್ಕಕ್ಕೆ ಅಂತ ಬಿಜೆಪಿಯಿಂದ ಚಿದಾನಂದ್‌ ಅವರಿಗೆ ಟಿಕೆಟ್‌ ನೀಡಲಾಗಿದೆ.

ಅಭ್ಯರ್ಥಿಗಳು
ಜೆಡಿಎಸ್ – ಸಿ.ಎನ್.ಬಾಲಕೃಷ್ಣ
ಕಾಂಗ್ರೆಸ್ – ಎಂ.ಎ.ಗೋಪಾಲಸ್ವಾಮಿ
ಬಿಜೆಪಿ – ಚಿದಾನಂದ್

ಕಳೆದ ಚುನಾವಣೆ ಫಲಿತಾಂಶ
ಜೆಡಿಎಸ್ – ಸಿ.ಎನ್.ಬಾಲಕೃಷ್ಣ – 1,05,516
ಕಾಂಗ್ರೆಸ್ – ಸಿ.ಎಸ್. ಪುಟ್ಟೇಗೌಡ – 52,504
ಬಿಜೆಪಿ – ಶಿವನಂಜೇಗೌಡ – 7,506

4. ಅರಸೀಕೆರೆ: ಪಕ್ಷಾಂತರಿಗಳಲ್ಲಿ ಯಾರಿಗೆ ವಿಜಯ?

ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದ ಕೆ.ಎಂ.ಶಿವಲಿಂಗೇಗೌಡ ಅವರು ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಹಾಗೂ ಮಾಜಿ‌ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಎನ್.ಆರ್.ಸಂತೋಷ್ ಬಿಜೆಪಿಯಿಂದ ಜೆಡಿಎಸ್‌ಗೆ ಪಕ್ಷಾಂತರ ಮಾಡಿದ್ದಾರೆ. ಪಕ್ಷದ ಮೇಲಿನ ವರ್ಚಸ್ಸಿಗಿಂತ ವ್ಯಕ್ತಿ ಮೇಲೆ ನಡೆಯುತ್ತಿರುವ ಚುನಾವಣೆ ಇದಾಗಿದೆ. ಕೆ.ಎಂ.ಶಿವಲಿಂಗೇಗೌಡರು ವೈಯಕ್ತಿಕ ಮತಗಳ ಜತೆಗೆ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳ‌‌‌ಮೇಲೆ ಕಣ್ಣಿಟ್ಟು ಚುನಾವಣೆಗೆ ಧುಮುಕಿದ್ದಾರೆ. ಇತ್ತ ಎನ್.ಆರ್.ಸಂತೋಷ್ ಅವರು ವೈಯಕ್ತಿಕ ಮತಗಳ ಜತೆಗೆ ಜೆಡಿಎಸ್ ಮತಗಳನ್ನು ನಂಬಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಇತ್ತ ಲಿಂಗಾಯತರೇ ನಿರ್ಣಾಯಕರಾಗಿರೋ ಕ್ಷೇತ್ರದಲ್ಲಿ ಜಿ.ವಿ.ಟಿ.ಬಸವರಾಜ್ ಅವರನ್ನು ಕಣಕ್ಕಿಳಿಸಿದೆ.

ಅಭ್ಯರ್ಥಿಗಳು
ಜೆಡಿಎಸ್ – ಎನ್.ಆರ್. ಸಂತೋಷ್
ಕಾಂಗ್ರೆಸ್ – ಕೆ.ಎಂ‌. ಶಿವಲಿಂಗೇಗೌಡ
ಬಿಜೆಪಿ – ಜಿ.ವಿ.ಟಿ. ಬಸವರಾಜ್

ಕಳೆದ ಚುನಾವಣೆ ಫಲಿತಾಂಶ
ಜೆಡಿಎಸ್ – ಕೆ.ಎಂ. ಶಿವಲಿಂಗೇಗೌಡ – 93,986
ಕಾಂಗ್ರೆಸ್ – ಜಿ.ಬಿ .ಶಶಿಧರ – 50,297
ಬಿಜೆಪಿ – ಜಿ.ಮರಿಸ್ವಾಮಿ 25,258

