Site icon Vistara News

HD Kumaraswamy: ಸಮಯ ಬಂದಾಗ ಮಿಲಿಟರಿಯನ್ನೂ ಕರೆ ತರುತ್ತೇವೆ; ಡಿಕೆಶಿಗೆ ತಿರುಗೇಟು ಕೊಟ್ಟ ಎಚ್‌ಡಿಕೆ

HD Kumaraswamy

ಹಾಸನ: ʼʼನಾನು ಅಂಕೋಲಾಕ್ಕೆ ಭೇಟಿ ನೀಡಿದ ವಿಚಾರ ಮುಂದಿಟ್ಟುಕೊಂಡು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ (DK Shivakumar) ಅವರು, ಕುಮಾರಸ್ವಾಮಿ ಇಲ್ಲಿ ಏಕೆ ಬರ್ತಾರೆ, ಮಿಲಿಟರಿ ಕರೆದುಕೊಂಡು ಬಂದಿದ್ದಾರಾ? ಎಂದು ಪ್ರಶ್ನಿಸಿದ್ದಾರೆ. ಅವರು ಏಕೆ ಆ ರೀತಿ ಹೇಳಿಕೆ ಕೊಟ್ಟರು ಅಂತ ಯೋಚನೆ ಮಾಡಿದೆ. ಈ ರಾಜ್ಯದಲ್ಲಿ ನಡೆಯುತ್ತಿರುವ ದರೋಡೆಯನ್ನು ನಿಲ್ಲಿಸಲು ಮಿಲಿಟರಿ ಕರೆದುಕೊಂಡು ಬನ್ನಿ ಎಂದಿದ್ದಾರೆ. ಅದಕ್ಕೊಂದು ಕಾಲ ಬರುತ್ತೆ, ಆಗ ಕರೆದುಕೊಂಡು ಬರೋಣʼʼ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ತಿರುಗೇಟು ನೀಡಿದರು.

ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ವೀಕ್ಷಣೆಗೆ ಹಾಸಕ್ಕೆ ಆಗಮಿಸಿದ ಅವರು ಕಾಂಗ್ರೆಸ್‌ ಮತ್ತು ಡಿ.ಕೆ.ಶಿವಕುಮಾರ್‌ ವಿರುದ್ಧ ವಾಗ್ದಾಳಿ ನಡೆಸಿದರು. ಶನಿವಾರ ಅಂಕೋಲಾಕ್ಕೆ ಎಚ್.ಡಿ ಕುಮಾರಸ್ವಾಮಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ್ದ ಡಿಕೆಶಿ, ʼʼಮಿಲಿಟರಿ ಕರೆದುಕೊಂಡು ಇಳಿದಿದ್ದರೆ ಎಚ್‌ಡಿಕೆ ಫೀಲ್ಡಿಗೆ ಬಂದಿದ್ದಾರೆ ಅಂತ ಹೇಳಬಹುದು. ಸುಮ್ಮನೇ ವಿಸಿಟ್ ಮಾಡಿ ಬಂದರೆ ಏನಾದ್ರೂ ಆಗುತ್ತಾ? ಒಂದೇ ಗಂಟೆಯಲ್ಲಿ ನಮ್ಮ ಕ್ಯಾಬಿನೆಟ್ ಸಚಿವರನ್ನು ಅಲ್ಲಿಗೆ‌ ಓಡಿಸಿದ್ದೇವೆ. ಮಂಕಾಳ್ ವೈದ್ಯ, ಕೃಷ್ಣಬೈರೇಗೌಡ ಅಲ್ಲಿಗೆ ಹೋಗಿದ್ದರು. ಏನೇನು ಮಾಡಬೇಕೊ ಅದನ್ನು ಮಾಡಿದ್ದಾರೆ, ಅಧಿಕಾರಿಗಳಿಗೆ ಸೂಚನೆ‌ ಕೊಟ್ಟಿದ್ದಾರೆ. ನಮ್ಮ ಸರ್ಕಾರ ಏನು ಮಾಡಬೇಕೋ ಅದನ್ನು ಮಾಡುತ್ತದೆ. ಈಗ ರಾಜಕಾರಣ ಬೇಡ, ಜನರನ್ನು ಉಳಿಸಿಕೊಳ್ಳುವ ಕೆಲಸ ಮಾಡೋಣʼʼ ಎಂದು ತಿಳಿಸಿದ್ದರು.

