Site icon Vistara News

JDS Politics: ಹಾಸನ ಟಿಕೆಟ್‌ ವಿಚಾರದಿಂದ ಕೈಚೆಲ್ಲಿದ ಎಚ್‌.ಡಿ. ಕುಮಾರಸ್ವಾಮಿ: ಓವರ್‌ ಟು ರಾಷ್ಟ್ರೀಯ ಅಧ್ಯಕ್ಷರು

jds-politics-hd-devegowda-to-handla-hassan-candidate-issue

#image_title

ಚಿಕ್ಕಮಗಳೂರು: ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್‌ ನೀಡಿಕೆ ಗೊಂದಲವನ್ನು ಬಗೆಹರಿಸಲು ಬಗೆಬಗೆಯಾಗಿ ಪ್ರಯತ್ನಿಸಿದ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಕೊನೆಗೂ ಕೈಚೆಲ್ಲಿದ್ದಾರೆ. ಇನ್ನು ಹಾಸನದ ವಿಚಾರದಲ್ಲಿ ಎಲ್ಲ ನಿರ್ಧಾರವನ್ನೂ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡರು ತೆಗೆದುಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಜಿಲ್ಲೆಯ ಕೊಪ್ಪ ತಾಲೂಕಿನ ಹರಂದೂರು ಗ್ರಾಮದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಚಾರವನ್ನು ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ಹಾಸನದಲ್ಲಿ ಭಾನುವಾರ ಸಭೆ ನಡೆಸುತ್ತಾರೆ ಎಂಬ ಕುರಿತು ಪ್ರತಿಕ್ರಿಯಿಸಿ, ಹಾಸನದಲ್ಲಿ ಯಾವುದೇ ಕಾರ್ಯಕರ್ತರ ಸಭೆ ನಡೆಸುತ್ತಿಲ್ಲ. ಸಮಾನ ಮನಸ್ಕರನ್ನು ಕಚೇರಿಗೆ ಬರಲು ಹೇಳಿದ್ದೆ. ಮುಕ್ತವಾಗಿ ಚರ್ಚೆ ಮಾಡಿ, ಗೊಂದಲಕ್ಕೆ ಅವಕಾಶವಿಲ್ಲದೆ, ಪಕ್ಷಕ್ಕೂ ತೊಂದರೆ ಆಗದಂತೆ ನಿರ್ಧಾರ ಕೈಗೊಳ್ಳುವ ಆಲೋಚನೆ ಮಾಡಿದ್ದೆ. ಪಂಚರತ್ನ ಅಭೂತಪೂರ್ವವಾಗಿ ಯಶಸ್ಸು ದಾಖಲಿಸಿದೆ. ಹಾಸನದಲ್ಲಿ ಗೊಂದಲ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಕಾರ್ಯಕರ್ತರ ಭಾವನೆ ಅರಿಯುವ ಪ್ರಯತ್ನ ಮಾಡಲಾಗಿತ್ತು. ಆದರೆ ಸಭೆ ರದ್ದಾಗಿದೆ ಎಂದು ಮಾಧ್ಯಮಗಳೇ ತಿಳಿಸಿವೆ. ಹಾಗಾಗಿ ಆ ಸಭೆ ನಡೆಸುವುದಿಲ್ಲ ಎಂದರು.

ಇದನ್ನೂ ಓದಿ: Hassan Politics: ಎಚ್‌.ಡಿ. ಕುಮಾರಸ್ವಾಮಿಗೆ ತಿರುಗೇಟು ನೀಡಲು ಮುಂದಾದ ಕೆ.ಎಂ. ಶಿವಲಿಂಗೇಗೌಡ: ಬೃಹತ್‌ ಸಮಾವೇಶ ಆಯೋಜನೆ

ಭವಾನಿ ರೇವಣ್ಣ ಅವರೇ ಹಾಸನ ಅಭ್ಯರ್ಥಿ ಎಂದು ಎಚ್‌.ಡಿ. ರೇವಣ್ಣ ಆಪ್ತ ಕರೀಗೌಡ ಹೇಳುತ್ತಿರುವ ಕುರಿತು ಪ್ರತಿಕ್ರಿಯಿಸಿ, ಕರೀಗೌಡ್ರು ಅನುಭವದಲ್ಲಿ ಕೊರತೆ ಇಲ್ಲ. ಯಾವ ಉದ್ದೇಶ ಇಟ್ಟುಕೊಂಡು ಹೇಳುತ್ತಿದ್ದಾರೆ ಗೊತ್ತಿಲ್ಲ. ಬಿಜೆಪಿಯವರು ಇದನ್ನೆಲ್ಲ ಹೇಗೆ ಬಳಕೆ ಮಾಡಿಕೊಳ್ಳಬಹುದು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಅವರೇನೂ ನನ್ನ ಸಂಪರ್ಕದಲ್ಲಿಲ್ಲ. ಹಾಸನ ಟಿಕೆಟ್‌ ಬಗ್ಗೆ ಮುಂದಿನ ಸಭೆ ಬಗ್ಗೆ ನನಗೆ ಗೊತ್ತಿಲ್ಲ, ರಾಷ್ಟ್ರೀಯ ಅಧ್ಯಕ್ಷರು ಕರೀತಾರೆ ಎಂದರು.

ದೇವೇಗೌಡರ ಆರೋಗ್ಯದ ಕುರಿತು ಎಚ್‌.ಡಿ. ರೇವಣ್ಣ ಮತ್ತು ಕುಟುಂಬದವರಿಗೆ ಕಾಳಜಿಯಿಲ್ಲ ಎಂದು ಪರೋಕ್ಷವಾಗಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು. ನನಗೆ ಅವರ ಆರೋಗ್ಯ ಮುಖ್ಯ. ಅವರ ಆರೋಗ್ಯಕ್ಕೆ ತೊಂದರೆ ಆಗಬಾರದು ಎನ್ನುವುದು ನನ್ನ ಅಭಿಪ್ರಾಯ. ಬೇರೆಯವರಿಗೆ ಅವರ ಆರೋಗ್ಯಕ್ಕಿಂತಲೂ ತಮ್ಮ ಭಾವನೆಯೇ ಮುಖ್ಯ ಎನುವುದಾದರೆ ನಾನೇನೂ ಮಾಡಲಾಗುವುದಿಲ್ಲ. ಗೊಂದಲ ಕೆಲವರು ಸೃಷ್ಟಿ ಮಾಡಿದ್ದಾರೆ, ನಿವಾರಿಸುವ ಶಕ್ತಿಯಿದೆ ಎಂದರು.

Exit mobile version