Site icon Vistara News

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

Elephants spotted in many places

ಹಾಸನ: ಹಾಸನ ಜಿಲ್ಲೆಯಾದ್ಯಂತ ಕಾಡಾನೆ ಹಾವಳಿ ಹೆಚ್ಚಾಗಿದೆ. ಬೆಳ್ಳಂಬೆಳಗ್ಗೆ ಇಪ್ಪತ್ತಕ್ಕೂ ಹೆಚ್ಚು ಕಾಡಾನೆಗಳು ರಸ್ತೆಗೆ ಬಂದಿತ್ತು. ಹಿಂಡು ಹಿಂಡಾಗಿ ಬಂದ ಕಾಡಾನೆಗಳು (Elephant Attack) ಬೇಲೂರು ತಾಲೂಕಿನ ಚೀಕನಹಳ್ಳಿ-ಕೈಮರ ರಸ್ತೆ ದಾಟಿದೆ. ಕಾಡಾನೆಗಳ ಕಂಡು ಸವಾರರು ವಾಹನ ನಿಲ್ಲಿಸಿ ನಿಂತಿದ್ದರು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಸಿಡಿಸಿದರು. ಈ ವೇಳೆ ಕಾಫಿ ತೋಟದೊಳಗೆ ಕಾಡಾನೆಗಳು ನುಗ್ಗಿವೆ. ಕಾಡಾನೆಗಳ ಪೆರೇಡ್ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಆನೆಗಳ ಗುಂಪಿನಲ್ಲಿ ಹೆಚ್ಚಾಗಿ ಮರಿಗಳೇ ಇವೆ. ಹೀಗಾಗಿ ಜೀವ ಭಯದಿಂದ ಕಾರ್ಮಿಕರು ಕಾಫಿ ತೋಟದ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಕಾಫಿ ಬೀಜ ಕೊಯ್ಲು ಸಮಯದಲ್ಲಿ ಕಾಡಾನೆಗಳ ಕಾಟ ಹೆಚ್ಚಾಗಿದೆ. ಹೀಗಾಗಿ ಕಾಡಾನೆಗಳನ್ನು ಸ್ಥಳಾಂತರ ಮಾಡುವಂತೆ ಜನರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Deer Attacked : ದಾರಿ ತಪ್ಪಿ ಕಾಡಿನಿಂದ ನಾಡಿಗೆ ಬಂದಿದ್ದ ಜಿಂಕೆ ನಾಯಿಗಳ ದಾಳಿಗೆ ಬಲಿ

ಬೆಳಗಾವಿಯಲ್ಲಿ ಆನೆ ಬಿಂದಾಸ್‌ ಓಡಾಟ

ಬೆಳಗಾವಿ: ಮಲೆನಾಡು ಬಳಿಕ ಇದೀಗ ಗಡಿನಾಡಲ್ಲೂ ಕಾಡಾನೆ ಹಾವಳಿ ಹೆಚ್ಚಿದೆ. ಬೆಳಗಾವಿ ನಗರ ಪ್ರದೇಶದಲ್ಲೆ ಕಾಡಾನೆಯೊಂದು ಬಿಂದಾಸ್ ಆಗಿ ಸುತ್ತಾಡಿದೆ. ಬೆಕ್ಕನಕೇರಿ ಅರಣ್ಯ ಪ್ರದೇಶದಿಂದ ಬೆಳಗಾವಿಗೆ ನುಗ್ಗಿದ್ದ ಆನೆಯು ವೈಭವ ನಗರದಲ್ಲಿ ಓಡಾಡಿದೆ.

ಕಂಗ್ರಾಳಿ ಗ್ರಾ.ಪಂ ವ್ಯಾಪ್ತಿಯ ವೈಭವ ನಗರ ಹಾಗೂ ಅಲತಗಾ ಗ್ರಾಮದ ಸುತ್ತ ಮುತ್ತ ‌ಕಾಡಾನೆ ಸುತ್ತಾಟದಿಂದ ಗ್ರಾಮಸ್ಥರು ಭಯಭೀತರಾಗಿದ್ದರು. ಬೆಳಗಾವಿ ನಗರದ ವೈಭವ ನಗರ, ಶಾಹು ನಗರದಲ್ಲಿ ಕಾಡಾನೆ ಪ್ರತ್ಯಕ್ಷವಾಗಿದ್ದರಿಂದ ಜನ ಕಕ್ಕಾಬಿಕ್ಕಿಯಾದರು. ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ, ಪೊಲೀಸ್ ಸಿಬ್ಬಂದಿ ಸ್ಥಳಕ್ಕಾಗಮಿಸಿ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದ್ದಾರೆ.

ಕಂಗ್ರಾಳಿ ಮಾರ್ಗವಾಗಿ ಅಲತಗಾ ಹೊರವಲಯಕ್ಕೆ ಕಾಲಿಟ್ಟಿರುವ ಕಾಡಾನೆಯನ್ನು ಕಡೋಲಿ ಕಡೆ ಓಡಿಸಲು ಅರಣ್ಯಾಧಿಕಾರಿಗಳು ಹರಸಾಹಸ ಪಟ್ಟರು. ಆನೆ ಸುದ್ದಿ ತಿಳಿಯುತ್ತಿದ್ದಂತೆ ಸಾರ್ವಜನಿಕರು ಜಮಾಯಿಸಿದ್ದರು. ಸುಮಾರು 200ಕ್ಕೂ ಹೆಚ್ಚು ಅರಣ್ಯ ಹಾಗೂ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕಾಡಿಗೆ ಓಡಿಸಿದ್ದಾರೆ. ಬಿ.ಕೆ.ಕಂಗ್ರಾಳಿ ಗ್ರಾಮದಿಂದ ಮಹಾರಾಷ್ಟ್ರ ಗಡಿಯತ್ತ ಕಾಡಾನೆ ತೆರಳಿದೆ.