ಎಚ್‌ಡಿಕೆ ಹೇಳಿದ್ದೇನು?

ʼʼಡಿಕೆಶಿ ಪಾಪ ಕನಕಪುರದವರು. ಬ್ರ್ಯಾಂಡ್‌ ಬೆಂಗಳೂರು ಮಾಡುತ್ತೇನೆ ಎಂದು ಹೇಳುತ್ತಾರೆ. ಇನ್ನು ಕುಮಾರಸ್ವಾಮಿ 39 ಸೀಟ್ ಗೆದ್ದರೂ ಮುಖ್ಯಮಂತ್ರಿ ಮಾಡಿದ್ವಿ, ದೇವೇಗೌಡರು 16 ಸೀಟ್ ಗೆದ್ದರು ಪ್ರಧಾನಮಂತ್ರಿ ಮಾಡಿದ್ವು ಎಂದು ಕಾಂಗ್ರೆಸ್‌ನವರು ಹೇಳುತ್ತಾರೆ. ಅದರ ಜತೆಗೆ ಸರ್ಕಾರವನ್ನು ತೆಗೆದವರು ಯಾರು ಎನ್ನುವುದನ್ನೂ ಹೇಳಬೇಕಲ್ವಾ?ಕಾಂಗ್ರೆಸ್‌ ಮನೆ ಬಾಗಿಲಿಗೆ ನಾನು, ದೇವೇಗೌಡರು ಬಂದಿದ್ವಾ? ಅದೂ ಅಲ್ಲದೆ ದೇವೇಗೌಡರನ್ನು ಪ್ರಧಾನಮಂತ್ರಿ ಮಾಡಿದ್ದು ಕಮ್ಯೂನಿಸ್ಟ್‌ ಹಾಗೂ ಇತರರು. ಒಬ್ಬ ಕನ್ನಡಿಗನನ್ನು ತೆಗೆದವರು ಯಾರು? ನಾನು ಏನು ತಪ್ಪು ಮಾಡಿದೆ ಅಂತ ಸರ್ಕಾರ ತೆಗೆದರು?ʼʼ ಎಂದು ಎಚ್‌ಡಿಕೆ ಕಾಂಗ್ರೆಸ್‌ ಅನ್ನು ತರಾಟೆಗೆ ತೆಗೆದುಕೊಂಡರು.

ʼʼದಲಿತರು ಅಂತ ಕರೆಯಬೇಡಿ ಎಂದು ಚರ್ಚೆ ನಡೆದಿದೆ. ಅಹಿಂದ ಅಂತಾ ಎಷ್ಟು ವರ್ಷದಿಂದ ಹೆಸರು ಇಟ್ಟುಕೊಂಡಿದ್ದೀರಾ? ಅಹಿಂದ ಹೆಸರು ಇಟ್ಟುಕೊಂಡು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಅವಮಾನ ಮಾಡುತ್ತಿದ್ದೀರ. ಅವರಿಗೆ ಮೀಸಲಿಟ್ಟಿದ್ದ ಹಣ ಉಪಯೋಗಿಸಿಕೊಂಡಿದ್ದೀರಿʼʼ ಎಂದು ರಾಜ್ಯ ಸರ್ಕಾರದ ವಿರುದ್ಧ ಗುಡುಗಿದರು.

ಸಚಿವ ಮಂಕಾಳ ವೈದ್ಯಗೆ ತಿರುಗೇಟು

ಯಾವ ಸರ್ಕಾರವೂ ಹತ್ತು ಲಕ್ಷ ರೂ. ಪರಿಹಾರ ನೀಡಲು ಸಾಧ್ಯವೇ ಇಲ್ಲ ಎಂಬ ಸಚಿವ ಮಂಕಾಳ ವೈದ್ಯ ಅವರ ಹೇಳಿಕೆಗೆ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು. ಸಕಲೇಶಪುರ ತಾಲೂಕಿನ ದೊಡ್ಡತಪ್ಪಲು ಗ್ರಾಮದಲ್ಲಿ ಮಾತನಾಡಿದ ಅವರು, ʼʼಮಂಕಾಳ ವೈದ್ಯ ಅವರಿಗೆ ಸಮಯ ಸಿಕ್ಕಿದರೆ ಕೊಡುಗಿಗೆ ಭೇಟಿ ನೀಡಲಿ. ನನ್ನ ಕಾಲದಲ್ಲಿ ಹತ್ತು ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿದ್ದೇವೆ. ಒಂದು ಲಕ್ಷ ರೂ. ಪರಿಹಾರ ಕೊಟ್ಟಿದ್ದೇವೆ. ಪದಾರ್ಥ ಕೊಳ್ಳಲು ಐವತ್ತು ಸಾವಿರ ರೂ. ಕೊಟ್ಟಿದ್ದೇವೆ. ಗೊತ್ತಿಲ್ಲದೆ ಹೋದರೆ ಹೋಗಿ ನೋಡಿಕೊಂಡು ಬರಲಿʼʼ ಎಂದು ತಿಳಿಸಿದರು.

