ಹಾಸನ: ಮತದಾನ ಪ್ರಕ್ರಿಯೆ ಮುಗಿಯುವ ವೇಳೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ಕಾಂಗ್ರೆಸ್ ಕಾರ್ಯಕರ್ತ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ (Hassan News) ಹೊಳೆನರಸೀಪುರ ತಾಲೂಕಿನ ಕೆ.ಬಿ.ಪಾಳ್ಯದಲ್ಲಿ ನಡೆದಿದೆ.
ಕೆ.ಬಿ.ಪಾಳ್ಯದ ಮತಗಟ್ಟೆ ಸಂಖ್ಯೆ 249ರ ಬಳಿ ಕಾಂಗ್ರೆಸ್‌ನ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದು, ಗಂಭೀರವಾಗಿ ಗಾಯಗೊಂಡ ಕೈ ಕಾರ್ಯಕರ್ತನನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತಗಟ್ಟೆಗೆ ಹಾಸನ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರ ತಾಯಿ ಅನುಪಮಾ ಮಹೇಶ್ ಭೇಟಿ ನೀಡಿದ್ದರು. ಈ ವೇಳೆ ಜೆಡಿಎಸ್ ಪಕ್ಷದ ಪರ ದಳ ಕಾರ್ಯಕರ್ತರು ಜೈಕಾರ ಕೂಗಿದ್ದಾರೆ. ಇದರಿಂದ ಕಾಂಗ್ರೆಸ್ ಕಾರ್ಯಕರ್ತರು ರೊಚ್ಚಿಗೆದ್ದಿದ್ದಾರೆ. ಇದು ವಿಕೋಪಕ್ಕೆ ತಿರುಗಿ ಎರಡು ಪಕ್ಷದವರ ನಡುವೆ ಮಾರಾಮಾರಿ ನಡೆದಿದೆ.
ಜೆಡಿಎಸ್ ಕಾರ್ಯಕರ್ತರಾದ ಜೆಡಿಎಸ್‌ನ ಸಾಗರ್ ಹಾಗೂ ಪ್ರದೀಪ್ ಎಂಬುವವರು ಕಬ್ಬಿಣದ ರಾಡ್‌ನಿಂದ ಕಾಂಗ್ರೆಸ್ ಕಾರ್ಯಕರ್ತರಾದ ಮೋಹನ್‌ಕುಮಾರ್, ಗಿರೀಶ್, ಮಂಜುನಾಥ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗಂಭೀರವಾಗಿ ಗಾಯಗೊಂಡಿರುವ ಕಾಂಗ್ರೆಸ್ ಕಾರ್ಯಕರ್ತ ಮೋಹನ್‌ಕುಮಾರ್ ಅವರನ್ನು ಹಾಸನದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಕಾಂಗ್ರೆಸ್ ಕಾರ್ಯಕರ್ತರಿಂದಲೂ ಜೆಡಿಎಸ್ ಕಾರ್ಯಕರ್ತರ ಮೇಲೂ ಹಲ್ಲೆ ನಡೆದಿದೆ ಎಂದ ಆರೋಪ ಕೇಳಿಬಂದಿದೆ. ಜೆಡಿಎಸ್‌ನ ಪ್ರದೀಪ್, ಸಾಗರ್ ಹಾಗೂ ಗೌತಮ್ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಗಾಯಗೊಂಡ ಜೆಡಿಎಸ್ ಕಾರ್ಯಕರ್ತನ್ನು ಹಾಸನದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ | Tejasvi Surya: ಧರ್ಮಾಧಾರಿತ ಮತಯಾಚನೆ; ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕೇಸ್
ಆಸ್ಪತ್ರೆಗೆ ಮೈಸೂರು ದಕ್ಷಿಣ ವಲಯ ಡಿಐಜಿ ಅಮಿತ್ ಸಿಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಚಿಕ್ಕಮಗಳೂರಲ್ಲಿ ಬಿಜೆಪಿ ಕಾರ್ಯಕರ್ತರ ಮಧ್ಯೆಯೇ ಮಾರಾಮಾರಿ; ಮುಖಂಡನ ತಲೆಗೆ ಏಟು!
ಚಿಕ್ಕಮಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಶುಕ್ರವಾರ (ಏಪ್ರಿಲ್ 26) ಮೊದಲ ಹಂತದ ಮತದಾನ (First phase of polling) ಮುಕ್ತಾಯಗೊಂಡಿದೆ. ಆದರೆ, ಚಿಕ್ಕಮಗಳೂರು ತಾಲೂಕಿನ ಉಜ್ಜಿನಿ ಗ್ರಾಮದ ಬಳಿ ಬಿಜೆಪಿ ಕಾರ್ಯಕರ್ತರ ನಡುವೆಯೇ ಮಾರಾಮಾರಿಯಾಗಿದೆ. ಬಿಜೆಪಿ ಮುಖಂಡ ಪ್ರವೀಣ್ ಖಾಂಡ್ಯಾ ಎಂಬುವವರ ಮೇಲೆ ಹಲ್ಲೆಯಾದ ವರದಿಯಾಗಿದೆ.
ಮತದಾನದ ವೇಳೆ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿಯಾಗಿದ್ದು, ಕೆಲ ಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಬಿಜೆಪಿ ಕಾರ್ಯಕರ್ತರಿಂದಲೇ ಪ್ರವೀಣ್ ಖಾಂಡ್ಯ ಮೇಲೆ ಹಿಗ್ಗಾಮುಗ್ಗ ಥಳಿತವಾಗಿದೆ. ಪ್ರವೀಣ್ ತಲೆಗೆ ಏಟಾಗಿದ್ದು, ರಕ್ತ ಸುರಿದಿದೆ. ಕೂಡಲೇ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಏಕೆ ಗಲಾಟೆ?
ಚಿಕ್ಕಮಗಳೂರು ತಾಲೂಕಿನ ಉಜ್ಜಿನಿ ಗ್ರಾಮದ ಬಳಿ ಘಟನೆ ನಡೆದಿದೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಪ್ರವೀಣ್ ಖಾಂಡ್ಯ ಕಾಂಗ್ರೆಸ್‌ನಿಂದ ಬಿಜೆಪಿ ಸೇರ್ಪಡೆಯಾಗಿದ್ದರು. ಆದರೆ, ಲೋಕಸಭಾ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಪರ ಮತ ಚಲಾಯಿಸಲು ಮತದಾರರಿಗೆ ಪ್ರೇರೇಪಿಸಿದ್ದಾರೆ ಎಂಬ ವಿಷಯವು ಗಲಾಟೆಗೆ ಕಾರಣವಾಗಿದೆ. ಬಿಜೆಪಿ ಕಾರ್ಯಕರ್ತರು ಹಾಗೂ ಬಿಜೆಪಿ ಮುಖಂಡರು ಆಕ್ರೋಶಗೊಂಡು ಪ್ರವೀಣ್ ಬಳಿ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಹೊಡೆದಾಟ ಆಗಿದೆ.
ಬಾಳೆಹೊನ್ನೂರು ವ್ಯಾಪ್ತಿಯ ಬೂತ್ ಮಟ್ಟದಲ್ಲಿ ಖಾಂಡ್ಯ ಪ್ರವೀಣ್ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಿಜೆಪಿ ಕಾರ್ಯಕರ್ತರಾದ ಸೃಜನ್, ಸಚಿನ್, ಅಭಿ, ಶಂಕರ್ ಹಲ್ಲೆ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ.