ಹಾಸನ: ಮೀನುಬೇಟೆ ವೇಳೆ ಯಾರೋ ಹಾರಿಸಿದ ಗುಂಡು ತಾಗಿ ಯುವಕನ ಹತ್ಯೆಯಾಗಿದೆ ಎಂದು ನಾಟಕವಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಉದ್ದೇಶಪೂರ್ವಕವಾಗಿಯೇ ಗುಂಡು ಹಾರಿಸಿ ಹತ್ಯೆ ಮಾಡಿದ್ದ ಕೇಸನ್ನು ಪೊಲೀಸರು ಬೇಧಿಸಿದ್ದಾರೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ತಂಬಲಗೇರಿ ಬಳಿ ಘಟನೆ ನಡೆದಿತ್ತು. ನವೀನ್ (39) ಗುಂಡಿನ ದಾಳಿಗೆ ಬಲಿಯಾಗಿದ್ದ. ಜನವರಿ 9ರಂದು ಮೀನು ಹಿಡಿಯಲು ಹೋದಾಗ ನವೀನ್ ಹತ್ಯೆಯಾಗಿ, ಜತೆಗಿದ್ದ ಇಬ್ಬರಿಗೆ ಗಾಯವಾಗಿತ್ತು. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದ ನಾಗರಾಜ ಹಾಗೂ ಅನಿಲ್, ಹಳೇ ದ್ವೇಷದ ಹಿನ್ನೆಲೆಯಲ್ಲಿ ನವೀನ್‌ನನ್ನು ಗುಂಡಿಕ್ಕಿ ಕೊಂದಿದ್ದುದು ಪತ್ತೆಯಾಗಿದೆ.
ಇದಕ್ಕೂ ಮುನ್ನ ನವೆಂಬರ್ 30ರಂದು ನವೀನ್ ತನ್ನ ಟ್ರ್ಯಾಕ್ಟರ್‌ನಲ್ಲಿ ಮರಳು ಸಾಗಣೆ ಮಾಡುತ್ತಿದ್ದ ವೇಳೆ ಪೊಲೀಸರು ಅದನ್ನು ಸೀಝ್ ಮಾಡಿದ್ದರು. ನಾಗರಾಜನೇ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ಇಬ್ಬರಿಗೂ ಆಗಾಗ್ಗೆ ಜಗಳ ನಡೆಯುತ್ತಿತ್ತು. ನಾಗರಾಜ್‌ನ ಒಂದು ಕಾಲು ಸ್ವಾಧೀನ ಕಳೆದುಕೊಂಡಿದ್ದು, ಇನ್ನೊಂದು ಕಾಲು ಮುರಿಯುವೆ ಎಂದು ನವೀನ್ ಬೆದರಿಕೆ ಹಾಕಿದ್ದ. ಅಲ್ಲದೆ ಇಸ್ಪೀಟ್ ಆಡುವ ವೇಳೆಯೂ ಇವರಿಬ್ಬರ ನಡುವೆ ಜಗಳ ನಡೆಯುತ್ತಿತ್ತು. ಈ ಎಲ್ಲ ದ್ವೇಷದಿಂದ ನವೀನ್‌ನನ್ನು ಮುಗಿಸಲು ನಾಗರಾಜ್ ಸ್ಕೆಚ್ ಹಾಕಿದ್ದ.
ನವೆಂಬರ್ 9ರ ರಾತ್ರಿ ನವೀನನಿಗೆ ಕರೆ ಮಾಡಿ ಆತನಿರುವ ಜಾಗದ ಮಾಹಿತಿ ಪಡೆದುಕೊಂಡಿದ್ದ. ಆತ ಮೀನು ಹಿಡಿಯುತ್ತಿದ್ದ ಜಾಗಕ್ಕೆ ಅನಿಲ್ ಜೊತೆ ನಾಗರಾಜು ಬಂದಿದ್ದು, ನವೀನ್ ಮೇಲೆ ಗುಂಡು ಹಾರಿಸಿದ್ದ. ಸ್ಥಳದಲ್ಲಿಯೇ ನವೀನ್ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದರು. ಪೊಲೀಸರ ದಾರಿ ತಪ್ಪಿಸಲು ಗಾಯಾಳುಗಳನ್ನು ಇವನೇ ಆಸ್ಪತ್ರೆಗೆ ದಾಖಲಿಸಿದ್ದ. ಪೊಲೀಸರ ತನಿಖೆಯಿಂದ ಹತ್ಯೆ ಕಾರಣ ಬಯಲಾಗಿದೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಗನ್ ಹಾಗೂ ಕಾಟ್ರೇಜ್ ವಶಪಡಿಸಿಕೊಳ್ಳಲಾಗಿದೆ. ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು.