Site icon Vistara News

Preetham Gowda : ನಾನೇನು ಮಾಡ್ಬೇಕು ಅಂತ JDSನವರು ಹೇಳ್ಬೇಕಾಗಿಲ್ಲ; ಪ್ರೀತಂ ಗೌಡ ಅಬ್ಬರ

Preetham Gowda HD Kumaraswamy

ಹಾಸನ: ಹಾಸನ ಲೋಕಸಭಾ ಕ್ಷೇತ್ರದಲ್ಲಿ (Hasana Lokasabha Constituency) ಪ್ರೀತಂ ಗೌಡರೇ (Preetham Gowda) ಸ್ಪರ್ಧಿಸಬೇಕು ಎಂದು ಬಯಸಿದ್ದರೆ ಅದರ ಬಗ್ಗೆ ಚರ್ಚೆ ಮಾಡೋಣ ಬಿಡಿ ಎಂಬ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಅವರ ಹೇಳಿಕೆಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಹಾಸನದ ಮಾಜಿ ಬಿಜೆಪಿ ಶಾಸಕ ಪ್ರೀತಂ ಗೌಡ ತಿರುಗೇಟು ನೀಡಿದ್ದಾರೆ. ʻʻನಾನೇನು ಮಾಡಬೇಕೆಂದು ನಮ್ಮ ಪಕ್ಷ ತೀರ್ಮಾನ ಮಾಡುತ್ತದೆ. ಅದನ್ನು ಬೇರೆ ಪಕ್ಷದವರು ಹೇಳಬೇಕಾಗಿಲ್ಲ ಎಂದಿದ್ದಾರೆ.

ಹಾಸನ ಜಿಲ್ಲೆಯ ಚನ್ನಂಗಿಹಳ್ಳಿ ಗ್ರಾಮದಲ್ಲಿ ಭಾನುವಾರ ಮಾತನಾಡಿದ್ದ ಕುಮಾರಸ್ವಾಮಿ ಅವರು, ಹಾಸನ ಮಂಡ್ಯ ಬಿಜೆಪಿಗೆ ಟಿಕೆಟ್ ನೀಡುವಂತೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಅವರ ಒತ್ತಾಯಕ್ಕೆ ಪ್ರತಿಕ್ರಿಯಿಸಿದ್ದರು. ʻʻಅವರನ್ನೇ ನಿಲ್ಲಿಸಬೇಕೆಂದರೆ ನಿಲ್ಲಿಸೋಣ. ಅವರೇ ನಿಲ್ಲಬೇಕು ಎನ್ನುವ ಆಸೆ ಇದ್ದರೆ ಚರ್ಚೆ ಮಾಡೋಣ. ನಾವು, ಅವರು ಅಣ್ಣ-ತಮ್ಮಂದಿರ ತರ ಹೋಗಬೇಕಲ್ವಾ? ಪಾಪ ಯಾರ‍್ಯಾ ರೋ ಅವರ ಮನಸ್ಸಿನ ಮೇಲೆ ಪರಿಣಾಮ ಆಗುವ ಹಾಗೇ ಹೇಳ್ತಾರೆ. ಅವರಿಗೆ ಇನ್ನೂ ಯಂಗ್ ಏಜ್, ಪಾಪ ಮಾತಾಡುತ್ತಾರೆ, ಮಾತಿನ ಬಿರುಸು. ಅವನೂ ಒಬ್ಬ ನಮ್ಮ ತಮ್ಮ ಅಲ್ವೆ? ಕುಳಿತು ಸರಿ ಮಾಡೋಣ. ಅದೇನ್ ಸಮಸ್ಯೆ ಇಲ್ಲʼʼ ಎಂದಿದ್ದರು.

ಇದಕ್ಕೆ ತಿರುಗೇಟು ನೀಡಿರುವ ಪ್ರೀತಂ ಗೌಡ ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮಗೆ ಜೆಡಿಎಸ್‌ ಮಾಡಿದ್ದ ಆರೋಪಗಳು, ಒಳ ಹೊಡೆತಗಳನ್ನು ನೆನಪು ಮಾಡಿಕೊಂಡಿದ್ದಾರೆ. ಅಷ್ಟಾದರೂ ತಾವು ಸಾಕಷ್ಟು ಹೋರಾಟ ಮಾಡಿದ್ದನ್ನು ಹೇಳಿದ್ದಾರೆ.

