ಬೆಂಗಳೂರು: ಅವನೊಬ್ಬ ಅಗ್ರೆಸ್ಸಿವ್ ಹೀರೋ, ಅದೇ ಹೊತ್ತಿಗೆ ಮಗುವಿನಷ್ಟೇ ಮುಗ್ಧ. ಎಂಟು ಬಾರಿ ಚಾಮುಂಡೇಶ್ವರಿ ದೇವಿಯನ್ನು ತನ್ನ ಭುಜದ ಮೇಲೆ ಹೊತ್ತು ಮೆರೆಸಿ ಜಗತ್ತಿಗೆ ದರ್ಶನ ಮಾಡಿಸಿದ ಸಾಹಸಿಗ. ಇಂಥ ಪ್ರಚಂಡ ತಾಕತ್ತಿನ ಅರ್ಜುನ (Elephant Arjuna) ಹಾಸನ ಜಿಲ್ಲೆಯ (Hasana News) ಸಕಲೇಶಪುರ ತಾಲೂಕಿನ ಯಸಳೂರು ಕಾಡಿನಲ್ಲಿ ಪುಂಡಾನೆಯೊಂದನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಜೀವ ತೆತ್ತಿದ್ದಾನೆ. 60 ವರ್ಷದ ದಾಟಿದ ಕಾರಣಕ್ಕೆ ಮೈಸೂರು ದಸರಾ (Mysore Dasara) ಅಂಬಾರಿ ಹೊರುವ ಗೌರವದಿಂದ ನಿವೃತ್ತಿ ಹೊಂದಿ ಕಾಡಿನಲ್ಲಿ ಗೌರವಯುತ ಜೀವನವನ್ನು ಸಾಗಿಸುತ್ತಿದ್ದ ಆತ ಕಾಡಾನೆ ಮತ್ತು ವ್ಯವಸ್ಥೆಯ ಹೊಡೆತಕ್ಕೆ ಸಿಲುಕಿ ಸಹಾಯಕನಾಗಿ ದುರಂತ ನಾಯಕನಂತೆ (Tragic Hero) ಉಸಿರುಚೆಲ್ಲಿದ್ದಾನೆ.
ಯಾವ ಜಾಗದಲ್ಲಿ ಮೃತಪಟ್ಟನೋ ಅದೇ ಜಾಗದಲ್ಲಿ ಸಾವಿರಾರು ಜನರ ಕಣ್ಣೀರು ಮತ್ತು ನಿಡುಸುಯ್ಯುವಿಕೆಗಳ ನಡುವೆ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾನೆ ಅರ್ಜುನ. ಕಾವಾಡಿಗರು ಹಾಕಿದ ಕಣ್ಣೀರು, ಜನರು ಬಿಟ್ಟ ನಿಟ್ಟುಸಿರು, ಅರ್ಜುನ ಸತ್ತಿದ್ದಲ್ಲ, ಇದೊಂದು ಕೊಲೆ ಎಂಬ ಪ್ರತಿಭಟನೆಯ ಧ್ವನಿಗಳ ಆಕ್ರೋಶದ ನಡುವೆ ಏನೂ ಅರಿಯದ ಮುಗ್ಧ ಮಗುವಿನಂತೆ ಮಲಗಿದ್ದ ಅವನನ್ನು ಹೂವುಗಳಿಂದ ಅಲಂಕರಿಸಿ, ಕುಶಾಲು ತೋಪು ಸಿಡಿಸಿ ಸಕಲ ಸರ್ಕಾರಿ ಗೌರವ ಮತ್ತು ಸಾಂಪ್ರದಾಯಿಕ ವಿಧಿ ವಿಧಾನಗಳ ಮೂಲಕ ಬೀಳ್ಕೊಡಲಾಯಿತು. ಜೆಸಿಬಿಯಲ್ಲಿ ಕೊರೆದ ದೊಡ್ಡ ಹೊಂಡದಲ್ಲಿ ಅರ್ಜುನನ ಅಗಾಧ ಗಾತ್ರದ ದೇಹ ಮುಚ್ಚಿಹೋಯಿತು. ಅವನಿಗೊಂದು ಸ್ಮಾರಕ ಕಟ್ಟಬೇಕು, ಅವನ ನೆನಪಿನಲ್ಲಿ ಪ್ರಶಸ್ತಿ ಸ್ಥಾಪಿಸಬೇಕು, ಅವನ ಸಾವಿಗೆ ಕಾರಣರಾದವರಿಗೆ ಶಿಕ್ಷೆ ಕೊಡಬೇಕು, ಎಂಬ ಸಾವಿರ ಆಗ್ರಹಗಳಿಗೆ ತನ್ನ ಅಗಲದ ಕಿವಿಯನ್ನು ಮುಚ್ಚಿಕೊಂಡ ಅರ್ಜುನ ಎಲ್ಲರನ್ನೂ ಬಿಟ್ಟು ಭೂಮಿ ಮಡಿಲನ್ನು ಸೇರಿಕೊಂಡಿದ್ದಾನೆ.
