Site icon Vistara News

Road Accident : ಯಮರೂಪಿಯಾಗಿ ಬಂದ ಟಾಟಾ ಏಸ್‌ ವಾಹನಕ್ಕೆ ಮೂವರು ಬಲಿ

Road Accident

ಹಾಸನ: ಸ್ಕೂಟರ್‌ ಹಾಗೂ ಟಾಟಾ ಏಸ್ ವಾಹನದ ನಡುವೆ ಭೀಕರ ಅಪಘಾತ (Road Accident) ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಸ್ಕೂಟರ್‌ನಲ್ಲಿದ್ದ ಮೂವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ. ಹಾಸನದ ಶಾಂತಿಗ್ರಾಮದಲ್ಲಿ ಈ ಅಪಘಾತ ನಡೆದಿದೆ.

ಸ್ಕೂಟರ್‌ಗೆ ಡಿಕ್ಕಿ ಹೊಡೆದ ಟಾಟಾಏಸ್‌ ವಾಹನವು ರಸ್ತೆ ಬದಿಯ ರೈತರ ಜಮೀನಿಗೆ ನುಗ್ಗಿದೆ. ಟಾಟಾ ಏಸ್‌ನಡಿ ಸಿಲುಕಿ ಸವಾರನೊಬ್ಬ ಮೃತದೇಹವು ನಜ್ಜುಗುಜ್ಜಾಗಿದ್ದು, ಮತ್ತಿಬ್ಬರ ಮೃತದೇಹವು ರಸ್ತೆ ಮೇಲೆ ಬಿದ್ದಿದೆ. ತೀವ್ರ ರಕ್ತಸ್ರಾವವಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಗುರುತು ಪತ್ತೆಯಾಗಿಲ್ಲ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಶಾಂತಿಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಾರು ಹಾಗೂ ಗೂಡ್ಸ್ ವಾಹನದ ಮಧ್ಯೆ ಡಿಕ್ಕಿ

ಕಾರು ಹಾಗೂ ಗೂಡ್ಸ್‌ ವಾಹನದ ನಡುವೆ ಅಪಘಾತ ಸಂಭವಿಸಿದೆ. ಗೂಡ್ಸ್‌ ವಾಹನವು ರಸ್ತೆ ಬದಿಗೆ ಹಾರಿ ಬಿದ್ದಿದ್ದು, ಕಾರು ನಜ್ಜು ಗುಜ್ಜಾಗಿದೆ. ಬಾಗಲಕೋಟೆ ನಗರದ ಮುಚಖಂಡಿ ಕ್ರಾಸ್ ಬಳಿ ಅಪಘಾತ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಕಾರು ಹಾಗೂ ಗೂಡ್ಸ್ ವಾಹನದಲ್ಲಿದ್ದವರಿಗೆ ಸಣ್ಣಪುಟ್ಟ ಗಾಯವಾಗಿದೆ. ಆಂಧ್ರಪ್ರದೇಶ ಮೂಲದ ಬಲೆನೋ ಕಾರ್ ಹಿಂದಿನಿಂದ ಗುದ್ದಿದ ಪರಿಣಾಮ ಅಪಘಾತ ಸಂಭವಿಸಿದೆ. ಕಾರ್ ಗುದ್ದಿದ ರಭಸಕ್ಕೆ ಗೂಡ್ಸ್‌ ವಾಹನ ರಸ್ತೆ ಬಿಟ್ಟು ಕೆಳಗೆ ಉರುಳಿಬಿದ್ದಿದೆ. ಬಾಗಲಕೋಟೆ ಶಹರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Accident News : ಕಂಟಕವಾದ ಕಾರ ಹುಣ್ಣಿಮೆ ಕರಿ ದಿನ; ಎತ್ತು ಬೆದರಿಸಲು ಹೋಗಿ ಮುಗ್ಗರಿಸಿ ಬಿದ್ದ ಜನ್ರು

ಬಸ್‌ ಬಡಿದು ವೃದ್ಧೆ ಸಾವು

ಮೈಸೂರಿನ ನಂಜನಗೂಡಿನಲ್ಲಿ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್‌ವೊಂದು ವೃದ್ಧೆ ಮೇಲೆ ಹರಿದಿದೆ. ಪರಿಣಾಮ ವೃದ್ಧೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಪಾರ್ವತಮ್ಮ (75) ಮೃತ ದುರ್ದೈವಿ

ಪಾರ್ವತಮ್ಮ ನಂಜನಗೂಡಿನ ಮೇದಾರ ಬೀದಿ ನಿವಾಸಿಯಾಗಿದ್ದರು. ಚಾಮರಾಜನಗರ ಬೈಪಾಸ್ ರಸ್ತೆಯಲ್ಲಿ ರಸ್ತೆ ದಾಟುತ್ತಿದ್ದಾಗ, ಚಾಮರಾಜನಗರ ಕಡೆಯಿಂದ ಬರುತ್ತಿದ್ದ ಕೆಎಸ್ಆರ್‌ಟಿಸಿ ಬಸ್‌ವೊಂದು ಡಿಕ್ಕಿ ಹೊಡೆದು ವೃದ್ಧೆ ಮೇಲೆ ಹರಿದಿದೆ. ತೀವ್ರ ರಕ್ತಸ್ರಾವಗೊಂಡ ಪಾರ್ವತಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ನಂಜನಗೂಡು ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ನಂಜನಗೂಡು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.

ಇದನ್ನೂ ಓದಿ: Physical Abuse : ಬಹಿರ್ದೆಸೆಗೆ ತೆರಳಿದ್ದ ಬಾಲಕಿ ಮೇಲೆ ಅತ್ಯಾಚಾರಗೈದು ಕೊಲೆಗೆ ಯತ್ನಿಸಿದ ಕಾಮುಕ

ಹಳಿ ದಾಟುವಾಗ ರೈಲಿಗೆ ಸಿಲುಕಿ ವೃದ್ಧೆ ಮೃತ್ಯು

ರೈಲಿಗೆ ಸಿಲುಕಿ ವೃದ್ಧೆಯೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಮಂಡ್ಯ ತಾಲೂಕಿನ ಹನಕೆರೆ ಬಳಿ ಘಟನೆ ನಡೆದಿದೆ. ಹೊನ್ನಗಳ್ಳಿ ಮಠದ ನಿಂಗಮ್ಮ (70) ಮೃತ ದುರ್ದೈವಿ.

ಮಂಡ್ಯಕ್ಕೆ ತೆರಳುವ ಮಾರ್ಗದಲ್ಲಿ ಹನಕೆರೆ ಬಳಿ ರೈಲ್ವೆ ಗೇಟ್ ಹಾಕಲಾಗಿತ್ತು. ರೈಲ್ವೆ ಗೇಟ್ ಬಳಿ ದಾಟುವ ವೇಳೆ ತಿರುಪತಿ ಎಕ್ಸ್‌ಪ್ರೆಸ್‌ ರೈಲಿಗೆ ಸಿಲುಕಿ ನಿಂಗಮ್ಮ ಮೃತಪಟ್ಟಿದ್ದಾರೆ. ರೈಲು ವೇಗವಾಗಿ ಬಂದು ಡಿಕ್ಕಿ ಹೊಡೆದ ರಭಸಕ್ಕೆ 100 ಮೀಟರ್ ದೂರ ವೃದ್ಧೆಯ ದೇಹ ಎಸೆಯಲ್ಪಟ್ಟಿದೆ. ತಲೆಗೆ ಗಂಭೀರ ಪೆಟ್ಟಾಗಿದ್ದು ನಿಂಗಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ‌.

ಸ್ಥಳಕ್ಕೆ ಮಂಡ್ಯ ರೈಲ್ವೇ ಹೊರಠಾಣೆ ಪೊಲೀಸರು ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ. ಇನ್ನೂ ಹನಕೆರೆ ಬಳಿ 20ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ದಾರಿ ಇದಾಗಿದೆ. ಮೇಲ್ಸುತುವೆ ನಿರ್ಮಿಸುವ ಬಗ್ಗೆ ಹಲವು ವರ್ಷಗಳ ಬೇಡಿಕೆ ಇದ್ದರೂ ಹಲವು ಕಾರಣಗಳಿಂದ ನೆರವೇರದೇ ಸಾರ್ವಜನಿಕರಿಗೆ ತೀವ್ರ ಅನಾನುಕೂಲವಾಗಿದೆ. ಇದರಿಂದಾಗಿ ಅಪಘಾತಗಳಿಗೆ ಆಹ್ವಾನ ನೀಡಿದಂತಾಗಿದೆ‌ ಎಂದು ಜನರು ಕಿಡಿಕಾರಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version