ಬೆಂಗಳೂರು/ ಹಾಸನ : ದೇವೇಗೌಡರ ಫ್ಯಾಮಿಲಿ ಅಂದರೆ ನ್ಯಾಯ ಮತ್ತು ನಿಯತ್ತಿಗೆ ದೊಡ್ಡ ಹೆಸರು. ಆದರೆ, ಇದೀಗ ಅದೇ ಕುಟುಂಬದ ಎಚ್.ಡಿ. ರೇವಣ್ಣ (HD Revanna), ಅವರ ಪತ್ನಿ ಭವಾನಿ ರೇವಣ್ಣ (Bhavani Revanna) ಹಾಗೂ ಸಂಸದ ಪ್ರಜ್ವಲ್ ರೇವಣ್ಣ (MP Prajwal Revanna) ಅವರ ಮೇಲೆ ಗಂಭೀರ ಆರೋಪವೊಂದು ಕೇಳಿಬಂದಿದೆ. ಅದೇನೆಂದರೆ, 14 ವರ್ಷಗಳ ಕಾಲ ಪ್ರಜ್ವಲ್ ರೇವಣ್ಣ ಅವರ ಜತೆಗೆ ಕಾರು ಚಾಲಕರಾಗಿದ್ದ ಕಾರ್ತಿಕ್ (Car Driver Karthik) ಎಂಬವರಿಗೆ ಸೇರಿದ 13 ಎಕರೆ ಜಾಗವನ್ನು ಈ ಕುಟುಂಬ ನುಂಗಿ ಹಾಕಿದೆ. ಪೊಲೀಸರಿಗೆ ದೂರು ನೀಡಿದರೂ ಸ್ಪಂದಿಸದಂತೆ ಕುಟುಂಬ ಒತ್ತಡ ಹಾಕುತ್ತಿದೆ.
ಕಾರ್ತಿಕ್ ಮತ್ತು ಅವರ ಪತ್ನಿಯನ್ನು ಕಿಡ್ನಾಪ್ ಮಾಡಿ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ ಕಬಳಿಕೆ ಮಾಡಿದ ಗಂಭೀರ ಆರೋಪ ಇದಾಗಿದೆ. ಹೊಳೆನರಸೀಪುರ ತಾಲ್ಲೂಕಿನ ಕಡವಿನಕೋಟೆ ಗ್ರಾಮದ ನಿವಾಸಿ ಈ ಕಾರ್ತಿಕ್ ಕಳೆದ 14 ವರ್ಷಗಳಿಂದ ಸಂಸದ ಪ್ರಜ್ವಲ್ ರೇವಣ್ಣರ ಕಾರಿನ ಚಾಲಕನಾಗಿ ಕೆಲ್ಸ ಮಾಡ್ತಿದ್ದರಂತೆ.
ಕಾರ್ತಿಕ್ ಅವರು ಫೌಲ್ಟ್ರಿ ಫಾರಂ, ಕೃಷಿ ಜಮೀನು ಸೇರಿದಂತೆ ಒಳ್ಳೆಯ ಆದಾಯ ಹೊಂದಿದ್ದಾರೆ. ಕಾರ್ತಿಕ್ ಅವರು ಕಳೆದ ವರ್ಷ 13 ಎಕರೆ ಕೃಷಿ ಭೂಮಿ ಖರೀದಿಸಿದ್ದರು. ಆ ಭೂಮಿಯಲ್ಲಿ ಪೂಜೆ ಏರ್ಪಡಿಸಿದಾಗ ಸ್ವತಃ ಭವಾನಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ಅವರು ಆಗಮಿಸಿದ್ದರು. ಈ ವೇಳೆ ಕಾರ್ತಿಕ್ ಅವರ ಕೃಷಿ ಭೂಮಿಯನ್ನು ಕಂಡು ಅವಕ್ಕಾದ ಅವರಿಬ್ಬರೂ ತಮ್ಮ ಜತೆಗೆ ಕೆಲಸಕ್ಕಿದ್ದವನು ಇಷ್ಟು ಜಮೀನು ಖರೀದಿ ಮಾಡಿದ್ದರ ಬಗ್ಗೆ ಅಸೂಯೆಪಟ್ಟಿದ್ದರು ಎನ್ನಲಾಗಿದೆ.
ಅದಾದ ಬಳಿಕ ಇಷ್ಟು ಜಾಗವನ್ನು ನೀನು ಖರೀದಿ ಮಾಡಿದ್ದು ನಮ್ಮ ಹಣದಿಂದಲೇ. ಹಾಗಾಗಿ ಅದನ್ನು ನಮಗೆ ಬರೆದುಕೊಟ್ಬಿಡು ಅನ್ನೋ ಬೇಡಿಕೆ ಇಟ್ಟಿದ್ದರಂತೆ. ಆದರೆ, ಅದಕ್ಕೆ ಕಾರ್ತಿಕ್ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಹೇಗಾದರೂ ಮಾಡಿ ಕೋಟಿ ಕೋಟಿ ಬೆಲೆಯ ಆಸ್ತಿ ಕಬಳಿಕೆ ಮಾಡ್ಬೇಕು ಅಂತ ಕಿರುಕುಳ ನೀಡೋದಕ್ಕೆ ಶುರು ಮಾಡಿದರು ಎಂದು ಕಾರ್ತಿಕ್ ದೂರಿದ್ದಾರೆ.
