ಬೆಂಗಳೂರು: ಹಾಸನ ವಿಧಾನಸಭೆ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ (JDS Politics) ನೀಡುವ ಕುರಿತು ಪಕ್ಷದ ವಿಚಾರವು ಎಚ್.ಡಿ. ದೇವೇಗೌಡರ ಕುಟುಂಬದಲ್ಲಿ ಕಗ್ಗಂಟಾಗಿದ್ದು, ಇದನ್ನು ಶಿವರಾತ್ರಿಯ ದಿನ ಬಗೆಹರಿಸಲು ಎಚ್.ಡಿ. ಕುಮಾರಸ್ವಾಮಿ ಮುಂದಾಗಿದ್ದಾರೆ.
ಜೆಡಿಎಸ್ ಆಂತರಿಕ ವಲಯದಲ್ಲಿ ಹಾಸನ ಟಿಕೆಟ್ ಚರ್ಚೆ ನಡೆದಿದೆ. ಹಾಸನ ಟಿಕೆಟ್ ಯಾರಿಗೆ ಎಂದು ಇನ್ನೂ ಕುಮಾರಸ್ವಾಮಿ ಅಂತಿಮಗೊಳಿಸಿಲ್ಲ. ಎಲ್ಲದಕ್ಕೂ ಇತಿಶ್ರೀ ಹಾಡಲು ಕುಮಾರಸ್ವಾಮಿ ಮುಹೂರ್ತ ನಿಗದಿಪಡಿಸಿದ್ದಾರೆ.
ಫೆಬ್ರವರಿ 18 ರಂದು ಕುಟುಂಬಸ್ಥರ ಜೊತೆ ಎಚ್.ಡಿ. ಕುಮಾರಸ್ವಾಮಿ ಸಭೆ ಆಯೋಜಿಸಿದ್ದಾರೆ. ಶಿವರಾತ್ರಿ ದಿನದಂದು ಕುಟುಂಬದ ಎಲ್ಲರನ್ನೂ ಕುಮಾರಸ್ವಾಮಿ ಸಭೆಗೆ ಆಹ್ವಾನಿಸಿದ್ದಾರೆ. ಎಚ್.ಡಿ. ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡಬೇಕೆಂದು ಒಂದು ಗುಂಪು ಹೇಳಿದರೆ, ಮಾಜಿ ಶಾಸಕ ಎಚ್.ಎಸ್. ಪ್ರಕಾಶ್ ಅವರ ಪುತ್ರ ಎಚ್.ಪಿ. ಸ್ವರೂಪ್‌ಗೆ ಟಿಕೆಟ್ ನೀಡಬೇಕು ಎಂದು ಮತ್ತೊಂದು ಗುಂಪು ಹೇಳುತ್ತಿದೆ.
ಇದನ್ನೂ ಓದಿ: JDS Politics: ನನ್ನ ಬಗ್ಗೆ ಮಾತನಾಡಿದರೆ ಅವರ ಬಂಡವಾಳ ಬಯಲು: ದಳಪತಿಗಳಿಗೆ ಶಿವಲಿಂಗೇಗೌಡ ಎಚ್ಚರಿಕೆ
ಇದೆಲ್ಲದರ ನಡುವೆ ಸ್ವತಃ ತಾವೇ ಸ್ಪರ್ಧೆ ಮಾಡುವುದಾಗಿ ಎಚ್.ಡಿ. ರೇವಣ್ಣ ತಿಳಿಸಿದ್ದಾರೆ. ಇದೆಲ್ಲದರ ಬಗ್ಗೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಮಾಡಲು ಕುಮಾರಸ್ವಾಮಿ ಮುಂದಾಗಿದ್ದಾರೆ. ಶಿವರಾತ್ರಿ ದಿನದ ಸಭೆಯಲ್ಲಿ ತಾರ್ಕಿಕ ಅಂತ್ಯ ಕಾಣುವ ನರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.