ಬೆಂಗಳೂರು: ವಿಧಾನಸಭೆ ಚುನಾವಣೆಗೆ (Karnataka Election) ಎಲ್ಲ ಪಕ್ಷಗಳಿಗಿಂತಲೂ ಮೊದಲೇ ಪಂಚರತ್ನ ರಥಯಾತ್ರೆ ಮಾಡುತ್ತ, 93 ಅಭ್ಯರ್ಥಿಗಳನ್ನೂ ಘೋಷಣೆ ಮಾಡಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯವರಿಗೆ ಹಾಸನ ಕ್ಷೇತ್ರದಲ್ಲಿ ಮಾತ್ರ ಏನೂ ಮಾಡಲಾಗದೆ ಕೈಕಟ್ಟಿ ಕುಳಿತಿದ್ದಾರೆ. ಜೆಡಿಎಸ್ ಹೈಕಮಾಂಡ್ ಎಚ್.ಡಿ. ಕುಮಾರಸ್ವಾಮಿಯವರೇ ಇರಬಹುದು, ಆದರೆ ಹಾಸನ ಹೈಕಮಾಂಡ್ ಮಾತ್ರ ತಾನೇ ಎನ್ನುತ್ತಿರುವ ರೇವಣ್ಣ, ಹಾಸನ ಕ್ಷೇತ್ರದಲ್ಲಿ ಟಿಕೆಟ್ ಘೋಷಣೆ ಮಾಡಲು ಹೆಣಗಾಡುತ್ತಿದ್ದಾರೆ.
ಇತ್ತೀಚೆಗಷ್ಟೆ 93 ಅಭ್ಯರ್ಥಿಗಳನ್ನು ಎಚ್.ಡಿ. ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ಪಕ್ಷ ಅತ್ಯಂತ ದುರ್ಬಲವಾಗಿರುವ, ಮೂರನೇ ಸ್ಥಾನ ಬಂದರೆ ಸಾಕು ಎನ್ನುವಂತಿರುವ ಕ್ಷೇತ್ರಗಳಿಗೂ ಟಿಕೆಟ್ ಘೋಷಣೆ ಮಾಡಲಾಗಿದೆ. ಆದರೆ ಜೆಡಿಎಸ್ ಭದ್ರಕೋಟೆ, ಏಳರಲ್ಲಿ ಆರು ಶಾಸಕರನ್ನು ಹೊಂದಿರುವ ಹಾಸನದಲ್ಲಿ ಮಾತ್ರ ಒಬ್ಬ ಅಭ್ಯರ್ಥಿಯನ್ನೂ ಘೋಷಣೆ ಮಾಡಲು ಸಾಧ್ಯವಾಗಿಲ್ಲ. ಹಾಸನದ ಅಭ್ಯರ್ಥಿಗಳ ಲಿಸ್ಟ್ ಕೊಡಿ ಎಂದರೆ, ಹಾಸನ ಅಭ್ಯರ್ಥಿಯನ್ನು ಅಂತಿಮಗೊಳಿಸಿ ಎಂದು ಪಟ್ಟುಹಿಡಿದಿದ್ದಾರೆ.
ಕೈತಪ್ಪಿದ ಕ್ಷೇತ್ರ
ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕು ಬಾರಿ ಜಯಗಳಿಸಿದ್ದ ಜೆಡಿಎಸ್‌ನ ಎಚ್.ಎಸ್. ಪ್ರಕಾಶ್, 2018ರಲ್ಲಿ ಸೋಲುಂಡಿದ್ದರು. ಅನೇಕ ವರ್ಷಗಳ ನಂತರ ಇದೇ ಬಿಜೆಪಿ ಖಾತೆ ತೆರದು, ಪ್ರೀತಂ ಗೌಡ ಶಾಸಕರಾಗಿ ಆಯ್ಕೆಯಾಗಿದ್ದರು. ಹಾಸನ ಕ್ಷೇತ್ರದಲ್ಲಿ ಈ ಬಾರಿ, ಎಚ್.ಎಸ್. ಪ್ರಕಾಶ್ ಪುತ್ರ ಎಚ್.ಪಿ. ಸ್ವರೂಪ್‌ಗೆ ಟಿಕೆಟ್ ನೀಡಬಹುದೇ ಎಂಬ ಮಾತುಗಳು ಕೇಳಿಬರುತ್ತಿದ್ದವು. ಮೃದು ಸ್ವಭಾವದ ಸ್ವರೂಪ್ ಸ್ಪರ್ಧಿಸಿದರೆ, ಕಳೆದ ಬಾರಿ ಪ್ರಕಾಶ್ ಸೋಲುಂಡಿದ್ದ ಅನುಕಂಪವೂ ಸೇರಿ ಗೆಲ್ಲುತ್ತಾರೆ ಎಂಬ ಲೆಕ್ಕಾಚಾರವಿದೆ.
