Site icon Vistara News

Basavaraj Bommai: ಸುಳ್ಳಿನ ಸುಳಿಯಲ್ಲಿ ಕಾಂಗ್ರೆಸ್ ಪಕ್ಷ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪ

#image_title

ಹಾಸನ: ಕಾಂಗ್ರೆಸ್ ನವರ ಬೂಟಾಟಿಕೆ ಮಾತು, ಸುಳ್ಳು ಹೇಳುವ ಚಾಳಿಯಿಂದ ಸುಳ್ಳಿನ ಸುಳಿಯಲ್ಲಿ ಸಿಲುಕಿದ್ದಾರೆ. ತಮ್ಮ ಕಾಲದ ಭ್ರಷ್ಟಾಚಾರಗಳನ್ನು. ಜಾತಿಗಳನ್ನು ಒಡೆಯುವ ಕೆಲಸವನ್ನು ಮಾಡಿದ್ದಾರೆ. ಭ್ರಷ್ಟ ಕಾಂಗ್ರೆಸನ್ನು ಶಾಶ್ವತವಾಗಿ ಜನರು ಮನೆಗೆ ಕಳಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಹಾಸನ ಜಿಲ್ಲೆಯ ಬೇಲೂರಿನಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಸಾರ್ವಜನಿಕ ಕಾರ್ಯಕ್ರದಲ್ಲಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರೊಂದಿಗೆ ಭಾಗವಹಿಸಿ ಮಾತನಾಡಿದರು.

ಹಾಸನ ಬಹಳ ವರ್ಷಗಳಿಂದ ಒಂದೇ ಪಕ್ಷದ ಹಿಡಿತದಲ್ಲಿದ್ದು, ಯಾವುದೇ ಅಭಿವೃದ್ಧಿಯಾಗುತ್ತಿಲ್ಲ. 3 ವರ್ಷಗಳಿಂದ ಭಾಜಪ ಸರ್ಕಾರದ ಆಡಳಿತವನ್ನು ಜನರು ನೋಡಿದ್ದಾರೆ. ಹಲವು ವರ್ಷಗಳ ಸಮಸ್ಯೆಗಳನ್ನು ಕಗ್ಗಂಟಾಗಿಸಿ, ರಾಜ್ಯದ ಪ್ರಗತಿಯನ್ನು ಕುಂಠಿತಗೊಳಿಸಲಾಗಿತ್ತು. ಈ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಕಮಲ ಅರಳಿಸಬೇಕಿದೆ. ಭಾರತೀಯ ಜನತಾ ಪಕ್ಷ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿಣ ಹಿಡಲಿರುವ ವಿಶ್ವಾಸ ನಮಗಿದೆ ಎಂದರು.

ನಮ್ಮ ಸರ್ಕಾರ ಸಾವಿರಾರು ಕೋಟಿ ರೂ.ಗಳ ಅನುದಾನವನ್ನು ನೀಡಿ, ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿಯನ್ನು ಪ್ರಗತಿಯಲ್ಲಿರಿಸಲಾಗಿದೆ. ಭಾಜಪ ಪಕ್ಷ , ಬೂತ್ ಮಟ್ಟದಿಂದ ಹಿಡಿದು ರಾಷ್ಟ್ರಮಟ್ಟದವರೆಗೆ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷ. ವಿಶ್ವದಲ್ಲಿರುವ ಅತಿ ದೊಡ್ಡ ಪಕ್ಷ, ದೊಡ್ಡ ಸಂಘಟಿತ ಪಕ್ಷವಾಗಿದೆ. ರಾಷ್ಟ್ರ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿ, ಪಕ್ಷದ ಧ್ಯೇಯಗಳನ್ನು ಪ್ರತಿಪಾದಿಸಿ, ದೇಶದಲ್ಲಿ ಸದೃಢವಾದಂತಹ ರಾಜಕೀಯ ವಾತಾವರಣವನ್ನು ಮೂಡಿಸಲು ಭಾಜಪ ರಾಷ್ಟ್ರೀಯ ಅಧ್ಯಕ್ಷರಾದ ನಡ್ಡಾ ಅವರು ಮಹತ್ವದ ಪಾತ್ರ ವಹಿಸಿದ್ದಾರೆ ಎಂದರು.

ಬೇಲೂರು-ಹಳೆಬೀಡು ವಿಶ್ವ ಪಾರಂಪರಿಕ ತಾಣ

ಬೇಲೂರು-ಹಳೆಬೀಡು ವಿಶ್ವ ಪಾರಂಪರಿಕ ತಾಣವಾಗಿದ್ದು, ಯುನೆಸ್ಕೋ ದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರಿಸಲು ವಿಶೇಷ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಕೆಲವೇ ದಿನಗಳಲ್ಲಿ ಯುನೆಸ್ಕೋ ನಿಂದ ಗುರುತಿಸಲ್ಪಟ್ಟ ಪ್ರವಾಸಿ ತಾಣವಾಗಲಿದೆ. ಇದರಿಂದ ಇಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿಗೊಂಡು, ತನ್ಮೂಲಕ ಬೇಲೂರಿನ ಸಮಗ್ರ ಅಭಿವೃದ್ಧಿ ಆಗಲಿದೆ ಎಂದರು.

ಇದನ್ನೂ ಓದಿ: Beluru Temple : ಬೇಲೂರು ಚನ್ನಕೇಶವ ದೇಗುಲ ಶೀಘ್ರವೇ ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಗೆ: ಬೊಮ್ಮಾಯಿ

ಅಡಿಕೆ ಸಂಶೋಧನಾ ಕೇಂದ್ರಕ್ಕೆ 25 ಕೋಟಿ ರೂ.

ಇಲ್ಲಿನ ಕಾಫಿ ಬೆಳೆಗಾರರ ಭೂಮಿಯ ಬಗ್ಗೆ ಆತಂಕವಿತ್ತು. ಬೆಳೆಗಾರರಿಗೆ ಭೂಮಿಯನ್ನು ಲೀಸ್ ಮೇಲೆ ನೀಡಲು ಅಧಿಸೂಚನೆ ನೀಡಿ ಕಾನೂನು ರೂಪಿಸಲಾಗುತ್ತಿದ್ದು, ಹಲವು ಕಾಫಿ ಬೆಳೆಗಾರರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ. ಅಡಿಕೆ ಬೆಳೆಗಾರರಿಗೆ ಬಿಳಿಚುಕ್ಕೆ ರೋಗ ಬಂದಾಗ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಈ ಬಾರಿಯ ಆಯವ್ಯಯದಲ್ಲಿ ಅಡಿಕೆ ಬಗ್ಗೆ ಸಂಶೋಧನೆ ನಡೆಸಲು ಅಡಿಕೆ ಸಂಶೋಧನಾ ಕೇಂದ್ರಕ್ಕೆ 25 ಕೋಟಿ ರೂ.ಗಳ ಅನುದಾನ ಮೀಸಲಿರಿಸಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಸಿಂಗ್, ಸಿ.ಟಿ.ರವಿ, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಸಚಿವರಾದ ಗೋಪಾಲಯ್ಯ ಮತ್ತಿತರರು ಹಾಜರಿದ್ದರು.

Exit mobile version