ಹಾಸನ: ತಮ್ಮ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಪ್ರತಿಪಕ್ಷಗಳು ಮಾಡುತ್ತಿವೆ ಎಂದಿರುವ ಅರಸೀಕೆರೆ ಜೆಡಿಎಸ್ ಶಾಸಕ ಕೆ.ಎಂ. ಶಿವಲಿಂಗೇಗೌಡ, ತಮ್ಮನ್ನು ರಾಗಿ ಕಳ್ಳ ಎಂದಿದ್ದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತಿಳಿಸಿದ್ದಾರೆ.
ಹಾಸನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶಿವಲಿಂಗೇಗೌಡ, ನನ್ನ ಮತ್ತು ನನ್ನ ಹಿಂಬಾಲಕರ ಮೇಲೆ ಬಿಜೆಪಿಯವರು ಸೋಮವಾರ ಪ್ರತಿಭಟನೆ ಮಾಡಿದ್ದಾರೆ. ನಾನು ಜನವಿರೋಧಿ ನೀತಿ ಅನುಸರಿಸುತ್ತೇನೆ,ಶಿಷ್ಟಾಚಾರ ಪಾಲನೆ ಮಾಡುತ್ತಿಲ್ಲ ಎಂಬ ಆರೋಪ ಮಾಡಿದ್ದಾರೆ. ನಾನು ಯಾವುದೇ ಶಿಷ್ಟಾಚಾರ ಉಲ್ಲಂಘನೆ ಮಾಡಿಲ್ಲ. ನನ್ನ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ನಾನು ಚಾಲನೆ ನೀಡಿದ್ದೇನೆ. ಎಲ್ಲ ಕಾಮಗಾರಿ ಶಂಕುಸ್ಥಾಪನೆಗೆ ಜಿಲ್ಲಾ ಮಂತ್ರಿಯನ್ನು ಕಾಯುತ್ತಾ ಕುಳಿತರೆ ಕಾಮಗಾರಿಗೆ ವೇಗ ನೀಡುವುದು ಹೇಗೆ? ಎಂದು ಪ್ರಶ್ನಿಸಿದ್ದಾರೆ.
ನಾವು ಕಾಮಗಾರಿ ಪ್ರಾರಂಭಿಸುವುದಕ್ಕೆ ಇವರು ವಿರೋಧಿಸುತ್ತಿದ್ದಾರೆ. ನಾವು ಏರ್ಪಡಿಸಿದ ಕಾರ್ಯಕ್ರಮಗಳಿಗೆ ಕೆಲ ಬಿಜೆಪಿ ಕಾರ್ಯಕರ್ತರನ್ನು ಬಿಟ್ಟು ಅಡ್ಡಿಪಡಿಸುತ್ತಾರೆ. ನಮ್ಮ ಕಾರ್ಯಕರ್ತರು ಮತ್ತು ಅವರ ನಡುವೆ ಗಲಾಟೆ ನಡೆಯುತ್ತದೆ. ಇದನ್ನೇ ಬಳಸಿಕೊಂಡು ಅಟ್ರಾಸಿಟಿ ಕೇಸ್ ಹಾಕಿಸುತ್ತಾರೆ. ಇದನ್ನೇ ವೀಡಿಯೊ ಮಾಡಿ ಹೈಕಮಾಂಡ್‌ಗೆ ಕಳಿಸಿ ಪ್ರಚಾರ ಪಡೆಯುತ್ತಾನೆ ಎಂದು ಪರೋಕ್ಷವಾಗಿ ಎನ್.ಆರ್. ಸಂತೋಷ್ ವಿರುದ್ಧ ಹರಿಹಾಯ್ದಿದ್ದಾರೆ.
