Site icon Vistara News

JDS Karnataka : ಎಲ್ಲ ಸೈಲೆಂಟಾಗಿರಿ;‌ ನಾನೇ ಸರಿಮಾಡುವೆ: ಹಾಸನ ಸಮಸ್ಯೆ ಬಗೆಹರಿಸಲು ಸ್ವತಃ ಮೈದಾನಕ್ಕಿಳಿದ ಎಚ್‌.ಡಿ. ದೇವೇಗೌಡ

HD Deve Gowda

ರಮೇಶ ದೊಡ್ಡಪುರ, ಬೆಂಗಳೂರು
ಹಾಸನ ಜೆಡಿಎಸ್‌ನಲ್ಲಿ ಉದ್ಭವಿಸಿರುವ ಸಂಘರ್ಷವನ್ನು ಸರಿಪಡಿಸಲು (JDS Karnataka) ಸ್ವತಃ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡರೇ ಮೈದಾನಕ್ಕಿಳಿದಿದ್ದಾರೆ. ತಾನೇ ಸಮಸ್ಯೆಯನ್ನು ಬಗೆಹರಿಸುತ್ತೇನೆ, ಎಲ್ಲರೂ ಮಾತನಾಡುವ ಬದಲು ಸುಮ್ಮನಿರಿ ಎಂದು ಹೇಳಿದ್ದಾರೆ.

ಈಗಾಗಲೆ ವಿಧಾನಸಭೆ ಚುನಾವಣೆಗೆ ಜೆಡಿಎಸ್‌ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಆದರೆ ಹಾಸನದ ಒಂದೂ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಎಚ್‌.ಡಿ. ಕುಮಾರಸ್ವಾಮಿ ಘೋಷಣೆ ಮಾಡಿಲ್ಲ. ಹಾಸನದ ವಿಚಾರವನ್ನು ಎಚ್‌.ಡಿ. ರೇವಣ್ಣ ಅವರೇ ನೋಡಿಕೊಳ್ಳುತ್ತಾರೆ ಎಂದು ತಿಳಿಸಿದ್ದರು.

ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಎರಡು ದಶಕದ ನಂತರ ಬಿಜೆಪಿ ಜಯಗಳಿಸಿದೆ. ಎರಡು ದಶಕದ ಅಧಿಕಾರವನ್ನು ಅದೂ ಜಿಲ್ಲಾ ಕೇಂದ್ರದಲ್ಲೇ ಕಳೆದುಕೊಂಡಿರುವುದು ಜೆಡಿಎಸ್‌ ಪಕ್ಷದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಹೇಗಾದರೂ ಮಾಡಿ ಕ್ಷೇತ್ರವನ್ನು ಹಿಂಪಡೆಯಬೇಕು ಎಂದು ಪಣತೊಟ್ಟಿದೆ. ಬಿಜೆಪಿ ಶಾಸಕ ಪ್ರೀತಂ ಗೌಡ ಸಹ ಹಿಂದಿಗಿಂತ ಹೆಚ್ಚು ಶಕ್ತಿಯುತವಾಗಿದ್ದಾರೆ.

