ಹಾಸನ: ತಾಯಿಯೊಬ್ಬರು ಜನ್ಮ ನೀಡಿದ ಮರು ದಿನವೇ ಗಂಡು ಮಗುವನ್ನು (Boy Child sold) ಮಾರಾಟ ಮಾಡಿದ ಘಟನೆ ಹಾಸನದಲ್ಲಿ ನಡೆದಿದೆ. ಆಶಾ ಕಾರ್ಯಕರ್ತೆಯೇ (Asha worker) ಈ ವ್ಯವಹಾರದ ಡೀಲರ್ ಆಗಿದ್ದು (Child Selling) ಆಕೆ ಮತ್ತು ಮಗುವಿನ ತಾಯಿ ಸೇರಿದಂತೆ ಐವರನ್ನು ಬಂಧಿಸಲಾಗಿದೆ.
ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಬ್ಯಾಕರವಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ತನಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆಂದು ಹುಟ್ಟಿದ ಮಾರನೇ ದಿನವೇ ಗಂಡುಮಗು ಮಾರಾಟ ಮಾಡಿದ್ದಾಳೆ.
ಸಕಲೇಶಪುರ ತಾಲ್ಲೂಕಿನ ಹೆತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮನೀಡಿದ್ದ ಮಹಿಳೆ ಗಿರಿಜಾ ಅವರ ಮಗುವನ್ನು ಚಿಕ್ಕಮಗಳೂರಿನ ಉಷಾ ಎಂಬ ಮಹಿಳೆಗೆ ಮಾರಾಟ ಮಾಡಿರುವ ಆರೋಪ ಕೇಳಿಬಂದಿದೆ. ಘಟನೆ ಸಂಬಂಧ ಮಗುವಿನ ತಾಯಿ ಗಿರಿಜಾ, ಆಶಾ ಕಾರ್ಯಕರ್ತೆ ಸುಮಿತ್ರಾ, ಮಗುವನ್ನು ಖರೀದಿಸಿದ ಮಹಿಳೆ ಉಷಾ, ಮಗು ಕೊಡಲು ಪ್ರೇರಣೆ ನೀಡಿದ ಆರೋಪದಲ್ಲಿ ಶ್ರೀಕಾಂತ್ ಹಾಗು ಸುಬ್ರಹ್ಮಣ್ಯ ಎಂಬವರನ್ನು ಬಂಧಿಸಲಾಗಿದೆ.
ಗಿರಿಜಾ ಅವರು 2023ರ ನವೆಂಬರ್ 15ರಂದು ಮಗುವಿಗೆ ಜನ್ಮ ನೀಡಿದ್ದರು. ಮಾರನೇ ದಿನ ಅಂದರೆ ನವೆಂಬರ್ 16ರಂದು ಚಿಕ್ಕಮಗಳೂರು ಮೂಲದ ಉಷಾ ಎಂಬ ಮಹಿಳೆಗೆ ಮಗು ಹಸ್ತಾಂತರ ಮಾಡಲಾಗಿದೆ. ಮಗುವನ್ನು ಅನಧಿಕೃತವಾಗಿ ಹಸ್ತಾಂತರ ಮಾಡಿರುವ ಬಗ್ಗೆ ಮಕ್ಕಳ ರಕ್ಷಣ ಘಟಕಕ್ಕೆ ದೂರು ಬಂದಿತ್ತು. ಈ ದೂರು ಆಧರಿಸಿ ಪ್ರಕರಣ ಬಯಲಿಗೆಳೆದ ಮಕ್ಕಳ ರಕ್ಷಣಾ ಅಧಿಕಾರಿ ಕಾಂತರಾಜ್ ನೇತೃತ್ವದ ತಂಡ ಈಗ ಪೊಲೀಸರಿಗೆ ದೂರು ನೀಡಿದೆ.
ತಮಗೆ ಈಗಾಗಲೆ ಇಬ್ಬರು ಗಂಡು ಮಕ್ಕಳಿರುವ ಕಾರಣ ಮಗುವನ್ನು ಬೇರೆಯವರಿಗೆ ನೀಡಿದ್ದಾಗಿ ಮಹಿಳೆ ತಿಳಿಸಿದ್ದಾರೆ. ಆದರೆ, ಕೆಲವರ ಮಧ್ಯಪ್ರವೇಶದಿಂದ ಮಗುವನ್ನು ಮಾರಾಟ ಮಾಡಿದ ಬಗ್ಗೆ ಗಂಭೀರ ಆರೋಪ ಕೇಳಿಬಂದಿತ್ತು. ಅದರಲ್ಲೂ ತಾಯಿ, ಮಗುವಿನ ರಕ್ಷಣೆ ಬಗ್ಗೆ ಗಮನಹರಿಸಬೇಕಿದ್ದ ಆಶಾ ಕಾರ್ಯಕರ್ತೆಯಿಂದಲೇ ಕಾನೂನು ಉಲ್ಲಂಘನೆಗೆ ಬೆಂಬಲ ಸಿಕ್ಕಿರುವುದು ಗಂಭೀರವಾದ ಆರೋಪವಾಗಿದೆ.
ಜನವರಿ 2ರಂದು ಬಂಧ ಅಧಿಕೃತ ಮಾಹಿತಿ ಆಧರಿಸಿ ಮಕ್ಕಳ ರಕ್ಷಣಾ ಅಧಿಕಾರಿ ಕಾಂತರಾಜ್ ಅವರು ಪೊಲೀಸರಿಗೆ ದೂರು ನೀಡಿದ್ದರು. ಕೇಸು ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ತಾಯಿ ಸೇರಿದಂತೆ ಐವರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: Child Trade : ಓದಿದ್ದು ಬರೀ SSLC, ಆದ್ರೆ ಇವನು ವೃತ್ತಿಯಲ್ಲಿ ಡಾಕ್ಟರ್!
ಮಗುವಿಗೆ ಹಾಸನ ಮಕ್ಕಳ ರಕ್ಷಣಾ ಘಟಕದಲ್ಲಿ ಆಶ್ರಯ ನೀಡಲಾಗಿದೆ. ಇನ್ನು ಮಗುವನ್ನು ಏನು ಮಾಡಲಾಗುತ್ತದೆ ಎಂಬ ಬಗ್ಗೆ ತೀರ್ಮಾನ ಆಗಬೇಕಾಗಿದೆ. ಸಕಲೇಶಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಯಾವುದೇ ಮಗುವನ್ನು ನೇರವಾಗಿ ಒಬ್ಬರಿಂದ ಇನ್ನೊಬ್ಬರಿಗೆ ಮಾರಾಟ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ದಾನ ಮಾಡಲು ಅವಕಾಶವಿದೆಯಾದರೂ ಅದಕ್ಕೆ ಕಾನೂನು ಪ್ರಕಾರ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಯಾರ ಮಗುವನ್ನು ಯಾರಿಗೆ ದಾನ ಮಾಡಲಾಗಿದೆ ಎಂಬ ಅಂಶ ಕೊಟ್ಟವರಿಗೂ ತೆಗೆದುಕೊಂಡವರಿಗೂ ತಿಳಿಯುವುದಿಲ್ಲ. ಆದರೆ, ಇಲ್ಲಿ ನೇರವಾಗಿ ಮಾರಾಟ ಮಾಡಿದ್ದು ಅಪರಾಧವಾಗಿದೆ.