Site icon Vistara News

Murder Case : ಪತ್ನಿಯ ಕೊಂದು ಆತ್ಮಹತ್ಯೆ ಎಂದು ಬಿಂಬಿಸಿದ್ದ ಕಿರಾತಕ; ಪೋಸ್ಟ್‌ಮಾರ್ಟಂನಲ್ಲಿ ಸಿಕ್ಕಿಬಿದ್ದ!

Murder Case Man Kills Wife

ಹಾಸನ: ಮಾರ್ಚ್‌ 14ರಂದು ಹಾಸನ ಜಿಲ್ಲೆ (Hasana News) ಅರಸೀಕೆರೆ ತಾಲ್ಲೂಕಿನ ಗೊಲ್ಲರಹಟ್ಟಿ ಗ್ರಾಮದಲ್ಲಿ ಮಹಿಳೆಯೊಬ್ಬರ ಶವ ಮನೆಯಲ್ಲಿಯೇ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ (Woman Death) ಪತ್ತೆಯಾಗಿತ್ತು. ಇದನ್ನು ಆತ್ಮಹತ್ಯೆ (Suicide Case) ಎಂದೇ ಎಲ್ಲರೂ ನಂಬಿದ್ದರು. ಆದರೆ, ಪೊಲೀಸರಿಗೆ ಒಬ್ಬ ವ್ಯಕ್ತಿಯ ಮೇಲೆ ಸಣ್ಣ ಸಂಶಯವಿತ್ತು. ಇದೀಗ ಆ ಸಂಶಯವೇ ನಿಜವಾಗಿದೆ. ಕಿರಾತಕ ಗಂಡನೇ ತನ್ನ ಪತ್ನಿಯನ್ನು ಕೊಂದು (Killer Husband) ಆತ್ಮಹತ್ಯೆ ಎಂದು ಬಿಂಬಿಸಿದ್ದ!. ಇದೀಗ ಆತನ ಕಿರಾತಕ ಕೃತ್ಯ (Murder Case) ಮರಣೋತ್ತರ ಶವ ಪರೀಕ್ಷೆ ವರದಿಯಲ್ಲಿ (Post Mortem report) ಬಯಲಾಗಿದ್ದು ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಹೀಗೆ ಪತ್ನಿ ಚೈತ್ರಾಳನ್ನು ಕೊಂದು ಆತ್ಮಹತ್ಯೆ ಎಂದು ಬಿಂಬಿಸಿದವನ ಹೆಸರು ಶಂಕರಲಿಂಗಪ್ಪ. ಸದಾ ಕುಡಿತ, ಅದಕ್ಕಾಗಿ ಸಾಲ ಮಾಡಿಕೊಂಡಿದ್ದ ಶಂಕರಲಿಂಗಪ್ಪನ ನಡೆಯನ್ನು ಪ್ರಶ್ನೆ ಮಾಡಿದ್ದೇ ಚೈತ್ರಾಳ ಪಾಲಿಗೆ ಉರುಳಾಗಿದೆ.

ಶಂಕರ ಲಿಂಗಪ್ಪ ಕುಡಿತದ ದಾಸನಾಗಿದ್ದ. ಮದ್ಯ ಸೇವಿಸಲು ಆತ ಸಹಕಾರ ಸಂಘಗಳಲ್ಲಿ, ಬ್ಯಾಂಕ್‌ಗಳಲ್ಲಿ ಸಾಲ ಮಾಡಿಕೊಂಡಿದ್ದ. ಗಂಡನ ಈ ನಡವಳಿಕೆ ಬಗ್ಗೆ ಪತ್ನಿ ಚೈತ್ರಾಗೆ ಬೇಸರವಿತ್ತು. ಸಾಲ ತೀರಿಸುವ ವಿಚಾರಕ್ಕಾಗಿ ಆಗಾಗ್ಗೆ ಪತಿ-ಪತ್ನಿ ನಡುವೆ ಜಗಳ ನಡೆಯುತ್ತಿತ್ತು. ಇಂಥ ಪರಿಸ್ಥಿತಿಯಲ್ಲಿ ಚೈತ್ರಾ ಮಾರ್ಚ್‌ 14ರಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಬಹುಶಃ ಗಂಡನ ನಡವಳಿಕೆಯಿಂದ ಬೇಸರಗೊಂಡು ನೇಣಿಗೆ ಶರಣಾಗಿದ್ದಾಳೆ ಎಂದೇ ಎಲ್ಲರೂ ಭಾವಿಸಿದ್ದರು.