ʻʻ2023ರಲ್ಲಿ ಕೆಲವರು ಬಹಳ ಉತ್ಸಾಹದಲ್ಲಿ ಪ್ರೀತಂ ಗೌಡರನ್ನು ಸೋಲಿಸಿ ಅಂತ ಹೇಳಿದಾಗಲೂ ಹಾಸನದ ಜನ 78 ಸಾವಿರ ಓಟು ಹಾಕಿದ್ದಾರೆ. 78 ಸಾವಿರ ಮತಗಳು ಪ್ರೀತಂ ಗೌಡ ಪರವಾಗಿ ಮತ ಹಾಕಿದ್ದಾರೆ. ನನಗೆ ಸಿಕ್ಕಿದ ಮತಗಳೆಲ್ಲವೂ ಅವರ ವಿರುದ್ಧವಾಗಿ ಬಿದ್ದ ಮತಗಳು ಅನ್ನೋದನ್ನು ಅವರು ನೆನಪಿನಲ್ಲಿ ಇಟ್ಟುಕೊಳ್ಳಲಿʼʼ ಎಂದು ಪ್ರೀತಂ ಸಲಹೆ ನೀಡಿದ್ದಾರೆ.

ಹಾಸನದ ಜೆಡಿಎಸ್‌ ಅಭ್ಯರ್ಥಿಗೆ ಸಿಕ್ಕಿದ ಮತಗಳು ಈಗ ಎಲ್ಲಿವೆ ಎಂದು ನೋಡಲಿ

ಅವರ ಅಭ್ಯರ್ಥಿ 84 ಸಾವಿರ ಮತಗಳನ್ನು ಪಡೆದುಕೊಂಡಿದ್ದಾರೆ ಎನ್ನುವುದು ವುದು ನಿಜ. ಆ ಬೂತ್‌ಗಳ ಮತಗಳ ಪಟ್ಟಿಯನ್ನು ಇಟ್ಟುಕೊಂಡಿರಲು ಹೇಳಿ. ಆ 84 ಸಾವಿರದಲ್ಲಿ ಈಗ 44 ಸಾವಿರ ಎಲ್ಲಿ ಹೋಗಿ ಕುಳಿತುಕೊಂಡಿದೆ ಅನ್ನೋದನ್ನು ನೋಡಿದರೆ ಪ್ರೀತಂ ಗೌಡನ ಶಕ್ತಿ ಏನು ಎನ್ನುವುದು ತಿಳಿಯುತ್ತದೆ ಎಂದು ಹೇಳಿದರು ಪ್ರೀತಂ ಗೌಡ.

ʻʻಅವರು ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಏನು ಗೆಲ್ಲಿಸಿಕೊಂಡಿದ್ದಾರೆ ಅವರ ಶಕ್ತಿ ಏನು ಎಂದು ಅರ್ಥವಾಗಿ ಬಿಡುತ್ತದೆ? ಉಳಿದಿದ್ದನ್ನು ನಮ್ಮ ಪಕ್ಷದ ಹಿರಿಯರು ಮಾತನಾಡುತ್ತಾರೆ. ಅವರ ಪಕ್ಷದ ಅಭ್ಯರ್ಥಿ ಗೆದ್ದಿರೋದು, ಅವರ ಗೆಲ್ಲಲಿ ಅಂತ ಓಟು ಹಾಕಿ ಅಲ್ಲ. ಬಿಜೆಪಿ ಸೋಲಬೇಕು ಅಂಥ ಬೇರೆ ಯಾರೋ ಮನಸ್ಸು ಮಾಡಿ ಓಟು ಹಾಕಿದ್ದರಿಂದ ಗೆದ್ದಿರುವುದು. ನನಗೆ ಬಂದಿರುವ ಮತಗಳು ಪ್ರೀತಂ ಗೌಡ ಗೆಲ್ಲಬೇಕು ಅಂತ ಬಂದಿರುವ ಮತಗಳು. ಅವರು ಸೋಲಿಸಿ ಅಂದಾಗಲೂ ಬಂದಿರುವ ಮತಗಳು ಎಂದು ನೆನಪಿಸಿದರು.

