Site icon Vistara News

BJP-JDS Alliance : ಮೈತ್ರಿಗೆ ಪ್ರೀತಂ ಗೌಡ ತೀವ್ರ ವಿರೋಧ; ಜೆಡಿಎಸ್‌ಗೆ ಮತ ಹಾಕಿ ಅಂತ ನಾನು ಕೇಳೋದು ಸಾಧ್ಯಾನಾ?

preetham Gowda

ಹಾಸನ: ಜೆಡಿಎಸ್‌ನವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ (Parliament Election 2024) ಒಂದು ಸೀಟು ಕೂಡಾ ಗೆಲ್ಲುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಅವರ ಕಾರ್ಯಕರ್ತರನ್ನು ಉಳಿಸಿಕೊಳ್ಳುವ ಸ್ವಾರ್ಥದಿಂದ ಬಿಜೆಪಿ ಜತೆಗೆ ಮೈತ್ರಿಗೆ ಮುಂದಾಗಿದ್ದಾರೆ. ಇದನ್ನು ನಾನು ಖಂಡಿತಾ ಒಪ್ಪುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಹಾಸನದ ಮಾಜಿ ಶಾಸಕ ಪ್ರೀತಮ್‌ ಗೌಡ (Preetham Gowda). ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಚ್‌.ಡಿ ರೇವಣ್ಣ, ಎಚ್‌.ಡಿ ಕುಮಾರಸ್ವಾಮಿ, ಎಚ್‌.ಪಿ ಸ್ವರೂಪ್‌ ಎಂಬ ಜೆಡಿಎಸ್‌ನ ತ್ರಿಮೂರ್ತಿಗಳ ವಿರುದ್ಧ ಸೆಣಸಾಡಿ ಸೋತಿರುವ ಪ್ರೀತಂ ಗೌಡ ಅವರಿಗೆ ಈಗ ಮತ್ತೆ ಅವರ ಜತೆಗೆ ಹೋಗಬೇಕಾ ಎಂಬ ಆಕ್ರೋಶ ಮಡುಗಟ್ಟಿದೆ. ಹೀಗಾಗಿ ಅವರು ಬಿಜೆಪಿ ಮತ್ತು ಜೆಡಿಎಸ್‌ನ ಮೈತ್ರಿ (BJP-JDS alliance) ಪ್ರಸ್ತಾಪವನ್ನು ವಿರೋಧಿಸಿದ್ದಾರೆ.

ಬುಧವಾರ ಹಾಸನದಲ್ಲಿ ಮಾತನಾಡಿದ ಅವರು, ʻʻಮೈತ್ರಿ ಬಗ್ಗೆ ಬಿಜೆಪಿಯ ಯಾವುದೇ ಮುಖಂಡರು‌ ಅಥವಾ ನಿರ್ಧಾರ ತೆಗೆದುಕೊಳ್ಳುವ ಹಂತದಲ್ಲಿರುವ ನಾಯಕರಾರೂ ಮಾತನಾಡುತ್ತಿಲ್ಲ. ಮೈತ್ರಿ ಅಂತಾ ಹೇಳಿರೋದು ಯಾರು ಅಂತಾ ಸ್ವಲ್ಪ ಗಮನಿಸಬೇಕು. ಯಾರಿಗೋ ಒಬ್ಬರಿಗೆ ಕಷ್ಟ ಇದೆ, ಆ ಕಷ್ಟದಿಂದ ಪರಿಹಾರ ಆಗೋದಕ್ಕೆ ಮೈತ್ರಿ ಅಂತಾ ಅನೌನ್ಸ್ ಮಾಡ್ತಾರೆʼʼ ಎಂದು ಜೆಡಿಎಸ್‌ ಬಗ್ಗೆ ಹೇಳಿದರು.