ಈ ರೀತಿಯ ಅಸಹಾಯಕ ಸಾವು ಕಂಡ ಅರ್ಜುನ ಖಂಡಿತಕ್ಕೂ ಅಸಹಾಯಕನಲ್ಲ, ಅಮಾಯಕನೂ ಅಲ್ಲ. ಎಂಥ ಪರಿಸ್ಥಿತಿಯನ್ನೂ ಎದುರಿಸಬಲ್ಲ ತಾಕತ್ತಿನ ಬಲಾಢ್ಯ ಅವನು. ಅವನ ಬದುಕಿನ ಕಥೆಯನ್ನೊಮ್ಮೆ ಕೇಳಿಸಿಕೊಂಡರೆ ನಾವು ಕಳೆದುಕೊಂಡದ್ದು ಅದೆಂಥ ಶಕ್ತಿವಂತನನ್ನು, ಅದೆಂಥ ಅಮರ ವ್ಯಕ್ತಿತ್ವವನ್ನು ಎನ್ನುವುದು ನಮಗೆ ಅರಿವಾಗುತ್ತದೆ.
ಎಲ್ಲರಿಗೂ ಗೊತ್ತಿರುವ ಹಾಗೆ ಅರ್ಜುನ ದಸರಾದಲ್ಲಿ ಅಂಬಾರಿ ಹೊತ್ತಿದ್ದು ಎಂಟು ಬಾರಿ. ಕೊನೆಯದಾಗಿ ಭುವನೇಶ್ವರಿ ತಾಯಿಯನ್ನು ಹೊತ್ತು ಮೆರೆಸಿದ್ದು 2019ರಲ್ಲಿ. 2020ರ ಹೊತ್ತಿಗೆ ಅವನಿಗೆ ವಯಸ್ಸು 60 ಆಗಿತ್ತು. ಅರ್ಜುನನ ಜಾಗಕ್ಕೆ ಅಭಿಮನ್ಯುವಿನ ಪ್ರವೇಶವಾಗಿದೆ. ಹಾಗಂತ ಅರ್ಜುನನ ದಸರಾ ಸೇವೆ ಅಲ್ಲಿಗೆ ಸೀಮಿತವಾಗಿಲ್ಲ. ಅವನು ಸುಮಾರು 22 ವರ್ಷಗಳ ಕಾಲ ದಸರೆಯಲ್ಲಿ ಮಿಂಚಿದ್ದಾನೆ. ಅಂಬಾರಿ ಹೊರುವ ಕಾಯಕದಿಂದ ಬಿಟ್ಟರೂ ಕಳೆದ ಮೂರು ವರ್ಷಗಳಿಂದ ನಿಶಾನೆ ಆನೆಯಾಗಿ ಬೆಳಗಿದ್ದಾನೆ.
ಅರ್ಜುನ ಅರಣ್ಯ ಇಲಾಖೆ ಕೈ ಸೇರಿದ್ದು 1968ರಲ್ಲಿ
ಕಾಡಾನೆಯಾಗಿದ್ದ ಅರ್ಜುನನ್ನು ಅರಣ್ಯ ಇಲಾಖೆ ಖೆಡ್ಡಾಕ್ಕೆ ಬೀಳಿಸಿ ಹಿಡಿದದ್ದು 1968ರಲ್ಲಿ. ಅಂದರೆ ಆಗ ಅರ್ಜುನನಿಗೆ ಸುಮಾರು ಒಂಬತ್ತು. ಗಟ್ಟಿ ಪೊಗದಸ್ತಾಗಿ, ಎತ್ತರದ ನಿಲುವಿನೊಂದಿಗೆ ಮಿಂಚುತ್ತಿದ್ದ ಆತ ಪುಂಡನಂತೆ ವಿಜೃಂಭಿಸಿದ್ದ.! ಆದರೆ, ಯಾವಾಗ ಅರಣ್ಯಾಧಿಕಾರಿಗಳ ಕೈಗೆ ಸಿಕ್ಕಿದನೋ ಅಲ್ಲಿಂದ ಎಲ್ಲರ ಪ್ರೀತಿಗೆ ಪಾತ್ರನಾದ.