ವಾಗ್ದಾಳಿ ಮುಂದುವರಿಸಿದ ಶಿವಲಿಂಗೇಗೌಡ, ಒಂದು ವರ್ಷದಿಂದ ಅರಸೀಕೆರೆಯಲ್ಲಿ ಜನರ ನೆಮ್ಮದಿ ಹಾಳು ಮಾಡುತ್ತಿದ್ದಾನೆ. ಹದಿನೈದು ವರ್ಷಗಳಲ್ಲಿ ಎಷ್ಟು ಅಟ್ರಾಸಿಟಿ ಕೇಸ್‌ಗಳಾಗಿವೆ, ಇವನು ಅರಸೀಕೆರೆಗೆ ಬಂದಮೇಲೆ ಎಷ್ಟು ಅಟ್ರಾಸಿಟಿ ಕೇಸ್ ಆಗಿವೆ ಗಮನಿಸಬೇಕು. ನಾನು ಕಾಂಕ್ರೀಟ್ ರೋಡ್‌ನಲ್ಲಿ ದುಡ್ಡು ಹೊಡೆಯುತ್ತೇನೆ ಎಂದು ಆರೋಪಿಸಿದ್ದಾನೆ. ಯಾರಾದ್ರೂ ಕಾಂಕ್ರೀಟ್ ರಸ್ತೆಯಲ್ಲಿ ದುಡ್ಡು ಮಾಡುತ್ತಾರಾ? ನಾನು ಕಾಂಕ್ರೀಟ್ ರೋಡ್ ಮಾಡದೇ ಮಣ್ಣು ಎರಚಬೇಕಿತ್ತಾ? ನಾನು ದೇವಾಲಯ ಕೆಡವಿದ್ದೇನೆ ಎಂದು ಹೇಳಿದ್ದಾನೆ. ದೇವರು ಬೀದಿಯಲ್ಲಿವೆ ಎಂದು ಹೇಳಿದ್ದಾನಲ್ಲಾ, ನಾನು ಕಟ್ಟಿರೋ ದೇವಾಲಯಗಳಿಗೆ ಇವನು ಬರಿ ಹೂವು ಹಾಕಲು ಸಾಧ್ಯವಿದೆಯಾ? ಇವರ ಆರೋಪದಿಂದ ನಾವೂ ಕೂಡ ಪ್ರಚಾರ ಪಡೆಯುವ ಅವಶ್ಯಕತೆ ಎದುರಾಗಿದೆ ಎಂದರು.
ಇದನ್ನೂ ಓದಿ | ಮಸೂದ್, ಫಾಜಿಲ್ ಮನೆಗೂ ಸಿಎಂ ಹೋಗುತ್ತಾರೆ: ಎನ್. ರವಿಕುಮಾರ್ ಹೇಳಿಕೆ
ತಮ್ಮನ್ನು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ರಾಗಿಕಳ್ಳ ಎಂದು ಕರೆದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಶಿವಲಿಂಗೇಗೌಡ, ರಾಗಿಗೆ ಮಣ್ಣು ಸೇರಿಸಿ ಮಾರುತ್ತಿದ್ದವರ ವಿರುದ್ಧ ಈ ಹಿಂದೆ ನಾನೇ ಹೋರಾಟ ಮಾಡಿದ್ದೇನೆ. ಎಂಎಲ್‌ಸಿ ರವಿಕುಮಾರ್ ನನ್ನನ್ನೇ ರಾಗಿ ಕಳ್ಳ ಎಂದು ಆರೋಪಿಸಿದ್ದಾರೆ. ನಾನು ಈ ವಿಚಾರವಾಗಿ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯದಲ್ಲಿ ಈ ಬಗ್ಗೆ ನಾನು ಸತ್ಯ ಮಾಡುತ್ತೇನೆ. ಆರೋಪ ಮಾಡಿರುವವರು ಬಂದು ಸತ್ಯ ಮಾಡುತ್ತಾರಾ? ಈ ವಿಚಾರಕ್ಕೆ ನನ್ನ ಕ್ಷೇತ್ರದ ಜನಕ್ಕೆ ನಾನು ಉತ್ತರ ಕೊಡಬೇಕು. ನಾನು ಮಾಡಿರುವ ಕೆಲಸ ನನ್ನ ಕ್ಷೇತ್ರದ ಜನತೆಯ ಹೃದಯದಲ್ಲಿದೆ. ಕಾನೂನು ಹೋರಾಟ ಒಂದು ಕಡೆ, ಮತ್ತೊಂದು ಕಡೆ ನಮ್ಮ ಸಂಸ್ಕ್ರತಿಯಂತೆ ಮಂಜುನಾಥನ ಮೊರೆ ಹೋಗುತ್ತೇನೆ. ಸುಖಾಸುಮ್ಮನೆ ಅಪಪ್ರಚಾರ ಮಾಡಿ ರಾಜಕೀಯ ಮಾಡಬಾರದು. ನೇರಾನೇರವಾಗಿ ಹೇಗೆ ಬೇಕಾದರೂ ರಾಜಕೀಯ ಮಾಡಲಿ ಎಂದರು.
