Site icon Vistara News

Elephant Attack : ಒಂದಲ್ಲ, ಎರಡಲ್ಲ.. ಒಂದೇ ತೋಟಕ್ಕೆ 20ಕ್ಕೂ ಅಧಿಕ ಆನೆಗಳ ಲಗ್ಗೆ!

Elephant attack

ಹಾಸನ: ಒಂದು ಆನೆ ಬಂದರೇ ಇಡೀ ಊರನ್ನು ಪುಡಿ ಮಾಡಿ ಹೋಗುವಷ್ಟೂ ಸಾಮರ್ಥ್ಯ ಹೊಂದಿರುತ್ತದೆ. ಹಾಗಿದ್ದರೆ ಒಮ್ಮೆಗೇ 20ಕ್ಕೂ ಅಧಿಕ ಆನೆಗಳು ಒಂದು ತೋಟಕ್ಕೆ ನುಗ್ಗಿದರೆ (Elephant Attack) ಪರಿಸ್ಥಿತಿ ಏನಾಗಬೇಡ!. ಅದು ಮಾಡುವ ನಾಶದ ಕಥೆ ಅತ್ಲಾಗಿರಲಿ, ಅಷ್ಟೂ ಆನೆಗಳನ್ನು ಒಟ್ಟಿಗೇ ನೋಡಿದವನ ಕಥೆ ಹೇಗಾಗಿರಬೇಡ!

ಹೇಳಿ ಕೇಳಿ ತಮ್ಮ ರಾಜ್ಯದಲ್ಲಿ ಆನೆಗಳ ಹಾವಳಿ (Elephant Menace) ಮಿತಿ ಮೀರಿದೆ. ಅದರಲ್ಲೂ ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು, ಮೈಸೂರು ಮತ್ತು ಚಾಮರಾಜ ನಗರದಲ್ಲಿ ಆನೆಗಳ ದಾಳಿಯಿಂದ ತೋಟಗಳ ನಾಶ ಮಾತ್ರವಲ್ಲ, ಪ್ರಾಣ ಹಾನಿಯೂ ದೊಡ್ಡ ಮಟ್ಟದಲ್ಲಿ ಆಗಿದೆ. ಜನರು ಆನೆಗಳಿಂದ ತಮ್ಮನ್ನು ರಕ್ಷಿಸಿ ಎಂದು ಗೋಗರೆಯುತ್ತಿದ್ದಾರೆ.

ಇಂಥ ಹೊತ್ತಿನಲ್ಲಿ ಹಾಸನ ಜಿಲ್ಲೆಯ ಒಂದು ಕಡೆ ಆನೆಗಳ ದೊಡ್ಡ ಹಿಂಡೇ ಕಾಫಿ ತೋಟಕ್ಕೆ ಲಗ್ಗೆ ಇಟ್ಟಿದೆ. ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಬಿಕ್ಕೋಡು ಗ್ರಾಮದ ಕಾಫಿ ತೋಟದಲ್ಲಿ ಗಜಪಡೆ ಪರೇಡ್ ನಡೆದಿದೆ. ಕಾಫಿ ತೋಟದಲ್ಲಿರುವ ನೀರಿನ‌ ಹೊಂಡದಲ್ಲಿ ನೀರು ಕುಡಿದು ದಣಿವಾರಿಸಿಕೊಳ್ಳುವ ಕಾಡಾನೆಗಳ ಹಿಂಡಿನ ವಿಡಿಯೊ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಈ ಆನೆಗಳ ಗುಂಪಿನಲ್ಲಿ 20ಕ್ಕೂ ಹೆಚ್ಚು ಆನೆಗಳಿದ್ದರೆ, ಅದರಲ್ಲಿ ಹತ್ತಕ್ಕೂ ಹೆಚ್ಚು ಮರಿಯಾನೆಗಳು ಅವೆಲ್ಲವೂ ಕೆರೆಯ ಒಂದು ಬದಿಯಲ್ಲಿ ಸಾಲಾಗಿ ನಿಂತು ಸೊಂಡಿಲಿನಿಂದ ನೀರೆತ್ತಿ ಕುಡಿಯುವ ದೃಶ್ಯ ರೋಮಾಂಚಕಾರಿಯೇನೋ ಆಗಿದೆ. ಆದರೆ, ಅವುಗಳ ಉಪಟಳ, ದಾಂಧಲೆಯನ್ನು ಅನುಭವಿಸಿದ ತೋಟದ ಮಾಲೀಕರು ಮಾತ್ರ ಸಂಕಷ್ಟದಲ್ಲಿದ್ದಾರೆ.

ಇದನ್ನೂ ಓದಿ : Elephant Attack : ಕಾಡಾನೆ ದಾಳಿಗೆ ಬಲಿಯಾದ ಮಹಿಳೆ ಕುಟುಂಬಕ್ಕೆ 15 ಲಕ್ಷ ಪರಿಹಾರ

ಕಾಫಿ ತೋಟಕ್ಕೆ ನುಗ್ಗಿದ ಆನೆಗಳು ಕಾಫಿ, ಬಾಳೆ, ಅಡಿಕೆ ಸೇರಿದಂತೆ ಅಪಾರ ಪ್ರಮಾಣದ ಬೆಳೆ ನಾಶ ಮಾಡಿವೆ. ಕಾಡಾನೆಗಳ ದಾಂಧಲೆಯಿಂದ ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ. ಒಂದು ಕಡೆ ಆನೆಗಳಿಂದಾದ ಹಾನಿಯಾದರೆ, ಇನ್ನೊಂದು ಕಡೆ ಕಾಡಾನೆಗಳ ಭಯದಿಂದ ಕಾಫಿ ತೋಟದ ಕೆಲಸಕ್ಕೆ ಕಾರ್ಮಿಕರು ಬರಲು ಹಿಂದೇಟು ಹಾಕುತ್ತಿದ್ದಾರೆ.

ಹಾಡುಹಗಲೇ ರಸ್ತೆಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಗಜಪಡೆಯ ಹಿಂದೆ ಈಗ ಅರಣ್ಯ ಇಲಾಖೆ ಸಿಬ್ಬಂದಿ ಬಿದ್ದಿದ್ದಾರೆ. ಹಾಗಂತ ಅವರಿಗೆ ಅವುಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಆದರೆ, ಕಾಡಾನೆಗಳು ಎಲ್ಲೆಲ್ಲಿ ಓಡಾಡುತ್ತಿವೆ ಎಂದು ಕಾಡಾನೆಗಳ ಚಲನ ವಲನದ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version