ʼʼನಾನು ಮತ್ತು ಬಿಜೆಪಿ ಅಶೋಕ್ ಒಟ್ಟಿಗೆ ಬಂದಿದ್ದೇವೆ. ಇಲ್ಲಿ ಜಿಲ್ಲಾಡಳಿತ ಸೂಕ್ಷ್ಮವಾಗಿ ನೋಡಲು ಸ್ವಲ್ಪ ಸಹಕಾರ ಕೊಟ್ಟಿದೆ. ನಾನು ಯಾರನ್ನು ಟೀಕೆ ಮಾಡಲು ಹೋಗಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಪರಸ್ಪರ ವಿಶ್ವಾಸದಲ್ಲಿ ಕೆಲಸ ಮಾಡಬೇಕು. ಟೆರರಿಸ್ಟ್ ಚಟುವಟಿಕೆಗಳಿಗಿಂತಲೂ ಇಲ್ಲಿ ದರೋಡೆ ಚೆನ್ನಾಗಿ ನಡೆಯುತ್ತಿದೆ. ಇದನ್ನು ನಿಲ್ಲಿಸಲು ಮಿಲಿಟರಿ ಕರೆ ತರಲು ಡಿಕೆಶಿ ಹೇಳಿದ್ದಾರೆʼʼ ಎಂದರು.

ʼʼನನ್ನನ್ನು ನೋಡಿದರೆ ಡಿಫ್ರೆಷನ್‌ನಲ್ಲಿ‌ ಇರುವವನ ತರ ಕಾಣುತ್ತೇನಾ? ಕರ್ನಾಟಕಕ್ಕೆ ನಾನು ಬರುವುದನ್ನೇ ಸಹಿಸಲ್ಲ ಅಂದರೆ ನನ್ನಿಂದ ಏನು ನಿರೀಕ್ಷೆ ಮಾಡ್ತಾರೆ? ನಾನು ಬರಲೇಬಾರದು ಎನ್ನುವ ರೀತಿ ಹೇಳಿಕೆ ನೀಡುತ್ತಿದ್ದಾರೆ. ಸ್ಥಳ ಪರಿಶೀಲನೆ ಮಾಡುವುದು ಜನಪ್ರತಿನಿಧಿಯಾಗಿ ನನ್ನ ಧರ್ಮ. ಮಂಡ್ಯಗೆ ಹೋದರು ಬೇಡ ಅಂತಾರೆ, ಉತ್ತರ ಕರ್ನಾಟಕ ಹೋಗ್ತಿನಿ ಅಂದರೆ ಅಲ್ಲಿಗೂ ಬೇಡ ಅಂತಾರೆ. ಸದ್ಯ ಹಾಸನಕ್ಕೆ ಬರಬೇಡಿ ಅನ್ನಲಿಲ್ಲ. ನಾನು ಕರ್ನಾಟಕಕ್ಕೆ ಬರ್ತಿನಿ ಎಂದರೆ ಅವರಿಗೆ ಕೈಕಾಲು ನಡುಗುತ್ತೆʼʼ ಎಂದು ಎಚ್‌ಡಿಕೆ ವ್ಯಂಗ್ಯವಾಡಿದರು.

ಇದನ್ನೂ ಓದಿ: DK Shivakumar: ನಮ್ಮ ಅಧಿಕಾರಿಗಳು ಬಹಳ ಖದೀಮರಿದ್ದಾರೆ, ಡಿ ಗ್ರೇಡ್ ಕ್ಲರ್ಕ್‌ಗಳೆಲ್ಲಾ ಅಧೀಕ್ಷಕ, ಎಂಡಿಗಳಾಗಿದ್ದಾರೆ ಎಂದ ಡಿಕೆಶಿ

Exit mobile version