Site icon Vistara News

HD Devegowda : ನಾನು ಮಾಜಿ ಪ್ರಧಾನಿ, ತೀರ್ಪು ನೋಡದೆ ಮಾತಾಡಲ್ಲ; ಪ್ರಜ್ವಲ್‌ ಪ್ರಕರಣದ ಬಗ್ಗೆ ದೇವೇಗೌಡ ಪ್ರತಿಕ್ರಿಯೆ

HD Devegowda

ಹಾಸನ: ನಾನು ಮಾಜಿ ಪ್ರಧಾನಿ. ತೀರ್ಪು ನೋಡದೆ ಮಾತನಾಡುವುದಿಲ್ಲ: ಹೀಗೆಂದು ಹೇಳಿದ್ದಾರೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ (HD Devegowda) ಅವರು. ಹಾಸನ ಲೋಕಸಭಾ ಕ್ಷೇತ್ರದ (Hassan Lokasabha Constituency) ಸಂಸದರಾಗಿರುವ ಪ್ರಜ್ವಲ್‌ ರೇವಣ್ಣ (Prajwal Revanna) ಅವರನ್ನು ಹೈಕೋರ್ಟ್‌ (Karnataka High court) ಸಂಸದ ಹುದ್ದೆಯಿಂದ ಅನರ್ಹಗೊಳಿಸಿದ ವಿಚಾರಕ್ಕೆ ಸಂಬಂಧಿಸಿ ಅವರು ಪ್ರತಿಕ್ರಿಯೆ ನೀಡಿದರು.

ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಮಾವಿನಕೆರೆಯಲ್ಲಿ ಇರುವ ಕುಲ ದೇವರಿಗೆ ಶ್ರಾವಣ ಮಾಸದ ಶನಿವಾರ ಪೂಜೆ (Shravana Shanivara Pooja) ನೆರವೇರಿಸಲು ಬಂದಿದ್ದ ವೇಳೆ ಅವರು ಮಾಧ್ಯಮಗಳ ಜತೆ ಮಾತನಾಡಿದರು.

ನಾನು ಏನೂ ಮುಚ್ಚುಮರೆಯಿಂದ ಮಾತನಾಡಬೇಕಾಗಿಲ್ಲ. ಕೋರ್ಟ್‌ ತೀರ್ಪಿನ ಪ್ರತಿ ಇನ್ನೂ ಸಿಕ್ಕಿಲ್ಲ. ತೀರ್ಪು ನೋಡದೆ ಏನೂ ಮಾತನಾಡಲು ಆಗಲ್ಲ. ನಾನೊಬ್ಬ ಮಾಜಿ ಪ್ರಧಾನಿ ಆಗಿ ತೀರ್ಪು ಪೂರ್ತಿ ನೋಡದೆ ಮಾತನಾಡುವುದು ಸರಿಯಲ್ಲ. ಒಟ್ಟಾರೆಯಾಗಿ ಹೇಳುವುದಾದರೆ ಸಹಜವಾಗಿ ಹೈಕೋರ್ಟ್‌ ತೀರ್ಪನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನೆ ಮಾಡಬೇಕಾಗುತ್ತದೆ ಎಂದು ಎಚ್‌.ಡಿ. ದೇವೇಗೌಡರು ಹೇಳಿದರು.

ತೀರ್ಪಿನಲ್ಲಿ ಸದ್ಯ ಅನರ್ಹ ಎಂದಷ್ಟೇ ಹೇಳಿದ್ದಾರೆ. ನ್ಯಾಯಾಧೀಶರು ಅವರಿಗೆ ತಿಳಿದದ್ದು ಬರೆದಿದ್ದಾರೆ. ಹಾಗಾಗಿ ಅವರ ಬಗ್ಗೆ ನಾವು ಕಾಮೆಂಟ್ ಮಾಡಲು ಆಗಲ್ಲ. ಸಹಜವಾಗಿ ಸುಪ್ರೀಂಕೋರ್ಟ್‌ಗೆ ಹೋಗಲಾಗುತ್ತದೆ. ಮುಂದೆ ಏನಾಗುತ್ತೆ ಎಂದು ಹೇಳಲು ಆಗಲ್ಲ ಎಂದು ದೇವೇಗೌಡರು ಹೇಳಿದರು.

