ಹಾಸನ: ಇಲ್ಲಿನ ಬಿ.ಎಂ ರಸ್ತೆಯಲ್ಲಿರುವ ಪಬ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ರೌಡಿ ಶೀಟರ್ ರಾಖಿ ಅಲಿಯಾಸ್ ರಾಕೇಶ್ ಹಾಗೂ ವಿನಯ್ ಎಂಬ ಯುವಕನ ನಡುವೆ ಜುಲೈ 9ರಂದು ಗಲಾಟೆ ನಡೆದಿದ್ದು, ಅದು ಕೊಲೆಯಲ್ಲಿ ಅಂತ್ಯವಾಗಿದೆ.
ರೌಡಿ ಶೀಟರ್ ರಾಖಿ ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿಗಾಗಿ ಪಬ್‌ಗೆ ತನ್ನ ಪತ್ನಿ ಜತೆಗೆ ಬಂದಿದ್ದ. ಈ ವೇಳೆ ಪಾರ್ಟಿ ಮುಗಿಸಿ ಲಿಫ್ಟ್‌ನಲ್ಲಿ ಕೆಳಗಿಳಿಯುವಾಗ ರಾಖಿ ಪತ್ನಿಗೆ ಕೈ ತಾಗಿದ ವಿಚಾರವಾಗಿ ಮಾತಿನ ಚಕಮಕಿ ಆಗಿದೆ. ಪತ್ನಿ ಎದುರಿಗೆ ತನಗೆ ಆವಾಜ್ ಹಾಕಿ ಅವಮಾನ ಮಾಡಿದ್ದ ಯುವಕನ ಮೇಲೆ ಸಿಟ್ಟಿನಲ್ಲಿದ್ದ ರಾಖಿ ಅಂದು ಮನೆಗೆ ವಾಪಸ್ ಆಗಿದ್ದ. ಆದರೆ, ಮರುದಿನ ತನ್ನ ಸಹಚರರೊಂದಿಗೆ ವಿನಯ್‌ನನ್ನು ಭಾನುವಾರ (ಜು.10) ಬಲವಂತವಾಗಿ ಎಳೆದೊಯ್ದು ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಹಾಸನ ಹೊರ ವಲಯದ ಬಿಟ್ಟಗೌಡನಹಳ್ಳಿಯ ವಿನಯ್(17)ನನ್ನು ಕೊಂದು ಮೃತದೇಹವನ್ನು ಸಕಲೇಶಪುರ ತಾಲೂಕಿನ ಗುಂಡ್ಯ ಸಮೀಪದ ನದಿಗೆ ಹಂತಕರು ಎಸೆದು ಹೋಗಿದ್ದರು. ಘಟನೆ ಸಂಬಂಧ ರೌಡಿ ಶೀಟರ್ ರಾಖಿ, ಆತನ ಪತ್ನಿ ಸೇರಿ ಎಂಟು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ | ಬೆಂಗಳೂರು-ಹಾಸನ ಹೈವೇಯಲ್ಲಿ ಟಿಟಿಗೆ ಡಿಕ್ಕಿ ಹೊಡೆದ ಇನೋವಾ, ವಾಹನಗಳು ನಜ್ಜುಗುಜ್ಜು, ಇಬ್ಬರ ಸಾವು
ವಿಚಾರಣೆ ವೇಳೆ ಆರೋಪಿಗಳು ಕೊಟ್ಟ ಹೇಳಿಕೆ ಆಧಾರದ ಮೇಲೆ ಮೃತದೇಹ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಇತ್ತ ಮಗನನ್ನು ಅಪಹರಿಸಿ ಹಲ್ಲೆ ಮಾಡಿ ಕೊಂದಿರುವುದಾಗಿ ವಿನಯ್ ತಾಯಿ ಶೋಭಾ ದೂರು ನೀಡಿದ್ದಾರೆ. ನಾಪತ್ತೆ ಪ್ರಕರಣವನ್ನು ಈಗ ಕೊಲೆ ಕೇಸ್ ಆಗಿ ಪರಿವರ್ತಿಸಿ ಹಾಸನ ನಗರ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇತ್ತ ಕೊಲೆಗೂ ಮುನ್ನ ನಡೆದಿರುವ ಗಲಾಟೆಯ ವಿಡಿಯೊ ವೈರಲ್ ಆಗಿದೆ.
ಮೃತದೇಹ ಸಿಗುವ ಮೊದಲೇ ಆರೋಪಿಗಳ ಸೆರೆ
ಸಾಮಾನ್ಯವಾಗಿ ಕೊಲೆ ಕೇಸ್‌ಗಳಲ್ಲಿ ಮೊದಲು ಡೆಡ್ ಬಾಡಿ ಸಿಕ್ಕಿ, ನಂತರ ಆರೋಪಿಗಳನ್ನು ಪತ್ತೆ ಹಚ್ಚೋದು ಸಾಮಾನ್ಯ. ಆದರೆ, ಈ ಕೇಸ್‌ನಲ್ಲಿ ಮೊದಲು ಆರೋಪಿಗಳು ಸಿಕ್ಕಿಹಾಕಿಕೊಂಡಿದ್ದಾರೆ.
ಶಿರಾಡಿಘಾಟ್‌ನ ಅರಣ್ಯ ಪ್ರದೇಶದಲ್ಲಿ ಮೃತದೇಹ ಪತ್ತೆ
ಮಗ ಕಾಣೆಯಾಗಿರುವ ಬಗ್ಗೆ ವಿನಯ್ ತಾಯಿ ಶೋಭಾ ದೂರು ನೀಡಿದ್ದರು. ನಾಪತ್ತೆ ಕೊಲೆ ಕೇಸ್ ದಾಖಲಿಸಿದ್ದ ಪೊಲೀಸರು, ಹಿಂದಿನ ದಿನ ನಡೆದಿದ್ದ ಗಲಾಟೆ ಮಾಹಿತಿ ತಿಳಿದು ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಹತ್ಯೆ ವಿಚಾರ ಬಾಯಿಬಿಟ್ಟಿದ್ದರು. ಮೃತದೇಹ ಸಿಗುವ ಮೊದಲೇ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಆರೋಪಿಗಳು ನೀಡಿದ ಸುಳಿವಿನ ಮೇರೆಗೆ ಸೋಮವಾರವೇ ಶೋಧ ಕಾರ್ಯ ನಡೆಸಿದರೂ ಮೃತ ದೇಹ ಪತ್ತೆಯಾಗಿರಲಿಲ್ಲ. ಆದರೆ ಮಂಗಳವಾರ ಸಂಜೆ ಶಿರಾಡಿಘಾಟ್‌ನ ಗುಂಡ್ಯ ಮೀಸಲು ಅರಣ್ಯ ಪ್ರದೇಶದಲ್ಲಿ ವಿನಯ್ ಮೃತದೇಹ ಪತ್ತೆಯಾಗಿದೆ. ರೌಡಿಶೀಟರ್ ಹಾಸನದಲ್ಲಿ ವಿನಯ್‌ನನ್ನು ಕೊಲೆ ಮಾಡಿ ಬಳಿಕ 80 ಕಿ.ಮೀ ಮೃತದೇಹ ಸಾಗಿಸಿ ಪ್ರಪಾತದಲ್ಲಿ ಬಿಸಾಡಿದ್ದರು.
ಇದನ್ನೂ ಓದಿ | ಹೀಗೂ ಉಂಟೇ! ಹಾಸನ ಪೊಲೀಸರಿಂದ ಎರಡು ಹಸುಗಳ ಬಂಧನ