ದೇವೇಗೌಡರ ಕುಟುಂಬಕ್ಕೆ ಠಕ್ಕರ್‌ ಕೊಡುತ್ತ, ಅವರನ್ನು ಎದುರುಹಾಕಿಕೊಳ್ಳುವ ಸಾಮರ್ಥ್ಯ ಎಂದು ತೋರಿಸುತ್ತಿದ್ದಾರೆ. ಹೀಗಾಗಿ ಪ್ರೀತಂ ಗೌಡ ಅವರಿಗೆ ಬಿಜೆಪಿಯಿಂದಲೂ ಟಿಕೆಟ್‌ ಸಿಗುವ ಬಗ್ಗೆ ಚರ್ಚೆಗಳು ನಡೆದಿವೆ. ಸ್ವತಃ ಪ್ರೀತಂ ಗೌಡ ಸಹ ಈ ಕುರಿತು ಸ್ಪಷ್ಟ ಮಾತುಗಳನ್ನು ಹೇಳಿಲ್ಲ. ಪಕ್ಷದ ಹೊರತಾಗಿಯೂ ಪ್ರೀತಂ ಗೌಡ, ಇಡೀ ಕ್ಷೇತ್ರದಲ್ಲಿ ಪ್ರಭಾವವನ್ನು ಹೆಚ್ಚಿಸಿಕೊಂಡಿದ್ದಾರೆ. ಮುಖ್ಯವಾಗಿ, ದೇವೇಗೌಡರ ಕುಟುಂಬವನ್ನು ಎದುರುಹಾಕಿಕೊಳ್ಳುವ ಸಾಮರ್ಥ್ಯ ಇರುವವರು ಎಂದು ಹೆಸರು ಪಡೆದಿದ್ದಾರೆ. ಹಾಗಾಗಿ ಜೆಡಿಎಸ್‌ನಿಂದಲೂ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎನ್ನುವುದು ಜೆಡಿಎಸ್‌ ನಿರ್ಧಾರ.

ಈ ಹಿಂದೆ ನಾಲ್ಕು ಬಾರಿ ಶಾಸಕರಾಗಿದ್ದ, ಯಾವುದೇ ವಿವಾದಕ್ಕೆ ಒಳಗಾಗದ ಎಚ್‌.ಎಸ್‌. ಪ್ರಕಾಶ್‌ ಅವರ ಪುತ್ರ ಎಚ್‌.ಪಿ. ಸ್ವರೂಪ್‌ ಕೂಡ ಹಾಸನ ಟಿಕೆಟ್‌ ಆಕಾಂಕ್ಷಿ. ಪ್ರಕಾಶ್‌ ಅವರು ಕಳೆದ ಚುನಾವಣೆಯಲ್ಲಿ ಸೋತ ನಂತರ ನಿಧನರಾಗಿದ್ದರು. ಕ್ಷೇತ್ರದಲ್ಲಿ ಈ ಅನುಕಂಪದ ಅಲೆಯೂ ಇದ್ದು, ಸ್ವರೂಪ್‌ಗೆ ಟಿಕೆಟ್‌ ನೀಡಬೇಕು ಎನ್ನುವುದು ಜೆಡಿಎಸ್‌ನ ಒಂದು ಗುಂಪಿನ ನಿರೀಕ್ಷೆ.

ಆದರೆ ಪ್ರೀತಂ ಗೌಡ ಅವರನ್ನು ಎದುರಿಸಲು, ಮೃದು ಸ್ವಭಾವದ ಸ್ವರೂಪ್‌ ಕೈಯಲ್ಲಿ ಆಗುವುದಿಲ್ಲ, ಅವರ ಬಳಿ ಖರ್ಚು ಮಾಡಲು ಹಣವೂ ಇಲ್ಲ. ಹಾಗಾಗಿ ಎಚ್‌.ಡಿ. ರೇವಣ್ಣ ಪತ್ನಿ ಭವಾನಿ ರೇವಣ್ಣ ಸ್ಪರ್ಧಿಸಿದರೆ ಮಾತ್ರ ಜೆಡಿಎಸ್‌ ಪೈಪೋಟಿ ನೀಡಬಹುದು, ಗೆಲುವನ್ನು ನಿರೀಕ್ಷಿಸಬಹುದು ಎನ್ನುವುದು ಮತ್ತೊಂದು ಗುಂಪಿನ ವಾದ.