ಆದರೆ ಚುನಾವಣೆಗೆ ವೆಚ್ಚ ಮಾಡುವಷ್ಟು ಹಣ ಹಾಗೂ ಮಾನವ ಸಂಪನ್ಮೂಲ ಎಚ್.ಪಿ. ಸ್ವರೂಪ್ ಬಳಿ ಎಲ್ಲ ಎನ್ನಲಾಗುತ್ತದೆ. ಎಚ್.ಡಿ. ದೇವೇಗೌಡರ ಕುಟುಂಬ, ವಿಶೇಷವಾಗಿ ಎಚ್.ಡಿ. ರೇವಣ್ಣ ಕುಟುಂಬ ತನು ಮನ ಧನದಿಂದ ತೊಡಗಿಸಿಕೊಂಡರೆ ಮಾತ್ರವೇ ಸ್ವರೂಪ್ ಗೆಲ್ಲುವುದು ಸಾಧ್ಯ. ಆದರೆ ಇಷ್ಟೆಲ್ಲ ಕಷ್ಟ ಪಟ್ಟು, ಹಣವನ್ನೂ ಖರ್ಚು ಮಾಡಿ ಬೇರೆಯವರನ್ನು ಗೆಲ್ಲಿಸುವ ಬದಲು ತಮ್ಮ ಕುಟುಂಬದವರಲ್ಲೇ ಏಕೆ ಗೆಲ್ಲಿಸಿಕೊಳ್ಳಬಾರದು ಎಂಬುದು ರೇವಣ್ಣ ಲೆಕ್ಕಾಚಾರ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿವೆ.
ಹಾಲಿ ಶಾಸಕ ಪ್ರೀತಂಗೌಡ, ಬಿಜೆಪಿಯಿಂದ ಶಾಸಕರಾಗಿದ್ದರೂ ತಮ್ಮ ವೈಯಕ್ತಿಕ ವರ್ಚಸ್ಸನ್ನೇ ಬಳೆಸಿಕೊಂಡಿದ್ದಾರೆ. ರೇವಣ್ಣ ಕುಟುಂಬವನ್ನು ಎದುರು ಹಾಕಿಕೊಳ್ಳುವ ಸಾಮರ್ಥ್ಯ ಇದೆ ಎಂದು ಅನೇಕ ಬಾರಿ ನಿರೂಪಿಸಿದ್ದಾರೆ. ಇಷ್ಟು ಪ್ರಬಲ ಅಭ್ಯರ್ಥಿ ಎದುರು ದೇವೇಗೌಡರ ಕುಟುಂಬದವರು ಸ್ಪರ್ಧಿಸಿದರೆ ಮಾತ್ರ ಗೆಲುವು ಸಾಧ್ಯ ಎಂಬ ಮಾತುಗಳೂ ಇವೆ. ತಮ್ಮ ಕುಟುಂಬದವರೇ ಸ್ಪರ್ಧೆ ಮಾಡಿದರೆ ರೇವಣ್ಣ ಜತೆಗೆ ಸಂಸತ್ ಪ್ರಜ್ವಲ್, ವಿಧಾನ ಪರಿಷತ್ ಸದಸ್ಯ ಸೂರಜ್ ಜತೆಗೆ ಸ್ವತಃ ದೇವೇಗೌಡರೂ ಕಣಕ್ಕಿಳಿಯುತ್ತಾರೆ. ಆದರೆ ಪ್ರೀತಂ ಗೌಡ ಎದುರು ಒಳ್ಳೆಯ ಸ್ಪರ್ಧೆ ಒಡ್ಡಬಹುದು ಎನ್ನುವುದು ಕುಟುಂಬದ ಲೆಕ್ಕಾಚಾರ. ಆದರೆ ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡುವ ಕುರಿತು ಕುಟುಂಬದಲ್ಲಿ ಎರಡು ಅಭಿಪ್ರಾಯ ಇದೆ ಎನ್ನಲಾಗಿದೆ.