ಕಿರುಕುಳ ನೀಡಿದ್ದು ಹೇಗೆ? ಕಾರ್ತಿಕ್ ನೀಡುವ ವಿವರ ಹೀಗಿದೆ..
- ಭೂಮಿಯನ್ನು ತಮ್ಮ ಹೆಸರಿಗೆ ಬರೆದುಕೊಡುವಂತೆ ಒತ್ತಾಯಿಸಿ ಹಿಂಸೆ ನೀಡುತ್ತಿರುವ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದರೆ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ತಮ್ಮ ಪ್ರಭಾವ ಬಳಸಿಕೊಂಡು ಎಲ್ಲಿಯೂ ದೂರು ದಾಖಲಿಸಿದಂತೆ ನೋಡಿಕೊಂಡಿದ್ದಾರೆ.
- ಒಮ್ಮೆ ಪ್ರಜ್ವಲ್ ರೇವಣ್ಣ ಅವರು ಕಾರ್ತಿಕ್‌ನನ್ನು ಕರೆ ಮಾಡಿ ಕರೆಸಿಕೊಂಡಿದ್ದರು. ಅಲ್ಲಿಂದಲೇ ಕಾರ್ತಿಕ್‌ನನ್ನು ಕಿಡ್ನಾಪ್ ಮಾಡಿಸಿ, ಐಬಿಯಲ್ಲಿ ಕೂಡಿ ಹಾಕಿ ಬೆದರಿಕೆ ಹಾಕಿ ಆಸ್ತಿಯನ್ನು ಬೆಂಗಳೂರಿನ ಬಿಬಿಎಂಪಿ ಗುತ್ತಿಗೆದಾರ ಕಿರಣ್ ರೆಡ್ಡಿ ಎಂಬುವರ ಹೆಸರಿಗೆ ಮಾಡಿಸಿಕೊಂಡಿದ್ದಾರೆ.
- ಕಾರ್ತಿಕ್ ಆಸ್ತಿ ಮಾರಿದ್ದಕ್ಕೆ ಪ್ರತಿಯಾಗಿ ಕಿರಣ್ ರೆಡ್ಡಿ ಚೆಕ್ ನೀಡಿದ್ದಾರೆ. ಆದರೆ, ರೇವಣ್ಣ ಕುಟುಂಬಿಕರು ಈ ಚೆಕ್ ಅನ್ನು ಬಲವಂತವಾಗಿ ಪಡೆದು ಡ್ರಾ ಮಾಡಿಸಿದ್ದಾರೆ!
- ಪ್ರಜ್ವಲ್ ರೇವಣ್ಣ ತನ್ನದೇ ಕಾರಿನ ಚಾಲಕನ ಕಿಡ್ನಾಪ್ ಮಾಡಿ ಹಲ್ಲೆ ಮಾಡಿಸಿ, ಆಸ್ತಿ ಬರೆಸಿಕೊಂಡರೆ ಅತ್ತ ತಾಯಿ ಭವಾನಿ ರೇವಣ್ಣ ಕಾರ್ತಿಕ್ ಪತ್ನಿ ಗರ್ಭಿಣಿ ಅನ್ನುವುದನ್ನು ನೋಡದೆ ಕಾಲಿನಿಂದ ಒದ್ದು ಆಕೆಯ ಗರ್ಭಪಾತವಾಗುವಂತೆ ಹಲ್ಲೆ ಮಾಡಿದ್ದಾರಂತೆ.
- ಈ ಸಂಬಂಧ ದೂರು ನೀಡಲು ಹೋದರೆ ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದು, ಹಿರಿಯ ಅಧಿಕಾರಿಗಳಿಗೂ ತಪ್ಪು ಸಂದೇಶ ರವಾನಿಸುವ ಕೆಲಸ ಮಾಡಿದ್ದಾರೆ.
- ಹೀಗಾಗಿ ದೌರ್ಜನ್ಯಕ್ಕೊಳಗಾದ ಕಾರ್ತಿಕ್ ಘಟನೆ ಸಂಬಂಧ ದಕ್ಷಿಣ ವಲಯ ಐಜಿಪಿ ಸೇರಿದಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಅಲೋಕ್ ಮೋಹನ್ ರವ್ರಿಗೆ ಕಿಡ್ನಾಪ್ ಹಾಗೂ ಹಲ್ಲೆ ಮಾಡಿದ ದೃಶ್ಯಾವಳಿ ಹಾಗೂ ಆಸ್ತಿಗೆ ಸಂಬಂಧಿಸಿದ ದಾಖಲೆಗಳೊಂದಿಗೆ ದೂರು ನೀಡಿದ್ದಾರೆ.
- ಸದ್ಯ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡಿರುವ ಪೊಲೀಸ್ ಇಲಾಖೆ ಘಟನೆ ಕುರಿತಂತೆ ತನಿಖೆ ನಡೆಸಿ, ಸಂಪೂರ್ಣ ವರದಿ ನೀಡುವಂತೆ ಸೂಚಿಸಿದ್ದಾರೆ.