ʻʻನಮ್ಮ ಕುಲದೇವರಿಗೆ ಪೂಜೆ ಮಾಡಿ ಪ್ರಜ್ಚಲ್ ಬೆಂಗಳೂರಿಗೆ ಹೋಗಿದ್ದಾರೆ. ಬೆಳಗ್ಗೆ ಪ್ರಜ್ವಲ್‌ ಪೂಜೆ ಸಲ್ಲಿಸಿ ಕೋರ್ಟ್‌ ತೀರ್ಪಿನ ಬಗ್ಗೆ ಚರ್ಚೆ ಮಾಡಲು ಬೆಂಗಳೂರಿಗೆ ಹೋಗಿದ್ದಾರೆʼʼ ಎಂದು ದೇವೇಗೌಡರು ಹೇಳಿದ್ದಾರೆ.

ಇದನ್ನೂ ಓದಿ : Prajwal Revanna: ಸಂಸತ್‌ ಸದಸ್ಯತ್ವದಿಂದ ಪ್ರಜ್ವಲ್‌ ರೇವಣ್ಣ ಅನರ್ಹ; ಹೈಕೋರ್ಟ್‌ ಆದೇಶ

ಆನಂದದಿಂದ ಪೂಜೆ ಮಾಡಿದ ದೇವೇಗೌಡ

ʻʻಕುಲದೇವರಿಗೆ ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಶನಿವಾರದ ಪೂಜೆ ಸಲ್ಲಿಸಿದ್ದೇನೆ. ಮೊದಲ‌ ಶ್ರಾವಣ ಶನಿವಾರ ಬರುವುದಕ್ಕೆ ಆಗಿರಲಿಲ್ಲ. ಕಳೆದ ಬಾರಿಯೂ ಬರಲು ಆಗಿರಲಿಲ್ಲ. ಇವತ್ತು ನಾನು ಪತ್ನಿ, ಪುತ್ರ, ಮೊಮ್ಮಕ್ಕಳ ಜೊತೆ ಆನಂದವಾಗಿ ಪೂಜೆ ಮಾಡಿದ್ದೇವೆʼʼ ಎಂದು ಖುಷಿಪಟ್ಟರು.

ʻʻಕುಮಾರಸ್ವಾಮಿ ಅವರು ನಾಳೆ ಡಿಸ್ಚಾರ್ಜ್ ಆಗುತ್ತಾರೆ. ಆದರೆ ಅವರಿಗೆ ಕನಿಷ್ಠ ನಾಲ್ಕೈದು ದಿನ ಆದರು ರೆಸ್ಟ್ ಬೇಕಾಗುತ್ತದೆ. ಅವರಿಗೆ ಸ್ವಲ್ಪ ಅರೋಗ್ಯ ಸಮಸ್ಯೆ ಆಗಿದೆ. ಹಾಗಾಗಿ ನಾನೇ ರೆಸ್ಟ್‌ ತೆಗೆದುಕೊಳ್ಳುವಂತೆ ಹೇಳಿದ್ದೇನೆʼʼ ಎಂದು ಹೇಳಿದ ಅವರು, ನನಗೆ 93 ವರ್ಷ ತುಂಬಿದೆ. ಆದರೆ ಪಕ್ಷದ ಕೆಲಸ ಮಾಡಲು ಶಕ್ತಿ ಇರೋವರೆಗೆ ಹೋರಾಟ ಮಾಡುತ್ತೇನೆ. ನಾನು ಎರಡು ದಿನ ಇಲ್ಲೇ ಇರ್ತೇನೆ. ಮತ್ತೆ ಮುಂದಿನ ವಾರ ಬರ್ತೇನೆ. ಹಾಸನ ಮಾತ್ರವಲ್ಲದೆ ಬೇರೆ ಬೇರೆ ಕಡೆ ಹೋಗುತ್ತೇನೆʼʼ ಎಂದರು ಹೇಳಿದರು ದೇವೇಗೌಡರು.

Exit mobile version