Preetham Gowda : ನಾನು ಉತ್ಸಾಹದಿಂದ ಮಾತನಾಡೋದಲ್ಲ, ಕೆಲಸ ಮಾತನಾಡೋದು

ಕೆಲವರು ನಾನು ಉತ್ಸಾಹದಿಂದ ಏನೋ ಮಾತನಾಡಿದ್ದೇನೆ ಎಂದಿದ್ದಾರೆ ಎಂದು ಕುಮಾರಸ್ವಾಮಿ ಅವರ ಮೇಲೆ ಪರೋಕ್ಷ ವಾಗ್ದಾಳಿ ನಡೆಸಿದ ಪ್ರೀತಂ ಗೌಡ ಅವರು, ʻʻನಾನು ಉತ್ಸಾಹದಲ್ಲಿ ಮಾತನಾಡಲ್ಲ, ನನ್ನ ಕೆಲಸ ಮಾತನಾಡುತ್ತೆ, ಜನ ನನಗೆ ಆಶೀರ್ವಾದ ಮಾಡಿದ್ದಾರೆ. ಅವರು ಮೂರ್ನಾಲ್ಕು ಸಾರಿ ಬಂದು ಸೋಲಿಸಿ ಅಂತ ಹೇಳಿದಾಗಲೂ 78 ಸಾವಿರ ಓಟು ಹಾಕಿದ್ದಾರೆ. ಹಾಸನದಲ್ಲಿ ಪ್ರೀತಂಗೌಡ ಶಕ್ತಿ ಏನು ಅನ್ನೋದು ಅವರಿಗೆ ಅರ್ಥ ಆಗಿರುತ್ತದೆʼʼ ಎಂದರು.

ಪ್ರೀತಂ ಗೌಡ ಅವರ ಜತೆ ಕುಳಿತು ಮಾತನಾಡುವುದಾಗಿ ಹೇಳಿದ ಕುಮಾರಸ್ವಾಮಿ ಮಾತಿಗೂ ತಿರುಗೇಟು ನೀಡಿದ ಪ್ರೀತಂ ಗೌಡ, ʻʻನನ್ನ ಜೊತೆ ಕುಳಿತು ಮಾತನಾಡುವ ಬದಲು ಅವರು ಶಾಸಕರ ಜೊತೆ ಕುಳಿತು ಮಾತನಾಡುವುದು ಒಳ್ಳೆಯದು. 84 ಸಾವಿರ ಮತ ಈಗ ಎಷ್ಟು ಸಾವಿರ ಆಗಿದೆ ಅನ್ನೋದನ್ನು ಆತ್ಮಾವಲೋಕನ ಮಾಡಿಕೊಳ್ಳುವುದು ಒಳ್ಳೆಯದುʼʼ ಎಂದರು.

ಇದನ್ನೂ ಓದಿ : Amit Shah: ಸುತ್ತೂರು ಕಾರ್ಯಕ್ರಮಕ್ಕೆ ಅಮಿತ್‌ ಶಾ ಭೇಟಿ; ಎಚ್.ಡಿ. ಕುಮಾರಸ್ವಾಮಿ ಗೈರು

Preetham Gowda : ನಾವಿಬ್ಬರೂ ಅಣ್ಣ-ತಮ್ಮ ಆಗಲು ಸಾಧ್ಯವೇ ಇಲ್ಲ ಎಂದ ಪ್ರೀತಂ ಗೌಡ

ನಾವಿಬ್ಬರೂ ಈಗ ಅಣ್ಣ-ತಮ್ಮಂದಿರ ಹಾಗಿರಬೇಕು ಅಲ್ಲವೇ? ಕುಳಿತು ಮಾತನಾಡುತ್ತೇವೆ ಎಂಬ ಕುಮಾರಸ್ವಾಮಿ ಮಾತಿಗೂ ಬಿಡದ ಪ್ರೀತಂ ಗೌಡ, ʻʻ2023ರಲ್ಲಿ ನನ್ನನ್ನು ಸೋಲಿಸಿ ಅಂದಿದ್ದಾರೆ, ಈಗ ತಮ್ಮ ಅಂತಿದ್ದಾರೆ, 2028ರಲ್ಲಿ ಏನು ಅಂತಾಗೋ ಗೊತ್ತಿಲ್ಲ. ರಾಜಕಾರಣದಲ್ಲಿ ಅಣ್ಣ-ತಮ್ಮ ಆಗಲು ಆಗಲ್ಲ. ಅವರ ತಮ್ಮನನ್ನು ಪಕ್ಕದಲ್ಲಿ ಕೂರಿಸಿಕೊಂಡಿರುತ್ತಾರೆ, ಅವರ ತಮ್ಮನ ಹತ್ತಿರ ಮಾತನಾಡಿಕೊಳ್ಳಲಿ ಎಂದು ಹೇಳಿದರು.

