Site icon Vistara News

Arjuna Elephant: ಅರ್ಜುನ ಆನೆ ಸ್ಮಾರಕ ನಿರ್ಮಾಣ ಹೆಸರಿನಲ್ಲಿ ಅಕ್ರಮ ಹಣ ಸಂಗ್ರಹ?

arjuna elephant

ಹಾಸನ: ದಸರಾ ಮೆರವಣಿಗೆಯ ಅಂಬಾರಿಯನ್ನು (Mysuru dasara procession) ಹೊರುತ್ತಿದ್ದ ಆನೆ ಅರ್ಜುನನಿಗೆ (Arjuna Elephant) ಸ್ಮಾರಕ (memorial) ನಿರ್ಮಾಣ ಮಾಡುವ ಹೆಸರಿನಲ್ಲಿ ಅಕ್ರಮವಾಗಿ ಹಣ ಸಂಗ್ರಹ (money collection) ಮಾಡಲಾಗುತ್ತಿದೆ ಎಂದು ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ. ಮೈಸೂರು ಜಿಲ್ಲೆಯ ನವೀನ್ ಹೆಚ್.ಎನ್. ಎಂಬಾತ ಹಣ ಕಲೆಕ್ಟ್ ಮಾಡುತ್ತಿರುವುದು ಗೊತ್ತಾಗಿದೆ.

ಸೋಶಿಯಲ್ ಮೀಡಿಯಾ ಮೂಲಕ ಹಣ ಕಲೆಕ್ಟ್ ಮಾಡಲಾಗುತ್ತಿದೆ. ನವೀನ್ ಹೆಚ್.ಎನ್. ಎಂಬ ವ್ಯಕ್ತಿಯ ಅಕೌಂಟ್‌ಗೆ ಈ ಹೆಸರಿನಲ್ಲಿ ಈಗಾಗಲೇ ಲಕ್ಷಾಂತರ ಹಣ ಸಂದಾಯವಾಗಿದೆ. ʼಅರ್ಜುನ ಪಡೆʼ ಎಂಬ ವಾಟ್ಸ್ಯಾಪ್ ಗ್ರೂಪ್ ಕ್ರಿಯೇಟ್ ಮಾಡಿ ಹಣ ಸಂಗ್ರಹಿಸಲಾಗುತ್ತಿದೆ ಎಂದು ಸಕಲೇಶಪುರದ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅರ್ಜುನ ಸ್ಮಾರಕ ಹೋರಾಟಕ್ಕೆ ನಿಮ್ಮ ಬೆಂಬಲ ಬೇಕು ಎಂದು ನವೀನ್‌ ಎಂಬ ಯುವಕ ಹಣಸಹಾಯ ಕೇಳುತ್ತಿದ್ದಾನೆ. ಆದರೆ ಸಾರ್ವಜನಿಕರಿಂದ ಹಣ ಪಡೆಯುವುದಕ್ಕೆ ಈತನಿಗೆ ಅನುಮತಿ ಕೊಟ್ಟವರು ಯಾರು? ಅನಧಿಕೃತವಾಗಿ ಹಣ ಸಂಗ್ರಹಿಸುತ್ತಿರುವ ಈತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಲೆನಾಡು ರಕ್ಷಣಾ ಸೇನೆ ರಾಜ್ಯಾಧ್ಯಕ್ಷ ಸಾಗರ್‌ ಜಾನಕೆರೆ ವೀಡಿಯೋ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.

ವಾಟ್ಸ್ಯಾಪ್ ಮೂಲಕ ಸಹಾಯ ಬೇಡಿರುವ ನವೀನ್ ಅಕೌಂಟ್‌ಗೆ ಲಕ್ಷಾಂತರ ರೂಪಾಯಿ ಹಣ ಬರುತ್ತಿದೆ. ಆತನ ಅಕೌಂಟ್‌ಗೆ ನೂರಾರು ಜನ ಹಣ ಸಂದಾಯ ಮಾಡುತ್ತಿರುವ ಸ್ಕ್ರೀನ್‌ ಶಾಟ್‌ಗಳು ವೈರಲ್ ಆಗುತ್ತಿವೆ. ಆದರೆ ಇದು ಈತನ ಖಾಸಗಿ ಅಕೌಂಟ್‌ ಆಗಿದ್ದು, ಈ ಹಣ ಎಲ್ಲಿಗೆ ಹೋಗಲಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಹೀಗಾಗಿ ಈತನ ಖಾಸಗಿ ಆಕೌಂಟ್‌ಗೆ ಯಾರೂ ಹಣ ಹಾಕದಂತೆ ಒತ್ತಾಯಿಸಿದ್ದಾರೆ.

