ಹಾಸನ: ಹಾಸ್ಟೆಲ್‌ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿಯ ಶವ (Self harming) ಪತ್ತೆಯಾಗಿದೆ. ಹಾಸನ ನಗರದ ಉದಯಗಿರಿಯಲ್ಲಿರುವ (Hasana News) ಮಾಸ್ಟರ್ ಪಿಯು ಕಾಲೇಜಿನ ಹಾಸ್ಟೆಲ್‌ನಲ್ಲಿ ಈ ಘಟನೆ ನಡೆದಿದೆ. ವಿಕಾಶ್ (18) ಮೃತ ದುರ್ದೈವಿ.
ಚನ್ನರಾಯಪಟ್ಟಣ ತಾಲೂಕಿನ ಬೆಳಗುಲಿ ಗ್ರಾಮದ ಸುರೇಶ್ ಹಾಗೂ ಮಮತಾ ದಂಪತಿಯ ಪುತ್ರ ವಿಕಾಸ್ ಎಂಬಾತ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ. ಮಾಸ್ಟರ್ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ವಿಕಾಶ್ ಅಲ್ಲಿನ ಹಾಸ್ಟೆಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಫೆ.22ರ ಗುರುವಾರ ಬೆಳಗ್ಗೆ ಕಾಲೇಜಿಗೆ ತೆರಳಿ ನಂತರ ಒಬ್ಬನೇ ಹಾಸ್ಟೆಲ್‌ಗೆ ವಾಪಸ್ ಆಗಿದ್ದ. ಬಳಿಕ ಹಾಸ್ಟೆಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ವಿಕಾಶ್ ಪೋಷಕರು ಸ್ಥಳಕ್ಕಾಗಮಿಸಿದ್ದು, ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ. ಮಗನ ಸಾವಿಗೆ ಹಾಸ್ಟೆಲ್ ವಾರ್ಡನ್ ಕಾರಣ ಎಂದು ಆರೋಪಿಸಿದ್ದಾರೆ. ಆಡಳಿತ ಮಂಡಳಿಯ ಪ್ರಮುಖರು ಬರುವವರೆಗೂ ಮೃತದೇಹವನ್ನು ತೆಗೆಯಲು ಬಿಡಲ್ಲ ಎಂದು ಪಟ್ಟು ಹಿಡಿದರು.
ಇದನ್ನೂ ಓದಿ: Bengaluru News : ಬೆಂಗಳೂರಲ್ಲಿ ವೃದ್ಧ ದಂಪತಿ ಸೂಸೈಡ್
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಡಾವಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಮೃತನ ಸಂಬಂಧಿಕರು ಪೊಲೀಸರ ಜತೆಗೆ ವಾಗ್ವಾದ ನಡೆಸಿದರು. ಘಟನೆ ನಡೆದು ಮೂರು ಗಂಟೆಯಾದರೂ ಆಡಳಿತ ಮಂಡಳಿಯ ಯಾವ ಸಿಬ್ಬಂದಿಯು ಬಂದಿಲ್ಲ ಎಂದು ಕಿಡಿಕಾರಿದರು. ಈ ಸಂದರ್ಭದಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪರಿಸ್ಥಿತಿ ನಿಭಾಯಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಮತ್ತೊಂದು ಕಡೆ ಮಗನನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು.
ಇನ್ನೂ ಇದೇ ವೇಳೆ ಆಡಳಿತ ಮಂಡಳಿಯ ಪರವಾಗಿ ಮಾತನಾಡಿದ ವ್ಯಕ್ತಿಯನ್ನು ಸುತ್ತುವರೆದು ಹಲ್ಲೆಗೆ ಯತ್ನಿಸಿದ ಘಟನೆಯು ನಡೆದಿದೆ. ಕೂಡಲೆ ಎಚ್ಚೆತ್ತ ಪೊಲೀಸರು ಆ ವ್ಯಕ್ತಿಯನ್ನು ಕರೆದೊಯ್ದಲು ಮುಂದಾಗಿದ್ದಾರೆ, ಈ ವೇಳೆ ಯುವಕನ ಕುಟುಂಬಸ್ಥರು ಪೊಲೀಸ್ ಜೀಪ್ ಸುತ್ತುವರೆದು ಆಕ್ರೋಶಿಸಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿಯನ್ನು ನಿಯೋಜನೆ ಮಾಡಿ ಪರಿಸ್ಥಿತಿಯನ್ನು ಪೊಲೀಸರು ತಿಳಿಗೊಳಿಸಿದರು. ಪೋಷಕರ ಜತೆ ಮಾತನಾಡಿ ಮನವೊಲಿಸಿ ಮೃತದೇಹವನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ರವಾನಿಸಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