Site icon Vistara News

ಹಾಸನ ನಗರಸಭೆ ಸದಸ್ಯ ಭೀಕರ ಹತ್ಯೆ! ಹಳೇ ದುಶ್ಮನಿ ಕಾರಣ ಎಂದು ಪೊಲೀಸರ ಶಂಕೆ

prashant-nagaraj hassan murdered

ಹಾಸನ: ಹಾಸನದಲ್ಲಿ ಲಾಂಗು ಮಚ್ಚು ಆರ್ಭಟ ಮತ್ತೆ ಮುಂದುವರಿದಿದೆ. ನಗರ ಸಭೆಯ ಸದಸ್ಯ ಪ್ರಶಾಂತ್‌ ಎಂಬುವರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಪ್ರಶಾಂತ್‌ ಅವರ ತಂದೆ ಹಾ.ರಾ ನಾಗರಾಜ್‌ ಹಾಗೂ ಗ್ಯಾರಳ್ಳಿ ತಮ್ಮಯ್ಯ ನಡುವೆ ಈ ಹಿಂದೆ ದುಶ್ಮನಿಯಿತ್ತು. ಈ ವೈಷಮ್ಯವೇ ಸಾಲು ಸಾಲು ಕೊಲೆಗೆ ಕಾರಣ ಎಂದು ಪೊಲೀಸರು ಶಂಕೆ ಪಟ್ಟಿದ್ದಾರೆ.

ಹಾ.ರಾ. ನಾಗರಾಜ್‌ ಹಾಗೂ ಗ್ಯಾರಳ್ಳಿ ತಮ್ಮಯ್ಯ ಎಂಬುವರ ಮಧ್ಯೆ ತೀವ್ರವಾದ ದುಶ್ಮನಿಯಿತ್ತು. ಈ ಹಿನ್ನೆಲೆಯಲ್ಲಿ ಹಾ.ರಾ. ನಾಗರಾಜ್‌ ಅವರನ್ನು ಗ್ಯಾರಳ್ಳಿ ತಮ್ಮಯ್ಯ ಕೊಲೆ ಮಾಡಿದ್ದರು. ನಾಗಾರಜ್‌ ಅವರ ಪುತ್ರ ಪ್ರಶಾಂತ್‌ ಹಾಗೂ ಅವರ ಸಹೋದರರು ಇದರಿಂದ ಕೋಪಗೊಂಡು ತಮ್ಮಯ್ಯ ಅವರನ್ನು ಕೊಲೆ ಮಾಡಿದ್ದರು. ಈ ಪ್ರಕರಣದಲ್ಲಿ ಪ್ರಶಾಂತ್‌ ಹಾಗೂ ಅವರ ಸಹೋದರರನ್ನು ಬಂಧಿಸಲಾಗಿತ್ತು. ಜೈಲಿನಲ್ಲಿ ಶಿಕ್ಷೆ ಅನುಭವಿಸಿ ಬಿಡುಗಡೆಯಾದ ಬಳಿಕ ಪ್ರಶಾಂತ್‌ ಯಾವುದೇ ಪ್ರಕರಣದಲ್ಲಿ ಗುರುತಿಸಿಕೊಂಡಿರಲಿಲ್ಲ. ಆದರೆ ಈಗ ಏಕಾಏಕಿ ಅವರನ್ನು ಕೊಲೆ ಮಾಡಲಾಗಿದೆ. ನಾಗರಾಜ್‌ ಹಾಗೂ ತಮ್ಮಯ್ಯ ಕೊಲೆ ಪ್ರಕರಣ ಕಳೆದು ಅಂದಾಜು ಒಂದು ದಶಕದ ನಂತರ ಮತ್ತೆ ನೆತ್ತರು ಹರಿದಿದೆ. ಈ ಹಿಂದೆ ಇದ್ದ ದುಶ್ಮನಿಯೇ ಈ ಕೊಲೆಗೆ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಜೈಲಿನಿಂದ ಬಿಡುಗಡೆಯಾದ ಪ್ರಶಾಂತ್‌ ಕಳೆದ ವರ್ಷ ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಅತಿ ಹೆಚ್ಚು ಮತದಿಂದ ಗೆಲುವು ಸಾಧಿಸಿದ್ದರು. ಕಚೇರಿಯಿಂದ ಮನೆಗೆ ತೆರಳುತ್ತಿದ್ದ ವೇಳೆಗೆ ಪ್ರಶಾಂತ್‌ ಅವರನ್ನು ಅಟ್ಟಾಡಿಸಿಕೊಂಡು ಹೋಗಿ, ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ.

ಹಾಸನದ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಹಾಸನ ಎಸ್ಪಿ ಶ್ರೀನಿವಾಸ್‌ಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಪ್ರಕರಣದ ಕುರಿತು ಎಚ್.ಡಿ ರೇವಣ್ಣ ಕೂಡ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಹಾಸನ ಸಿಟಿ ಮತ್ತು ರೂರಲ್‌ ಸ್ಟೇಷನ್‌ ರೌಡಿಗಳಿಗೆ ಆಶ್ರಯ ತಾಣವಾಗಿದೆ. ಸರ್ಕಲ್‌ ಇನ್ಸ್‌ಪೆಕ್ಟರ್‌ ರೇಣುಕಾ ಪ್ರಸಾದ್‌ ಸರಿಯಾದ ರೀತಿಯಲ್ಲಿ ತನಿಖೆ ನಡೆಸಬೇಕು. ಅವರು ಜವಾಬ್ಧಾರಿಯುತವಾಗಿ ಕಾರ್ಯ ನಿರ್ವಹಿಸಬೇಕು. ಸರಿಯಾಗಿ ಕಾರ್ಯ ನಿರ್ವಹಿಸದಿರುವ ಅವರನ್ನು ಸಸ್ಪೆಂಡ್‌ ಮಾಡಬೇಕು ಎಂದು ಆಗ್ರಹಿಸಿದರು. ಹಾಸನದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಮತ್ತೊಂದು ಗ್ಯಾಂಗ್‌ಗೆ ಮಾಹಿತಿ ಕೊಟ್ಟ ಯುವಕ ಬರ್ಬರ ಹತ್ಯೆ: 8 ಆರೋಪಿಗಳ ಬಂಧನ

Exit mobile version