ಹಾಸನ: ಕೇಂದ್ರ ಸರ್ಕಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಒಬಿಸಿ ಸಮುದಾಯಕ್ಕೆ (OBC Politics) ಹೆಚ್ಚಿನ ಸಚಿವ ಸ್ಥಾನವನ್ನು ನೀಡಿದ್ದು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಒಬಿಸಿ ಸಮುದಾಯ ಪ್ರಮುಖ ಪಾತ್ರ ವಹಿಸಲಿದೆ ಎಂದು ರಾಜ್ಯ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ನೆ.ಲ. ನರೇಂದ್ರ ಬಾಬು ತಿಳಿಸಿದ್ದಾರೆ.
ರಾಜ್ಯ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದರು. ಒಬಿಸಿ ಮೋರ್ಚಾದ ಕೃಷಿ ಕಾಯಕ ನಡೆದಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಇದರ ಫಸಲು ತೆಗೆಯುವ ಕಾರ್ಯ ನಡೆಯಬೇಕಿದೆ. ಬೂತ್ ವಿಜಯ ಅಭಿಯಾನದ ಬಳಿಕ ವಿಜಯ ಸಂಕಲ್ಪ ಅಭಿಯಾನ ಈಗ ನಡೆಯುತ್ತಿದೆ.
ಎಲ್ಲ ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗಗಳ ಮತ ನಿರ್ಣಾಯಕ ಪಾತ್ರ ವಹಿಸಲಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಹಳಷ್ಟು ಆಕಾಂಕ್ಷಿಗಳಿದ್ದಾರೆ. ಈ ವಿಚಾರವನ್ನು ನಾನು ಹಿರಿಯರ ಗಮನಕ್ಕೆ ತಂದಿದ್ದೇನೆ. ಪಕ್ಷದ ನಿಗದಿತ ಸ್ಥಾನ ಗುರಿ ತಲುಪಲು ಶ್ರಮಿಸಬೇಕು. ಒಬಿಸಿ ವರ್ಗಕ್ಕೆ ನೀಡಿದ ಕೊಡುಗೆಯನ್ನು ಜನರಿಗೆ ತಿಳಿಸಬೇಕು.
ನರೇಂದ್ರ ಮೋದಿಯವರು ಒಬಿಸಿ ವರ್ಗಕ್ಕೆ ಗರಿಷ್ಠ ಸಚಿವ ಸಂಪುಟದ ಸ್ಥಾನ ನೀಡಿದ್ದಾರೆ. ನಮ್ಮ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ, ಹಾಲಿ ಸಿಎಂ ಬಸವರಾಜ ಬೊಮ್ಮಾಯಿ, ಈಶ್ವರಪ್ಪ ಅವರ ಮಾರ್ಗದರ್ಶನದೊಂದಿಗೆ ಒಬಿಸಿ ಮೋರ್ಚಾ ಕಟ್ಟಿ ಬೆಳೆಸಿದ್ದೇವೆ.
ಪ್ರೈವೇಟ್ ಲಿಮಿಟೆಡ್, ಸಿಂಗಲ್ ಆರ್ಮಿ ರಾಜಕಾರಣ
ಶಾಸಕ ಪ್ರೀತಂ ಗೌಡ ಮಾತನಾಡಿ, ದೇವೇಗೌಡರ ಗರಡಿಯಲ್ಲಿ ಬೆಳೆದ ಸಿದ್ದರಾಮಯ್ಯ ತಮ್ಮ ಸಮಾಜ, ಹಿಂದುಳಿದ ವರ್ಗದವರಿಗೆ ತಮ್ಮ ಸಂಪುಟದಲ್ಲಿ ಅವಕಾಶ ಕೊಟ್ಟಿರಲಿಲ್ಲ. ಹಾಸನದ ದೊಡ್ಡ ಗೌಡರ ಕುಟುಂಬದ್ದು ಪ್ರೈವೇಟ್ ಲಿಮಿಟೆಡ್ ರಾಜಕೀಯವಾದರೆ, ಸಿದ್ದರಾಮಯ್ಯರದು ಸಿಂಗಲ್ ಆರ್ಮಿ ಲಿಮಿಟೆಡ್ ರಾಜಕಾರಣ ಎಂದು ಟೀಕಿಸಿದರು. ದೊಡ್ಡ ಗೌಡರು ಕನಿಷ್ಠ ಕುಟುಂಬಕ್ಕಾದರೂ ಅಧಿಕಾರ ಹಂಚಿದರೆ, ಇವರು ಬೇರೆಯವರಿಗೆ ಅಧಿಕಾರವೇ ಸಿಗದಂತೆ ಮಾಡಿದ್ದಾರೆ.
ನನ್ನ ತಮ್ಮ ಸಿಎಂ ಆಗಲಿ, ಇನ್ನೊಬ್ಬರು ಎಂಪಿ ಕ್ಯಾಂಡಿಡೇಟ್ ಆಗಲಿ ಎಂದು ದೊಡ್ಡ ಗೌಡರು-ರೇವಣ್ಣರವರು ಯೋಚಿಸಿದರೆ, ಸಿದ್ದರಾಮಯ್ಯ ಅಪ್ಪಿತಪ್ಪಿಯೂ ಅವರು ಬಿಟ್ಟು ಬೇರೆ ಯಾರಿಗೂ ಅವಕಾಶ ಕೊಟ್ಟಿಲ್ಲ. ಅಕ್ಕಪಕ್ಕದವರು ಕೇಳಿದಾಗ ಸಮಾಜಕ್ಕಾಗಿ ಕೊಟ್ಟ ಕೊಡುಗೆ ತೋರಿಸಲು ಮಗನಾದರೂ ಇರಲಿ ಎಂದು ಮಗನಿಗೆ ವರುಣಾ ಸೀಟ್ ಕೊಟ್ಟಿದ್ದಾರೆ ಎಂದರು.
ಇದನ್ನೂ ಓದಿ : Bhavani Revanna: ಹಾಸನ ಟಿಕೆಟ್ ಘೋಷಿಸಿಕೊಂಡ ಭವಾನಿ ರೇವಣ್ಣ; ಸೈಲೆಂಟ್ ಆಗಿ ತಿರುಗೇಟು ಕೊಟ್ಟ ಕುಮಾರಸ್ವಾಮಿ
ಒಬಿಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ ಮಾತನಾಡಿ, ಕೇಂದ್ರ-ರಾಜ್ಯ ಸರ್ಕಾರಗಳ ಸಾಧನೆ, ಅನುದಾನ, ಅಭಿವೃದ್ಧಿ ಕಾಮಗಾರಿಗಳನ್ನು ಜನರಿಗೆ ತಿಳಿಸಬೇಕು. ನಮ್ಮ ಸಾಧನೆಗಳ ಪರೀಕ್ಷೆಯ ಸಮಯ 2023ರಲ್ಲಿ ಬಂದಿದೆ. ಅದನ್ನು ಸವಾಲಾಗಿ ಸ್ವೀಕರಿಸಬೇಕು ಎಂದರು. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಮೋರ್ಚಾದ ಪ್ರಮುಖರು ಉಪಸ್ಥಿತರಿದ್ದರು.