ಈತ ಮಾಡಿರುವ ಪ್ಲಾನ್‌ನಿಂದಲೇ ಸ್ಮಾರಕ ನಿರ್ಮಾಣ ಮಾಡಿರುವ ವಿಚಾರದಲ್ಲಿ ನಟ ದರ್ಶನ್ ಅವರ ಹೆಸರು ಬಂದಿದೆ. ಸಹಾಯಹಸ್ತಕ್ಕಾಗಿ ಈತನೇ ದರ್ಶನ್ ಅವರ ಪಿಎಯನ್ನು ಸಂಪರ್ಕ ಮಾಡಿದ್ದಾನೆ. ಅವರಿಂದ ಕಲ್ಲನ್ನು ತೆಗೆಸಿಕೊಂಡು ಬಂದಿದ್ದಾನೆ. ಅದೇ ಕಲ್ಲಿಗೆ ಅರಣ್ಯ ಇಲಾಖೆಯವರಿಂದ 30 ಸಾವಿರ ಹಣವನ್ನೂ ಪಡೆದುಕೊಂಡು ಹೋಗಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಮಾರಕ ನಿರ್ಮಾಣದ ತಗಾದೆ

ಇತ್ತೀಚೆಗೆ ಅರ್ಜುನ ಸ್ಮಾರಕ ಕುರಿತು ತಗಾದೆ ಎದ್ದಿದೆ. ದಸರಾ ಸಡಗರದ ವೇಳೆ ಬಹಳಷ್ಟು ಬಾರಿ ಅಂಬಾರಿ ಹೊತ್ತು ತನ್ನ ಗಜಗಾಂಭೀರ್ಯಕ್ಕೆ ಹೆಸರುವಾಸಿಯಾಗಿದ್ದ ಅರ್ಜುನ ಕಳೆದ ವರ್ಷ ನಡೆದ ಕಾಡಾನೆ ಕಾರ್ಯಾಚರಣೆಯಲ್ಲಿ ಮೃತಪಟ್ಟಿರುವುದು ತಿಳಿದೇ ಇದೆ. ಆತನ ಸಮಾಧಿಗೆ ಯಾರೂ ದಿಕ್ಕು-ದೆಸೆ ಇಲ್ಲದಂತೆ ಭಾಸವಾಗುತ್ತಿದೆ ಎಂದು ಮಳೆಗಾಲ ಶುರುವಾಗುವ ಮುನ್ನ ಅರ್ಜುನನ ಸಮಾಧಿ ನಿರ್ಮಾಣಕ್ಕೆ ದರ್ಶನ್‌ (Actor Darshan) ಕರೆ ಕೊಟ್ಟಿದ್ದರು. ದರ್ಶನ್ ಸ್ವಂತ ಹಣ ಖರ್ಚು ಮಾಡಿ ಗ್ರಾನೈಟ್ ಕಳಿಸಿದ್ದರು. ಆದರೆ ಕೆಲಸ ನಡೆಯುತ್ತಿದ್ದ ವೇಳೆ ಅರಣ್ಯಾಧಿಕಾರಿಗಳು ತಡೆದಿದ್ದು, ಈ ಬಗ್ಗೆ ಅರಣ್ಯಾಧಿಕಾರಿಗಳ ವಿರುದ್ಧ ದರ್ಶನ್ ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗಿತ್ತು. ಸದ್ಯ ದರ್ಶನ್ ಹಾಗೂ ಅರಣ್ಯಾಧಿಕಾರಿಗಳ ಗುದ್ದಾಟ ಮುಂದುವರಿದಿದೆ. “ಮೊದಲು ಅನುಮತಿ ಕೊಟ್ಟು ಬಳಿಕ ನಾವೇ ಮಾಡ್ತೀವಿ ಎನ್ನುತ್ತಿದ್ದಾರೆ.” ಎಂದು ಅರಣ್ಯಾಧಿಕಾರಿಗಳ ವಿರುದ್ಧ ದರ್ಶನ್ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ.

ಇದನ್ನೂ ಓದಿ: Actor Darshan: ಅರ್ಜುನನ ಸಮಾಧಿ ನಿರ್ಮಾಣ: ಅರಣ್ಯಾಧಿಕಾರಿಗಳ ವಿರುದ್ಧ ದರ್ಶನ್ ಅಭಿಮಾನಿಗಳಿಂದ ಆಕ್ರೋಶ!

Exit mobile version