ಹಾಸನ: ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಮೋಕಳಿ ಬಳಿ ಅಪರಿಚಿತ ವ್ಯಕ್ತಿಯೊಬ್ಬನ ಬರ್ಬರ ಹತ್ಯೆ (Murder case) ನಡೆದಿದೆ. ಪಾತಕಿಗಳು ವ್ಯಕ್ತಿಯ ಕೊಲೆಗೈದು ಕೈ-ಕಾಲು ಕಟ್ಟಿ ಮೃತದೇಹವನ್ನು ಕೆರೆಗೆ ಎಸೆದಿದ್ದಾರೆ. ಅಂದಾಜು 55 ವರ್ಷದ ವ್ಯಕ್ತಿಯ ಮೃತದೇಹಕ್ಕೆ ಕಲ್ಲು ಕಟ್ಟಿ ಹಂತಕರು ಕೆರೆಗೆ ಎಸೆದಿದ್ದಾರೆ.
ನಿನ್ನೆ ಭಾನುವಾರ ಕೆರೆಯಲ್ಲಿ ಶವ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹಾಸನದ ವೈದ್ಯಕೀಯ ಬೋದಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕೊಲೆಯಾದ ವ್ಯಕ್ತಿಯ ಗುರುತು ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಅರಕಲಗೂಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.
ಜೋಡಿ ಕೊಲೆಯಲ್ಲಿ ಜೀವಾವಧಿ ಶಿಕ್ಷೆ ಪಡೆದ ಕೈದಿ ಆತ್ಮಹತ್ಯೆ
ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಕೈದಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿ ಬಸವರಾಜ ಹೊಸೂರ (47) ಎಂಬಾತ ಮೃತ ದುರ್ದೈವಿ. ಗದಗ ಜಿಲ್ಲೆಯ ರೋಣ ತಾಲೂಕಿನ ಸಂದಿಗವಾಡ ಗ್ರಾಮದ ಬಸವರಾಜ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜೋಡಿ ಕೊಲೆ ಹಿನ್ನೆಲೆಯಲ್ಲಿ ಬಸವರಾಜ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ.
ಇದನ್ನೂ ಓದಿ: Road Accident : ಬಲ ತಿರುವು ಪಡೆಯುವಾಗ ಬೈಕ್ ಸವಾರನ ಮೇಲೆ ಹರಿದ ಕೆಎಸ್‌ಆರ್‌ಟಿಸಿ ಬಸ್; ಸಿಸಿ ಕ್ಯಾಮೆರಾದಲ್ಲಿ ಅಪಘಾತ ಸೆರೆ
300 ರೂಪಾಯಿಗಾಗಿ ಹೆತ್ತಮ್ಮನನ್ನೇ ಕೊಂದ ಪಾಪಿ ಮಗ
ಬೆಳಗಾವಿ: 300 ರೂಪಾಯಿಗಾಗಿ ಪಾಪಿ ಮಗನೊಬ್ಬ ಹೆತ್ತಮ್ಮನನ್ನೇ ಕೊಂದಿರುವ ಘಟನೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಉಡಿಕೇರಿ ಗ್ರಾಮದಲ್ಲಿ ನಡೆದಿದೆ. ಮಹಾದೇವಿ ಗುರೇಪ್ಪ ತೊಲಗಿ (70) ಕೊಲೆಯಾದ ದುರ್ದೈವಿ. ಈರಪ್ಪ ಗುರೇಪ್ಪ ತೊಲಗಿ(34) ತಾಯಿಯನ್ನೇ ಕೊಲೆ ಮಾಡಿದ ಮಗ.
300 ರೂ. ಕೇಳಿದ್ದಕ್ಕೆ ಕೊಡಲ್ಲ ಎಂದು ತಾಯಿ ಹೇಳಿದ್ದಾರೆ. ಇದೇ ಕಾರಣಕ್ಕೆ ಇಬ್ಬರ ನಡುವೆ ವಾಗ್ವಾದ ಶುರುವಾಗಿದ್ದು, ನಂತರ ಜಗಳ ವಿಕೋಪಕ್ಕೆ ತಿರುಗಿ ಕಟ್ಟಿಗೆಯಿಂದ ಮಹಾದೇವಿ ತಲೆಗೆ ಮಗ ಹಲ್ಲೆ ಮಾಡಿದ್ದಾನೆ. ಇದರಿಂದ ತೀವ್ರ ರಕ್ತಸ್ರಾವವಾಗಿ ತಾಯಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಆರೋಪಿ ಈರಪ್ಪನನ್ನು ದೊಡವಾಡ ಪೊಲೀಸರು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