ಯಶಸ್ವಿ ಕಾರ್ಯಾಚರಣೆ ಬಳಿಕ ಡಿಸಿಪಿ ರೋಹನ್ ಜಗದೀಶ್‌ ಪ್ರತಿಕ್ರಿಯಿಸಿದ್ದು,ಕಾಡಾನೆ ಬಗ್ಗೆ ಎಪಿಎಂಸಿ ಪೊಲೀಸರಿಂದ ಶುಕ್ರವಾರ ಬೆಳಗ್ಗೆ ಸುಮಾರು 7:15ಕ್ಕೆ ಮಾಹಿತಿ ಬಂತು. ಆನೆ ಎಲ್ಲಿಂದ ಬಂತು ಎಂದು ಹೇಳಲು ಆಗಲ್ಲ, ಆದರೆ ಅದನ್ನು ಯಶಸ್ವಿಯಾಗಿ ಮತ್ತೆ ಕಾಡಿಗೆ ಕಳಿಸಿದ್ದೇವೆ ಎಂದರು.

ಮೈಸೂರದಲ್ಲೂ ಆನೆಗಳ ಕಾಟ

ಮೈಸೂರಿನಲ್ಲೂ ಕಾಡು ಪ್ರಾಣಿಗಳ ಹಾವಳಿ ನಿಲ್ಲುವಂತೆ ಕಾಣುತ್ತಿಲ್ಲ. ಚಿರತೆ, ಹುಲಿ ಬಳಿಕ ಇದೀಗ ಕಾಡಿನಿಂದ ನಾಡಿಗೆ ಆನೆಗಳು ಬಂದಿವೆ. ಓಂಕಾರ್ ಅರಣ್ಯ ಪ್ರದೇಶದ ಕಾಡಿನಿಂದ ಆಹಾರ ಹುಡುಕುತ್ತಾ ನಾಲ್ಕು ಆನೆಗಳು ನಾಡಿಗೆ ಬಂದಿವೆ.

ನಂಜನಗೂಡು ತಾಲೂಕಿನ ಕಸುವಿನಹಳ್ಳಿ, ಸೂರಹಳ್ಳಿ ಗ್ರಾಮಗಳ ಸುತ್ತಮುತ್ತ ಆನೆಗಳು ಕಾಣಿಸಿಕೊಂಡಿವೆ. ಕಾಡಾನೆಗಳ ಕಂಡು ರೈತರು ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಅರಣ್ಯ ಇಲಾಖೆಯ ಅಧಿಕಾರಿಗಳು , ಅಪಾಯದ ಮುನ್ಸೂಚನೆ ಅರಿತು ಜನರನ್ನು ನಿಯಂತ್ರಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

ಕಾಡಾನೆಗಳು ಮುಳ್ಳು ತಂತಿ ಕಂಬಗಳನ್ನು ಮುರಿದು ಬಾಳೆ ತೋಟವನ್ನು ನಾಶ ಮಾಡಿವೆ. ಕಾಡಾನೆಗಳನ್ನು ಕಾಡಿಗೆ ಸುರಕ್ಷಿತವಾಗಿ ಕಳುಹಿಸಲು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದ್ದೇವೆ ಎಂದು ವಲಯ ಅರಣ್ಯ ಅಧಿಕಾರಿ ನಿತೀನ್ ಕುಮಾರ್ ಮಾಹಿತಿ ನೀಡಿದ್ದಾರೆ.

ರಾಮನಗರದಲ್ಲೂ ಆನೆ ಹಾವಳಿಗೆ ಬೆಳೆ ನಾಶ

ರಾಮನಗರದ ಚನ್ನಪಟ್ಟಣ ತಾಲೂಕಿನ ಶ್ಯಾನುಭೋಗನಹಳ್ಳಿ ಗ್ರಾಮದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ. ತಡರಾತ್ರಿ ಶ್ಯಾನುಭೋಗನಹಳ್ಳಿ ಗ್ರಾಮದಲ್ಲಿ ಕಾಡಾನೆ ಹಿಂಡು ಬೆಳೆ ನಾಶ ಮಾಡಿದೆ. ಇದರಿಂದಾಗಿ ಲಕ್ಷಾಂತರ ರೂ. ನಷ್ಟವಾಗಿದೆ. ಸ್ಥಳಕ್ಕೆ ಸಾತನೂರು ಆರ್‌ಎಫ್‌ಓ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಾಡಾನೆ‌ ಓಡಿಸಿ ಇಲ್ಲದ್ದಿದ್ದರೆ ಗುಂಡಿಟ್ಟು ಕೊಲ್ಲಲು ಅನುಮತಿ ನೀಡಿ ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ಹೊಟ್ಟೆ ಬಟ್ಟೆ ಕಟ್ಟಿ ಬೆಳೆದ ಬೆಳೆ‌ಯು ನಾಶವಾಗುತ್ತಿದೆ ಎಂದು ರೈತರು ಅಳಲು ತೊಡಿಕೊಂಡರು. ಕಾಡಾನೆಗಳನ್ನು ಓಡಿಸಿ ಇಲ್ಲವಾದರೆ‌ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಲಿದೆ ಎಂದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version