ಹಾಸನ: ಲೋಕಸಭಾ ಚುನಾವಣೆಗೆ (Lok Sabha Election 2024) ಸಂಬಂಧಿಸಿ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿ (BJP-JDS Coalition) ಮಾಡಿಕೊಂಡಿವೆ. 28 ಕ್ಷೇತ್ರಗಳ ಪೈಕಿ ಬಿಜೆಪಿ 25 ಸೀಟು ಇಟ್ಟುಕೊಂಡು ಹಾಸನ, ಮಂಡ್ಯ ಮತ್ತು ಕೋಲಾರ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಗಿದೆ ಎಂದು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ (Radha Mohan Das Agarwal) ಅಧಿಕೃತವಾಗಿ ಘೋಷಿಸಿದ್ದಾರೆ. ಆದರೆ, ಹಾಸನದಲ್ಲಿ (Hasana Constituency) ಅಚ್ಚರಿಯ ಬೆಳವಣಿಗೆ ನಡೆದಿದೆ. ಟಿಕೆಟ್ ಜೆಡಿಎಸ್‌ಗೆ ಎಂದು ಫಿಕ್ಸ್ ಆಗಿದ್ದರೂ ಪರ್ಯಾಯವಾಗಿ ಬಿಜೆಪಿಯ ಅಭ್ಯರ್ಥಿಯೊಬ್ಬರು (BJP Aspirant Starts Campaining) ನಾಮಪತ್ರ ಅರ್ಜಿಗೆ ಪೂಜೆ ಸಲ್ಲಿಸಿ ಪ್ರಚಾರವನ್ನೇ ಆರಂಭಿಸಿದ್ದಾರೆ.
ಈ ಘಟನೆ ಹಾಸನದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಳಗಿನ ಮೈತ್ರಿಯಲ್ಲಿ ಇರುವ ಭಿನ್ನಾಭಿಪ್ರಾಯವನ್ನು ಜಗಜ್ಜಾಹೀರು ಮಾಡಿದೆ. ಹೊರಗಿನ ನಾಯಕರು ಏನೇ ಹೇಳಿದರೂ, ಸ್ಥಳೀಯ ನಾಯಕರ ಮಟ್ಟದಲ್ಲಿ ಮೈತ್ರಿ ಕುದುರದೆ ಇದ್ದರೆ ಕಷ್ಟ ಎಂಬ ಮಾತಿಗೆ ಈ ವಿದ್ಯಮಾನ ಪೂರಕವಾಗಿದೆ. ಇದರ ಮೂಲಕ ಬಿಜೆಪಿ ಹಾಗು ಜೆಡಿಎಸ್ ನಡುವಿನ ಅಂತಃ ಕಲಹ ಬೀದಿಗೆ ಬಂದಿದೆ.
ಕಣಕ್ಕೆ ಇಳಿದವರು ಯಾರು? ಇಳಿಸಿದ್ದು ಯಾರು?
ಹಾಸನದಲ್ಲಿ ಮೈತ್ರಿ ಕೂಟದ ಪರವಾಗಿ ಜೆಡಿಎಸ್ ಅಭ್ಯರ್ಥಿಯಾಗಿ ಎಚ್.ಡಿ ರೇವಣ್ಣ ಅವರ ಪುತ್ರ, ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರು ಕಣಕ್ಕಿಳಿಯುವುದು ಖಚಿತವಾಗಿದೆ. ಆದರೆ, ಇದು ಪ್ರಜ್ವಲ್ ರೇವಣ್ಣ ಸೇರಿದಂತೆ ಇಡೀ ರೇವಣ್ಣ ಕುಟುಂಬವನ್ನು ಸದಾ ಎದುರು ಹಾಕಿಕೊಳ್ಳುವ ಹಾಸನದ ಮಾಜಿ ಶಾಸಕ ಪ್ರೀತಂ ಗೌಡ ಅವರಿಗೆ ಎಳ್ಳಷ್ಟೂ ಇಷ್ಟವಾಗಿಲ್ಲ ಎನ್ನಲಾಗಿದೆ. ಹೀಗಾಗಿ ಅವರು ಬೇರೆ ಬೇರೆ ಆಟಗಳ ಮೂಲಕ ಜೆಡಿಎಸ್ ನಾಯಕರಿಗೆ ತಿರುಗೇಟು ನೀಡುತ್ತಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಇನ್ನೂ ಜೆಡಿಎಸ್ ಟಿಕೆಟ್ ಘೋಷಣೆಯಾಗಿಲ್ಲ. ನಾಮಪತ್ರ ಸಲ್ಲಿಕೆಗೆ ಇನ್ನೂ ಕೆಲವು ದಿನಗಳ ಬಾಕಿ ಇವೆ. ಆದರೆ, ಅದಾಗಲೇ ಜೆಡಿಎಸ್ ಅಭ್ಯರ್ಥಿಗೆ ಪರ್ಯಾಯವಾಗಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಅಖಾಡಕ್ಕೆ ಇಳಿದಿದ್ದಾರೆ. ಅವರೇ ಬಿಜೆಪಿ ರಾಜ್ಯ ಪ್ರಧಾನಕಾರ್ಯದರ್ಶಿ ಪ್ರೀತಂಗೌಡರ ಅತ್ಯಾಪ್ತರಾಗಿರುವ ಎಚ್.ಪಿ. ಕಿರಣ್ ಕುಮಾರ್. ಅವರು ಶನಿವಾಋ ತಮ್ಮ ಬೆಂಬಲಿಗರ ಜೊತೆ ಹಾಸನದ ಸಿದ್ದೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ನಾಮಪತ್ರ ಅರ್ಜಿಗೆ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿದರು.