ದೇವೇಗೌಡರ ಕುಟುಂಬದಲ್ಲೂ ಈ ಕುರಿತು ಚರ್ಚೆಗಳು ನಡೆದಿವೆ ಎನ್ನಲಾಗಿದೆ. ಈ ಕಡೆ ಭವಾನಿ ಅವರು ಶಾಸಕ ಸ್ಥಾನಕ್ಕೆ ಪ್ರಯತ್ನ ನಡೆಸಿದ್ದಾರೆ ಎನ್ನುವ ಮಾತು ಬೆಳೆಯುತ್ತಲೆ, ಅತ್ತ ಎಚ್‌.ಡಿ. ಕುಮಾರಸ್ವಾಮಿಯವರ ಪತ್ನಿ ಅನಿತಾ ಕುಮಾರಸ್ವಾಮಿಯವರು ರಾಮನಗರ ಕ್ಷೇತ್ರವನ್ನು ಪುತ್ರ ನಿಖಿಲ್‌ ಕುಮಾರಸ್ವಾಮಿ ಅವರಿಗೆ ʼತ್ಯಾಗʼ ಮಾಡಿದ್ದರು. ತಾವು ಕ್ಷೇತ್ರ ತ್ಯಾಗ ಮಾಡಿದರೆ ಇತ್ತ ಭವಾನಿ ಅವರೂ ಹಾಸನದಿಂದ ಟಿಕೆಟ್‌ ಕೇಳುವುದನ್ನು ಕೈಬಿಡಬಹುದು ಎಂಬ ನಿರೀಕ್ಷೆ ಇತ್ತು ಎನ್ನಲಾಗಿದೆ. ಆದರೆ ಭವಾನಿ ಅವರು ತಮಗೆ ಟಿಕೆಟ್‌ ಬೇಕೆಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ : Karnataka Election | ಬ್ಯಾಟಿಂಗ್‌ ಕೊಡ್ತಾರೆ ಅನ್ನೋದು ಕನ್ಫರ್ಮ್‌ ಆದ ಮೇಲೆ ಬೌಲರ್‌ ಬಗ್ಗೆ ಯೋಚಿಸ್ತೀನಿ ಅಂದ್ರು ಪ್ರೀತಂ ಗೌಡ

ಈಗಾಗಲೆ ಸಾಕಷ್ಟು ಸಮಯದಿಂದ ಕ್ಷೇತ್ರದಲ್ಲಿ ಸಂಚಾರ ನಡೆಸಿರುವ ಭವಾನಿ ರೇವಣ್ಣ, ತಮಗೇ ಟಿಕೆಟ್‌ ನೀಡಲು ವರಿಷ್ಠರು ತೀರ್ಮಾನಿಸಿದ್ದಾರೆ ಎಂದು ಮೂರು ದಿನದ ಹಿಂದೆ ಹೇಳಿದ್ದರು. ಇದರಿಂದಾಗಿ ಪಕ್ಷದಲ್ಲಿ ಗೊಂದಲ ನಿರ್ಮಾಣವಾಗಿದೆ. ಭವಾನಿ ಅವರಿಗೆ ಟಿಕೆಟ್‌ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳದೇ ಇದ್ದರೂ, ʼಹಾಸನಕ್ಕೆ ಭವಾನಿ ಅವರು ಅನಿವಾರ್ಯವಾಗಿದ್ದರೆ ನಾನೇ ಹೇಳುತ್ತಿದ್ದೆʼ ಎಂದಿದ್ದಾರೆ. ಅಂದರೆ ಭವಾನಿ ಅವರು ಇಲ್ಲದೆಯೇ ಸ್ವರೂಪ್‌ ಅವರೇ ಗೆದ್ದುಕೊಂಡುಬರಬಹುದು ಎನ್ನುವ ಅರ್ಥ ನೀಡಿದ್ದಾರೆ. ಭವಿಷ್ಯದಲ್ಲಿ ಭವಾನಿ ಅವರಿಗೆ ಟಿಕೆಟ್‌ ನೀಡಿದರೂ, ಅವರ ಅನಿವಾರ್ಯತೆ ಇತ್ತು ಹಾಗಾಗಿ ಸ್ಪರ್ಧೆ ಮಾಡುತ್ತಿದ್ದಾರೆ ಎಂದು ಸಮರ್ಥನೆಯನ್ನೂ ಮಾಡಿಕೊಳ್ಳುವಂತಿದೆ ಕುಮಾರಸ್ವಾಮಿಯವರ ಮಾತು.

