Site icon Vistara News

Hassan Pen Drive Case: ಪ್ರಜ್ವಲ್‌ ಉಚ್ಚಾಟನೆಗೆ ದೇವೇಗೌಡರ ಹಿಂದೇಟು; ದೊಡ್ಡ ಗೌಡರ ಭಯಕ್ಕೆ ಏನು ಕಾರಣ?

Hassan Pen Drive Case Deve Gowda refuses to expel Prajwal and What is the reason

ಬೆಂಗಳೂರು: ಹಾಸನ ಸಂಸದ (Hassan MP), ಜೆಡಿಎಸ್‌ ಮುಖಂಡ (JDS Leader), ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna) ಅವರ ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ವಿವಾದ ಭುಗಿಲೆದ್ದಿದೆ. ಪ್ರಜ್ವಲ್‌ ಅವರನ್ನು ಕೂಡಲೇ ಉಚ್ಚಾಟನೆ ಮಾಡುವಂತೆ ಪಕ್ಷದ ಶಾಸಕರಿಂದ ಒತ್ತಡ ಬರುತ್ತಿದ್ದರೂ, ಕ್ರಮ ಕೈಗೊಳ್ಳಲು ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡರು (HD Devegowda) ಹಿಂದೇಟು ಹಾಕಿದ್ದಾರೆ.

ಈ ಪ್ರಕರಣದ ಬಗ್ಗೆ ಸ್ವಲ್ಪ ಸಮಯ ಕಾಯೋಣ ಎಂದು ಎಚ್.ಡಿ. ದೇವೇಗೌಡರು ಹೇಳುತ್ತಿದ್ದಾರೆ. ಆದರೆ, ತಡ ಮಾಡಿದಷ್ಟು ಪಕ್ಷಕ್ಕೆ ಮುಜುಗರ ಜಾಸ್ತಿ. ಹೀಗಾಗಿ ಇಂದೇ ಉಚ್ಚಾಟನೆ ಮಾಡಿ. ಜತೆಗೆ ಶಾಸಕರು ಬಹಿರಂಗವಾಗಿ ಧ್ವನಿ ಎತ್ತಿದ್ದಾರೆ. ಇದನ್ನು ಮುಂದುವರಿಸುವುದು ಬೇಡ ಎಂದು ಹಿರಿಯ ನಾಯಕರ ನಿಯೋಗ ದೇವೇಗೌಡರ ಬಳಿ ಹೇಳಿದೆ. ಕೊನೆಗೆ ದೇವೇಗೌಡರು ಕೋರ್ ಕಮಿಟಿಯಲ್ಲಿ ನಿರ್ಧಾರ ಮಾಡಿ ಎಂದು ಸೂಚನೆ ನೀಡಿದ್ದಾರೆ.

ದೇವೇಗೌಡರಿಗೆ ಕಾಡುತ್ತಿದೆಯಾ ಆ ಭಯ?

ಎಚ್.ಡಿ. ದೇವೇಗೌಡ ಅವರಿಗೆ ಉಚ್ಚಾಟನೆ ಮಾಡುವುದು ದೊಡ್ಡ ವಿಷಯ ಅಲ್ಲದಿದ್ದರೂ, ಮುಂದಿನ ಪರಿಣಾಮದ ಬಗ್ಗೆ ಭಯ ಇದೆ ಎಂದು ಹೇಳಲಾಗುತ್ತಿದೆ. ಪ್ರಜ್ವಲ್ ರೇವಣ್ಣ ಅವರನ್ನು ಉಚ್ಚಾಟನೆ ಮಾಡಿದರೆ, ಎಚ್.ಡಿ. ರೇವಣ್ಣ (HD Revanna) ಅವರೇ ಮುಂದಿನ ಟಾರ್ಗೆಟ್‌ ಆಗಲಿದ್ದಾರೆ. ಈ ಪ್ರಕರಣಗಳಲ್ಲಿ ರೇವಣ್ಣ ಹೆಸರು ಸಹ ಪ್ರಸ್ತಾಪ ಆಗಿರುವುದರಿಂದ ಕಾಂಗ್ರೆಸ್ ರೇವಣ್ಣ ವಿರುದ್ಧ ಮುಗಿಬೀಳುತ್ತದೆ. ರೇವಣ್ಣನ ವಿರುದ್ಧವೂ ಅಭಿಯಾನ ಶುರುವಾಗುತ್ತದೆ. ಆಗ ಅನಿವಾರ್ಯವಾಗಿ ರೇವಣ್ಣ ಅವರನ್ನೂ ಉಚ್ಚಾಟನೆ ಮಾಡುವ ಪರಿಸ್ಥಿತಿ ನಿರ್ಮಾಣವಾದರೆ ಎಂಬ ಆತಂಕ, ಭಯ ಎಚ್.ಡಿ. ದೇವೇಗೌಡ ಅವರದ್ದಾಗಿದೆ.