ಅರಕಲಗೂಡು: ಚತುಷ್ಕೋನ ಸ್ಪರ್ಧೆ

ಕಳೆದ 20 ವರ್ಷದಿಂದ ಅರಕಲಗೂಡು ಕ್ಷೇತ್ರದ ಅಧಿಕಾರದ ಎ‌.ಮಂಜು ಹಾಗೂ ಎ.ಟಿ.ರಾಮಸ್ವಾಮಿ ಅವರ ಕೈಯಲ್ಲಿದೆ. ಇಬ್ಬರೂ ಎರಡೆರಡು ಬಾರಿ ಶಾಸಕರಾಗಿದ್ದಾರೆ. ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋಗಿದ್ದ ಎ.ಮಂಜು ಟಿಕೆಟ್ ಸಿಗದೆ ಅಂತಿಮ ಕ್ಷಣದಲ್ಲಿ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದಾರೆ. ಯೋಗಾ ರಮೇಶ್‌ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಇತ್ತ ಕಾಂಗ್ರೆಸ್‌ನಿಂದ ಮಾಜಿ‌ ಪೊಲೀಸ್ ಅಧಿಕಾರಿ ಶ್ರೀಧರ್ ಗೌಡ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಕಾಂಗ್ರೆಸ್‌ನಿಂದ ಟಿಕೆಟ್ ವಂಚಿತ ಕೃಷ್ಣೇಗೌಡ ಪಕ್ಷೇತರವಾಗಿ ಸ್ಪರ್ಧೆಗಿಳಿದಿದ್ದಾರೆ. ಪಕ್ಷೇತರ ಅಭ್ಯರ್ಥಿಯೂ ಸೇರಿ ನಾಲ್ವರು ಅಭ್ಯರ್ಥಿಗಳ ನಡುವೆ ಫೈಟ್ ಏರ್ಪಡುವ ಸಾಧ್ಯತೆ ಹೆಚ್ಚಾಗಿದೆ.‌

ಅಭ್ಯರ್ಥಿಗಳು
ಜೆಡಿಎಸ್ – ಎ.ಮಂಜು
ಕಾಂಗ್ರೆಸ್ – ಶ್ರೀಧರ್ ಗೌಡ
ಬಿಜೆಪಿ – ಯೋಗಾರಮೇಶ್
ಪಕ್ಷೇತರ – ಕೃಷ್ಣೇಗೌಡ

ಕಳೆದ ಚುನಾವಣೆ ಫಲಿತಾಂಶ
ಜೆಡಿಎಸ್ – ಎ.ಟಿ.ರಾಮಸ್ವಾಮಿ – 85064
ಕಾಂಗ್ರೆಸ್ – ಎ.ಮಂಜು – 74411
ಬಿಜೆಪಿ – ಯೋಗಾರಮೇಶ್ – 22679

6. ಬೇಲೂರು: ತ್ರಿಕೋನ ಸ್ಪರ್ಧೆಯಲ್ಲಿ ಯಾರಿಗೆ ಕಣ?

ಜೆಡಿಎಸ್‌ನಿಂದ ಸ್ಪರ್ಧಿಸಿ‌ ಮೊದಲ ಬಾರಿಗೆ ಶಾಸಕರಾಗಿದ್ದ ಕೆ.ಎಸ್.ಲಿಂಗೇಶ್, ಎರಡನೇ ಬಾರಿಗೂ ಸ್ಪರ್ಧೆಗಿಳಿದಿದ್ದಾರೆ. ಲಿಂಗಾಯತರೇ ನಿರ್ಣಾಯಕರಾಗಿರುವ ಕ್ಷೇತ್ರದಲ್ಲಿ ಜೆಡಿಎಸ್ ಲಿಂಗಾಯತ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಲಿಂಗಾಯತ ಮತಗಳು ಹಾಗೂ ಜೆಡಿಎಸ್‌ನ ಸಾಂಪ್ರದಾಯಿಕ ಮತಗಳನ್ನೇ ಕೆ.ಎಸ್.ಲಿಂಗೇಶ್ ನೆಚ್ಚಿಕೊಂಡಿದ್ದಾರೆ. ಕಳೆದ ಬಾರಿ ಕಡಿಮೆ ಅಂತರದಿಂದ ಸೋಲು ಕಂಡಿದ್ದ ಬಿಜೆಪಿ ಅಭ್ಯರ್ಥಿ ಎಚ್.ಕೆ.ಸುರೇಶ್‌ಗೆ ಎರಡನೇ ಬಾರಿಯೂ ಕಮಲ‌ ನಾಯಕರು‌ ಟಿಕೆಟ್ ನೀಡಿದ್ದಾರೆ. ಕಳೆದ ಬಾರಿಯ ಅನುಕಂಪ ಹಾಗೂ ಬಿಜೆಪಿ ಮತಗಳನ್ನೇ ಸುರೇಶ್ ನೆಚ್ಚಿಕೊಂಡಿದ್ದಾರೆ. ಇತ್ತ ಮಾಜಿ ಸಚಿವ ಬಿ.ಶಿವರಾಮ್ ಕಾಂಗ್ರೆಸ್ ಟಿಕೆಟ್ಅನ್ನು ಮೊದಲ‌ ಪಟ್ಟಿಯಲ್ಲಿಯೇ ಪಡೆದುಕೊಂಡು ಕ್ಷೇತ್ರವನ್ನು ಸುತ್ತುತ್ತಿದ್ದಾರೆ. ಲಿಂಗೇಶ್ ಗೆಲ್ಲುವ ಮುನ್ನ ಕ್ಷೇತ್ರವು ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಆ ಕೋಟೆಯನ್ನು ಮತ್ತೆ ಕಟ್ಟಲು ಶಿವರಾಮ್ ಪಣ ತೊಟ್ಟಿದ್ದಾರೆ.

