ಹಾಸನ : ನಗರಸಭೆ ಸದಸ್ಯ ಪ್ರಶಾಂತ್ ಹತ್ಯೆ ಸಂಬಂಧಿಸಿದಂತೆ ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್ ಹಾಸನಕ್ಕೆ ಭೇಟಿ ನೀಡಿ, ಹಾಸನ ಎಸ್ಪಿ ಮತ್ತು ಅವರ ಅಧಿಕಾರಿಗಳ ಜೊತೆ ವಿಸ್ತ್ರತ ವಾಗಿ ಚರ್ಚೆ ಮಾಡಿರುವುದಾಗಿ ಹೇಳಿದ್ದಾರೆ. ಆರೋಪಿಗಳ ಬಂಧನದ ಕುರಿತು ಸಚಿವ ಗೋಪಾಲಯ್ಯ ಹಾಗೂ ಐಜಿಪಿ ಮಧುಕರ್ ಹೇಳಿಕೆಯಲ್ಲಿ ಗೊಂದಲವಿರುವುದು ಅನೇಕ ಅನುಮಾನಗಳಿಗೆ ಎಡೆ ಮಾಡಿದೆ.
ಮದ್ಯಾಹ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಸಚಿವ ಗೋಪಾಲಯ್ಯ, ಕೊಲೆ ಸಂಬಂಧ ಇಬ್ಬರು ಆರೋಪಿಗಳ ಬಂಧನ ಆಗಿದೆ ಎಂದು ಹೇಳಿದ್ದರು. ಆದರೆ ಇದೀಗ ಸಚಿವರ ಹೇಳಿಕೆಗೆ ವ್ಯತಿರಿಕ್ತವಾಗಿ ಐಜಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ | ಪ್ರಶಾಂತ್ ಹತ್ಯೆ ಪ್ರಕರಣ: ರೇವಣ್ಣ ಹಾಗೂ ಪ್ರೀತಂ ನಡುವೆ ವಾರ್
ಪ್ರವೀಣ್ ಮಧುಕರ್ ಮಾತನಾಡಿ, ನಿಷ್ಪಕ್ಷಪಾತವಾಗಿ ಹೇಗೆ ತನಿಖೆ ಆಗಬೇಕು, ವೈಜ್ಞಾನಿಕ ಹಾಗೂ ತಾಂತ್ರಿಕ ಸಾಕ್ಷ್ಯ ಸಂಗ್ರಹಿಸಿ ಆರೋಪಿ ಬಂಧನಕ್ಕೆ ಸೂಚನೆ ಕೊಟ್ಟಿದ್ದೇನೆ. ಕೊಲೆ ಆರೋಪಿ ಬಗ್ಗೆ ನಮಗೆ ಸ್ವಲ್ಪ ಮಾಹಿತಿ ಸಿಕ್ಕಿದೆ. ಆರೋಪಿಗಳ ಪತ್ತೆಗಾಗಿ ಮೂರು ತಂಡಗಳು ಕೆಲಸ ಮಾಡುತ್ತಿದೆ. ಶೀಘ್ರವಾಗಿ ಆರೋಪಿ ಬಂಧನ ಆಗಲಿದೆ ಎಂದರು. ಪೆನ್ಷನ್ ಮೊಹಲ್ಲಾ ವೃತ್ತದ ಸಿಪಿಐ ರೇಣುಕಾ ಪ್ರಸಾದ್ ವಿರುದ್ಧ ತನಿಖೆಗೆ ವಿಚಾರವಾಗಿ ಆದೇಶ ಕೊಟ್ಟಿದ್ದೇವೆ. ಮೂರು ತಂಡಗಳು ಆರೋಪಿ ಬಂಧನಕ್ಕೆ ಕಾರ್ಯಾಚರಣೆ ಮಾಡುತ್ತಿವೆ. ಈವರೆಗೆ ನಾವು ಯಾವುದೇ ಆರೋಪಿಯನ್ನ ಬಂಧಿಸಿಲ್ಲ ಎಂದರು.
ಸಚಿವರು ಆರೋಪಿಗಳ ಬಂಧನದ ಬಗ್ಗೆ ಕೊಟ್ಟ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ ಎಂದು ಐಜಿ ಉತ್ತರ ನೀಡಿದ್ದು, ಕೊಲೆ ಸಂಬಂಧ ಎಲ್ಲಾ ಕೋನಗಳಿಂದಲೂ ತನಿಖೆ ನಡೆಸುತ್ತಿದ್ದೆವೆ ಎಂದರು. ಈ ಪ್ರಕರಣ ತನಿಖೆ ನಿಷ್ಪಕ್ಷಪಾತವಾಗಿ ಆಗಬೇಕು. ಹಾಗಾಗಿ ಕೆಲ ಆರೋಪಗಳನ್ನು ಎದುರಿಸುತ್ತಿರುವ ಇನ್‌ಸ್ಪೆಕ್ಟರ್ ಅವರನ್ನು ರಜೆ ಮೇಲೆ ಎಸ್ಪಿ ಅವರು ಕಳಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ | ಜನಸಾಗರದ ನಡುವೆ ನಗರಸಭೆ ಸದಸ್ಯ ಪ್ರಶಾಂತ್ ಅಂತಿಮಯಾತ್ರೆ