ಹಾಸನ: ವಿಧಾನಸಭೆ ಚುನಾವಣೆಯಲ್ಲಿ ಭವಾನಿ ರೇವಣ್ಣಗೆ ಟಿಕೆಟ್ ನೀಡಲು ಎಚ್.ಡಿ. ಕುಮಾರಸ್ವಾಮಿ ನಿರಾಕರಿಸಿರುವ ಹಿನ್ನೆಲೆಯಲ್ಲಿ ಸಹೋದರ ಎಚ್.ಡಿ. ರೇವಣ್ಣ ಅಚ್ಚರಿಯ ಹೆಜ್ಜೆ ಇಟ್ಟಿದ್ದು, ಹೊಳೆನರಸಿಪುರದ ಜತೆಗೆ ಹಾಸನದಿಂದಲೂ ತಾನೇ ಸ್ಪರ್ಧಿಸುತ್ತೇನೆ (JDS Politics) ಎಂಬ ಪ್ರಸ್ತಾವನೆ ಮುಂದಿಟ್ಟಿದ್ದಾರೆ.
ಹಾಸನ ವಿಧಾನಸಬಾ ಕ್ಷೇತ್ರದಲ್ಲಿ ನಾಲ್ಕು ಬಾರಿ ಜಯಗಳಿಸಿದ್ದ ಎಚ್.ಎಸ್. ಪ್ರಕಾಶ್ 2018ರಲ್ಲಿ ಬಿಜೆಪಿಯ ಪ್ರೀತಂ ಗೌಡ ವಿರುದ್ಧ ಸೋಲುಂಡಿದ್ದರು. ನಂತರ ಅವರು ನಿಧನರಾದರು. ಈ ನಡುವೆ ಕ್ಷೇತ್ರದಲ್ಲಿ ಪ್ರಕಾಶ್ ಪುತ್ರ ಎಚ್.ಪಿ. ಸ್ವರೂಪ್‌ಗೆ ಟಿಕೆಟ್ ನೀಡಬೇಕು ಎಂದು ಜೆಡಿಎಸ್‌ನ ಒಂದು ಬಣ ಹೇಳಿದರೆ ಮತ್ತೊಂದೆಡೆ ರೇವಣ್ಣ ಪತ್ನಿ ಭವಾನಿ ಅವರನ್ನೇ ಕಣಕ್ಕಿಳಿಸಬೇಕು ಎಂಬ ಒತ್ತಾಯವೂ ಇದೆ.
ಈ ವಿಚಾರವಾಗಿ ದೇವೇಗೌಡರ ಕುಟುಂಬದಲ್ಲೂ ವಿಭಿನ್ನ ಹೇಳಿಕೆಗಳು ಹೊರಬಂದಿವೆ. ತಮ್ಮ ತಾಯಿಯೇ ಸ್ಪರ್ಧೆ ಮಾಡುತ್ತಾರೆ ಎಂದು ಭವಾನಿ ರೇವಣ್ಣ ಪುತ್ರರಾದ ಸೂರಜ್, ಪ್ರಜ್ವಲ್ ಹೇಳಿದರೆ, ಕಾರ್ಯಕರ್ತರಿಗೇ ಟಿಕೆಟ್ ಎಂದು ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಈ ನಡುವೆ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿರುವ ರೇವಣ್ಣ, ಎರಡೂ ಕಡೆ ತಾನೇ ಸ್ಪರ್ಧೆ ಮಾಡುತ್ತೇನೆ ಎಂದಿದ್ದಾರೆ. ಈ ಹಿಂದೆ ಕುಮಾರಸ್ವಾಮಿ ಸಹ ರಾಮನಗರದ ಜತೆಗೆ ಚನ್ನಪಟ್ಟಣದಲ್ಲೂ ಸ್ಪರ್ಧೆ ಮಾಡಿದ್ದರು. ಚನ್ನಪಟ್ಟಣ ಕ್ಷೇತ್ರದಿಂದ ಸಿ.ಪಿ. ಯೋಗೇಶ್ವರ್ ಎದುರು ಪತ್ನಿ ಅನಿತಾ ಸೇರಿ ಯಾರೇ ಸ್ಪರ್ಧೆ ಮಾಡಿದರೂ ಗೆಲ್ಲುವುದು ಕಷ್ಟ ಎಂಬ ವರದಿ ಲಭಿಸಿತ್ತು.