ಜೆಡಿಎಸ್ ಜತೆ ಭಿನ್ನಾಭಿಪ್ರಾಯ ಇದೆ
ಜೆಡಿಎಸ್ ಜೊತೆ ಭಿನ್ನಾಭಿಪ್ರಾಯ ಹೊಂದಿರುವುದು ಎಲ್ಲರಿಗೂ ಗೊತ್ತಿದೆ ಎಂದ ಶಿವಲಿಂಗೇಗೌಡ, ಮುಂದಿನ ಚುನಾವಣೆ ಹೊತ್ತಿಗೆ ಯಾವ ಪಕ್ಷದಲ್ಲಿ ಸ್ಪರ್ಧಿಸುತ್ತೇನೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ನನ್ನ ಕಾರ್ಯಕರ್ತರನ್ನು ಕರೆದು ಚರ್ಚಿಸಿ ತೀರ್ಮಾನಿಸುತ್ತೇನೆ. ಮಂತ್ರಿಗಿರಿ ಆಸೆಯಿಂದ ಭಿನ್ನಾಭಿಪ್ರಾಯ ಸೃಷ್ಟಿಯಾಗಿಲ್ಲ. ಶಿವಲಿಂಗೇಗೌಡ ಚೂರಿ ಹಾಕಿದ್ದಾನೆ ಎಂದು ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಕುಮಾರಣ್ಣ ಹೇಳಿದರು. ನಾನು ಅವರಿಗೆ ಎಂದೂ ಚೂರಿ ಹಾಕಿಲ್ಲ. ದೇವೇಗೌಡರ ಜತೆ ಒಮ್ಮೆ ಮಾತನಾಡಲು ಪ್ರಯತ್ನಿಸಿದೆ. ದೂರವಾಣಿ ಮೂಲಕ ಸರಿಯಾಗಿ ಮಾತನಾಡಲು ಸಾಧ್ಯವಾಗಲಿಲ್ಲ. ಗೌಡರ ಜತೆ ಮಾತನಾಡುವಾಗ ಭಾವೋಗ್ವೇಗದಿಂದ ಮಾತನಾಡಲು ಸಾಧ್ಯವಾಗಲಿಲ್ಲ. ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ಪ್ರತಿನಿತ್ಯ ಸಂಪರ್ಕದಲ್ಲಿದ್ದಾರೆ ಎಂದರು.
ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ವಾಹನ ವ್ಯವಸ್ಥೆ ಮಾಡಿದ್ದಾರೆ ಎಂಬ ವಿಚಾರಕ್ಕೆ ಸ್ಪಷ್ಟನೆ ನೀಡಿದ ಶಿವಲಿಂಗೇಗೌಡ, ಯಾರೇ ಸಹಾಯ ಕೇಳಿದರೂ ನಾನು ಮಾಡುತ್ತೇನೆ. ಅವರ ಸರ್ಕಾರದ ಅವಧಿಯಲ್ಲಿ ನಾನು ಉಪಯೋಗ ಪಡೆದಿದ್ದೇನೆ. ಕೆಲವರು ಬಂದು ಸಹಾಯ ಕೇಳಿದಾಗ ಅಷ್ಟೋ ಇಷ್ಟೋ ಹಣ ನೀಡಿದೆ. ಸಾರಿಗೆ ಇಲಾಖೆಯವರಿಗೆ ಖುದ್ದಾಗಿ ಹೋಗಿ ಬಸ್‌ಗಳಿಗೆ ಹಣ ಕಡಿಮೆ ಮಾಡುವಂತೆ ಹೇಳಿದ್ದು ನಿಜ. ಇದನ್ನೆ ಕೆಲವರು ದೊಡ್ಡ ವಿಷಯವನ್ನಾಗಿಸಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.
ಶಿವಲಿಂಗೇಗೌಡರನ್ನು ಹೊಗಳಿದ ರೇವಣ್ಣ
ಶಿವಲಿಂಗೇಗೌಡ ಶಾಸಕನಾದ ನಂತರ ಅರಸೀಕೆರೆ ಇತಿಹಾಸದಲ್ಲಿ ಯಾರೂ ಮಾಡದಷ್ಟು ಬದಲಾವಣೆ ಮಾಡಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಹೊಗಳಿದ್ದಾರೆ. ಈ ಬಿಜೆಪಿಯವರಿಗೆ ರೈತರ ಸಂಕಷ್ಟದ ಬಗ್ಗೆ ಅರಿವಿಲ್ಲ. ಶಿವಲಿಂಗೇಗೌಡನನ್ನು ರಾಗಿಕಳ್ಳ ಎಂದು ಕರೆದಿದ್ದಾರೆ. ರಾಗಿ ಮಾರಿದರೆ ಶಿವಲಿಂಗೇಗೌಡ, ರೇವಣ್ಣನ ಅಕೌಂಟ್‌ಗೆ ಹಣ ಬರುತ್ತಾ? ಜಿಲ್ಲೆಯಲ್ಲಿ ಬಿಜೆಪಿಯವರು ಲೂಟಿ ಹೊಡೆಯುತ್ತಿದ್ದಾರೆ. ಮಾನ ಮಾರ್ಯಾದೆ ಇದ್ದರೆ ಜನಪರ ಕೆಲಸ ಮಾಡಲಿ ಎಂದರು.
ಇದನ್ನೂ ಓದಿ | ಸ್ವಾತಂತ್ರ್ಯದ ಅಮೃತ ಮಹೋತ್ಸವ | ಎಲ್ಲ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಾಟ: ಎನ್. ರವಿಕುಮಾರ್