Site icon Vistara News

Elephant Attack : ಕೇರಳ ಆನೆ ದಾಳಿಗೆ 15 ಲಕ್ಷ, ಹಾಸನದಲ್ಲಿ ಮೃತಪಟ್ಟವರಿಗೆ 7.5 ಲಕ್ಷ ಮಾತ್ರ; ಏನಿದು ಅನ್ಯಾಯ?

Elephant Attack in Hasana

ಹಾಸನ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಪ್ರತಿನಿಧಿಸುತ್ತಿರುವ ಕೇರಳದ ವಯನಾಡಿನಲ್ಲಿ (Wayanad in Kerala) ಆನೆ ದಾಳಿಗೆ ಪ್ರಾಣ ಕಳೆದುಕೊಂಡ ಅಜೀಶ್‌ ಎಂಬವರ ಕುಟುಂಬಕ್ಕೆ ಕರ್ನಾಟಕ ಸರ್ಕಾರ (Karnataka Government) 15 ಲಕ್ಷ ರೂ. ಪರಿಹಾರ ನೀಡುವ ಮೂಲಕ ವಿವಾದ ಸೃಷ್ಟಿಯಾಗಿದೆ. ಈ ನಡುವೆ, 2023ರ ನವೆಂಬರ್‌ನಲ್ಲಿ ಹಾಸನದಲ್ಲಿ ಆನೆ ದಾಳಿಗೆ (Elephant Attack) ಬಲಿಯಾದ ವ್ಯಕ್ತಿಗೆ ಕೇವಲ 7.5 ಲಕ್ಷ ರೂ. ಪರಿಹಾರ ನೀಡಿದ್ದು ಈಗ ಚರ್ಚೆಗೆ ಕಾರಣವಾಗಿದೆ.

ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿ ಸಕಲೇಶಪುರ ತಾಲ್ಲೂಕಿನ ಹೆಬ್ಬನಹಳ್ಳಿ ಗ್ರಾಮದಲ್ಲಿ ಮನು ಎಂಬವರು ಕಾಡಾನೆ ತುಳಿತಕ್ಕೆ ಬಲಿಯಾಗಿದ್ದರು. 2023 ನ.1 ರಂದು ಕಾಡಾನೆ ದಾಳಿಗೆ ಬಲಿಯಾಗಿದ್ದ ಮನು ಅವರ ಕುಟುಂಬಕ್ಕೆ ಇನ್ನೂ ಪೂರ್ಣ ಪ್ರಮಾಣದ ಪರಿಹಾರ ಸಿಕ್ಕಿಲ್ಲ.

ಅಂದು ಆನೆ ದಾಳಿಯಿಂದ ಆಕ್ರೋಶಿತರಾದ ಸ್ಥಳೀಯರು ಮೃತದೇಹ ಮೇಲೆತ್ತಲು ಬಿಡದೆ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್‌ ಅವರಿಗೆ ಕರೆ ಮಾಡಿದ್ದ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರು ಏಳುವರೆ ಲಕ್ಷ ರೂ. ಪರಿಹಾರವನ್ನು ಇಂದಿನಿಂದಲೇ ಹದಿನೈದು ಲಕ್ಷಕ್ಕೆ ಹೆಚ್ಚಿಸಿದ್ದೇವೆ. ಮನು ಕುಟುಂಬಕ್ಕೆ ಹದಿನೈದು ಲಕ್ಷ ಪರಿಹಾರ ನೀಡುತ್ತೇವೆ ಎಂದು ಹೇಳಿದ್ದರು.

ಮಧ್ಯರಾತ್ರಿ ಹೆಬ್ಬನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದ ಅಂದಿನ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರ ಮನವಿ ಮತ್ತು ಭರವಸೆಗೆ ಸ್ಪಂದಿಸಿದ ಪ್ರತಿಭಟನಾಕಾರರು ಅಹೋರಾತ್ರಿ ಧರಣಿ ವಾಪಾಸ್ ಪಡೆದಿದ್ದರು.