ಪಕ್ಷ ಉಳಿಯುತ್ತಾ ಎಂಬ ಆತಂಕ!

ಒಂದು ವೇಳೆ ರೇವಣ್ಣ ಹಾಗೂ ಪ್ರಜ್ವಲ್‌ ಅವರನ್ನು ಉಚ್ಚಾಟನೆ ಮಾಡಿದ್ದೇ ಆದಲ್ಲಿ ಕುಟುಂಬದಲ್ಲಿ ರಾಜಕೀಯ ಭಿನ್ನಾಭಿಪ್ರಾಯ ಹೆಚ್ಚಾಗುತ್ತದೆ. ಆ ಬಳಿಕ ಜೆಡಿಎಸ್ ಪಕ್ಷ ಉಳಿಯುವುದೇ ಅನುಮಾನ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಕಾಂಗ್ರೆಸ್‌ ಕೂಡಾ ಜೆಡಿಎಸ್‌ ಪಕ್ಷ ನಿರ್ನಾಮ ಆಗುವುದನ್ನೇ ಕಾಯುತ್ತಿದೆ. ಹೀಗಾಗಿ ಉಚ್ಚಾಟನೆ ಮಾಡಿ ಅವರ ಅಸ್ತ್ರ ಇನ್ನಷ್ಟು ಗಟ್ಟಿ ಮಾಡುವುದು ಬೇಡ ಎಂಬ ಯೋಚನೆಯಲ್ಲಿ ಎಚ್.ಡಿ. ದೇವೇಗೌಡ ಅವರು ಇದ್ದಾರೆ.

ಪಕ್ಷದ ನಾಯಕರ ವಾದ ಏನು?

ಇದು ಏನೇ ಇದ್ದರೂ ದಿಟ್ಟ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ಜತೆಗೆ ಪಕ್ಷದ ಕಾರ್ಯಕರ್ತರ ನೈತಿಕ ಸ್ಥೈರ್ಯ ಹೆಚ್ಚಿಸಲು ಈ ಕ್ರಮವನ್ನು ತೆಗೆದುಕೊಳ್ಳಲೇ ಬೇಕಾಗುತ್ತದೆ. ಪಕ್ಷಕ್ಕೆ ಆದ ಮುಜುಗರ ತಪ್ಪಿಸಲು ಪ್ರಜ್ವಲ್ ಉಚ್ಚಾಟನೆ ಅನಿವಾರ್ಯ ಎಂದು ಹಿರಿಯ ನಾಯಕರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಪ್ರಜ್ವಲ್‌ ರೇವಣ್ಣ ಜೆಡಿಎಸ್‌ನಿಂದ ನಾಳೆ ಉಚ್ಚಾಟನೆ?

ಹಾಸನ ಸಂಸದ (Hassan MP), ಜೆಡಿಎಸ್‌ ಮುಖಂಡ (JDS leader) ಪ್ರಜ್ವಲ್ ರೇವಣ್ಣ (Prajwal Revanna) ಅವರ ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ಜೆಡಿಎಸ್‌ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬಕ್ಕೆ ಭಾರಿ ಮುಜುಗರವನ್ನುಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್‌ನಿಂದ ಉಚ್ಚಾಟನೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಇನ್ನೂ ಕೆಲವೇ ಕ್ಷಣದಲ್ಲಿ ಆದೇಶ ಹೊರಬೀಳಲಿದೆ ಎನ್ನಲಾಗಿದೆ.