ʻʻನಮ್ಮ ನಾಯಕರು ಏನು ಹೇಳ್ತಾರೆ, ಮಾರ್ಗದರ್ಶನ ಕೊಡ್ತಾರೆ ಆ ಕೆಲಸ ಮಾಡ್ತೀನಿ. ಬಿರುಸಿನಿಂದ ಮಾತನಾಡ್ತಾರೆ, ಯುವಕ ಅಂತಾರೆ, ಯುವಕ ಆಗಿರುವುದಕ್ಕೆ 78 ಸಾವಿರ ಮತ ಹಾಕಿರೋದು. ಎಂಪಿ ಚುನಾವಣೆ ಆದ್ಮೇಲೆ ಬೂತ್ ತೆಗೆದು ನೋಡಿದ್ರೆ ಯಾರ್ಯಾರ ಶಕ್ತಿ ಏನು ಅನ್ನೋದು ಈಗಿರುವ ಶಾಸಕರಿಗೂ ಗೊತ್ತಾಗುತ್ತೆ. ನನ್ನ ವಿರುದ್ಧ ಬಂದು ಚುನಾವಣೆ ಮಾಡಿದವರಿಗೂ ನನ್ನ ನೈಜ ಶಕ್ತಿ ಏನು ಅನ್ನೋದು ಗೊತ್ತಾಗುತ್ತದೆʼʼ ಎಂದ ಪ್ರೀತಂ ಗೌಡ ಅವರು, ನಾನು ಬೇರೆಯವರ ತರ ಒಂದ್ಸಲ ಒಂದು, ಇನ್ನೊಂದು ಸಲ ಇನ್ನೊಂದು ಮಾತನಾಡಲ್ಲ. ನಾನು ಯುವಕನಾಗಿ ಹುಮ್ಮಸ್ಸಿನಿಂದ, ಬಿರುಸಿನಿಂದ ಮಾತನಾಡಿದ್ರು ಅದರಲ್ಲಿ ಬದ್ಧತೆ ಇರುತ್ತೆ. ಬದ್ದತೆ ಇದ್ದರೆ ಮಾತ್ರ ಮಾತನಾಡುತ್ತೇನೆ. ನಮ್ಮ ಪಕ್ಷ ಗೆಲ್ಲಬೇಕು, ನಮ್ಮ ಪಕ್ಷ ಗಟ್ಟಿಯಾಗಬೇಕು ಅಷ್ಟೇ ಎಂದು ಹೇಳಿದರು.

ಬಿಜೆಪಿ ಸಭೆಯಲ್ಲಿ ಏನೂ ಹೇಳದಂತೆ ತಿಳಿಸಿದ್ದಾರೆ

ಮೈಸೂರಿನಲ್ಲಿ ಅಮಿತ್‌ ಶಾ ನೇತೃತ್ವದಲ್ಲಿ ಸಭೆ ನಡೆಸಿರುವುದು ನಿಜ. ಆದರೆ, ಸಭೆಯಲ್ಲಿ ನಡೆದಿದ್ದನ್ನು ಹೇಳಬೇಡಿ ಎಂದು ಸೂಚನೆ ಕೊಟ್ಟಿದ್ದಾರೆ ಎಂದು ಪ್ರೀತಂ ಗೌಡ ಹೇಳಿದ್ದಾರೆ.

ʻʻಸಭೆಯಲ್ಲಿ ಬಹಳಷ್ಟು ಚರ್ಚೆ ನಡೆದಿದೆ, ಏನನ್ನು ಹೇಳಬೇಡಿ ಅಂತ ಸೂಚನೆ ಕೊಟ್ಟಿದ್ದಾರೆ. ನಡೆದ ಚರ್ಚೆಗಳನ್ನು ಹೇಳಬೇಡಿ ಅಂದಿದ್ದಾರೆʼʼ ಎಂದ ಅವರು, ಮಾರ್ಚ್‌ 15ರೊಳಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಬಹುದು ಎಂದರು.

Exit mobile version