ಹಾಸನ: ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದ ಸೈನಿಕನ ತಾಯಿ ಒಂದೂವರೆ ತಿಂಗಳ ಬಳಿಕ ಅಸ್ತಿಪಂಜರದ ಸ್ಥಿತಿಯಲ್ಲಿ (Hassan Crime) ಪತ್ತೆಯಾಗಿದ್ದಾರೆ.
ಜುಲೈ 20ರಂದು ಸೈನಿಕ ರಾಕೇಶ್ ತಾಯಿ ರತ್ನಮ್ಮ (55) ನಾಪತ್ತೆಯಾಗಿದ್ದರು. ಮಹಿಳೆ ಕಾಣೆ ಬಗ್ಗೆ ಶಾಂತಿಗ್ರಾಮ ಪೊಲೀಸ್ ಠಾಣೆಗೆ ರತ್ನಮ್ಮ ಪುತ್ರಿಯರು ದೂರು ನೀಡಿದ್ದರು. ಕಳೆದ ಒಂದೂವರೆ ತಿಂಗಳಿನಿಂದ ಬಾರಿ ಹುಡುಕಾಟ ನಡೆಸಲಾಗಿತ್ತು. ಆದರೂ ಪತ್ತೆಯಾಗಿರಲಿಲ್ಲ. ಈಗ ಗ್ರಾಮದ ಜೋಳದ ಹೊಲದಲ್ಲಿ ಅಸ್ತಿಪಂಜರ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅದರ ಮೇಲೆ ರತ್ನಮ್ಮ ಅವರ ಸೀರೆ ಇದ್ದರಿಂದ ಗುರುತು ಪತ್ತೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಸಮರ್ಪಕ ತನಿಖೆಯಾಗಿಲ್ಲ- ಕುಟುಂಬಸ್ಥರ ಆರೋಪ
ಪೊಲೀಸರಿಗೆ ದೂರು ಕೊಟ್ಟರು ಸರಿಯಾಗಿ ತನಿಖೆ ನಡೆಸಿಲ್ಲ ಎಂದು ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಎ.ಗುಡುಗನಹಳ್ಳಿ ಗ್ರಾಮದ ಮಹೇಶ್ ಎಂಬುವವರ ವಿರುದ್ಧ ಕುಟುಂಬಸ್ಥರ ಕೊಲೆ ಆರೋಪ ಮಾಡಿದ್ದು, ಚಿನ್ನದ ಸರದ ಆಸೆಗೆ ರತ್ನಮ್ಮನನ್ನು ಮಹೇಶ್ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.
ದುಷ್ಕರ್ಮಿಗಳು ಕೊಲೆ ಮಾಡಿ ಮೃತದೇಹವನ್ನು ಜೋಳದ ಹೊಲದಲ್ಲಿ ಬಿಸಾಡಿ ಹೋಗಿರಬಹುದು ಎಂದು ಶಂಕಿಸಲಾಗಿದೆ. ಸೋಮವಾರ ಜೋಳದ ತೆನೆ ಕಟಾವಿಗೆ ಹೋದಾಗ ಹೊಲದಲ್ಲಿ ಅಸ್ತಿಪಂಜರ ಪತ್ತೆಯಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ಉದಯ್ಭಾಸ್ಕರ್ ಸೇರಿ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತಲೆ ಬುರುಡೆ, ಮೂಳೆಗಳನ್ನು ಸಂಗ್ರಹಿಸಿ ಹಾಸನ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | ಏನೋ ಮಗ ನೀರು ಕೊಡೋ ಅಂದಿದ್ದಕ್ಕೇ ಚಾಲಕನ ಕೊಲೆ: ನನ್ನೇ ಮಗ ಅಂತೀಯಾ ಅಂತ ರೊಚ್ಚಿಗೆದ್ದು ಮರ್ಡರ್!