ಪ್ರಜ್ವಲ್‌ ರೇವಣ್ಣ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡುವ ಕುರಿತು ಈಗಾಗಲೇ ಎಚ್.ಡಿ. ಕುಮಾರಸ್ವಾಮಿ ಸುಳಿವು ನೀಡಿದ್ದಾರೆ. ಪ್ರಜ್ವಲ್ ಪ್ರಕರಣದಿಂದ ಜೆಡಿಎಸ್ ಪಕ್ಷಕ್ಕೆ ತೀವ್ರ ಮುಖಭಂಗವಾಗಿದೆ. ಹೀಗಾಗಿ ನಾಳೆ (ಏಪ್ರಿಲ್‌ 30) ಒಳಗೆ ಪ್ರಜ್ವಲ್ ವಿರುದ್ಧ ಶಿಸ್ತುಕ್ರಮ ಗ್ಯಾರಂಟಿ ಎಂದು ಹೇಳಲಾಗುತ್ತಿದೆ.

ಏಕೆ ಈ ಕ್ರಮ?

ಈಗಾಗಲೇ ಜೆಡಿಎಸ್‌ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದೆ. ಅಲ್ಲದೆ, ಈ ಪ್ರಕರಣ ಈಗ ದೇಶಾದ್ಯಂತ ಸಂಚಲನ ಉಂಟುಮಾಡಿದೆ. ಮೈತ್ರಿ ಪಕ್ಷ ಬಿಜೆಪಿ ಕೂಡ ಇದರಿಂದ ಮುಜುಗರ ಅನುಭವಿಸುತ್ತಿದೆ. ದೇಶದ ಹಲವು ಕಡೆ ಇನ್ನೂ ಚುನಾವಣೆ ನಡೆಯುತ್ತಿದೆ. ಈ ಹೊತ್ತಿನಲ್ಲಿ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲವೆಂದಾದರೆ ಬಿಜೆಪಿಗೆ ಇದು ತೀವ್ರ ಇರಿಸುಮುರಿಸನ್ನು ತರುತ್ತದೆ. ಅಲ್ಲದೆ, ವಿಪಕ್ಷಗಳ ಟೀಕೆಯನ್ನು ಸಮರ್ಥವಾಗಿ ಎದುರಿಸಲು ಕಷ್ಟವಾಗುತ್ತದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸದ್ಯಕ್ಕೆ ಮುಜುಗರದಿಂದ ತಪ್ಪಿಸಿಕೊಳ್ಳಲು ಪ್ರಜ್ವಲ್ ವಿರುದ್ಧ ಶಿಸ್ತು ಕ್ರಮವನ್ನು ಕೈಗೊಳ್ಳುವುದು ಅನಿವಾರ್ಯ ಎಂಬ ತೀರ್ಮಾನಕ್ಕೆ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರು ಬಂದಿದ್ದಾರೆ ಎನ್ನಲಾಗಿದೆ.

ಪ್ರಜ್ವಲ್, ಎಚ್.ಡಿ. ರೇವಣ್ಣ ಉಚ್ಚಾಟನೆಗೆ ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ಒತ್ತಾಯ

ಇನ್ನು ಪ್ರಜ್ವಲ್‌ ರೇವಣ್ಣ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರನ್ನು ಜೆಡಿಎಸ್‌ನಿಂದ ಉಚ್ಚಾಟನೆ ಮಾಡಿ ಎಂದು ಜೆಡಿಎಸ್‌ ಶಾಸಕ ಮಂಜುನಾಥ್ ಅವರು ತಮ್ಮ ಸೋಷಿಯಲ್‌ ಮೀಡಿಯಾ ಫೇಸ್‌ಬುಕ್‌ ಮೂಲಕ ಮಾಜಿ ಸಿಎಂ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ್ದಾರೆ.

ಸಮೃದ್ಧಿ ಮಂಜುನಾಥ್‌ ಮನವಿಯಲ್ಲೇನಿದೆ?