ಮೈಸೂರು ಜಿಲ್ಲೆಯ ಕಾಕನಕೋಟೆಯಲ್ಲಿ ಸೆರೆಸಿಕ್ಕ ಅವನು ನಾಗರಹೊಳೆಗೆ ಶಿಫ್ಟ್ ಆದ. ಆಗ ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದ ಮರ ಸಾಗಣೆ ಕಾರ್ಯಾಚರಣೆಗೆ ಅವನೇ ಆನೆ ಬಲ. ಜತೆಗೆ ಆಗಾಗ ಆನೆಗಳನ್ನು ಖೆಡ್ಡಾಕ್ಕೆ ಬೀಳಿಸುವ ಕೆಲಸಕ್ಕೂ ಹೋಗುತ್ತಿದ್ದ. ಅವನಿಲ್ಲದೆ ಕಾರ್ಯಾಚರಣೆಗಳು ನಡೆದೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಅವನ ಮೇಲೆ ಅಧಿಕಾರಿಗಳಿಗೆ ನಂಬಿಕೆ ಹುಟ್ಟಿಕೊಂಡಿತ್ತು.
ಮೈಸೂರು ದಸರೆಗೆ ಬಂದಿದ್ದು 1990ರ ದಶಕದಲ್ಲಿ
ಕಾಡಿನಲ್ಲಿ ಎಲ್ಲ ಕೆಲಸಗಳನ್ನು ಮಾಡುತ್ತಿದ್ದ, ಎಲ್ಲರ ಪ್ರೀತಿ ಪಾತ್ರನಾಗಿದ್ದ ಅರ್ಜುನನಿಗೆ ಅಂಬಾರಿ ಹೊರುವ ತಾಕತ್ತೂ ಇದೆ ಎನ್ನುವುದು ಅಧಿಕಾರಿಗಳಿಗೆ ಗೊತ್ತಿತ್ತು. ಹೀಗಾಗಿ 1990ರ ದಶಕದಲ್ಲಿ ಆತನನ್ನು ದಸರೆಗೆ ಕರೆದುಕೊಂಡು ಬಂದು ನಿಶಾನೆ ಆನೆಯಾಗಿ ಅವಕಾಶ ನೀಡಿದರು. ಮುಂದೊಮ್ಮೆ ತಾಲೀಮು ಸಂದರ್ಭದಲ್ಲಿ ಆತನ ಮೇಲೆ ಅಂಬಾರಿಯನ್ನು ಕಟ್ಟಲಾಗಿತ್ತು. ಈ ವೇಳೆ ಆಕಾಶದಲ್ಲಿ ಪುಷ್ಪಾರ್ಚನೆಗೆ ಬಂದಿದ್ದ ಹೆಲಿಕಾಪ್ಟರ್ ನೋಡಿ ಸ್ವಲ್ಪ ಹೆದರಿದ್ದ.
ಅಣ್ಣಯ್ಯನನ್ನು ತುಳಿದು ಸಾಯಿಸಿದ ಅಪವಾದ
ಅರ್ಜುನ ಸೌಮ್ಯ ಸ್ವಭಾವದಲ್ಲಿದ್ದರೂ ಎಲ್ಲೋ ಒಂದು ಕಡೆ ಕಾಡಾನೆಯ ಕ್ರೌರ್ಯವೂ ಇತ್ತೆನಿಸುತ್ತದೆ. 1990ರ ಆಸುಪಾಸಿನಲ್ಲಿ ಆತನನ್ನು ದಸರೆಗೆ ಕರೆದುಕೊಂಡು ಬಂದಾಗ ಒಂದು ಅನಾಹುತ ಸಂಭವಿಸಿ ಹೋಯಿತು. ಅರ್ಜುನನು ಬಹಾದ್ದೂರು ಎಂಬ ಆನೆಯ ಮಾವುತನಾಗಿದ್ದ ಅಣ್ಣಯ್ಯನನ್ನು ತುಳಿದು ಕೊಂದಿದ್ದ. ಇದು ದೊಡ್ಡ ಸುದ್ದಿಯಾಗಿತ್ತು.
ಈ ಕಾರಣಕ್ಕಾಗಿ ಅರ್ಜುನನ ಮೇಲೆ ಇದ್ದ ನಂಬಿಕೆ ಮಸುಕಾಯಿತು. ಶೀಘ್ರ ಕೋಪಗೊಳ್ಳುವುದನ್ನು ಪರಿಗಣಿಸಿ ಮುಂದೆ ಆತನನ್ನು ದಸರೆಗೆ ತರುವುದನ್ನೇ ನಿಲ್ಲಿಸಲಾಯಿತು. ಅಚ್ಚರಿ ಎಂದರೆ ಅವನಿಗೆ ಮರು ಜೀವದಾನ ನೀಡಿದ್ದು ಇನ್ನೊಬ್ಬ ಅಣ್ಣಯ್ಯ. ಅಂದು ಮಾವುತನಾಗಿದ್ದ ಅಣ್ಣಯ್ಯನನ್ನು ಕೊಂದ ಕಳಂಕವನ್ನು ತೊಳೆದುಕೊಳ್ಳಲು ಸಹಾಯ ಮಾಡಿದವರು ಅಂದು ನಾಗರಹೊಳೆಯಲ್ಲಿ ಡಿಸಿಎಫ್ ಆಗಿದ್ದ ಎ.ಎಂ. ಅಣ್ಣಯ್ಯ.