ಈ ನಡುವೆ ಚೈತ್ರಾಳ ಸಾವಿನ ಬಗ್ಗೆ ಚಿಕ್ಕಪ್ಪ ಜಯಣ್ಣ ಅನುಮಾನ ವ್ಯಕ್ತಪಡಿಸಿದ್ದರು. ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸ್ಥಳದಲ್ಲಿ ಆತ್ಮ ಹತ್ಯೆಗೆ ಸಂಬಂಧಿಸಿ ಸಾಕಷ್ಟು ಮಾಹಿತಿಗಳು ಸಿಕ್ಕಿದ್ದರೂ ಅರಸೀಕೆರೆ ಪೊಲೀಸರಿಗೆ ಶಂಕರಲಿಂಗಪ್ಪನ ಮೇಲೆ ಸಣ್ಣ ಸಂಶಯ ಇತ್ತು. ಹೀಗಾಗಿ ಅವರು ಅಸ್ವಾಭಾವಿಕ ಪ್ರಕರಣದಡಿ ಕೇಸು ದಾಖಲಿಸಿ ತನಿಖೆ ಕೈಗೊಂಡಿದ್ದರು.

ಇದನ್ನೂ ಓದಿ :Inhuman Behaviour : ಹೆತ್ತ ಮಗುವನ್ನೇ ಉಸಿರುಗಟ್ಟಿಸಿ ಕೊಂದ ತಾಯಿ, ತಾನೂ ಇರಿದುಕೊಂಡು ಸಾಯಲು ಯತ್ನ

ಮರಣೋತ್ತರ ಪರೀಕ್ಷೆ ರಿವೀಲ್‌ ಮಾಡಿದ ಭಯಾನಕ ಸತ್ಯ

ಈ ನಡುವೆ, ಮರಣೋತ್ತರ ಶವ ಪರೀಕ್ಷೆ ವರದಿಯಲ್ಲಿ ಚೈತ್ರಾಳನ್ನು ಯಾರೋ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ಬೆಳಕಿಗೆ ಬಂತು. ಪೊಲೀಸರು ಕೂಡಲೇ ಚೈತ್ರಾಳ ಪತಿ ಶಂಕರಲಿಂಗಪ್ಪ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಆಗ ಕೊಲೆ ರಹಸ್ಯ ಬಯಲಾಯಿತು.

ಚೈತ್ರಾ ಮತ್ತು ಶಂಕರಲಿಂಗಪ್ಪ ಅವರಿಗೆ 12 ವರ್ಷದ ಹಿಂದೆ ಮದುವೆಯಾಗಿತ್ತು. ಅವರಿಬ್ಬರ ಮಧ್ಯೆ ಶಂಕರಲಿಂಗಪ್ಪನ ನಡವಳಿಕೆ ವಿಚಾರದಲ್ಲಿ ಆಗಾಗ ಜಗಳ ಆಗುತ್ತಲೇ ಇತ್ತು. ಇದು ಶಂಕರಲಿಂಗಪ್ಪನಿಗೂ ಸಿಟ್ಟು ಬರಿಸಿತ್ತು. ಮಾ.14ರ ಸಂಜೆ ಕಂಠಪೂರ್ತಿ ಕುಡಿದು ಬಂದಿದ್ದ ಶಂಕರಲಿಂಗಪ್ಪ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಆತ ಪತ್ನಿಯ ಕುತ್ತಿಗೆಯನ್ನು ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದ.

ಬಳಿಕ ಯಾರಿಗೂ ಗೊತ್ತಾಗಬಾರದೆಂದು ಆಕೆಯನ್ನು ಸೀರೆಯಿಂದ ನೇಣು ಹಾಕಿ, ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಿದ್ದ! ಮೊದಲು ಎಲ್ಲರೂ ನಂಬಿದ್ದರು. ಆದರೆ, ಚಿಕ್ಕಪ್ಪನ ಸಂಶಯ ಮತ್ತು ಪೊಲೀಸರ ತನಿಖೆಯಿಂದ ಶಂಕರ ಲಿಂಗಪ್ಪನ ಭಯಾನಕ ಕೃತ್ಯ ಬಯಲಾಗಿದೆ. ಮರಣೋತ್ತರ ಪರೀಕ್ಷೆಯಿಂದ ಕೊಲೆ ರಹಸ್ಯ ಬಯಲಾಗುತ್ತಿದ್ದಂತೆಯೇ ಪೊಲೀಸರು ಶಂಕರಲಿಂಗಪ್ಪನನ್ನು ಬಂಧಿಸಿದ್ದಾರೆ. ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version