ಇದಕ್ಕಾಗಿ, ಸ್ವತಃ ತಾವೇ ಎರಡೂ ಕಡೆ ಸ್ಪರ್ಧೆ ಮಾಡಿದರು. ಚುನಾವಣೆ ನಂತರದಲ್ಲಿ ಚನ್ನಪಟ್ಟಣವನ್ನು ತಮಗೇ ಉಳಿಸಿಕೊಂಡು ರಾಮನಗರಕ್ಕೆ ರಾಜೀನಾಮೆ ನೀಡಿದರು. ಅಲ್ಲಿ ಉಪಚುನಾವಣೆಯಲ್ಲಿ ಪತ್ನಿ ಅನಿತಾ ಸ್ಪರ್ಧೆ ಮಾಡಿ ಗೆದ್ದು ಬಂದಿದ್ದರು. ಇದೇ ದಾಳವನ್ನು ಇದೀಗ ಅಣ್ಣ ಎಚ್.ಡಿ. ರೇವಣ್ಣ ಉರುಳಿಸಿದ್ದಾರೆ.
ಹಾಸನ ಕ್ಷೇತ್ರದಲ್ಲಿ ಸ್ವರೂಪ್‌ಗೆ ಟಿಕೆಟ್ ನೀಡದೆ ಭವಾನಿ ಅವರಿಗೆ ನೀಡಿದರೆ, ಸಂಖ್ಯೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಒಕ್ಕಲಿಗ ಉಪಪಂಗಡ ದಾಸ ಒಕ್ಕಲಿಗರು ಬೇಸರಗೊಳ್ಳುತ್ತಾರೆ. ಇದರಿಂದಾಗಿ, ಪಕ್ಕದ ಸಕಲೇಶಪುರ ಕ್ಷೇತ್ರದ ಮೇಲೆಯೂ ಪರಿಣಾಮ ಬೀರಬಹುದು. ಸ್ವತಃ ರೇವಣ್ಣ ಅವರೇ ಸ್ಪರ್ಧೆ ಮಾಡಿದರೆ ಎಲ್ಲ ಒಕ್ಕಲಿಗೂ ಒಟ್ಟಾಗುತ್ತಾರೆ.
ಇದನ್ನೂ ಓದಿ: JDS Politics: ಶಾಸಕ ಎ.ಟಿ.ರಾಮಸ್ವಾಮಿ ಬಗ್ಗೆ ಗೌರವವಿದೆ, ಯಾರ ಕುರಿತು ಏನೂ ಮಾತನಾಡಲ್ಲ: ಎಚ್.ಡಿ.ರೇವಣ್ಣ
ಅಲ್ಲದೆ, ಜೆಡಿಎಸ್‌ನಲ್ಲಿರುವ ಎರಡೂ ಬಣ ಒಟ್ಟಾಗಿ ಕೆಲಸ ಮಾಡುತ್ತದೆ. ಒಂದು ಕಡೆಯಿಂದ ದೇವೇಗೌಡರ ಕುಟುಂಬ ಹಾಗೂ ಮತ್ತೊಂದು ಕಡೆಯಿಂದ ಸ್ವರೂಪ್ ತಂಡವೂ ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಲಿದೆ. ಚುನಾವಣೆಯಲ್ಲಿ ಎರಡೂ ಕಡೆ ಜಯಗಳಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ರೇವಣ್ಣ, ನಂತರದಲ್ಲಿ ಪರಿಸ್ಥಿತಿ ನೋಡಿಕೊಂಡು ಒಂದು ಕಡೆ ರಾಜೀನಾಮೆ ನೀಡಬಹುದು. ಹೊಳೆನರಸಿಪುರದಲ್ಲಿ ರಾಜೀನಾಮೆ ನೀಡಿದರೆ ಭವಾನಿ ಅವರನ್ನು ಉಪಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬರಬಹುದು. ಹಾಸನದಲ್ಲಿ ರಾಜೀನಾಮೆ ನೀಡಿದರೆ ಭವಾನಿ ಅಥವಾ ಸ್ವರೂಪ್ ಯಾರಿಗಾದರೂ ಅವಕಾಶ ನೀಡಬಹುದು ಎಂಬಲ್ಲಿಯವರೆಗೆ ಯೋಜನೆಯನ್ನು ರೇವಣ್ಣ ಬಿಚ್ಚಿಟ್ಟಿದ್ದಾರೆ ಎನ್ನಲಾಗಿದೆ.
ಕುಮಾರಸ್ವಾಮಿ ಅವರ ಎದುರು ಈ ರೀತಿಯ ಪ್ರಸ್ತಾವನೆಯು ಈಗ ಮಂಡನೆಯಾಗಿದೆ. ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನುವುದು ಹಾಸನ ರಾಜಕೀಯ ಚಿತ್ರಣದಲ್ಲಿ ಸಾಕಷ್ಟು ಬದಲಾವಣೆಗಳನ್ನು ಉಂಟುಮಾಡುತ್ತದೆ.