ಆಗ ದಸರೆ ಆನೆಗಳನ್ನು ಆಯ್ಕೆ ಮಾಡಲು ಬಳ್ಳೆಯ ಶಿಬಿರಕ್ಕೆ ಪಶುವೈದ್ಯಾಧಿಕಾರಿಗಳ ತಂಡ ಹೋಗಿತ್ತು. ಅದರ ಕ್ಯಾಪ್ಟನ್ ಆಗಿದ್ದವರು ಡಾ. ನಾಗರಾಜು. ಅಲ್ಲಿ ಅರ್ಜುನನ್ನು ನೋಡಿದ ಅವರಿಗೆ ಖುಷಿಯಾಯಿತು. ಆಗ ಡಿಸಿಎಫ್ ಎ.ಎಂ. ಅಣ್ಣಯ್ಯ ಅವರು ಅರ್ಜುನನ ಖಳ ಪುರಾಣವನ್ನು ಹೇಳಿದರಾದರೂ ಅನುಮತಿಯನ್ನು ನೀಡಿದರು. ಅಲ್ಲಿಗೆ ಸುಮಾರು 15 ವರ್ಷಗಳ ಅರ್ಜುನನ ಅಜ್ಞಾತವಾಸ ಮುಕ್ತಾಯವಾದಂತಾಯಿತು.
ಈ ಹದಿನೈದು ವರ್ಷಗಳ ಅವಧಿಯಲ್ಲಿ ಅರ್ಜುನನ್ನು ಪಳಗಿಸಿ ಒಬ್ಬ ನಿಯತ್ತಿನ ಪ್ರಾಣಿಯಾಗಿ ಬೆಳೆಸಿದ್ದು ದೊಡ್ಡ ಮಾಸ್ತಿ ಎಂಬ ಮಾವುತ. ಅವನು ಈಗ ತುಂಬಾ ಒಳ್ಳೆಯವನಾಗಿದ್ದಾನೆ. ಅವನಿಗೆ ದಸರೆಯಲ್ಲಿ ಅನುಮತಿ ಕೊಡಬಹುದು ಎಂಬ ಶಿಫಾರಸನ್ನು ನೋಡಿದ್ದ ದೊಡ್ಡ ಮಾಸ್ತಿ. ಅಲ್ಲಿಗೆ ತಣ್ಣನೆಯ ನಾಯಕ ಬಲರಾಮನ ಉತ್ತರಾಧಿಕಾರಿ ಯಾರು ಎನ್ನುವ ಪ್ರಶ್ನೆಗೆ ಉತ್ತರವೊಂದು ಸಿಕ್ಕಿತ್ತು.
ಹಲವು ವರ್ಷದ ತಾಲೀಮಿನ ಬಳಿಕ ಅರ್ಜುನ ಅಧಿಕೃತವಾಗಿ ಮೊದಲ ಬಾರಿ ಅಂಬಾರಿ ಹೊತ್ತಿದ್ದು 2012ರಲ್ಲಿ. ಈ ಕೆಲಸವನ್ನು ಆತ ಎಂಟು ವರ್ಷಗಳ ಕಾಲ ಅತ್ಯಂತ ಶಿಸ್ತಿನಿಂದ ನಿಭಾಯಿಸಿದ್ದ. 2019ಕ್ಕೆ ಅವನಿಗೆ 60 ವರ್ಷ ತುಂಬಿದ್ದರಿಂದ ಸೇವೆಯಿಂದ ಬಿಡುಗಡೆ ಮಾಡಲಾಯಿತು. ನಿಜವೆಂದರೆ ಈಗಲೂ ಅರ್ಜುನನಿಗೆ ಅಂಬಾರಿ ಹೊರುವ ಕಸುವು ಇದ್ದೇ ಇತ್ತು. ನಿವೃತ್ತಿಯ ಬಳಿಕವೂ ಅರ್ಜುನ ನಿಶಾನೆ ಆನೆಯಾಗಿ ಸೇವೆ ಮಾಡುತ್ತಿದ್ದ. ಆದರೆ, ಈಗ ಅವನೇ ಇಲ್ಲ.. ಎಲ್ಲವೂ ನೆನಪಾಗಿ ಉಳಿದಿದೆ.
ಇದನ್ನೂ ಓದಿ: Elephant Arjuna : ಅಧಿಕಾರಿಗಳ ಗುಂಡಿನಿಂದಲೇ ಅರ್ಜುನನ ಮರಣ?; ಇಲ್ಲಿದೆ ವಿಡಿಯೊ ಸಾಕ್ಷಿ