Site icon Vistara News

Elephant Attack: ಒಂಟಿ ಸಲಗ ದಾಳಿಗೆ ಬೈಕ್‌ ಪುಡಿ ಪುಡಿ, ಕೂದಲೆಳೆ ಅಂತದಲ್ಲಿ ಸವಾರ ಪಾರು

Elephant attack in Hassan

ಹಾಸನ: ರಾಜ್ಯದಲ್ಲಿ ಆನೆಗಳ ಹಾವಳಿ (Elephant Menace) ಮಿತಿ ಮೀರಿದೆ. ಕೆಲವು ತಿಂಗಳ ಹಿಂದೆ ಸಕಲೇಶಪುರ ಭಾಗದಲ್ಲಿ ಹಲವರು ಆನೆ ದಾಳಿಗೆ (Elephant attack) ಬಲಿಯಾಗಿದ್ದರು. ಬಳಿಕ ಸ್ವಲ್ಪ ನಿಯಂತ್ರಣಕ್ಕೆ ಬಂದಂತೆ ಕಂಡಿತ್ತು. ಆದರೆ, ಈಗ ಮತ್ತೊಮ್ಮೆ ಆನೆಗಳ ಹಿಂಡು, ಒಂಟಿ ಸಲಗಗಳು ದಾಳಿಗೆ ಇಳಿದಿವೆ. ಭಾನುವಾರ ರಾತ್ರಿ ಸಕಲೇಶಪುರ (Sakaleshpur Road) ಸಮೀಪ ರಸ್ತೆಯಲ್ಲಿ ಸಾಗುತ್ತಿದ್ದ ಬೈಕ್‌ ಸವಾರನ ಮೇಲೆ ಒಂಟಿ ಸಲಗ ದಾಳಿ (Elephant attack on Bike rider) ಮಾಡಿದೆ. ಸವಾರ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರೆ, ಆನೆ ಬೈಕನ್ನು ಸಂಪೂರ್ಣ ಪುಡಿಗಟ್ಟಿದೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕಿರೇಹಳ್ಳಿ ಗ್ರಾಮದ ಬಳಿ ಕಳೆದ ರಾತ್ರಿ ಈ ಘಟನೆ ನಡೆದಿದೆ. ಕಾಟಳ್ಳಿ ಗ್ರಾಮದ ಚೇತನ್ ಎಂಬವರು ಕಾಡಾನೆ ದಾಳಿಯಿಂದ ಬಚಾವ್ ಆದ ಬೈಕ್ ಸವಾರ.

ಚೇತನ್‌ ಅವರು ಶ್ರೀನಿವಾಸ ಎಸ್ಟೇಟ್ ಸಮೀಪ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಏಕಾಏಕಿಯಾಗಿ ಮಾರ್ಗ ಮಧ್ಯೆ ಬಂದು ನಿಂತ ಆನೆ ಬೈಕ್‌ ಸವಾರನ ಮೇಲೆ ದಾಳಿ ಮಾಡಿತು. ಕಾಡಾನೆ ದಾಳಿ ಮಾಡುತ್ತಿದ್ದಂತೆಯೇ ಚೇತನ್‌ ಅವರು ಬೈಕನ್ನು ಬಿಟ್ಟು ಅಲ್ಲಿಂದ ಪರಾರಿಯಾದರು. ಆನೆ ಸ್ವಲ್ಪ ದೂರಕ್ಕೆ ಚೇತನ್‌ ಅವರನ್ನು ಬೆನ್ನಟ್ಟಿತು. ಆದರೆ, ಅವರು ತಪ್ಪಿಸಿಕೊಂಡರು ಎಂದು ತಿಳಿಯುತ್ತಿದ್ದಂತೆಯೇ ತನ್ನ ಸಿಟ್ಟನ್ನು ಬೈಕ್‌ನ ಮೇಲೆ ತೀರಿಸಿಕೊಳ್ಳಲು ಮುಂದಾಯಿತು.