ಇದನ್ನೂ ಓದಿ : Karnataka Election : ನಾನು ಪ್ರಬಲ ಟಿಕೆಟ್‌ ಆಕಾಂಕ್ಷಿ ನಿಜ, ಭವಾನಿ ಅಕ್ಕಂಗೆ ಕೊಟ್ಟರೂ ಗೆಲ್ಲಿಸುವ ಕೆಲಸ ಮಾಡ್ತೀನಿ ಎಂದ ಸ್ವರೂಪ್‌

ಇತ್ತ ಸ್ವರೂಪ್‌ ಸಹ ಪ್ರತಿಕ್ರಿಯೆ ನೀಡಿದ್ದು, ತಾವು ಆಕಾಂಕ್ಷಿ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಆದರೆ ಭವಾನಿ ಅವರಿಗೆ ಟಿಕೆಟ್‌ ನೀಡಿದರೆ ನಾನೂ ಅವರ ಗೆಲುವಿಗೆ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ. ಸ್ವರೂಪ್‌ ಅವರಿಗೆ ನಿರ್ದಿಷ್ಟ ಅಭಿಮಾನಿಗಳು ಇಲ್ಲದಿದ್ದರೂ, ಈಗ ಭವಾನಿ ಅವರಿಗೆ ಟಿಕೆಟ್‌ ನೀಡಿದರೆ ಕ್ಷೇತ್ರವು ಮುಂದಿನ ಅನೇಕ ವರ್ಷಗಳವರೆಗೆ ದೇವೇಗೌಡರ ಕುಟುಂಬಕ್ಕೇ ಸೇರಿಬಿಡುತ್ತದೆ ಎಂಬ ಆತಂಕವೂ ಅನೇಕ ಸ್ಥಳೀಯ ನಾಯಕರಲ್ಲಿದೆ. ತಮ್ಮ ಭವಿಷ್ಯಕ್ಕೆ ಇದು ಮಾರಕ ಆಗಬಹುದು ಎಂಬ ನಿಟ್ಟಿನಲ್ಲಿ ಅನೇಕರು ಸ್ವರೂಪ್‌ ಸ್ಪರ್ಧೆಗೆ ಬೆಂಬಲ ನೀಡುತ್ತಿದ್ದಾರೆ ಎನ್ನಲಾಗಿದೆ.

ಇದೆಲ್ಲದರ ನಡುವೆ ಗೊಂದಲ ತೀವ್ರವಾಗಿರುವುದನ್ನು ಸ್ವತಃ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಗಮನಿಸಿದ್ದಾರೆ. ಹಾಸನದಲ್ಲಿ ತಮ್ಮದೇ ಸಂಪರ್ಕ ಜಾಲವನ್ನು ಹೊಂದಿರುವ ದೇವೇಗೌಡರು ಅದರ ಮೂಲಕ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಹಾಸನ ಟಿಕೆಟ್‌ ಕುರಿತು ಯಾರೂ ಮಾತನಾಡುವ ಅಗತ್ಯವಿಲ್ಲ. ಎಲ್ಲವನ್ನೂ ಪರಾಮರ್ಶೆ ನಡೆಸಿ ನಾನೇ ತೀರ್ಮಾನ ಮಾಡುತ್ತೇನೆ. ಇದನ್ನು ಇತ್ಯರ್ಥ ಮಾಡಿದ ನಂತರವಷ್ಟೇ ನಾನು ಹಾಸನಕ್ಕೆ ತೆರಳುತ್ತೇನೆ ಎಂದು ಎಲ್ಲರಿಗೂ ಸಂದೇಶ ರವಾನೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Exit mobile version