Site icon Vistara News

Lotus Controversy : ಶಾಲೆಯ ನೃತ್ಯದಲ್ಲಿ ಕಮಲದ ಹೂವು ಕಂಡ ಶಾಸಕ ಶಿವಲಿಂಗೇಗೌಡ ಕೆಂಡ!

Lotus Controversy KM Shivalingegowda

ಹಾಸನ: ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ (Republic Day Celebration) ಶಾಲೆಯಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ನೃತ್ಯ ಕಾರ್ಯಕ್ರಮದಲ್ಲಿ ಕಮಲದ ಹೂವನ್ನು (Lotus Controversy) ಕಂಡು ಅರಸೀಕೆರೆ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಕೆ.ಎಂ. ಶಿವಲಿಂಗೇ ಗೌಡರು (MLA KM Shivalingegowda) ಕೆಂಡಾಮಂಡಲರಾಗಿದ್ದಾರೆ. ಪಕ್ಷವೊಂದರ ಚಿಹ್ನೆಯನ್ನು ಈ ರೀತಿ ಮಕ್ಕಳ ಕೈಯಲ್ಲಿ ಕೊಟ್ಟು ಪ್ರದರ್ಶನ ಮಾಡಿಸೋದು ಸರೀನಾ ಎಂದು ಅವರು ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಮಲದ ಹೂವು ರಾಷ್ಟ್ರೀಯ ಹೂವು (Lotus National flower) ಎಂಬ ನೆಲೆಯಲ್ಲಿ ಪ್ರದರ್ಶನ ಮಾಡಿದ್ದೇವೆ, ಇದರಲ್ಲಿ ರಾಜಕೀಯ ಇಲ್ಲ ಎಂದು ಶಿಕ್ಷಕಿ ಹೇಳಿದರೂ ಅವರು ಒಪ್ಪಲಿಲ್ಲ. ಶಿಕ್ಷಕರು ಮಕ್ಕಳಿಗೆ ಹೇಳಿ ಕೊಡೋದು ಇದೇನಾ ಎಂದು ಅವರು ಕೆಂಡ ಕಾರಿದರು.

ಅರಸೀಕೆರೆಯ ಶಾಲೆಯಲ್ಲಿ ಗಣರಾಜ್ಯೋತ್ಸವ ನಿಮಿತ್ತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಲ್ಲಿ ತಹಶೀಲ್ದಾರ್ ಸಂತೋಷ್‌ ಕುಮಾರ್, ಬಿಇಒ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಕ್ಕಳಿಂದ ರಾಷ್ಟ್ರೀಯ ವಿಚಾರಗಳನ್ನು ಆಧರಿಸಿದ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ನವಿಲು, ಕಮಲದ ಹೂವಿನ ಮೂಲಕ ಪ್ರದರ್ಶನ ನಡೆಸಿದರು. ಈ ಕಾರ್ಯಕ್ರಮಗಳೆಲ್ಲ ಮುಗಿದು ಬಹುಮಾನ ವಿತರಣೆ ಕಾರ್ಯಕ್ರಮ ನಡೆಯುವಾಗ ಶಾಸಕ ಕೆ.ಎಮ್.‌ ಶಿವಲಿಂಗೇಗೌಡರು ಸಿಟ್ಟಿಗೆದ್ದರು.ಅ

ಅವರ ಸಿಟ್ಟಿಗೆ ಕಾರಣವಾಗಿದ್ದು, ವಿದ್ಯಾರ್ಥಿಗಳ ಕೈಯಲ್ಲಿ ಕಮಲದ ಹೂವು ಕೊಟ್ಟು ನೃತ್ಯ ಮಾಡಿಸಿದ್ದು. ಇದು ಒಂದು ರಾಜಕೀಯ ಪಕ್ಷದ ಚಿಹ್ನೆ. ಅದನ್ನು ಮಕ್ಕಳ ಕೈಯಲ್ಲಿ ಕೊಟ್ಟು ನೃತ್ಯ ಮಾಡಿಸಿದ್ದು ಎಷ್ಟು ಸರಿ ಎಂದು ಅವರು ಪ್ರಶ್ನೆ ಮಾಡಿದರು.

ಆಗ ಶಿಕ್ಷಕರು ನಾವು ಕಮಲವನ್ನು ರಾಷ್ಟ್ರೀಯ ಹೂವು ಎಂಬ ನೆಲೆಯಲ್ಲಿ ಮಕ್ಕಳಿಗೆ ಅರಿವು ಮೂಡಿಸಲು ಈ ಕಾರ್ಯಕ್ರಮ ಮಾಡಿದ್ದೆವು. ರಾಷ್ಟ್ರೀಯ ಪಕ್ಷಿಯಾಗಿರುವ ನವಿಲನ್ನೂ ಪ್ರದರ್ಶನ ಮಾಡಿದ್ದೇವೆ ಎಂದು ಹೇಳಿದರು.