ಆನೆ ಈ ಬೈಕನ್ನು ಬೇಕಾಬಿಟ್ಟಿಯಾಗಿ ತುಳಿದು ಎತ್ತಿ ಹಾಕಿ ಹಾನಿ ಮಾಡಿದೆ. ಸ್ವಲ್ಪ ಹೊತ್ತು ತನ್ನ ಆಕ್ರೋಶವನ್ನು ತೋರಿಸಿದ ಬಳಿಕ ಬೈಕನ್ನು ಬಿಟ್ಟು ಅಲ್ಲಿಂದ ಹೋಗಿದೆ. ಆದರೆ, ಚೇತನ್‌ ಅವರಿಗೆ ಮರಳಿ ಆ ಜಾಗಕ್ಕೆ ಆ ಕ್ಷಣದಲ್ಲಿ ಹೋಗುವ ಧೈರ್ಯ ಬಂದಿರಲಿಲ್ಲ. ಸೋಮವಾರ ಬೆಳಗ್ಗೆ ಊರಿನ ಇತರರ ಜತೆಗೆ ಹೋಗಿ ನೋಡಿದಾಗ ಬೈಕ್‌ ಸಂಪೂರ್ಣ ಪುಡಿ ಪುಡಿಯಾಗಿತ್ತು.

ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಕಾಟಳ್ಳಿ, ಕಿರೇಹಳ್ಳಿ, ಮಾಸವಳ್ಳಿ ಮಾರ್ಗವಾಗಿ ಸಂಚರಿಸುವವರು ಎಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ.

ಇದನ್ನೂ ಓದಿ: Elephant Census: ಆನೆ ಗಣತಿ ವರದಿ ಬಿಡುಗಡೆ; ರಾಜ್ಯದಲ್ಲಿ 2017ರ ಸಮೀಕ್ಷೆಗಿಂತ 350 ಆನೆ ಹೆಚ್ಚಳ

ನಿಲ್ಲದ ಆನೆಗಳ ಪುಂಡಾಟ

ಸಕಲೇಶಪುರ ಪರಿಸರದಲ್ಲಿ ಕಾಡಾನೆಗಳ ಹಾವಳಿ ಭಾರಿ ಜೋರಾಗಿದ್ದು ಜನ ಓಡಾಟಕ್ಕೂ ಭಯಪಡುವಂತಾಗಿದೆ. ಕಳೆದ ಬಾರಿ ರೈತರೊಬ್ಬರನ್ನು ಆನೆ ದಾಳಿ ಮಾಡಿ ಕೊಂದು ಹಾಕಿದಾಗ ಭಾರಿ ಹೋರಾಟವೇ ನಡೆದಿತ್ತು. ಇದರ ಫಲವಾಗಿ ಆನೆ ಕಾರ್ಯಪಡೆ ರಚನೆಯಾಗಿತ್ತು.

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕೊಲ್ಲಹಳ್ಳಿ‌ ಗ್ರಾಮದ ಬಳಿ ಕಳೆದ ಮೇ ತಿಂಗಳಲ್ಲಿ ಬೆಂಗಳೂರು- ಮಂಗಳೂ ಕಾಡಾನೆ ಪುಂಡಾಟದಿಂದ ಗಂಟೆಗಟ್ಟಲೆ ಟ್ರಾಫಿಕ್‌ ಅಸ್ತವ್ಯವಸ್ತವಾಗಿತ್ತು. ನ್ಯಾಯಬೆಲೆ ಅಂಗಡಿಯಿಂದ ಅಕ್ಕಿಮೂಟೆಯನ್ನೇ ಎಳೆದು ತಂದು ರಸ್ತೆಗೆ ಹಾಕಿದ ಕಾಡಾನೆ, ಅದನ್ನು ಚೆಲ್ಲಾಡಿ ತಿಂದು ಹಾಕಿತು. ಸುಮಾರು ಅರ್ಧಗಂಟೆಗೂ ಹೆಚ್ಚು ಹೊತ್ತು ರಸ್ತೆಯಲ್ಲಿ ನಿಂತು, ವಾಹನಗಳನ್ನು ಅಡ್ಡಗಟ್ಟಿತು. ಕಾಡಾನೆ ಕಂಡು ಗ್ರಾಮದ ಜನ ಭೀತಗೊಂಡು ಓಡಿದರು. ಅದಕ್ಕಿಂತ ಒಂದು ದಿನ ಮೊದಲು ಇದೇ ಪ್ರದೇಶದ್ಲಲಿಯೇ ಮನೆಗೆ ನುಗ್ಗಿ ಕಿಟಕಿ ‌ಗಾಜುಗಳನ್ನು ಈ ಪುಂಡಾನೆ ಪುಡಿ ಮಾಡಿತ್ತು.

Exit mobile version