ಜಾತಿ ಲೆಕ್ಕಾಚಾರ
ಇದೀಗ ಎಚ್.ಡಿ. ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಪ್ರತಿನಿಧಿಸುತ್ತಿರುವ ರಾಮನಗರ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಕುಮಾರಸ್ವಾಮಿ ಕುಟುಂಬದಲ್ಲಿ ಈಗ ಇಬ್ಬರು ಶಾಸಕರಿದ್ದು, (ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ), ಮುಂದೆ ನಿಖಿಲ್ ಗೆದ್ದರೂ ಇಬ್ಬರೇ ಶಾಸಕರಾಗುತ್ತಾರೆ. ಆದರೆ ರೇವಣ್ಣ ಕುಟುಂಬದಲ್ಲಿ ಈಗಾಗಲೆ ಒಬ್ಬ ಶಾಸಕ (ರೇವಣ್ಣ), ಒಬ್ಬ ಸಂಸದ(ಪ್ರಜ್ವಲ್ ರೇವಣ್ಣ) ಹಾಗೂ ಒಬ್ಬ ವಿಧಾನ ಪರಿಷತ್ ಸದಸ್ಯ(ಸೂರಜ್ ರೇವಣ್ಣ) ಇದ್ದಾರೆ. ಇದೀಗ ಜಿಲ್ಲಾ ಪಂಚಾಯಿತಿ ಸದಸ್ಯೆಯಾಗಿರುವ ಭವಾನಿ ರೇವಣ್ಣ ಅವರಿಗೂ ಎಂಎಲ್‌ಎ ಟಿಕೆಟ್ ನೀಡುವುದಕ್ಕೆ ಕೆಲ ಗೊಂದಲಗಳು ಉಂಟಾಗಿವೆ ಎನ್ನಲಾಗುತ್ತಿದೆ. ಮುಂದೆ ಭವಾನಿ ಅವರು ಟಿಕೆಟ್ ಕೇಳುತ್ತಾರೆ ಎಂಬ ಕಾರಣಕ್ಕಾಗಿಯೇ ಅತ್ತ ಅನಿತಾ ಅವರಿಗೆ ಟಿಕೆಟ್ ತಪ್ಪಿಸಿ ಪುತ್ರನಿಗೆ ನೀಡಲಾಗಿದೆ ಎಂಬ ಮಾತುಗಳೂ ಇವೆ.
ಹಾಸನದಲ್ಲಿ ಒಕ್ಕಲಿಗ ಅಭ್ಯರ್ಥಿಯೇ ಗೆಲ್ಲುತ್ತಾರೆ ಎನ್ನುವುದು ಸರಿಯಾದರೂ, ಅದರಲ್ಲಿ ಒಳ ಜಾತಿಗಳ ಲೆಕ್ಕಾಚಾರವೂ ಇದೆ. ಎಚ್.ಡಿ. ದೇವೇಗೌಡರ ಕುಟುಂಬ, ಒಕ್ಕಲಿಗ ಸಮುದಾಯದ ಮುಳ್ಳು ಒಕ್ಕಲಿಗ ಪಂಗಡದವರು. ಈ ಹಿಂದೆ ಹಾಸನದಲ್ಲಿ ಶಾಸಕರಾಗಿದ್ದ ಎಚ್.ಎಸ್. ಪ್ರಕಾಶ್ ಅವರು ದಾಸ ಒಕ್ಕಲಿಗ ಪಂಗಡದವರು. ಹಾಸನ ಕ್ಷೇತ್ರದಲ್ಲಿ ದಾಸ ಒಕ್ಕಲಿಗ ಪಂಗಡದ್ದೇ ಮೇಲುಗೈ. ಹಾಗಾಗಿ ಪ್ರಕಾಶ್ ಪುತ್ರ ಸ್ವರೂಪ್ ಸ್ಪರ್ಧೆ ಮಾಡಿದರೆ. ದಾಸ ಒಕ್ಕಲಿಗ ಪಂಗಡಕ್ಕೆ ಸೇರಿದ ಪ್ರೀತಂ ಗೌಡ ಅವರಿಗೆ ಸ್ಪರ್ಧೆ ನೀಡಬಹುದು. ಭವಾನಿ ರೇವಣ್ಣ ಸ್ಪರ್ಧೆ ಮಾಡಿದರೆ ದಾಸ ಒಕ್ಕಲಿಗ ಸಂಪೂರ್ಣ ಪ್ರೀತಂ ಗೌಡ ಅವರನ್ನು ಬೆಂಬಲಿಸಿ, ಜೆಡಿಎಸ್ ಅಭ್ಯರ್ಥಿ ಸೋಲುತ್ತಾರೆ ಎಂಬ ಲೆಕ್ಕಾಚಾರವೂ ಇದೆ.
