ಹಾಸನ: ಹಾಸನದಲ್ಲಿ ಹಾಡಹಗಲೇ ಗುಂಡಿನ ದಾಳಿ (Hassan Shoot Out) ನಡೆದಿದೆ. ನಡುರಸ್ತೆಯಲ್ಲೇ ಗುಂಡಿಕ್ಕಿ ಒಬ್ಬನ ಹತ್ಯೆ ಆಗಿದ್ದರೆ, ಮತ್ತೊಬ್ಬ ತಾನೇ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. ಹಾಸನ ನಗರದ ಹೊಯ್ಸಳನಗರ ಬಡಾವಣೆಯಲ್ಲಿ ಜೂನ್ 20ರ ಮಧ್ಯಾಹ್ನ ಘಟನೆ ನಡೆದಿದೆ. ಸ್ಥಳಕ್ಕೆ ಕೆಆರ್‌ಪುರಂ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಮೊದಮೊದಲು ಕಾರಿನಲ್ಲಿದ್ದ ಇಬ್ಬರನ್ನು ಅಟ್ಟಾಡಿಸಿ ಹಂತಕರು ಗುಂಡಿಟ್ಟು ಕೊಂದಿದ್ದಾರೆ ಎನ್ನಲಾಗಿತ್ತು. ಕಾರಿನೊಳಗೆ ಒಬ್ಬನ ಮೃತದೇಹ ಇದ್ದರೆ ಮತ್ತೊಬ್ಬ ಶವ ರಸ್ತೆ ಬದಿಯಲ್ಲಿ ಬಿದ್ದಿತ್ತು. ಆದರೆ ಇದೀಗ ತನಿಖೆಯಲ್ಲಿ ಒಂದೊಂದು ವಿಷಯ ಹೊರ ಬರುತ್ತಿದೆ. ಘಟನಾ ಸ್ಥಳಕ್ಕೆ ಎಸ್‌ಪಿ ಮೊಹಮ್ಮದ್ ಸುಜೀತಾ ಭೇಟಿ ನೀಡಿದ್ದಾರೆ. ಕೃತ್ಯದ ನಡೆದ ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಭೇಟಿ ನೀಡಿದ್ದಾರೆ. ಆಸ್ತಿ ವಿಚಾರಕ್ಕೆ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ರಿಯಲ್ ಎಸ್ಟೇಟ್‌ಗೆ ನಡೆಯಿತಾ ಕೊಲೆ
ಹಾಸನದ ಶರಾಪರ್ ಅಲಿ ಹಾಗೂ ಬೆಂಗಳೂರಿನ ಆಸೀಫ್ ಅಲಿ ಮೃತರು ಎಂದು ತಿಳಿದು ಬಂದಿದೆ. ಶರಾಪರ್ ಅಲಿ ಶುಂಠಿ ವ್ಯಾಪಾರಿ ಆಗಿದ್ದರೆ, ಬೆಂಗಳೂರು ಮೂಲದ ಆಸೀಫ್ ಅಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ. ಇಬ್ಬರ ನಡುವೆ ರಿಯಲ್ ಎಸ್ಟೇಟ್ ವಿಚಾರಕ್ಕೆ ಗಲಾಟೆ ನಡೆದು ಹತ್ಯೆಯಾಗಿರಬಹುದೆಂದು ಶಂಕಿಸಲಾಗಿದೆ. ಬೆಂಗಳೂರು ಮೂಲದ ಆಶಿಫ್, ಶರಾಪರ್‌ನನ್ನು ಹತ್ಯೆಗೈದು ತಾನು ಶೂಟ್ ಮಾಡಿಕೊಂಡು ಆತ್ಮಹತ್ಯೆ ಶರಣಾಗಿರುವ ಸಾಧ್ಯತೆ ಇದೆ.
ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಮೃತದೇಹಗಳನ್ನು ಹಿಮ್ಸ್‌ಗೆ ಸ್ಥಳಾಂತರ ಮಾಡಲಾಗಿದೆ. ಪೊಲೀಸರು ಈ ಸಂಬಂಧ ಹೆಚ್ಚಿನ ತನಿಖೆಗೆ ಮುಂದಾಗಿದ್ದಾರೆ.
ಸ್ಥಳ ಪರಿಶೀಲನೆ ಬಳಿಕ ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ಪ್ರತಿಕ್ರಿಯಿಸಿದ್ದಾರೆ. ಗುರುವಾರ ಮಧ್ಯಾಹ್ನ 1.15ಕ್ಕೆ ಘಟನೆ ನಡೆದ ಬಗ್ಗೆ ಮಾಹಿತಿ ಬಂದಿದೆ. ಸ್ಥಳೀಯ ಅಧಿಕಾರಿಗಳ ಪರಿಶೀಲನೆ ಬಳಿಕ ಮೃತರ ಗುರುತು ಪತ್ತೆಯಾಗಿದೆ. ಕಾರಿನ ಹೊರಗೆ ಬಿದ್ದಿದ್ದವರು ಷರಾಫತ್ ಅಲಿ (50) ಕಾರಿನ ಒಳಗೆ ಪತ್ತೆಯಾದ ಶವ ಆಸಿಫ್ ಅಲಿಯವರದ್ದು.
ಘಟನೆ ನಡೆಯುವ ಕೆಲ ಸಮಯದ ಮುನ್ನ ಇಬ್ಬರ ನಡುವೆ ವಾಗ್ವಾದ ನಡೆದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಇಬ್ಬರ ನಡುವೆ ಏನೊ ನಡೆದಂತೆ ಕಾಣುತ್ತಿದೆ. ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ. ಈ ಪ್ರಕರಣವನ್ನು ತಾತ್ವಿಕ ಅಂತ್ಯಕ್ಕೆ ಕೊಂಡೊಯ್ಯುವ ಕೆಲಸ ಆಗಲಿದೆ. ಮೇಲ್ನೋಟಕ್ಕೆ ಇದೊಂದು ಗುಂಡಿನ ದಾಳಿ ಎಂಬುದು ಕಾಣಿಸುತ್ತಿದೆ.
ಮೃಪಟ್ಟವರು ಇಬ್ಬರೂ ಕೂಡ ಪರಿಚಿತರೇ ಆಗಿದ್ದಾರೆ. ಷರಾಫತ್ ಅಲಿ ಮೂಲತಃ ಬಿಹಾರದವರು, ಚಿಕ್ಕವರಿದ್ದಾಗಲೇ ಇಲ್ಲಿ ಬಂದು ನೆಲೆಸಿದ್ದಾರೆ. ಆಸಿಫ್ ಬೆಂಗಳೂರಿನವರು ಅವರು ಹಾಸನ ಮಹಿಳೆಯನ್ನು ಮದುವೆಯಾಗಿದ್ದಾರೆ. ಪಿಸ್ತೂಲ್ ಕೂಡ ಲೈಸೆನ್ಸ್ ಪಡೆದದ್ದು ಎಂದು ಗೊತ್ತಾಗಿದೆ. ಆಸಿಫ್ ಅಲಿ ಅವರು ಬೆಂಗಳೂರಿನಲ್ಲಿ ಪಿಸ್ತೂಲ್ ಲೈಸೆನ್ಸ್ ಪಡೆದ ಬಗ್ಗೆ ಮಾಹಿತಿ ಇದ್ದು ದಾಖಲೆ ಪರಿಶೀಲನೆ ನಡೆಸಲಾಗುತ್ತಿದೆ. ಇನ್ನೂ ಪಿಸ್ತೂಲ್ ಕೂಡ ಕಾರಿನ ಒಳಗೆ ಇತ್ತು. ಕಾರು ಷರಾಫತ್ ಅಲಿ ಅವರ ಹೆಸರಿನಲ್ಲಿ ಇದೆ ಎಂದು ಮಾಹಿತಿ ನೀಡಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