Lok Sabha Election 2024 : ವಿಶ್ವಾಸಕ್ಕೆ ತೆಗೆದುಕೊಳ್ಳದ ಆಕ್ರೋಶ
ಪ್ರೀತಂ ಗೌಡ ಮತ್ತು ಟೀಮ್ ಯಾಕೆ ಹೀಗೆ ಮಾಡಿದೆ ಎಂದು ಕೇಳಿದರೆ ಸ್ಥಳೀಯ ರಾಜಕಾರಣದತ್ತ ಬೊಟ್ಟು ಮಾಡಲಾಗುತ್ತಿದೆ. ಬಿಜೆಪಿ -ಜೆಡಿಎಸ್ ಮೈತ್ರಿಗೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ, ಹಿರಿಯ ನಾಯಕ ಅಮಿತ್ ಶಾ ಮತ್ತು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ಎಚ್.ಡಿ ಕುಮಾರಸ್ವಾಮಿ ಅವರ ನಡುವೆ ಉನ್ನತ ಮಟ್ಟದಲ್ಲಿ ಮಾತುಕತೆ ನಡೆದು ಮೈತ್ರಿ ಖಾತ್ರಿಯಾಗಿದೆ. ಆದರೆ, ಸ್ಥಳೀಯ ಮಟ್ಟದಲ್ಲಿ ಈ ಬಗ್ಗೆ ಮಾತುಕತೆ ನಡೆದೇ ಇಲ್ಲ. ಅದರಲ್ಲೂ ಬಿಜೆಪಿ ಮತ್ತು ಜೆಡಿಎಸ್ ಖಡಾಖಡಿ ಸಮರ ಇರುವ ಹಾಸನ ಜಿಲ್ಲಾ ಮಟ್ಟದಲ್ಲಿ ಅಧಿಕೃತವಾಗಿ ಯಾವುದೇ ಮಾತುಕತೆ ನಡೆದಿಲ್ಲ ಎನ್ನಲಾಗಿದೆ.
ಇದರಿಂದ ಸಿಟ್ಟಿಗೆದ್ದಿರುವ ಪ್ರೀತಂ ಗೌಡ ಅವರ ಟೀಮ್ ತಾನೇ ಪಕ್ಷದ ಪರವಾಗಿ ಪ್ರಚಾರ ಶುರು ಮಾಡಿದೆ. ಜಿಲ್ಲೆಯ ಪ್ರಭಾವಿ ನಾಯಕ ಪ್ರೀತಂ ಗೌಡ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರು ಪ್ರಚಾರ ಶುರುಮಾಡಿದ್ದರಿಂದ ಬಿಜೆಪಿ ವಲಯ ಕೆರಳಿದೆ.
ಇದನ್ನೂ ಓದಿ : Lok Sabha Election 2024 : ಮೋದಿ ಜನಪ್ರಿಯತೆ ಉತ್ತುಂಗಕ್ಕೆ, ಮತ್ತೊಮ್ಮೆ ಸರ್ಕಾರ ಗ್ಯಾರಂಟಿ ಎಂದ ವಿಜಯೇಂದ್ರ
ಜೆಡಿಎಸ್ ನಾಯಕರ ನಡೆಗೆ ತಿರುಗೇಟು ನೀಡಲು ಮುಂದಾದ ಬಿಜೆಪಿ ನಾಯಕರು ಮೈತ್ರಿ ಅಭ್ಯರ್ಥಿ ಇನ್ನೂ ಘೋಷಣೆ ಆಗದಿರುವ ನಡುವೆ ಬಿಜೆಪಿ ಅಭ್ಯರ್ಥಿ ಹೆಸರಿನಲ್ಲಿ ಪ್ರಚಾರ ಶುರು ಮಾಡಿದ್ದಾರೆ. ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಎಚ್.ಪಿ. ಕಿರಣ್ ಕುಮಾರ್ ಅವರೇ ಕಣಕ್ಕಿಳಿದಿದ್ದಾರೆ.
ಇಂಥ ಬೆಳವಣಿಗೆಗಳ ಬಗ್ಗೆ ಮೊದಲೇ ಸೂಚನೆ ನೀಡಿದ್ದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು ಜಿಲ್ಲಾ ಮಟ್ಟದ ನಾಯಕರಿಗೆ ಬುದ್ಧಿ ಹೇಳಬೇಕು ಎಂದು ಹೈಕಮಾಂಡ್‌ಗೆ ಮನವಿ ಮಾಡಿದ್ದರು. ಹೈಕಮಾಂಡ್ ಇಂಥ ನಡೆಗಳ ಬಗ್ಗೆ ಏನು ಕ್ರಮ ಕೈಗೊಳ್ಳುತ್ತದೆ ಎಂದು ಕಾದು ನೋಡಬೇಕಾಗಿದೆ.