ಅವರು ಬರುತ್ತಿರುವುದು ಮೋದಿಗಾಗಿ ಅಲ್ಲ, ಸ್ವಾರ್ಥಕ್ಕಾಗಿ

ʻʻನರೇಂದ್ರ ಮೋದಿ ಪ್ರಧಾನಿ ಆಗಲಿ ಅಂತಾ ತಪಸ್ಸು ಮಾಡುತ್ತಿರುವವರಲ್ಲಿ ನಾನೂ ಒಬ್ಬ. ಮೋದಿವರು ಪ್ರಧಾನಿ ಆಗಲಿ ಅಂತಾ ಬಂದ್ರೆ ಎಲ್ಲರಿಗೂ ಸ್ವಾಗತ ಇದೆ. ಆದರೆ, ನಮ್ಮ ಕಾರ್ಯಕರ್ತರನ್ನ ಉಳಿಸಿಕೊಳ್ಳಬೇಕು. ನಮ್ಮ‌ಪಕ್ಷ ಉಳಿಸಿಕೊಳ್ಳಬೇಕು ಅಂತಾ ಮೈತ್ರಿಯನ್ನು ಪ್ರಸ್ತಾಪ‌ ಮಾಡಿ ಮಾತಾಡಿದ್ದಾರೆ. ಅವರ ಕಾರ್ಯಕರ್ತರನ್ನು ಅವರ ಪಕ್ಷವನ್ನ ಉಳಿಸಿಕೊಳ್ಳೋದಕ್ಕೆ ಮೈತ್ರಿ ಅನಿವಾರ್ಯ ಇದೆ ಎಂದಾದರೆ ಆ ಮೈತ್ರಿಯ ಅವಶ್ಯಕತೆ ಬಿಜೆಪಿಗೆ ಇಲ್ಲʼʼ ಎಂದು ಪ್ರತಿಪಾದಿಸಿದ್ದಾರೆ ಪ್ರೀತಮ್‌ ಗೌಡ.

ʻʻಮೋದಿಯವರು ಪ್ರಧಾನಿ ಆಗಬೇಕು ಅಂತಾ ಬಂದ್ರೆ ಅವರು ನಮ್ಮ ಶತ್ರುಗಳಾದ್ರೂ ಅವರನ್ನ ಅಪ್ಪಿಕೊಳ್ತೇವೆ. ಕಾರ್ಯಕರ್ತರನ್ನ ಉಳಿಸಿಕೊಳ್ಳಬೇಕು ಅಂತಾ ಬಂದ್ರೆ ಅದು ಮತ್ಲಬಿ ರಾಜಕಾರಣ ಆಗುತ್ತದೆ. ಆ ಮತ್ಲಬಿ ರಾಜಕಾರಣದ ಅವಶ್ಯಕತೆ ಬಿಜೆಪಿಗೆ ಇಲ್ಲʼʼ ಎಂದು ಪ್ರೀತಮ್‌ ಗೌಡ ಹೇಳುತ್ತಾರೆ.