ಆದರೆ, ಮನು ಕುಟುಂಬಕ್ಕೆ ಬಂದಿರುವುದು ಏಳುವರೆ ಲಕ್ಷ ರೂ. ಪರಿಹಾರ ಮಾತ್ರ. ಉಳಿದ ಏಳುವರೆ ಲಕ್ಷ ಪರಿಹಾರದ ಹಣ ನೀಡಲು ಅರಣ್ಯ ಇಲಾಖೆ ಹಾಗೂ ಸರ್ಕಾರ ನಾನಾ ಸಬೂಬು ಹೇಳುತ್ತಿದೆ.

ಮನು 2023 ನ.1 ರಂದು ಮೃತಪಟ್ಟಿದ್ದಾರೆ. ಆದರೆ ಡಿ.15ರಿಂದ ಪರಿಹಾರ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದಾರೆ ಎನ್ನುತ್ತಿದ್ದಾರೆ ಅಧಿಕಾರಿಗಳು. ಹೀಗಾಗಿ ರಾಜ್ಯದಲ್ಲಿ ರಾಜ್ಯದಲ್ಲಿ ಬಲಿಯಾದವನಿಗೆ ಅನ್ಯಾಯವಾಗಿದೆ. ಹೊರ ರಾಜ್ಯದಲ್ಲಿ ಬಲಿಯಾದವನಿಗೆ ನ್ಯಾಯ ಕೊಡಿಸಲಾಗುತ್ತಿದೆ ಎಂದು ಮಲೆನಾಡಿನಲ್ಲಿ ಆಕ್ರೋಶ ಭುಗಿಲೆದ್ದಿದೆ.

ಇದನ್ನೂ ಓದಿ: Elephant Attack : ಕೇರಳದ ವ್ಯಕ್ತಿಗೆ ಪರಿಹಾರ ಕೊಟ್ಟಿದ್ದು ಯಾಕೆಂದರೆ, ಕೊಂದಿದ್ದು ಕರ್ನಾಟಕದ ಆನೆ!

ಹಾಸನ ಜಿಲ್ಲೆಯ ಬೇಲೂರು ಭಾಗದಲ್ಲಿ ದಾಂಧಲೆ ಎಬ್ಬಿಸಿದ್ದ ಮಕ್ನಾ ಎಂಬ ಆನೆಯನ್ನು ಸೆರೆ ಹಿಡಿದು ಬಂಡೀಪುರ ಕಾಡಿಗೆ ಸೇರಿಸಲಾಗಿತ್ತು. ರೇಡಿಯ ಕಾಲರ್‌ ಅಳವಡಿಸಿದ್ದ ಆನೆ ವಯನಾಡಿನ ಮೂಲಕ ಕೇರಳ ಪ್ರವೇಶ ಮಾಡಿ ಅಲ್ಲಿ ಅನಾಹುತ ಮಾಡಿದೆ. ಅಜೀಶ್‌ ಎಂಬವರನ್ನು ಕೊಂದು ಹಾಕಿ ಮರಳಿ ಕರ್ನಾಟಕದ ಗಡಿ ದಾಟಿ ಬಂದಿದೆ. ಕರ್ನಾಟಕದ ಆನೆಯ ಪುಂಡಾಟ ಎಂಬ ಆಕ್ರೋಶ, ವಯನಾಡು ಸಂಸದ ರಾಹುಲ್‌ ಗಾಂಧಿ ಅವರ ಮನವಿಯನ್ನು ಮುಂದಿಟ್ಟುಕೊಂಡು ಕರ್ನಾಟಕ ಸರ್ಕಾರ 15 ಲಕ್ಷ ರೂ. ಪರಿಹಾರ ಘೋಷಣೆ ಮಾಡಿತ್ತು.

Exit mobile version