ಅಭ್ಯರ್ಥಿಗಳು
ಜೆಡಿಎಸ್ – ಕೆ.ಎಸ್. ಲಿಂಗೇಶ್
ಬಿಜೆಪಿ – ಎಚ್.ಕೆ. ಸುರೇಶ್
ಕಾಂಗ್ರೆಸ್ – ಬಿ. ಶಿವರಾಮ್

ಕಳೆದ ಚುನಾವಣೆ ಫಲಿತಾಂಶ
ಜೆಡಿಎಸ್ – ಕೆ.ಎಸ್. ಲಿಂಗೇಶ್ – 64,368
ಬಿಜೆಪಿ – ಎಚ್.ಕೆ.ಸುರೇಶ್ – 44,578
ಕಾಂಗ್ರೆಸ್ – ಕೀರ್ತನಾ ರುದ್ರೇಶ್ ಗೌಡ – 39,519

7. ಸಕಲೇಶಪುರ: ಎಚ್‌.ಕೆ.ಕುಮಾರಸ್ವಾಮಿ ಕೋಟೆ ಭೇದಿಸುವವರಾರು?

ಸತತ ಆರು ಬಾರಿ ಜೆಡಿಎಸ್‌ನ ಎಚ್.ಕೆ. ಕುಮಾರಸ್ವಾಮಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇದೇ ಕ್ಷೇತ್ರದಲ್ಲಿ ಮೂರು ಹಾಗೂ ಪಕ್ಕದ ಬೇಲೂರಿನಲ್ಲಿ ಮೂರು ಬಾರಿ ಗೆಲುವು ಸಾಧಿಸಿದ್ದಾರೆ. ಇದೀಗ ಸಕಲೇಶಪುರ ಕ್ಷೇತ್ರದಲ್ಲಿ ನಾಲ್ಕನೇ ಬಾರಿ ಸ್ಪರ್ಧೆಗಿಳಿದಿದ್ದಾರೆ. ಯಾವುದೇ ವಿವಾದಗಳಿಲ್ಲದೆ ಸರಳತೆ ಹಾಗೂ ಸಜ್ಜನ ರಾಜಕಾರಣಿ ಎನ್ನುವ ಹೆಸರು ಪಡೆದಿರುವುದೇ ಕುಮಾರಸ್ವಾಮಿಯವರ ಪ್ರಮುಖ ಚುನಾವಣಾ ಅಸ್ತ್ರ.

ಇದನ್ನೂ ಓದಿ: ಚಾಮರಾಜನಗರ ಜಿಲ್ಲೆ ಕ್ಷೇತ್ರ ಸಮೀಕ್ಷೆ: ಬಿಜೆಪಿ, ಕಾಂಗ್ರೆಸ್‌ ಮಧ್ಯೆ ಪೈಪೋಟಿ, ಸಮರಕ್ಕೆ ಜೆಡಿಎಸ್‌ ಸಜ್ಜು

ಇತ್ತ ಕಳೆದ ಬಾರಿ ಕಡಿಮೆ ಅಂತರದಿಂದ ಸೋಲು ಕಂಡಿದ್ದ ನಾರ್ವೇ ಸೋಮಶೇಖರ್‌ಗೆ ಟಿಕೆಟ್ ನೀಡದೆ, ಹೊಸ ಮುಖ ಸಿಮೆಂಟ್ ಮಂಜುಗೆ ಬಿಜೆಪಿ ಟಿಕೆಟ್ ನೀಡಿದೆ. ಇತ್ತ ಕಳೆದ ಎರಡು-ಮೂರು ವರ್ಷದಿಂದ ಕ್ಷೇತ್ರದಲ್ಲಿ ಓಡಾಡಿಕೊಂಡು ಕೆಲಸ ಮಾಡುತ್ತಿದ್ದ ಮುರಳಿ ಮೋಹನ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ.‌

ಅಭ್ಯರ್ಥಿಗಳ ವಿವರ
ಜೆಡಿಎಸ್ -ಎಚ್.ಕೆ.ಕುಮಾರಸ್ವಾಮಿ
ಬಿಜೆಪಿ – ಸಿಮೆಂಟ್ ಮಂಜು
ಕಾಂಗ್ರೆಸ್ – ಮುರಳಿ ಮೋಹನ್

ಕಳೆದ ಚುನಾವಣೆ ಫಲಿತಾಂಶ
ಜೆಡಿಎಸ್- ಎಚ್.ಕೆ. ಕುಮಾರಸ್ವಾಮಿ – 62,262
ಬಿಜೆಪಿ – ನಾರ್ವೇ ಸೋಮಶೇಖರ್ – 57,320
ಕಾಂಗ್ರೆಸ್ – ಸಿದ್ದಯ್ಯ – 37,002

Exit mobile version