Site icon Vistara News

Dharma Dangal:‌ ಬೇಲೂರು ದೇವಸ್ಥಾನದಲ್ಲಿ ಕುರಾನ್‌ ಪಠಣ: ಆಗಮ ಪಂಡಿತರ ಮೊರೆ ಹೋದ ಜಿಲ್ಲಾಡಳಿತ

archana hasan dc

ಹಾಸನ: ಬೇಲೂರು ಶ್ರೀ ಚನ್ನಕೇಶವಸ್ವಾಮಿ ದೇವಾಲಯದ ರಥೋತ್ಸವದ ವೇಳೆ ಕುರಾನ್ ಪಠಣ ವಿವಾದ ವಿಚಾರದಲ್ಲಿ ಮುಜರಾಯಿ ಇಲಾಖೆಯ ಆಗಮ ಪಂಡಿತರ ಮೊರೆ ಹೋಗಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ತಿಳಿಸಿದ್ದಾರೆ.

ಈ ಬಗ್ಗೆ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ. ಇಷ್ಟು ವರ್ಷದಿಂದ ನಡೆದುಕೊಂಡು ಬಂದಿರುವ ಪದ್ಧತಿಯನ್ನು ನಮ್ಮ ಸ್ವಂತ ವಿವೇಚನೆಯಿಂದ ನಿಲ್ಲಿಸಲು ಸಾಧ್ಯವಿಲ್ಲ. ಇದು ಹೊಸದಾಗಿ ಸೃಷ್ಟಿಯಾಗಿರುವಂತಹದ್ದಲ್ಲ. 1929ರಿಂದಲೂ ಈ ಪದ್ಧತಿ ಇದೆ. ಅದು ಮ್ಯಾನುಯಲ್‌ನಲ್ಲಿಯೂ ಸೇರಿದೆ. ರಥೋತ್ಸವದ ವೇಳೆ ಮೌಲ್ವಿಗಳು ಬಂದು ಮುಜ್ರೆ ಸರ್ವಿಸ್ ಅಂತ ಮಾಡುತ್ತಾರೆ. ಕಳೆದ ವರ್ಷ ಇದನ್ನು ನಿಲ್ಲಿಸಲು ಒತ್ತಡ ಬಂದಿತ್ತು. ಆ ಬಗ್ಗೆ ಮುಜರಾಯಿ ಇಲಾಖೆಗೆ ಸ್ಪಷ್ಟನೆ ಕೇಳಿದ್ದೆವು. ಹಿಂದಿನ ಪದ್ಧತಿಯನ್ನು ಬದಲಾವಣೆ ಮಾಡುವುದು ಬೇಡ ಎಂದಿದ್ದರು. ಅದರಂತೆ ಕಳೆದ ವರ್ಷ ಪದ್ಧತಿ ಪ್ರಕಾರ ನಡೆದುಕೊಂಡು ಹೋಗಿದೆ ಎಂದು ಅರ್ಚನಾ ತಿಳಿಸಿದ್ದಾರೆ.

ಈ ವರ್ಷ ಮತ್ತೆ ಪದ್ಧತಿ ಬದಲಾಯಿಸಿ ಎಂದು ಕೇಳಿದ್ದಾರೆ. ದಿಢೀರ್ ಆಗಿ ಇಂತಹ ಪದ್ಧತಿಗಳನ್ನು ಬದಲಾವಣೆ ಮಾಡಲು ಆಗುವುದಿಲ್ಲ. ನಿನ್ನೆ ಪ್ರತಿಭಟನೆ ಮಾಡಿದ್ದಾರೆ, ಆ ವೇಳೆ ಯಾರೋ ಒಬ್ಬ ಯುವಕ ಘೋಷಣೆ ಕೂಗಿದ ಅನ್ನುವ ಕಾರಣಕ್ಕೆ ಘರ್ಷಣೆ ಶುರುವಾಗಿದೆ. ತಕ್ಷಣ ಪೊಲೀಸರು ನಿಯಂತ್ರಿಸಿದ್ದಾರೆ. ಆಮೇಲೆ ರಸ್ತೆ ತಡೆದು ಪ್ರತಿಭಟನೆ ಮಾಡಿದ್ದಾರೆ. ಅದನ್ನು ಸದ್ಯ ನಿಯಂತ್ರಣಕ್ಕೆ ತರಲಾಗಿದೆ. ಇಷ್ಟು ವರ್ಷದಿಂದ ನಡೆದುಕೊಂಡು ಬಂದಿರುವ ಪದ್ಧತಿಯನ್ನು ನಮ್ಮ ಸ್ವಂತ ವಿವೇಚನೆಯಿಂದ ನಿಲ್ಲಿಸಲಾಗುವುದಿಲ್ಲ. ಪರಿಸ್ಥಿತಿಯನ್ನು ಮುಜರಾಯಿ ಇಲಾಖೆಗೂ ತಿಳಿಸಿದ್ದು, ಪರಿಶೀಲನೆಗೆ ಆಗಮ ಪಂಡಿತರು ಬರುತ್ತಿದ್ದಾರೆ. ಅವರು ನೋಡಿ ರಿಪೋರ್ಟ್ ಕೊಟ್ಟ ನಂತರ ಆ ಬಗ್ಗೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಸದ್ಯಕ್ಕೆ ಪದ್ಧತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಇದೇ ವೇಳೆ ಮೇಲಧಿಕಾರಿಗಳ ಜೊತೆ ಚರ್ಚೆ ಮಾಡದೆ ಈ ಕುರಿತು ಹೇಳಿಕೆ ನೀಡಿರುವ ಶ್ರೀ ಚನ್ನಕೇಶವ ದೇವಸ್ಥಾನದ ಆಡಳಿತಾಧಿಕಾರಿ ವಿರುದ್ಧ ಡಿಸಿ ಗರಂ ಆದರು. ದೇವಸ್ಥಾನದ ಮೆಟ್ಟಿಲ‌ ಮೇಲೆ ನಿಂತು ಕುರಾನ್ ಪಠಣ ಮಾಡುವ ಪದ್ಧತಿ ನಾಲ್ಕಾರು ವರ್ಷಗಳ ಹಿಂದೆ ಇತ್ತು. ರಥದ ಮುಂದೆ ಕುರಾನ್ ಪಠಣ ಮಾಡುವ ಪದ್ಧತಿ ಇರಲಿಲ್ಲ. ಕಳೆದ ನಾಲ್ಕೈದು ವರ್ಷದಿಂದ ರಥದ ಮುಂದೆ ಬಂದು ಕುರಾನ್ ಪಠಣ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ದೇವಸ್ಥಾನದ ಮೆಟ್ಟಿಲುಗಳ ಮೇಲೆ ನಿಂತು ಕುರಾನ್ ಪಠಣ ಮಾಡುವ ಪದ್ಧತಿಯನ್ನು ಮುಂದುವರಿಸುವಂತೆ ಸೂಚನೆ ಕೊಟ್ಟಿದ್ದೇವೆ ಎಂದವರು ಹೇಳಿದ್ದಾರೆ.

ಇದನ್ನೂ ಓದಿ: Dharma dangal : ಬೇಲೂರಿನಲ್ಲಿ ಭುಗಿಲೆದ್ದ ಕುರಾನ್‌ ಪಠಣ ವಿವಾದ; ಬಜರಂಗ ದಳ ಪ್ರತಿಭಟನೆ ವೇಳೆ ಮುಸ್ಲಿಂ ಯುವಕನ ಕಿರಿಕ್‌

Exit mobile version