ಕುಮಾರಸ್ವಾಮಿಗೆ ಇಕ್ಕಟ್ಟು
ಈ ಬಾರಿ ಹೇಗಾದರೂ ಮಾಡಿ 123 ಸ್ಥಾನ ಗೆದ್ದು ಸ್ವಂತ ಬಲದ ಮೇಳೆ ಗದ್ದುಗೆ ಹಿಡಿಯಬೇಕು ಎಂದುಕೊಂಡಿರುವ ಎಚ್.ಡಿ. ಕುಮಾರಸ್ವಾಮಿಯವರಿಗೆ ಹಾಸನ ಜಿಲ್ಲೆಯ ರಾಜಕೀಯ ಮಾತ್ರ ಕೈಕಟ್ಟಿಹಾಕಿದೆ. ಅತ್ತ ಅರಕಲಗೂಡಿನಲ್ಲಿ ಎ.ಟಿ. ರಾಮಸ್ವಾಮಿ ಜೆಡಿಎಸ್‌ನಲ್ಲೇ ಉಳಿಯುತ್ತಾರೆಯೋ ಅಥವಾ ಕಾಂಗ್ರೆಸ್ ಕಡೆ ವಾಲುತ್ತಾರೆಯೋ ಎಂಬ ಅನುಮಾನವಿದೆ. ಇತ್ತ ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಸಹ ಕಾಂಗ್ರೆಸ್ ಕದ ತಟ್ಟುತ್ತಿದ್ದಾರೆ ಎನ್ನಲಾಗಿದೆ. ಹಾಸನ ಕ್ಷೇತ್ರದಲ್ಲಿ ಅಭ್ಯರ್ಥಿ ಯಾರು ಎನ್ನುವ ಗೊಂದಲ ಮುಂದುವರಿದಿದೆ.
ಪಂಚರತ್ನ ಯಾತ್ರೆಯ ಹೊಣೆಯನ್ನು ಆಯಾ ಕ್ಷೇತ್ರದ ಶಾಸಕರು ಹಾಗೂ ಆಕಾಂಕ್ಷಿಗಳಿಗೆ ನೀಡಿರುವ ಕುಮಾರಸ್ವಾಮಿ, ಹಾಸನದಲ್ಲಿ ಏನು ಮಾಡುವುದು ಎಂದು ತಿಳಿಯದಾಗಿದ್ದಾರೆ. ಹಾಸನ ಹೈಕಮಾಂಡ್ ರೇವಣ್ಣ ಅವರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದು ಮಾತ್ರ ಇನ್ನೂ ಗುಟ್ಟಾಗಿಯೇ ಉಳಿದಿದೆ.
ಇದನ್ನೂ ಓದಿ | ಎಲೆಕ್ಷನ್ ಹವಾ | ಹಾಸನ | ಪ್ರೀತಂ ಗೌಡ ವಿರುದ್ಧ ರೇವಣ್ಣ ಯಾವ ಕಾರ್ಡ್ ಬಳಸುತ್ತಾರೆ ಎನ್ನುವುದೇ ಪ್ರಶ್ನೆ