“ರಾಜ್ಯದ ಜನತೆಯ ಮುಂದೆ ತಲೆ ತಗ್ಗಿಸುವಂತಹ ಕೆಲಸ ಮಾಡಿದವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಪಕ್ಷದ ಘನತೆಯನ್ನು ಉಳಿಸಬೇಕಿದೆ. ಇತ್ತೀಚಿನ ದಿನಗಳಲ್ಲಿ ಹಾಸನದ ಲೀಲೆಗಳು ಮಾಧ್ಯಮಗಳಲ್ಲಿ ಪ್ರಜ್ವಲಿಸುತ್ತಿರುವುದು ಪಕ್ಷದ ಸಾಮಾನ್ಯ ಕಾರ್ಯಕ್ರತರಾಗಿ ರಾಜ್ಯದಲ್ಲೆಡೆ ಮುಜುಗರಕ್ಕೆ ಒಳಗಾಗಿರುವುದಲ್ಲದೆ ಪಕ್ಷದ ಹೆಸರು ಹೇಳಲು ಸಹ ಹೇಸಿಗೆ ಅನಿಸುವಂತ ಸ್ಥಿತಿಗೆ ತಲುಪಿದೆ.

ಮಾಧ್ಯಮದವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಾಗದ ದಯನೀಯ ಪರಿಸ್ಥಿತಿ ಮೊದಲ ಬಾರಿಗೆ ಶಾಸಕನಾಗಿರುವ ನನಗೆ ಈ ಕಷ್ಟಕರ ಸನ್ನಿವೇಶಗಳು ಎದುರಾಗುತ್ತಿದ್ದರೆ, ಸಾಮಾನ್ಯ ಕಾರ್ಯಕರ್ತರ ಪರಿಸ್ಥಿತಿಯಾದರೇನು ಯೋಚಿಸಿ??

ಪಕ್ಷದ ರಾಷ್ಟ್ರಾಧ್ಯಕ್ಷರು ಎಚ್.ಡಿ. ದೇವೇಗೌಡರು, ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕಾದ ಸಮಯವಿದಾಗಿದೆ. ನಿಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ 19 ಜನ ಶಾಸಕರ ಭವಿಷ್ಯ ಬೇಕೋ ತಮ್ಮ ಕುಟುಂಬದ ರೇವಣ್ಣ, ಪ್ರಜ್ವಲ್‌ ಅವರು ಮುಖ್ಯವೋ ತೀರ್ಮಾನಿಸಬೇಕಿದೆ.

ಇದನ್ನೂ ಓದಿ: PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

24 ಗಂಟೆಗಳಲ್ಲಿ ಆರೋಪ ಹೊತ್ತಿರುವ ರೇವಣ್ಣ ಮತ್ತು ಪ್ರಜ್ವಲ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಪಕ್ಷದ ಸಿದ್ಧಾಂತಗಳನ್ನು ಉಳಿಸಿ ಕಾರ್ಯಕರ್ತರನ್ನು ನಮ್ಮನ್ನು ಮುಜುಗರದಿಂದ ಪಾರು ಮಾಡಲು ಕೋರುತ್ತೇನೆ. ನಿಮ್ಮ ತೀರ್ಮಾನದ ಮೇಲೆ ಪಕ್ಷದ ಮುಂದಿನ ಭವಿಷ್ಯವಿದೆಯೆಂಬುದು ಮತ್ತೊಮ್ಮೆ ತಿಳಿಸಲು ಬಯಸುತ್ತೇನೆ” ಎಂದು ಫೇಸ್‌ಬುಕ್‌ನಲ್ಲಿ ಸಮೃದ್ಧಿ ಮಂಜುನಾಥ್ ಬರೆದುಕೊಂಡಿದ್ದಾರೆ.

ನಾಳೆಯ ಕೋರ್‌ ಕಮಿಟಿ ಸಭೆ ಬಳಿಕ ನಿರ್ಧಾರ

ಈ ಸಂಬಂಧ ನಾಳೆ (ಏಪ್ರಿಲ್‌ 30) ಜೆಡಿಎಸ್‌ ಕೋರ್‌ ಕಮಿಟಿ ಸಭೆ ಕರೆಯಲಾಗಿದ್ದು. ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲು ನಿರ್ಧಾರ ಮಾಡಲಾಗಿದೆ. ಈ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ ಬಳಿಕ ಉಚ್ಚಾಟನೆ ಕ್ರಮ ಕೈಗೊಳ್ಳಲು ತೀರ್ಮಾನ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Exit mobile version