ರಾಷ್ಟ್ರೀಯ ಹೂ ಅನ್ನುವುದನ್ನೂ ಮರೆತು ಪಕ್ಷದ ಚಿಹ್ನೆ ಎಂಬ ತಪ್ಪು ಗ್ರಹಿಕೆಯಿಂದ ಆಕ್ಷೇಪ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡರು ಇದನ್ನು ಒಪ್ಪಲಿಲ್ಲ. ಅದು ರಾಷ್ಟ್ರೀಯ ಹೂವೇ ಆಗಿರಬಹುದು. ಅದು ಒಂದು ಪಕ್ಷದ ಚಿಹ್ನೆಯಾಗಿಯೇ ಹೆಚ್ಚು ಪರಿಚಿತವಾಗಿದೆ. ಇದರ ಬಗ್ಗೆ ನಿಮಗೆ ಸೂಕ್ಷ್ಮತೆ ಇರಬೇಕು ಎಂದು ಹೇಳಿದರು.

ಇದನ್ನೂ ಓದಿ: Republic Day : ಭದ್ರತೆ ಭೇದಿಸಿ ಸಿಎಂ ಕಡೆ ನುಗ್ಗಿದ ವ್ಯಕ್ತಿ; ಅವರಿಗೆ ಅಳಿಯನ ಬಗ್ಗೆ ಹೇಳಬೇಕಿತ್ತಂತೆ!

ಶಿವಲಿಂಗೇಗೌಡ ಮತ್ತು ಶಿಕ್ಷಕಿ ನಡುವೆ ಮಾತಿನ ಚಕಮಕಿ ನಡೆದು ಶಾಸಕರು ಏಕವಚನದಲ್ಲೇ ಮಾತನಾಡಿದರು.

ಶಾಸಕರಿಗೆ ಮಾತಿನ ಎದುರೇಟು ನೀಡಿದ ಶಿಕ್ಷಕಿಗೆ, ʻʻಏಯ್ ನಿಂಗೆ ಏನ್ ಗೊತ್ತು? ಇನ್ನೇನ್ ಉದ್ದಾರ ಮಾಡ್ತೀರ ಮಕ್ಕಳನ್ನುʼʼ ಎಂದು ಗರಂ ಆದರು ಶಿವಲಿಂಗೇ ಗೌಡರು. ಆಗ ಶಿಕ್ಷಕಿ ʻʻಈ ರೀತಿ ಮಾತಾಡೋದು ಸರಿಹೋಗಲ್ಲಾ ಸರ್ʼʼ ಎಂದು ಪ್ರತಿ ನುಡಿದರು. ನಿನಗೆ ನೋಟೀಸ್ ನೀಡಬೇಕಾಗುತ್ತದೆ ಎಂದು ವಾರ್ನಿಂಗ್‌ ಕೊಟ್ಟರು ಶಿವಲಿಂಗೇಗೌಡ. ಸ್ಥಳೀಯ ಮುಖಂಡರ ಮಧ್ಯಪ್ರವೇಶದಿಂದ ಕೊನೆಗೂ ಪರಿಸ್ಥಿತಿ ತಿಳಿಯಾಯಿತು.

ಕಮಲದ ಹೂವಿನ ನೃತ್ಯವನ್ನು ಇಲ್ಲಿ ನೋಡಿ

ಶಿವಲಿಂಗೇ ಗೌಡ ಅವರ ನಡೆಗೆ ಬಿಜೆಪಿ ನಾಯಕರ ಆಕ್ಷೇಪ

ಶಾಸಕ ಶಿವಲಿಂಗೇ ಗೌಡ ಅವರ ನಡೆಗೆ ಬಿಜೆಪಿ ನಾಯಕ ಎನ್‌. ರವಿಕುಮಾರ್‌ ಅಕ್ಷೇಪ ವ್ಯಕ್ತಪಡಿಸಿದ್ದಾರೆ. ಕಮಲ ರಾಷ್ಟ್ರೀಯ ಹೂವು. ಅದನ್ನು ಪಕ್ಷಕ್ಕೆ ಹೋಲಿಸಿ ಮಕ್ಕಳ ಮುಂದೆ ನಗೆಪಾಟಲಿಗೀಡಾಗಿದ್ದಾರೆ ಶಿವಲಿಂಗೇಗೌಡರು ಎಂದು ಹೇಳಿದರು. ಕಮಲದ ಚಿಹ್ನೆ ವಿಚಾರದಲ್ಲಿ ಈಗಾಗಲೇ ಕೋರ್ಟ್‌ಗಳಲ್ಲಿ ಹಲವು ಸುತ್ತಿನ ಚರ್ಚೆಗಳು ನಡೆದಿರುವುದನ್ನು ನೆನಪಿಸಿದರು.

Exit mobile version