ಹಾಸನ: ಹಾಸನ ಕ್ಷೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್ ಪಡೆಯುವ ಬಗ್ಗೆ ಜೆಡಿಎಸ್‌ನೊಳಗೆ ತಿಂಗಳುಗಳಿಂದ ನಡೆಯುತ್ತಿರುವ ಜಟಾಪಟಿಯಲ್ಲಿ ವರಿಷ್ಠರ ಒತ್ತಡಕ್ಕೆ ಮಣಿದು ಭವಾನಿ ರೇವಣ್ಣ ಅವರು ಅಖಾಡದಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿದುಬಂದಿದೆ.
ಹಾಸನ ಟಿಕೆಟ್ ದಂಗಲ್ ತೀವ್ರ ಕುತೂಹಲದ ಘಟ್ಟಕ್ಕೆ ತಲುಪಿದ್ದು, ಇಂದು ಸಂಜೆ ಅಥವಾ ನಾಳೆಯೊಳಗೆ ಹಾಸನ ಟಿಕೆಟ್ ಅಂತಿಮವಾಗುವ ಸಾಧ್ಯತೆ ಇದೆ. ಸ್ವರೂಪ್ ಹಾಗು ರೇವಣ್ಣ ಕುಟುಂಬ ಕಡೆಯಿಂದ ಕಡೆಯ ಹಂತದ ಕಸರತ್ತು ನಡೆದಿದೆ.
ಸತತ ಎರಡೂವರೆ ತಿಂಗಳಿಂದ ಹಾಸನ ಟಿಕೆಟ್‌ಗಾಗಿ ಗೌಡರ ಕುಟುಂಬದ ಒಳಗೆ ಹಾಗು ಹೊರಗೆ ತೀವ್ರ ಹೋರಾಟ ನಡೆಯುತ್ತಿದೆ. ಕುಟುಂಬ ರಾಜಕಾರಣ ಆರೋಪ ಆತಂಕದ ಹಿನ್ನೆಲೆಯಲ್ಲಿ ಎಚ್.ಡಿ ಕುಮಾರಸ್ವಾಮಿ ಅವರು ಭವಾನಿ ಅವರಿಗೆ ಟಿಕೆಟ್ ನಿರಾಕರಣೆ ಮಾಡಿದ್ದರು. ಭವಾನಿ ಅಭಿಮಾನಿಗಳು ಭೇಟಿಯಾದ ವೇಳೆ, ಸ್ಪರ್ಧೆ ಬೇಡ ಎನ್ನುವ ಸ್ಪಷ್ಟ ಸೂಚನೆಯನ್ನು ದೇವೇಗೌಡರು ನೀಡಿದ್ದರು.
ಆದರೂ ಒತ್ತಡ, ಜಿಲ್ಲೆಯ ಯಾವುದೇ ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋಗಲ್ಲ ಎನ್ನುವ ತಂತ್ರದ ಮೂಲಕ ಒತ್ತಡ ಯತ್ನವನ್ನು ರೇವಣ್ಣ ಕುಟುಂಬ ಮಾಡಿತ್ತು. ಭವಾನಿಗೆ ಟಿಕೇಟ್ ಕೊಡದಿದ್ದರೆ ತನಗೂ ಟಿಕೆಟ್ ಬೇಡ ಎನ್ನುವ ಎಚ್ಚರಿಕೆಯನ್ನು ರೇವಣ್ಣ ರವಾನಿಸಿದ್ದರು. ಆದರೆ ಯಾವುದೇ ಒತ್ತಡಕ್ಕೆ ದೇವೇಗೌಡರು ಮಣಿದಿರಲಿಲ್ಲ. ಕುಮಾರಸ್ವಾಮಿಯವರೂ ಬಹಿರಂಗವಾಗಿ ಭವಾನಿ ಸ್ಪರ್ಧೆ ಮಾಡಿದ್ರೆ ಕಷ್ಟ ಅನ್ನುವ ಸಂದೇಶ ರವಾನಿಸಿದ್ದರು.
ತಾವು ಮತ್ತಷ್ಟು ಹಠಕ್ಕೆ ಬಿದ್ದರೆ ಸ್ವತಃ ಪತಿ ರೇವಣ್ಣ ಕ್ಷೇತ್ರದ ಮೇಲೂ ಪರಿಣಾಮ ಬೀರುವ ಆತಂಕದ ಹಿನ್ನೆಲೆಯಲ್ಲಿ ಭವಾನಿ ರೇವಣ್ಣ ಈಗ ಸೈಲೆಂಟಾಗಿದ್ದಾರೆ ಎನ್ನಲಾಗಿದೆ. ಇಷ್ಟೆಲ್ಲಾ ಬೆಳವಣಿಗೆ ಬಳಿಕ ದೇವೇಗೌಡರ ತೀರ್ಮಾನವೇ ಅಂತಿಮ ಎಂದಿದ್ದಾರೆ ರೇವಣ್ಣ. ಆದರೆ ಭವಾನಿಗೆ ಟಿಕೆಟ್ ಬೇಡ ಎನ್ನುವುದಾದರೆ ಸ್ವರೂಪ್‌ಗೂ ಕೊಡುವುದು ಬೇಡ ಎನ್ನುವ ಸಂದೇಶ ನೀಡಿದ್ದಾರೆ. ಇಬ್ಬರನ್ನೂನ್ನು ಬಿಟ್ಟು ಮೂರನೇ ತೀರ್ಮಾನ ಮಾಡಿ ಎಂದು ಪಟ್ಟು ಹಿಡಿದಿದ್ದಾರೆ. ಹಾಗಾಗಿಯೇ ಹಾಸನ ಮತ್ತು ಹೊಳೆನರಸೀಪುರ ಎರಡೂ ಕ್ಷೇತ್ರದಿಂದ ರೇವಣ್ಣರೇ ಸ್ಪರ್ಧೆ ಮಾಡಬಹುದು ಎಂದು ಚರ್ಚೆಯಾಗುತ್ತಿದೆ.
ಇದನ್ನೂ ಓದಿ: JDS Politics : ಹಾಸನ ಜೆಡಿಎಸ್ ತಿಕ್ಕಾಟಕ್ಕೆ ರಾಜೀ ಸೂತ್ರ; ಭವಾನಿ ರೇವಣ್ಣಗೆ ಚಾಮರಾಜ ಕ್ಷೇತ್ರದ ಟಿಕೆಟ್?