ಪ್ರೀತಂ ಗೌಡ ಅವರ ಕೆಲವು ಕಿಡಿ ನುಡಿಗಳು ಇಲ್ಲಿವೆ

  1. ಅವರು ಅದೇ ಅಜೆಂಡಾ ಇಟ್ಕೊಂಡು ಬಂದ್ರೆ ಅದನ್ನ ರಾಜ್ಯದ ಯಾವುದೇ ಬಿಜೆಪಿ ಕಾರ್ಯಕರ್ತ ಒಪ್ಪೋದಿಲ್ಲ. ಅದರಲ್ಲಿ ಪ್ರೀತಂಗೌಡ ಕೂಡಾ ಒಬ್ಬ, ಕಾರ್ಯಕರ್ತರ ಭಾವನೆಯನ್ನು ನಿಮ್ಮ ಜೊತೆ ತಿಳಿಸ್ತಾ ಇದ್ದೇನೆ.
  2. 28 ಸ್ಥಾನಗಳಲ್ಲಿಯೂ ಬಿಜೆಪಿ ನಿಲ್ಲಲಿ, ನಿಮಗೆ ಸಹಾಯ ಮಾಡ್ತೀವಿ ಎಂಬ ಉದಾರತೆಯನ್ನು ಇಟ್ಕೊಂಡು ಬಂದರೆ ಅದಕ್ಕೆ ಒಪ್ಪುತ್ತೇವೆ.
  3. ನಮ್ಮ ಪಕ್ಷ ಕುಟುಂಬ ರಾಜಕಾರಣದ ವಿರುದ್ಧ ಹೋರಾಟ ಮಾಡ್ತಾ ಇದೆ. ಹಾಸನದಲ್ಲಿ ಯಾರು ಅಭ್ಯರ್ಥಿ ಆಗ್ತಾರೆ, ಅವರ ಕುಟುಬದವರು ಅಭ್ಯರ್ಥಿ ಆಗ್ತಾರೆ. ನಾವು ಕುಟುಂಬ ರಾಜಕಾರಣದ ವಿರುದ್ಧ ಮಾತನಾಡಲು ಸಾಧ್ಯವೇ?
  4. ಅವರು ಮೋದಿ‌ ಸಾಹೇಬ್ರು ಪ್ರಧಾನಿ ಆಗಬೇಕು ಅಂತಾ ಬಂದಿದ್ರೆ ಬಿಡಪ್ಪಾ ಬದಲಾಗಿದ್ದಾರೆ ಅಂತಾ ಒಪ್ಪಿಕೊಳ್ತಾ ಇದ್ದೆವು. ಅವರು ಕಾರ್ಯರ್ತರನ್ನು, ಪಕ್ಷವನ್ನು ಉಳಿಸಿಸಿಕೊಳ್ತೇವೆ ಅಂದ್ರೆ ನಾನು ಬಿಜೆಪಿಯ ಒಬ್ಬ ನಿಷ್ಠಾವಂತ ಕಾರ್ಯಕರ್ತನಾಗಿ ಜೆಡಿಎಸ್ ಪಕ್ಷ ಉಳಿಸೋದಕ್ಕೆ ನಾವ್ಯಾಕೆ ಸಹಕಾರ ಮಾಡಬೇಕು?
  5. ನಾಲ್ಕು ತಿಂಗಳ‌ ಹಿಂದೆ ಬಂದು ನಮ್ಮ‌ ವಿರುದ್ಧ ಚುನಾವಣೆ ಮಾಡಿದವರು ಅವರು. ಈಗ ನಮ್ಮ ಪಕ್ಷ ಉಳಿಸಿಕೊಳ್ಳಬೇಕು, ಬಿಜೆಪಿಯವರೆಲ್ಲಾ ನಮಗೆ ಓಟ್ ಹಾಕ್ತಾರೆ ಅಂತಾ ಯೋಚನೆ ಮಾಡಿದ್ರೆ ಆಗುತ್ತಾ?
  6. ನೆನಪಿರಲಿ, ರಾಜಕಾರಣ ಮ್ಯಾತ್ ಮೆಟಿಕ್ಸ್ ಅಲ್ಲ ಕೆಮಿಸ್ಟ್ರಿ ಅನ್ನೋದು ನನಗಿಂತ ಹೆಚ್ಚಾಗಿ ಅವರಿಗೆ ಗೊತ್ತಿದೆ. ಆ ಕೆಮಿಸ್ಟ್ರಿ ಯಾವುದೇ ಕಾರಣಕ್ಕೂ ಹಾಸನದಲ್ಲಿ ಮಾತ್ರ ನಡೆಯಲ್ಲ.
  7. ಪ್ರೀತಂ ಗೌಡನನ್ನು ಜಿಲ್ಲೆಯಿಂದ ಓಡಿಸಿ ಅಂತಾ ಹೇಳುದ್ರೋ, ಪ್ರೀತಂಗೌಡನನ್ನ ರಾಜಕೀಯವಾಗಿ‌ ಮುಗಿಸಿ ಅಂತಾ ಹೇಳಿದ್ರೋ ಒಂದು ಹೆಜ್ಜೆ ಮುಂದೆ ಹೋಗಿ ರಾಜಕಾರಣನೇ ಮಾಡಬಾರದು ಅನ್ನೋ ರೀತಿ ಹೇಳಿದ್ರೋ ಅಂತವರನ್ನು ಗೆಲ್ಲಿಸಿ ಅಂತ ಕೇಳೋ ಮನಸ್ಥಿತಿ ಹೇಗೆ ಬರುತ್ತದೆ. ಆ ಮನಸ್ಥಿತಿ‌ ಬರೋದಕ್ಕೆ ಸಾಧ್ಯವೇ ಇಲ್ಲ.
  8. ಅವರು ಅಪ್ಪಿ ತಪ್ಪಿ ಒಂದೋ ಎರಡೋ ಸೀಟ್ ಗೆಲ್ತೀವಿ ಅಂತಿದ್ದಿದ್ರೆ ಮೈತ್ರಿಗೆ ಬರ್ತಾ ಇರಲಿಲ್ಲ. ಒಂದು ಸೀಟು ಗೆಲ್ಲೋದು ಕಷ್ಟ ಅನ್ನೋ ಕಾರಣಕ್ಕೆ ಇವತ್ತು ಬಿಜೆಪಿ ಜೊತೆಗೆ ಮೈತ್ರಿ ಅಂತೇಳಿ ಯೋಚನೆ ಮಾಡೋ ಪರಿಸ್ಥಿತಿಗೆ ಬಂದಿದ್ದಾರೆ.

ಇದನ್ನೂ ಓದಿ: BJP JDS alliance : ಬಿಜೆಪಿ – ಜೆಡಿಎಸ್‌ ಮೈತ್ರಿ ಬಗ್ಗೆ ಉಲ್ಟಾ ಹೊಡೆದ ಯಡಿಯೂರಪ್ಪ; ಊಹೆ ಮಾಡಿದ್ದಾರಂತೆ!

Exit mobile version