ಬೆಂಗಳೂರು: ಹಾಸನ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ( JDS Hassan) ಟಿಕೆಟ್ ನೀಡುವ ವಿಚಾರ ಇನ್ನೂ ಕಗ್ಗಂಟಾಗಿಯೇ ಉಳಿದಿದ್ದು, ಟಿಕೆಟ್ ಆಕಾಂಕ್ಷಿ ಭವಾನಿ ರೇವಣ್ಣ ಅವರು ನೇರವಾಗಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರನ್ನೇ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಹಾಸನದಲ್ಲಿ ಭವಾನಿ ರೇವಣ್ಣಗೆ ಟಿಕೆಟ್ ನೀಡುವುದಿಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಈಗಾಗಲೆ ಎರಡು ಬಾರಿ ಹೇಳಿದ್ದಾರೆ. ಆದರೂ ಅಂತಿಮ ನಿರ್ಧಾರ ಎಚ್.ಡಿ. ದೇವೇಗೌಡರಿಗೆ ಬಿಡಲಾಗಿದೆ. ಹಾಸನದಲ್ಲಿ ಮಾಜಿ ಶಾಸಕ ದಿವಂಗತ ಎಚ್.ಎಸ್. ಪ್ರಕಾಶ್ ಪುತ್ರ ಎಚ್.ಪಿ. ಸ್ವರೂಪ್‌ಗೆ ಟಿಕೆಟ್ ನೀಡಬೇಕು ಎಂದು ಜೆಡಿಎಸ್‌ನ ಒಂದು ಗುಂಪು ಪ್ರಬಲ ಪೈಪೋಟಿ ನಡೆಸುತ್ತಿದೆ.
ಇದೀಗ ಎಚ್.ಡಿ. ದೇವೇಗೌಡರನ್ನೆ ಭೇಟಿಯಾಗಿರುವ ಭವಾನಿ ರೇವಣ್ಣ, ಇಂದಿನಿಂದ ಹಾಸನದಲ್ಲಿ ಪಂಚರತ್ನ ರಥಯಾತ್ರೆ ನಡೆಯುತ್ತಿದೆ. ಇನ್ನೂ ಹಾಸನ ಟಿಕೆಟ್ ವಿಚಾರ ಬಗೆಹರಿದಿಲ್ಲ. ಮಾರ್ಚ್ 11ರಂದು ಜೆಡಿಎಸ್‌ನ ಎರಡನೇ ಪಟ್ಟಿ ಬಿಡುಗಡೆಯಾಗಲಿದ್ದು, ಈ ಹೊತ್ತಿಗೆ ನಿರ್ಧಾರ ಮಾಡಬೇಕಿದೆ.
ಇದನ್ನೂ ಓದಿ: JDS Politics: ಮುಗಿಯದ ಹಾಸನ ಜೆಡಿಎಸ್ ಟಿಕೆಟ್ ಪ್ರಹಸನ; ಭವಾನಿ ರೇವಣ್ಣಗೆ ಟಿಕೆಟ್ ಘೋಷಿಸುವಂತೆ ಕಾರ್ಯಕರ್ತರ ಪ್ರತಿಭಟನೆ
ನನಗ್ಯಾಕೆ ಟಿಕೆಟ್ ನೀಡಬಾರದು? ಎಂಬ ಪ್ರಶ್ನೆಯನ್ನು ದೇವೇಗೌಡರ ಮುಂದೆ ಭವಾನಿ ಇಟ್ಟಿದ್ದಾರೆ ಎನ್ನಲಾಗಿದೆ. ಕಾರ್ಯಕರ್ತರ ಬಲ ಮತ್ತು ಸ್ವಂತಬಲದಿಂದ ಚುನಾವಣಾ ಎದುರಿಸುತ್ತೇನೆ. ಪಕ್ಷದ ಗೆಲುವಿಗೆ ಕಾರಣವಾಗುತ್ತೇನೆ. ಮಹಿಳಾ ಮತದಾರರು ಸೆಳೆಯಲು ಪೂರಕವಾಗುತ್ತದೆ. ಪ್ರೀತಂಗೌಡ ಎದುರು ಪ್ರಬಲ ಪೈಪೋಟಿ ನೀಡಲು ಸಿದ್ದವಾಗಿದ್ದೇನೆ. ಹಾಸನದಲ್ಲಿ ಕುಟುಂಬದ ಸ್ವಪ್ರತಿಷ್ಟೆಗೆ ಅವಮಾನವಾಗದಂತೆ ನಡೆದುಕೊಳ್ಳುವಾಗಿ ಭವಾನಿ ರೇವಣ್ಣ ತಿಳಿಸಿದ್ದಾರ ಎಂದು ಮೂಲಗಳು ಹೇಳಿವೆ.
ಈ ಕುರಿತು ಎಚ್.ಡಿ. ದೇವೇಗೌಡರು ಶುಕ್ರವಾರ ಅಥವಾ ಶನಿವಾರ ತೀರ್ಮಾನ ಪ್ರಕಟಿಸುವ ಸಾಧ್ಯತೆಯಿದೆ.